ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್‌ಮಿನಾರ್‌ನಲ್ಲಿ ಒಂಟಿ ಚಂದ್ರ!

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಆರಂಭದಲ್ಲಿ ಜೊತೆಗಿದ್ದ ಸಹ ನಿರ್ಮಾಪಕರೊಬ್ಬರು ಈಗ `ಚಾರ್‌ಮಿನಾರ್~ನಿಂದ ಹೊರಬಂದಿದ್ದಾರೆ. ಹಾಗಾಗಿ, ನಿರ್ದೇಶಕ ಚಂದ್ರು ಅವರ ಮೇಲೆ ನಿರ್ಮಾಣದ ಸಂಪೂರ್ಣ ಭಾರ ಬಿದ್ದಿದೆ. ತಮ್ಮ `ಚಾರ್‌ಮಿನಾರ್~ ಚಿತ್ರ ಒಬ್ಬ ನಿರ್ಮಾಪಕರನ್ನು ಕಳೆದುಕೊಂಡು ಸಂಪೂರ್ಣವಾಗಿ ತಮ್ಮ ಕೈ ಸೇರಿದ ಕತೆಯನ್ನು ಚಂದ್ರು ಒಂದು ಸಿನಿಮಾ ಕಥೆಯಂತೆಯೇ ಹೇಳಿಕೊಂಡರು.

`ಈ ಮೊದಲು ನನ್ನೊಂದಿಗೆ ಇದ್ದ ಗೆಳೆಯ ಮಂಜುನಾಥ್ ಕಾರಣಾಂತರಗಳಿಂದ ಹಿಂದೆ ಸರಿದರು. ಈಗ ಚಿತ್ರದ ಸಂಪೂರ್ಣ ಹೊಣೆ ನನ್ನದೇ. ಅಮೆರಿಕದಲ್ಲಿ ಕೆಲವು ದೃಶ್ಯಗಳು ಮತ್ತು ಹಾಡುಗಳ ಚಿತ್ರೀಕರಣಕ್ಕೆ ತಂಡ ಅಣಿಯಾಗುತ್ತಿದೆ. ಅಮೆರಿಕದಲ್ಲಿ ನಾಯಕನ ಪರಿಚಯವಾಗುವ ಕಾರಣ ನಾಯಕ, ನಿರ್ದೇಶಕ ಮತ್ತು ಕೆಲವು ತಾಂತ್ರಿಕ ವರ್ಗದವರು ಅಲ್ಲಿಗೆ ಹೋಗುವ ಯೋಜನೆ ಇದೆ.
 
ಇನ್ನು ಮೂರು ದಿನ ಮುಗಿದರೆ ಮಾತಿನ ಭಾಗದ ಚಿತ್ರೀಕರಣ ಮುಗಿದಂತೆ. ಉಳಿದಂತೆ ಹಾಡುಗಳ ಚಿತ್ರೀಕರಣ ಬೀದರ್, ಬಿಜಾಪುರ, ಸಕಲೇಶಪುರ ಮತ್ತು ಸೆಟ್‌ಗಳಲ್ಲಿ ನಡೆಯಲಿದೆ. ಈ ನಡುವೆ ಇಪ್ಪತ್ತು ದಿನ ವಿರಾಮ ತೆಗೆದುಕೊಂಡು ಮುಂದಿನ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
 
ಒಂದು ಹಾಡನ್ನು ಪುನೀತ್ ರಾಜ್‌ಕುಮಾರ್ ಅವರಿಂದ ಹಾಡಿಸುವ ಯೋಜನೆಯೂ ಇದೆ~ ಎಂದು ಚಂದ್ರು ಹೇಳಿದರು.`ಚಾರ್‌ಮಿನಾರ್~ ಅವರ ಮೊದಲ ಚಿತ್ರ `ತಾಜ್‌ಮಹಲ್~ಗಿಂತ ಒಂದು ಹಂತ ಮೇಲಿದೆಯಂತೆ. `ತಾಜ್..~ ಮಾಡುವಾಗ ಆದ ಕೆಲವು ಘಟನೆಗಳು ಈಗಲೂ ಮರುಕಳಿಸುತ್ತಿರುವುದರಿಂದ ಈ ಚಿತ್ರ ಕೂಡ ಗೆದ್ದೇ ಗೆಲ್ಲುವ ಭರವಸೆ ಅವರದು.

ಎಷ್ಟೇ ಕಷ್ಟವಿದ್ದರೂ ಹಣ ಹೊಂದಿಸಿ ತಮ್ಮ ಕನಸಿನ `ಚಾರ್‌ಮಿನಾರ್~ ಪೂರ್ಣಗೊಳಿಸುವ ವಿಶ್ವಾಸ ಅವರದು.`ಇದುವರೆಗೆ ಶ್ರೀರಂಗಪಟ್ಟಣದ ಕೋಟೆಯನ್ನು ಯಾರೂ ತೋರಿಸದ ರೀತಿಯಲ್ಲಿ ತೋರಿಸಲಾಗಿದೆ. ನನ್ನ ಕಲ್ಪನೆಯಲ್ಲಿದ್ದ ಒಂದು ಶಾಲೆಗಾಗಿ ಇಡೀ ಕರ್ನಾಟಕ ಹುಡುಕಾಡಿದೆ. ಕಡೆಗೂ ಅದು ಮಂಡ್ಯ ಜಿಲ್ಲೆಯ ಹೇಮಗಿರಿಯಲ್ಲಿ ಸಿಕ್ಕಿತು.

ಅಲ್ಲಿ ಸೆಟ್ ಹಾಕಿ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಅಣಿ ಮಾಡಲಾಗಿತ್ತು. ಆಗ ಮಳೆ ಬಂತು. ಅದಕ್ಕೆ ಹಿಂಜರಿಯದೇ ಎರಡು ದಿನಗಳ ಚಿತ್ರೀಕರಣವನ್ನು ನಾಲ್ಕು ದಿನಗಳಿಗೆ ವಿಸ್ತರಿಸಿ ಚಿತ್ರೀಕರಣ ಮುಗಿಸಿದೆವು~ ಎಂದು ಅನುಭವ ಬಿಚ್ಚಿಟ್ಟ ಅವರು, ತಮ್ಮಂದಿಗೆ ಸಹಕರಿಸಿದ ಕಲಾವಿದರನ್ನು ಮೆಚ್ಚಿಕೊಂಡರು.

ನಾಯಕ ಪ್ರೇಮ್ ಇಪ್ಪತ್ತು ವರ್ಷಗಳ ಹಿಂದಿನ ತಮ್ಮ ಪಿಯುಸಿ ದಿನಗಳನ್ನು ನೆನಪಿಸಿಕೊಂಡರು. `ಚಾರ್‌ಮಿನಾರ್~ ಚಿತ್ರದಲ್ಲಿ ಅವರಿಗೆ ನಾಲ್ಕು ಆಯಾಮದ ಪಾತ್ರವಂತೆ. ಹತ್ತನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಯ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ಗಡ್ಡ-ಮೀಸೆ ತೆಗೆದು, ದೇಹದ ತೂಕ ಇಳಿಸಿಕೊಂಡಿದ್ದಾರೆ.

ಉತ್ಸುಕತೆಯಿಂದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾಗಿ ಹೇಳಿದ ನಾಯಕ ಪ್ರೇಮ್, ಚಿತ್ರದ ಕೆಲವು ಸನ್ನಿವೇಶಗಳಲ್ಲಿ ಗ್ಲಿಸರಿನ್ ಬಳಸದೇ ಸಹಜವಾಗಿಯೇ ಕಣ್ಣೀರು ಸುರಿಸಿದ ವಿಚಾರವನ್ನು ಹೇಳುತ್ತಾ ಭಾವುಕರಾದರು. ಮೇಷ್ಟ್ರುಗಳ ಕುರಿತು ಇರುವ ಮಾತುಗಳು ಅವರಿಗೆ ಬಹು ಮೆಚ್ಚುಗೆಯಾಗಿವೆ.

`ನಿರ್ದೇಶಕರ ಬದ್ಧತೆ ಮುಂದೆ ನಮ್ಮದು ಕಡಿಮೆ. ಅವರು ಸ್ಕ್ರಿಪ್ಟ್ ಹೇಳುತ್ತಾ ಹೇಳುತ್ತಾ ಕಣ್ಣೀರು ಸುರಿಸುತ್ತಿದ್ದರೆ, ನಾನು ಕೇಳುತ್ತಾ ಕೇಳುತ್ತಾ ಕಣ್ಣೀರು ಸುರಿಸುತ್ತಿದ್ದೆ. ಒಂದು ಶಾಲೆಗಾಗಿ ಇಡೀ ಕರ್ನಾಟಕ ಸುತ್ತಿದ್ದ ನಿರ್ದೇಶಕರಿಗೆ ಯಶಸ್ಸು ಸಿಗಲೇ ಬೇಕು~ ಎಂದರು.
ನಿರ್ದೇಶಕರ ಆಣತಿಯ ಮೇರೆಗೆ ನಾಯಕಿ ಮೇಘನಾ ಗಾಂವ್ಕರ್ 15 ದಿನ ಸಮಯ ತೆಗೆದುಕೊಂಡು ನಾಲ್ಕು ಕೇಜಿ ತೂಕ ಇಳಿಸಿಕೊಂಡರಂತೆ.
 
ಆದರೂ ತಾವು ನಾಯಕಿಯಾಗಿ ಆಯ್ಕೆಯಾಗುವ ಅನುಮಾನ ಇತ್ತು ಎಂದ ಮೇಘನಾ, ಅನುಭವಿ ಕಲಾವಿದರ ಎದುರು ನಟಿಸಲು ಇದ್ದ ಅಂಜಿಕೆ ಈಗ ಮರೆಯಾಗಿದೆ ಎಂದರು.
ಛಾಯಾಗ್ರಾಹಕ ಚಂದ್ರಶೇಖರ್ ಅವರ ಹದಿನಾಲ್ಕನೇ ಸಿನಿಮಾ ಇದು. ನಿರ್ದೇಶಕರ ಚಂದ್ರು ಅವರೊಂದಿಗೆ ಸತತ ಐದನೇ ಸಿನಿಮಾ `ಚಾರ್‌ಮಿನಾರ್~.


`ಸಂದೇಶದೊಂದಿಗೆ ಮನರಂಜನೆ ಇರುವ ಸಿನಿಮಾ ಇದು. ಶ್ರೀರಂಗಪಟ್ಟಣದಲ್ಲಿ ಓಡಾಡಿದ ಅನುಭವ ಹಿಡಿಸಿತು~ ಎಂದಷ್ಟೇ ಚಂದ್ರಶೇಖರ್ ಮಾತನಾಡಿದರು.

ಮೈಸೂರಿನವರಾದರೂ ಕನ್ನಡ ಬಾರದ ಕುಮುದಾ ಈ ಚಿತ್ರದ ಎರಡನೇ ನಾಯಕಿ. ಸಂಭಾಷಣೆ ಕಲಿಯಲು ಸಾಕಷ್ಟು ಸಮಯ ನೀಡಿ ಅಭಿನಯಿಸಲು ಅವಕಾಶ ನೀಡಿದ ನಿರ್ದೇಶಕರಿಗೆ ಅವರ ವಂದನೆ ಸಂದಾಯವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT