ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲೆಂಜರ್ಸ್ ಚಿತ್ತ ಪ್ರಶಸ್ತಿಯತ್ತ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಪ್ರಶಸ್ತಿ ಗೆಲ್ಲುವ ಕನಸನ್ನು ಮನಸ್ಸಿನ ತುಂಬಾ ಬಿತ್ತಿಕೊಂಡಿದ್ದಾರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದವರು.

ಅಚ್ಚರಿ ಎನ್ನುವ ರೀತಿಯಲ್ಲಿ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಚೇತರಿಸಿಕೊಂಡು ನಾಲ್ಕರ ಘಟ್ಟದ ಅಡೆತಡೆಯನ್ನೂ ದಾಟಿಬಿಟ್ಟಿರುವ ಚಾಲೆಂಜರ್ಸ್ ಚಿತ್ತ ಈಗ ಫೈನಲ್ ವಿಜಯದತ್ತ ಕೇಂದ್ರಿತವಾಗಿದೆ.

ಭಾನುವಾರ ಅಂತಿಮ ಹಣಾಹಣಿ ನಡೆಯುವುದು ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ. ಡೇನಿಯಲ್ ವೆಟೋರಿ ನಾಯಕತ್ವದ ಬೆಂಗಳೂರಿನ ತಂಡಕ್ಕೆ ಎದುರಾಳಿ ಆಗುವುದು ಮುಂಬೈ ಇಂಡಿಯನ್ಸ್ ಇಲ್ಲವೆ ಸಾಮರ್ಸೆಟ್.
ನ್ಯೂ ಸೌತ್ ವೇಲ್ಸ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಆರು ವಿಕೆಟ್‌ಗಳ ಅಂತರದಿಂದ ಗೆದ್ದು ಸಂಭ್ರಮಿಸಿರುವ ಚಾಲೆಂಜರ್ಸ್ ತನ್ನ ಬಲ ಹಾಗೂ ಕೊರತೆ ಎರಡನ್ನೂ ಸ್ಪಷ್ಟವಾಗಿ ಅರಿತಿದೆ. ಬೌಲಿಂಗ್ ವಿಭಾಗದಲ್ಲಿ ತಿದ್ದಿಕೊಳ್ಳುವ ಸಾಹಸ ನಡೆದೇ ಇದೆ.

ಆದ್ದರಿಂದ ನಾಯಕ ಡೇನಿಯಲ್ ವೆಟೋರಿ ಬ್ಯಾಟಿಂಗ್ ಶಕ್ತಿಯಿಂದಲೇ ಟೂರ್ನಿಯ ನಿರ್ಣಾಯಕ ಪಂದ್ಯವನ್ನೂ ಜಯಿಸಲು ತಂತ್ರದ ಬಲೆಯನ್ನು ಹೆಣೆದುಕೊಂಡಿದ್ದಾರೆ.

ಕೊನೆಯ ಲೀಗ್ ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯಾ ವಿರುದ್ಧ ಹಾಗೂ ಸೆಮಿಫೈನಲ್‌ನಲ್ಲಿ ಸೌತ್ ವೇಲ್ಸ್ ವಿರುದ್ಧ ಇನ್ನೂರಕ್ಕೂ ಹೆಚ್ಚು ರನ್ ಮೊತ್ತದ ಗುರಿಯನ್ನು ಮುಟ್ಟಿ ಗೆದ್ದಿರುವ ವಿಜಯ್ ಮಲ್ಯ ಒಡೆತನದ ತಂಡವು ತನ್ನ ಬ್ಯಾಟಿಂಗ್ ಶಕ್ತಿಯನ್ನು ಅರಿತಿದೆ. ಎದುರಾಳಿ ಪಡೆಗೆ ಬೆಂಗಳೂರಿನವರು ರನ್ ಗಳಿಸುವ ವೇಗವೇ ಭಯವಾಗಿ ಕಾಡುವುದಂತೂ ಸ್ಪಷ್ಟ.

ವಿಂಡೀಸ್‌ನವರಾದ ಕ್ರಿಸ್ ಗೇಲ್ ಹಾಗೂ ಭಾರತದ ಯುವ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರನ್ನು ಹೊಂದಿರುವ ಚಾಲೆಂಜರ್ಸ್ ದೊಡ್ಡ ಮೊತ್ತ ಪೇರಿಸುವ ಹಾಗೂ ಸವಾಲಿನ ಗುರಿ ಮುಟ್ಟುವ ಛಲ ಹೊಂದಿದೆ.

ಆದ್ದರಿಂದಲೇ ಅದು ಬೌಲಿಂಗ್ ವಿಭಾಗದಲ್ಲಿ ತಾನು ಬಲವಾಗಿಲ್ಲ ಎನ್ನುವ ಆತಂಕವನ್ನು ಮರೆತಿದೆ. ಆದರೂ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಚ್ಚರಿಯು ಚೀಪಾಕ್‌ನಲ್ಲಿಯೂ ಮರುಕಳಿಸುತ್ತದೆಂದು ಅತಿಯಾದ ಆಸೆ ಹೊಂದುವುದೂ ಸಾಧ್ಯವಿಲ್ಲ.

ಇದಕ್ಕೆ ಕಾರಣವೂ ಇದೆ. ಎರಡನೇ ಸೆಮಿಫೈನಲ್ ಪಂದ್ಯವನ್ನು ಇಲ್ಲಿಯೇ ಆಡಿ, ಜಯಿಸಿರುವ ತಂಡಕ್ಕೆ ಸವಾಲಾಗುವುದು ಕಷ್ಟ. ಆದ್ದರಿಂದ ಬೌಲಿಂಗ್‌ನಲ್ಲಿ ದಾಳಿಯನ್ನೂ ಬಿಗಿಗೊಳಿಸುವತ್ತ ಗಮನ ನೀಡಲೇಬೇಕು. ಸೌತ್ ವೇಲ್ಸ್ ಎದುರು ತಿಲಕರತ್ನೆ ದಿಲ್ಶಾನ್ ದಾಳಿ ನಡೆಸಿದ ರೀತಿಯಲ್ಲಿಯೇ ಬೌಲಿಂಗ್ ಮಾಡಿದಲ್ಲಿ ಯಶಸ್ಸಿನ ಹಾದಿಯೂ ಸುಗಮ.

ಈ ಲೆಕ್ಕಾಚಾರ ಏನೇ ಇರಲಿ; ಚುಟುಕು ಕ್ರಿಕೆಟ್ ಎನ್ನುವುದು ಬ್ಯಾಟ್ಸ್‌ಮನ್‌ಗಳ ಆಟ. ಇದನ್ನು ಸ್ಪಷ್ಟವಾಗಿ ಅರಿತಲ್ಲಿ ಚಾಲೆಂಜರ್ಸ್ ಪಾಲಿಗೆ ಗೆಲುವಿನ ಹೊಳಪಿನ ಮುತ್ತು ಅಡಗಿರುವುದು ಬ್ಯಾಟಿಂಗ್ ಚಿಪ್ಪಿನೊಳಗೆ ಎನ್ನುವುದೂ ಖಚಿತವಾಗುತ್ತದೆ. ವೆಟೋರಿ ಬಳಗಕ್ಕೆ ರನ್ ಗಳಿಸಿಕೊಡುವ ಶ್ರಮಜೀವಿಗಳಾಗಿ ಕಾಣಿಸಿರುವು ಗೇಲ್ ಹಾಗೂ ಕೊಹ್ಲಿ. ಅವರ ಮೇಲೆಯೇ ನಿರೀಕ್ಷೆಯ ಭಾರಿ ಭಾರವಿದೆ. ಅದನ್ನು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ನಿಭಾಯಿಸುತ್ತಾರೆಂದು ಕಾಯ್ದು ನೋಡಬೇಕು.

ಆರಂಭಿಕಆಟಗಾರ ದಿಲ್ಶಾನ್ ಕೂಡ ಮಿಂಚಿದಲ್ಲಿ ಎಷ್ಟೆ ಕಷ್ಟದ ಪರಿಸ್ಥಿತಿಯನ್ನು ಚಾಲೆಂಜರ್ಸ್ ಗೆಲುವಿನ ಹಬ್ಬವಾಗಿ ಬದಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT