ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗೆಂದು ಬಂದಿದ್ದ ಮಹಿಳೆ ಸಾವು

ಸಂಬಂಧಿ ನಾಪತ್ತೆ; ದೂರು ದಾಖಲು
Last Updated 3 ಏಪ್ರಿಲ್ 2013, 9:18 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಲು ಬಂದಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಸೋಮವಾರ ಬೆಳಿಗ್ಗೆ 8ಗಂಟೆ ವೇಳೆಗೆ ಮಡಬೂರು ಗ್ರಾಮದವನು ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಆಟೊದಲ್ಲಿ ಮಹಿಳೆಯೊಬ್ಬಳನ್ನು ಕರೆತಂದು ಇವರು ಅಕ್ಕ ಆಗಬೇಕು. ಇವರ ಪ್ರಜ್ಞೆ ತಪ್ಪಿದೆ. ತುರ್ತು ಚಿಕಿತ್ಸೆ ನೀಡಬೇಕೆಂದು ಕರ್ತವ್ಯದಲ್ಲಿದ್ದ ದಾದಿಯೊಬ್ಬರನ್ನು ಕೇಳಿಕೊಂಡಿದ್ದ. ಪರೀಕ್ಷಿಸಲು ಶುಶ್ರೋಷಕಿ ಮುಂದಾದಾಗ ಆಕೆ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಈ ವಿಷಯವನ್ನು ಆಕೆಯನ್ನು ಕರೆದುಕೊಂಡು ಬಂದಿದ್ದ ವ್ಯಕ್ತಿಗೆ ಹೇಳಿದಾಗ ಸಂಬಂಧಿಕರು ಹೊರಗಿದ್ದಾರೆ. ಕರೆದುಕೊಂಡು ಬರುವುದಾಗಿ ಹೇಳಿ ಹೋದವನು ಪುನಃ ವಾಪಸು ಬರಲಿಲ್ಲ. 

ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ದೊರೆಯದ ಕಾರಣ  ಪೊಲೀಸರು ಅಪರಿಚಿತ ಶವದ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮೃತ ಮಹಿಳೆಯ ವಯಸ್ಸು ಅಂದಾಜು 42 ವರ್ಷವಾಗಿದ್ದು, ಈಕೆ ಮಡಬೂರು ಜಾತ್ರೆಗೆ ಬಂದಿದ್ದು, ತರೀಕೆರೆ ಅಥವಾ ಕಡೂರು ತಾಲ್ಲೂಕಿನವರಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಮಾನವೀಯತೆ ಮೆರೆದ ಮಹಿಳೆ:  ಅಪರಿಚಿತ ಶವದ ಸಂಸ್ಕಾರ ಮಾಡುವ ಕಾರ್ಯವನ್ನು ಪೊಲೀಸರು ಪಟ್ಟಣ ಪಂಚಾಯಿತಿಗೆ ವಹಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ರಾಜೀವನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಜುಬೇದ ಅನಾಥ ಮಹಿಳೆಯ ಶವಸಂಸ್ಕಾರವನ್ನು ತಮ್ಮ ನೇತೃತ್ವದಲ್ಲಿ ಮಾಡುವುದಕ್ಕೆ ಮುಂದಾದರು.

ಮಹಿಳೆಯ ವಾರಸುದಾರರು ಯಾರು ಇಲ್ಲದ ಕಾರಣ ಮಾನವೀಯತೆಯ ಆಧಾರದ ಮೇಲೆ ಹೂವು, ಹಣ್ಣ, ಸೀರೆ, ಬಟ್ಟೆ ಇತ್ಯಾದಿಗಳನ್ನು ತಂದು ಶಾಸ್ತ್ರೊಕ್ತವಾಗಿ ಶವಸಂಸ್ಕಾರ ಮಾಡುತ್ತಿರುವುದಾಗಿ ಜುಬೇದ ತಿಳಿಸಿದರು.

   ಪೊಲೀಸರ ಸಮ್ಮುಖದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಹಳೇಮಂಡಗದ್ದ ರಸ್ತೆಯ ಭದ್ರಾ ಹಿನ್ನೀರಿನ ರುದ್ರಭೂಮಿಯಲ್ಲಿ  ಶವಸಂಸ್ಕಾರ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT