ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕೂನ್‌ಗುನ್ಯ: ತತ್ತರಿಸಿದ ಯಲಬುಣಚಿ

Last Updated 7 ಸೆಪ್ಟೆಂಬರ್ 2013, 6:17 IST
ಅಕ್ಷರ ಗಾತ್ರ

ಹನುಮಸಾಗರ: ಬೆನಕನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಯಲಬುಣಚಿ ಗ್ರಾಮದಲ್ಲಿ ಚಿಕೂನ್‌ಗುನ್ಯ ವ್ಯಾಪಕವಾಗಿದೆ. ಹೀಗಾಗಿ ಇಡೀ ಊರೇ ಹಾಸಿಗೆ ಹಿಡಿದಿದ್ದು, ಶುಕ್ರವಾರ ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ  ಸಿಬ್ಬಂದಿ ಸಾಮೂಹಿಕವಾಗಿ ಚಿಕಿತ್ಸೆ ನೀಡಿದರು.

ಗ್ರಾಮದಲ್ಲಿನ ಕೊಳಚೆ ಕಾರಣದಿಂದಾಗಿ ದಿನದಿಂದ ದಿನಕ್ಕೆ ವ್ಯಾಪಿಸುತ್ತಿರುವ ರೋಗದಿಂದ ಗ್ರಾಮಸ್ಥರು ಕೃಷಿ ಕೆಲಸ ಬಿಟ್ಟು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಮನೆಗೆ ಒಬ್ಬಿಬ್ಬರಂತೆ ಹಾಸಿಗೆ ಹಿಡಿದಿದ್ದರೆ ವಾರದಿಂದ  ಪ್ರತಿ ಕುಟುಂಬದ ಎಲ್ಲ ಸದಸ್ಯರು ಚಿಕುನ್‌ಗುನ್ಯಕ್ಕೆ ಒಳಗಾಗಿದ್ದಾರೆ. ಯಾರೊಬ್ಬರೂ ಎದ್ದು ಅಡುಗೆ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಗ್ರಾಮಸ್ಥರು ಅಸಹಾಯಕತೆ ತೋರಿಸುತ್ತಾರೆ.

ಗ್ರಾಮದ ಮಸೀದಿಯೊಂದರಲ್ಲಿ ರೋಗಿಗಳಿಗೆ ಸಾಮೂಹಿಕವಾಗಿ ಗ್ಲುಕೋಸ್ ಹಾಗೂ ಮಾತ್ರೆಗಳನ್ನು ನೀಡಲಾಗುತ್ತಿದೆ.
`ನಮ್ಮೂರಲ್ಲಿ ಬರೋಬ್ಬರಿ ಎರಡು ತಿಂಗಳಿನಿಂದ ಚಿಕೂನ್‌ಗುನ್ಯ ಬಂದಿದೆ. ನಮಗೆ ಕುಳಿತರೆ ಏಳಲು ಆಗುತ್ತಿಲ್ಲ. ಎದ್ದರೆ ಕುಳಿತುಕೊಳ್ಳಲು ಆಗುತ್ತಿಲ್ಲ. ಜ್ವರ ಮೈ ಕೈ ನೋವು, ಸಂಕಟದಿಂದ ಸಾಕಾಗಿ ಹೋಗಿದೆ' ಎಂದು ಶರಣಪ್ಪ ಕುಂಟೋಜಿ, ಲಕ್ಷ್ಮೀ ಮ್ಯಾಗಲಮನಿ, ಹುಸೇನಸಾಬ ಜೂಲಕಟ್ಟಿ, ಶರಣಪ್ಪ ಕುಂಬಾರ ನೋವು ತೋಡಿಕೊಂಡರು.

`ಈಗಾಗಲೇ ಗ್ರಾಮಕ್ಕೆ ಮೂರು ಬಾರಿ ಭೇಟಿ ನೀಡಿ ಚಿಕಿತ್ಸೆ ನೀಡಿದ್ದೇವೆ. ಸದ್ಯ ರೋಗ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿದ್ದು, ರೋಗ ತಡೆಗೆ ಗ್ರಾಮದಲ್ಲಿ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರೂ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು' ಎಂದು ಚಳಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ನೀಲಮ್ಮ ಪಾಟೀಲ ಹೇಳಿದರು.

ವೈದ್ಯಾಧಿಕಾರಿ ಸೇರಿದಂತೆ ಆರೋಗ್ಯ ಮೇಲ್ವಿಚಾರಕರಾದ ಶಿವಯ್ಯ, ಸಹಾಯಕಿ ದುರ್ಗಮ್ಮ, ರಾಜು, ಸರ್ವಮಂಗಳಾ, ಮಧುಮತಿ, ಬಾಬುಸಾಬ ಮುದಗಲ್ ಹಾಗೂ ಆಶಾ ಕಾರ್ಯಕರ್ತೆಯರು ರೋಗಿಗಳಿಗೆ ಚಿಕಿತ್ಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT