ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ಕೈಯಲ್ಲಿ ಅರಳಿದ ವಿಜ್ಞಾನ ಮಾದರಿಗಳು...

ಚಿತ್ರದುರ್ಗದ ವಾಸವಿ ಶಾಲೆಯಲ್ಲಿ ವಿಭಾಗೀಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ
Last Updated 31 ಜುಲೈ 2013, 10:57 IST
ಅಕ್ಷರ ಗಾತ್ರ

ಚಿತ್ರದುರ್ಗ: `ಸರ್ ಇದು ಸೌರಮಂಡಲ. ಈ ಮಂಡಲದಲ್ಲಿ ಗ್ರಹ, ಉಪಗ್ರಹಗಳಿರುತ್ತವೆ. ಉಪಗ್ರಹಗಳಲ್ಲಿ  ಎರಡು ವಿಧ. ಒಂದು ಸ್ವಾಭಾವಿಕ, ಇನ್ನೊಂದು ಕೃತಕ ಉಪಗ್ರಹ...'

ಮೊಳಕಾಲ್ಮುರಿನ ವಿದ್ಯಾರ್ಥಿನಿ ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ನಾರಾಯಣಸ್ವಾಮಿ ಅವರಿಗೆ ಸೌರವ್ಯೆಹದ ಮಾದರಿಯ ಕುರಿತು ಪಟ ಪಟ ಅಂತ ವಿವರಣೆ ನೀಡುತ್ತಿದ್ದಳು. `ಸ್ವಲ್ಪ ನಿಲ್ಲಿಸುವಂತೆ ತಿಳಿಸಿದ ಅವರು, ಸ್ವಾಭಾವಿಕ ಹಾಗೂ ಕೃತಕ ಉಪಗ್ರಗಳು ಯಾವುವು ಹೇಳಮ್ಮಾ' ಎಂದು ಪ್ರಶ್ನಿಸಿದರು.

ಆಕೆ ಶಿಕ್ಷಕರತ್ತ ಮುಖ ಮಾಡುತ್ತಾ ವಿವರಣೆ ನೀಡುತ್ತಿದ್ದಾಗ, `ಮೇಷ್ಟ್ರು ಕಡೆ ನೋಡ್ಬೇಡ. ಟೆನ್ಷನ್ ಆಗುತ್ತದೆ. ಇಲ್ನೋಡು, ಸೌರಮಂಡಲದಲ್ಲಿ ಉಪಗ್ರಹಗಳು ಸಾಕಷ್ಟು ಇವೆ. ಅವನ್ನೆಲ್ಲ ನಾವೇ ಕಳಿಸಿರೋದು. ಮೊನ್ನೆ ಒಂದು ಕಮ್ಯುನಿಕೇಷನ್ ಉಪಗ್ರಹ ಕಳಿಸಿದ್ದೀವಿ, ಗೊತ್ತಾ ? ನಾವು ಕಳಿಸುವ ಉಪಗ್ರಹಗಳೇ ಕೃತಕ ಉಪಗ್ರಹಗಳು. ಅವುಗಳಿಗೆ ಲೈಫ್ ಕಡಿಮೆ...ಗೊತ್ತಾಯ್ತಾ...?' ಅಂತ ಸಿಇಒ ಅವರು `ಶಿಕ್ಷಕರಂತೆ' ವಿವರಣೆ ನೀಡಿದರು.

ಈ ಘಟನೆ ನಡೆದದ್ದು, ನಗರದ ವಾಸವಿ ಶಾಲೆಯಲ್ಲಿ ಮಂಗಳವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ವಿಭಾಗೀಯ ಮಟ್ಟದ `ಇನ್‌ಸ್ಪೈರ್ ಅವಾರ್ಡ್' ವಿಜ್ಞಾನ ಮಾದರಿ ವಸ್ತುಪ್ರದರ್ಶನದಲ್ಲಿ . ವಸ್ತುಪ್ರದರ್ಶನ ವೀಕ್ಷಣೆಗೆ ಅತಿಥಿಯಾಗಿ ಬಂದ ಸಿಇಒ ನಾರಾಯಣ ಸ್ವಾಮಿ ಅವರು, ಕೆಲ ಕಾಲ ಶಿಕ್ಷಕರಾದರು. ಜತೆಗೆ ಶಿಕ್ಷಕರು ಮತ್ತು ಮಕ್ಕಳನ್ನು ವಿಜ್ಞಾನ ಮಾದರಿಗಳ ಕುರಿತು ಪ್ರಶ್ನಿಸಿದರು. ಕೆಲ ಸಮಯ ಮಕ್ಕಳೊಂದಿಗೆ ವಿಷಯಾಧಾರಿತವಾಗಿ ಸಂವಾದ ನಡೆಸಿದರು.

ಪ್ರಶ್ನೆಗಳನ್ನು ಕೇಳುತ್ತಲೇ, `ಏನಮ್ಮಾ ನೀನು ಉಪ್ಪು ನೀರು ಕುಡೀತಿಯಾ' ಎಂದು ಮೊಳಕಾಲ್ಮುರಿನ ವಿದ್ಯಾರ್ಥಿನಿಯೊಬ್ಬಳನ್ನು ಕೇಳಿದರು. ಆಕೆ  ನಗೆಬೀರಿದಾಗ, ಹಲ್ಲಿನ ಮೇಲಿದ್ದ ಹಳದಿ ಕಲೆಯನ್ನು ಗುರುತಿಸುತ್ತಾ, ವಿದ್ಯಾರ್ಥಿನಿಯ ಹಳ್ಳಿಯ ನೀರಿನಲ್ಲಿ ಫ್ಲೋರೈಡ್ ಅಂಶವಿರುವ ವಿಚಾರವನ್ನು ಪತ್ತೆ ಹಚ್ಚಿದರು. `ನಿಮ್ಮೂರಿನ ನೀರಲ್ಲಿ ಫ್ಲೋರೈಡ್ ಅಂಶ ಇದೆ. ಶುದ್ಧ ನೀರು ಕುಡಿಯಿರಿ' ಎಂದರು.
ಮೂರು ತಾಲ್ಲೂಕು, 410 ಮಾದರಿಗಳು: ಸೋಮವಾರದಿಂದ ಆರಂಭವಾಗಿರುವ ವಿಭಾಗೀಯಮಟ್ಟದ ಈ ವಸ್ತುಪ್ರದರ್ಶನದಲ್ಲಿ ಮೊಳಕಾಲ್ಮುರು, ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕಿನ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಮಾದರಿಗಳೊಂದಿಗೆ ಭಾಗವಹಿಸಿದ್ದರು.

ಭೌತವಿಜ್ಞಾನ, ಜೀವ ವಿಜ್ಞಾನ ಹಾಗೂ ಪರಿಸರ, ಸ್ವಾಭಾವಿಕ ಸಂಪನ್ಮೂಲಕ್ಕೆ ಸಂಬಂಧಿಸಿದ ವಿಚಾರಗಳ ಮಾದರಿಗಳೇ ಹೆಚ್ಚಾಗಿದ್ದವು. ಮೊಳಕಾಲ್ಮುರು ತಾಲೂಕಿನ ಅಶೋಕ ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಟಿ.ಶಿಲ್ಪಾ ತಯಾರಿಸಿದ ಸೌರಮಂಡಲ, ಮೊಗಲಹಳ್ಳಿಯ ಜಿ.ವಿ.ವಿಜಯಕುಮಾರ್ ತಯಾರಿಸಿದ ಸೌರವ್ಯೆಹ, ಪಕ್ಕುರ್ತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾಟರ್ ವೇಯಿಂಗ್ ಮೆಷಿನ್, ಭೂಸ್ಥಿರ ಉಪಗ್ರಹ, ಹೊಸದುರ್ಗದ ನಾಕಿಕೆರೆ ಶಾಲೆಯ ವಾಟರ್ ಪಂಪಿಂಗ್, ಮೆಟ್ಟಿಲು ಮತ್ತು ನಾಗಯ್ಯನಹಟ್ಟಿಯ ಸೌರ ಒಲೆ, ನೀರಗುಂದ ಶಾಲೆಯ ಭೂಮಿಯ ಋತುಮಾನ ಸೇರಿದಂತೆ ವಿಜ್ಞಾನಕ್ಕೆ ಸಂಬಂಧಿಸಿದ ನಾನಾ ಮಾದರಿಗಳು ಪ್ರದರ್ಶನದಲ್ಲಿದ್ದವು.

ಬುದ್ದಿಮತ್ತೆಗೆ ಮೀರಿದ ಮಾದರಿಗಳು
ಪ್ರತಿಯೊಂದು ಮಾದರಿಯ ಹಿಂದೆ ಶಿಕ್ಷಕರ ಪರಿಶ್ರಮ ಎದ್ದು ಕಾಣುತ್ತಿತ್ತು. ತುಸು ಕ್ಲಿಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಂಡು ಮಾದರಿ ತಯಾರಿಸಿದ ಮಕ್ಕಳು, ವಿವರಣೆ ನೀಡುವುದಕ್ಕೆ ತಡಕಾಡುತ್ತಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವೀಕ್ಷಕರೊಬ್ಬರು, `ಮಕ್ಕಳ ಬುದ್ದಿಮತ್ತೆಗೆ ಮೀರಿದ ವಿಚಾರಗಳಿಂದ ಹೀಗೆ ಆಗುತ್ತದೆ.

ಫೋರ್‌ಸ್ಟ್ರೋಕ್ ಎಂಜಿನ್ ಕಾರ್ಯವೈಖರಿ ಯನ್ನು ಒಬ್ಬ ಪ್ರೌಢಶಾಲೆ ವಿದ್ಯಾರ್ಥಿ ವಿವರಣೆ ನೀಡಲು ಹೇಗೆ ಸಾಧ್ಯ' ಎಂದು ಪ್ರದರ್ಶನದ ಕೊಠಡಿಯಲ್ಲೇ ಪ್ರಶ್ನಿಸಿದರು. ಪ್ರತಿ ಶಾಲೆಯಿಂದ ಒಬ್ಬ ವಿದ್ಯಾರ್ಥಿಯೊಂದಿಗೆ, ಮಾರ್ಗದರ್ಶಕ ರಾಗಿ ಒಬ್ಬ ವಿಜ್ಞಾನ ಶಿಕ್ಷಕರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಒಟ್ಟು 461 ಮಾದರಿಗಳು ಪ್ರದರ್ಶನದಲ್ಲಿದ್ದವು.

`ಜಿಲ್ಲೆಯ ಆರು ತಾಲೂಕುಗಳಿಂದ ಒಟ್ಟು 93 ಮಾದರಿಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆಮಾಡಲಾಗುವುದು. ಈ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಒಟ್ಟು ರೂ 12 ಲಕ್ಷ ಅನುದಾನ ಬಂದಿದ್ದು ಅದರಲ್ಲಿ ್ಙ 9 ಲಕ್ಷ ಬಿಡುಗಡೆಯಾಗಿದೆ. ಒಂದು ಮಾದರಿಗೆ ಐದು ಸಾವಿರ ನೀಡಲಾಗಿದೆ. ಇದರಲ್ಲಿ ಒರ್ವ ಶಿಕ್ಷಕ ಮತ್ತು ವಿದ್ಯಾರ್ಥಿ ಇರುತ್ತಾನೆ' ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯ ಎಂ.ಮಲ್ಲಣ್ಣ ಹೇಳಿದರು.

`ಕಾಲೇಜುಮಟ್ಟದಲ್ಲಿ ನಡೆಯಲಿ'
ಇನ್ಸ್‌ಪೈರ್ ಅವಾರ್ಡ್‌ನಂತಹ ವಿಜ್ಞಾನ ಮೇಳವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದರೆ ಉತ್ತಮವೆನಿಸುತ್ತದೆ. ಇದರಿಂದ ಉತ್ತಮ ಮಾದರಿಗಳು, ಬಳಕೆಯಾಗಬಲ್ಲ ಪ್ರಯೋಗಗಳು ಬೆಳಕಿಗೆ ಬರುವ ಸಾಧ್ಯತೆ ಇರುತ್ತದೆ. ಪ್ರೌಢಶಾಲೆಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಬುದ್ದಿ ಬೆಳವಣಿಗೆಯಾಗಿರುವುದಿಲ್ಲ. ಇವತ್ತಿನ ವಸ್ತು ಪ್ರದರ್ಶನದಲ್ಲಿಟ್ಟಿರುವ ಮಾದರಿಗಳು ಅವರ ಬುದ್ದಿಮತ್ತೆಯನ್ನು ಮೀರಿದಂತಹವು. ಹಾಗಾಗಿ ಮಕ್ಕಳಿಗೆ ಅವುಗಳ ವಿವರಣೆ ಕೊಡುವುದು ಕಷ್ಟವಾಗುತ್ತದೆ.
- ಎಚ್.ಎಸ್.ಟಿ.ಸ್ವಾಮಿ, ವಿಜ್ಞಾನ ಶಿಕ್ಷಕರು, ಚಿತ್ರದುರ್ಗ

ಕ್ರಿಯಾಶೀಲತೆ ಕೊರತೆ

ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದ ಮಕ್ಕಳು ತುಂಬಾ ಕ್ರಿಯಾಶೀಲರಾಗಿದ್ದಾರೆ. ಅವರನ್ನು ಸರಿಯಾಗಿ ಬಳಸಿಕೊಂಡರೆ ಉತ್ತಮ ಮಾದರಿಗಳನ್ನು ತಯಾರಿಸಬಹುದು. ಆದರೆ ಈ ವಸ್ತು ಪ್ರದರ್ಶನದಲ್ಲಿರುವ ಅಂಥದ್ದೊಂದ ಕೊರತೆ ಎದ್ದು ಕಾಣುತ್ತಿದೆ. ಅಷ್ಟೇ ಎಲ್ಲರೂ ಒಂದೇ ರೀತಿಯ, ವಿಷಯದ ಮಾದರಿಗೆ ಮಾರು ಹೋಗಿದ್ದಾರೆ. ಇದಕ್ಕೆ ಕಾರಣ ಶಿಕ್ಷಕರಲ್ಲಿರುವ ಕ್ರಿಯಾಶೀಲತೆ ಕೊರತೆ.

ಮಾದರಿಗಳು ದೊಡ್ಡದಾಗಿರಬೇಕೆಂಬ ನಿಟ್ಟಿನಲ್ಲಿ ಶಿಕ್ಷಕರೇ ಖುದ್ದಾಗಿ ಮಾದರಿಗಳನ್ನು ತಯಾರಿಸುತ್ತಾರೆ. ಇಲ್ಲವೇ ಖರೀದಿಸುತ್ತಾರೆ. ಹೀಗಾಗಿ ಮಾದರಿ ತಯಾರಿಕೆಯಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತದೆ. ಪರಿಣಾಮವೂ ಕ್ಷೀಣಿಸುತ್ತದೆ.
- ಎಚ್.ಮಂಜುನಾಥ್, ವಿಜ್ಞಾನ ಶಿಕ್ಷಕರು, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT