ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ನಿರ್ಮಾಪಕ ಕೆ.ಸಿ.ಎನ್. ಗೌಡ ನಿಧನ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ವಿತರಕ, ಪ್ರದರ್ಶಕ ಮತ್ತು ಫೈನಾನ್ಶಿಯರ್ ಕೆ.ಸಿ.ನಂಜುಂಡೇಗೌಡ (86) ಗುರುವಾರ ಬೆಳಿಗ್ಗೆ ನಿಧನರಾದರು.
 ಕೆ.ಸಿ.ಎನ್. ಗೌಡ ಎಂದೇ ಚಿತ್ರರಂಗದಲ್ಲಿ ಹೆಸರಾಗಿದ್ದ ಅವರು `ಬಬ್ರುವಾಹನ~, `ಬಂಗಾರದ ಮನುಷ್ಯ~, `ದಾರಿ ತಪ್ಪಿದ ಮಗ~, `ಹುಲಿಯ ಹಾಲಿನ ಮೇವು~, `ಭಲೇ ಜೋಡಿ~ ಸೇರಿದಂತೆ ಹದಿನೈದಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದರು.

ಕೆಲದಿನಗಳಿಂದ ಶ್ವಾಸಕೋಶದಲ್ಲಿ ಉಂಟಾದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುರುವಾರ ಬೆಳಿಗ್ಗೆ ಆಸ್ಪತ್ರೆಯಿಂದ ಮನೆಗೆ ತೆರಳುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ಅವರಿಗೆ ಪತ್ನಿ ಸರೋಜಮ್ಮ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಅವರ ಗಂಡುಮಕ್ಕಳಾದ ಕೆ.ಸಿ.ಎನ್. ಚಂದ್ರಶೇಖರ್ ಮತ್ತು ಕೆ.ಸಿ.ಎನ್. ಮೋಹನ್ ಕೂಡ ಚಿತ್ರ ನಿರ್ಮಾಪಕರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನೆಹಳ್ಳಿಯಲ್ಲಿ ಚೌಡಯ್ಯ ಮತ್ತು ಮುದ್ದಮ್ಮ ದಂಪತಿಯ ಮೊದಲ ಮಗನಾಗಿ ಜನಿಸಿದ ಕೆ.ಸಿ.ಎನ್. ಗೌಡ ವೃತ್ತಿಯಿಂದ ರೇಷ್ಮೆ ವ್ಯಾಪಾರಿ. 1970ರಲ್ಲಿ `ರಾಜ್‌ಕಮಲ್ ಆರ್ಟ್ಸ್~ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಕ್ಕಿಳಿದರು.
 
ರಾಜ್‌ಕುಮಾರ್ ದ್ವಿಪಾತ್ರದಲ್ಲಿ ನಟಿಸಿದ್ದ `ಭಲೇ ಜೋಡಿ~ ಅವರ ನಿರ್ಮಾಣದ ಮೊದಲ ಚಿತ್ರ. ಬೆಂಗಳೂರಿನಲ್ಲಿ `ನವರಂಗ್~ ಮತ್ತು `ಊರ್ವಶಿ~ ಹಾಗೂ ದೊಡ್ಡಬಳ್ಳಾಪುರದಲ್ಲಿ `ರಾಜ್ ಕಮಲ್~ ಚಿತ್ರಮಂದಿರಗಳನ್ನು ಅವರು ಸ್ಥಾಪಿಸಿದರು. ಕೆಸಿಎನ್ ಮೂವೀಸ್ ಬ್ಯಾನರ್‌ನಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ `ಬೆಳ್ಳಿಮೋಡ~ ಚಿತ್ರದ ಮೂಲಕ ವಿತರಕರಾಗಿ ಗುರುತಿಸಿಕೊಂಡರು. ಬಳಿಕ 300ಕ್ಕೂ ಅಧಿಕ ಚಿತ್ರಗಳಿಗೆ ವಿತರಕರಾಗಿ ಕೆಲಸ ಮಾಡಿದ್ದಾರೆ.

ಕಪ್ಪು-ಬಿಳುಪು ಚಿತ್ರ `ಸತ್ಯ ಹರಿಶ್ಚಂದ್ರ~ವನ್ನು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ವರ್ಣಚಿತ್ರವನ್ನಾಗಿ ಪರಿವರ್ತಿಸಿ 2008ರಲ್ಲಿ ಬಿಡುಗಡೆ ಮಾಡಿದ್ದರು. `ಕಸ್ತೂರಿ ನಿವಾಸ~ ಚಿತ್ರವನ್ನೂ ಕಲರ್‌ಸ್ಕೋಪ್‌ಗೆ ಪರಿವರ್ತಿಸುವ ಪ್ರಯತ್ನದಲ್ಲಿದ್ದರು. `ಬಬ್ರುವಾಹನ~ ಚಿತ್ರವನ್ನು ತ್ರೀಡಿಯಲ್ಲಿ ಹೊರತರುವ ಬಯಕೆ ಸಹ ಅವರಲ್ಲಿತ್ತು.  2005ರಲ್ಲಿ ದಾದಾ ಸಾಹೇಬ್ ಫಾಲ್ಕೆ ಸಮಿತಿ ನೀಡುವ ಫಾಲ್ಕೆ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ರಾಜಕುಮಾರ್ ಪ್ರಶಸ್ತಿಗಳು ಅವರಿಗೆ ಸಂದಿದ್ದವು.

ರಾಜಕುಮಾರ್ ಅವರಿಂದ ಪ್ರಭಾವಿತರಾಗಿದ್ದ ಕೆ.ಸಿ.ಎನ್., ಮರಣಾನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಗುರುವಾರ ಸಂಜೆ ನಾಲ್ಕು ಗಂಟೆಗೆ ಚಾಮರಾಜಪೇಟೆಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT