ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಕ್ಕಾಣಿ ಹಿಡಿಯಲು ಬೇಕು ‘ಭಾಗ್ಯನಗರ’ದ ಬಲ

Last Updated 27 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಹಲವು ದಶಕಗಳ ಹೋರಾಟದ ಫಲವಾಗಿ, ದೇಶದ 29ನೇ ರಾಜ್ಯವಾಗಿ ಒಡಮೂಡಲಿರುವ ನವ ‘ತೆಲಂ­­ಗಾಣ’ದ ಮೊದಲ ಸರ್ಕಾರ ರಚ­ನೆ­­ಯಲ್ಲಿ ಹೈದರಾಬಾದ್‌ ಮತದಾ­ರರ ಪಾತ್ರ ನಿರ್ಣಾಯಕ ಆಗಲಿದೆ.

ಬೃಹತ್ ಹೈದರಾಬಾದ್‌ ಮಹಾನ­ಗ­ರ­­ಪಾಲಿಕೆಯು 24 ವಿಧಾನಸಭಾ ಕ್ಷೇತ್ರ­ಗ­ಳನ್ನು ಒಡಲಲ್ಲಿ ಇರಿಸಿಕೊಂಡಿದೆ. ಪ್ರಧಾ­ನ­ವಾಗಿ ಮೂರು ಹಾಗೂ ಒಟ್ಟಾರೆ ಐದು ಲೋಕಸಭಾ ಕ್ಷೇತ್ರಗಳಲ್ಲಿ ಇವು ಹರ­ಡಿ­ಕೊಂಡಿವೆ. ಈ ‘ಭಾಗ್ಯನಗರ’ದ ಮತ­­ದಾರರನ್ನು ಒಲಿಸಿಕೊಳ್ಳಲು, ಪರ್ಯಾಯ ರಾಜಕೀಯದ ಆಸೆ ಚಿಗುರಿ­ಸಿ­ರುವ ಲೋಕಸತ್ತಾ, ಆಮ್‌ ಆದ್ಮಿ ಪಕ್ಷ ಸೇರಿದಂತೆ ಸಾಂಪ್ರದಾಯಿಕ ಪಕ್ಷಗಳೆಲ್ಲ­ವೂ ಬೆವರು ಸುರಿಸುತ್ತಿವೆ.

ನಗರದ ಸುತ್ತಲಿನ ಜಿಲ್ಲೆಗಳಲ್ಲಿ ತೆಲಂ­ಗಾಣ ಪರ ಭಾವಸೆಲೆ ಉಕ್ಕಿದರೆ, ನಗರ­ದೊಳಗೆ ವ್ಯಾವಹಾರಿಕ ಲೆಕ್ಕಾಚಾರಗಳೇ ಕಿವಿಗೆ ಬೀಳುತ್ತವೆ. ರಾಜ್ಯ ವಿಭಜನೆ­ಯಿಂದ ತಕ್ಕಡಿ ಎಲ್ಲಿ ‘ಏರುಪೇರು’ ಆಗು­ವುದೋ ಎಂಬ ಚಿಂತೆ ವಣಿಕ ಸಮುದಾ­ಯ­ವನ್ನು ಕಾಡುತ್ತಿದೆ. ಸೀಮಾಂಧ್ರದಿಂದ ಬಂದು ನೆಲೆಸಿರುವವರಲ್ಲಿ ಒಂದು ರೀತಿಯ ‘ಪರ­ಕೀಯ’ ಭಾವನೆ. ಸ್ಥಳೀಯ­ರಲ್ಲಿ ನಿರೀಕ್ಷೆ­ಗಳ ಉಬ್ಬರ. ನಡುವೆ ಕಲ್ಪಿತ ಶಂಕೆ, ಗುಮಾ­ನಿ­ಗಳೆಲ್ಲ ಗುಂಯ್‌­ಗುಡುತ್ತಿವೆ. ಮೆಟ್ರೊ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಅದನ್ನು ತ್ವರಿ­ತ­­ವಾಗಿ ಪೂರ್ಣಗೊಳಿಸಿ ಸಂಚಾರ ದಟ್ಟ­ಣೆಯ ಕಿರಿಕಿರಿ ತಪ್ಪಿಸುವ ಕುರಿತು ಯಾರೂ ಮಾತಾಡುತ್ತಿಲ್ಲ. ಬದಲಿಗೆ ಯೋಜ­­­ನೆಯ ಶ್ರೇಯ ಪಡೆಯಲು ಕಾಂಗ್ರೆಸ್‌ ಮತ್ತು ತೆಲುಗುದೇಶಂ–ಬಿಜೆಪಿ ಮೈತ್ರಿಕೂಟದ ನಡುವೆ ವಾಕ್ಸ­ಮರ ನಡೆದಿದೆ.

‘ಪಾತಬಸ್ತಿ’ ಎಂದೇ ಹೆಸರಾದ ನಗ­ರದ ಹಳೆಯ ಪ್ರದೇಶದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಕುಡಿಯುವ ನೀರು ಪೂರೈಕೆ ಪೈಪುಗಳು ನಿಜಾಮರ ಕಾಲ­ದವು. ಸೋರಿಕೆಯಿಂದ ನೀರು ಕಲುಷಿತ­ಗೊಳ್ಳುತ್ತಿದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಆಗುತ್ತಿವೆ ಎಂದು ಜನರು ದೂರುತ್ತಾರೆ. ನೈರ್ಮ­ಲ್ಯದ ಅಗತ್ಯ ಮನಗಾಣಿಸಲು ಆಂದೋ­ಲ­ನವೇ ಆಗಬೇಕಿದೆ ಎಂಬಂತಿದೆ ಕೆಲವೆಡೆ ಸ್ಥಿತಿ. ಆದರೆ ಇಂತಹ ಸಮಸ್ಯೆಗಳು ಮತ್ತು ನಿವಾರಣೋಪಾಯಗಳು ಚುನಾವಣಾ ವಿಷಯವೇ ಆಗಿಲ್ಲ.

‘ತೆಲಂಗಾಣ ಹೋರಾಟದ ಭಾಗ­ವಾಗಿ ನಡೆದ ಬಂದ್‌, ಗದ್ದಲಗಳಿಂದಾಗಿ ನಗರದ ‘ಬ್ರ್ಯಾಂಡ್‌ ಇಮೇಜ್‌’ಗೆ ಧಕ್ಕೆ ಆಗಿದೆ. ವರ್ಚಸ್ಸು ಹೆಚ್ಚಿಸಿ, ಹೂಡಿಕೆ ಸ್ನೇಹಿ ವಾತಾವರಣ ರೂಪಿಸುವುದು ಆದ್ಯ­ತೆಯ ಕೆಲಸ ಆಗಬೇಕು. ಅದಕ್ಕೆ ರಾಜ­ಕೀಯ ಸ್ಥಿರತೆ ಬೇಕು. ಈಗಿನ ಸ್ಥಿತಿ ನೋಡಿ­ದರೆ ಅತಂತ್ರ ತೀರ್ಪು ಹೊರ­ಬೀಳುವ ಸಾಧ್ಯ­ತೆಯೇ ಹೆಚ್ಚು’ ಎಂಬುದು ಹೋಟೆಲ್‌ ಉದ್ಯಮಿ ಸುಧೀ­ರ್‌­ಚಂದ್ರ  ಅವರ ಅಭಿಪ್ರಾಯ.

ಅತಂತ್ರ ತೀರ್ಪಿನ ಸಾಧ್ಯತೆಯನ್ನು ಹೆಚ್ಚಿಸಿರುವುದು ಹೈದರಾಬಾದ್‌ ಮಹಾ­ನಗರ ಹಾಗೂ ಹೊರವಲ­ಯದ ಪ್ರದೇಶ. ಇಲ್ಲಿ ಬಹುಮುಖ ಸ್ಪರ್ಧೆ ಇದೆ. ಮುಸ್ಲಿಂ ಸಮುದಾಯದ ಪ್ರಾಬಲ್ಯ­ವಿ­ರುವ ಹೈದರಾಬಾದ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಂತೂ ರಾಜ್ಯ ವಿಭ­ಜನೆ, ಪ್ರಣಾಳಿಕೆ, ಪ್ರಚಾರಗಳ ಪರಿ­ಣಾಮ ಕನಿಷ್ಠ. ಆಲ್‌ ಇಂಡಿಯಾ ಮಜ್ಲಿಸ್­–ಎ– ಇತ್ತೆಹಾದುಲ್‌ ಮುಸ್ಲಿ­ಮೀನ್‌ (ಎಐಎಂಐಎಂ) ಪಕ್ಷಕ್ಕೆ ಈ ಕ್ಷೇತ್ರ ಭದ್ರ­ಕೋಟೆ ಆಗಿದೆ. ಅದನ್ನು ಭೇದಿಸಲು ಟಿಡಿಪಿ–ಬಿಜೆಪಿ ಮೈತ್ರಿಕೂಟ ‘ನಮೋ’ ಮಂತ್ರ ಜಪಿಸುತ್ತಿದೆ.

ಮಜ್ಲಿಸ್‌ ಈ ಕ್ಷೇತ್ರದಲ್ಲಿ ಸತತ ಎಂಟು­ ಬಾರಿ ಗೆಲುವಿನ ಪತಾಕೆ ಹಾರಿಸಿದೆ. ಸಲಾವುದ್ದೀನ್‌ ಒವೈಸಿ ಆರು ಬಾರಿ ಸಂಸದರಾಗಿದ್ದರು. ಅವರ ಪುತ್ರ ಅಸದುದ್ದೀನ್‌ ಒವೈಸಿ ಎರಡು ಸಲ ಪ್ರತಿ­ನಿ­ಧಿ­ಸಿದ್ದು, ಪುನರಾಯ್ಕೆ ಬಯಸಿದ್ದಾರೆ. ಡಾ.ಭಗವಂತ  ರಾವ್‌ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಕಾಂಗ್ರೆಸ್ಸಿನಿಂದ ಸಾಮ ಕೃಷ್ಣಾರೆಡ್ಡಿ ಸ್ಪರ್ಧಿಸಿದ್ದಾರೆ. ನಗರದಲ್ಲಿ ಒಟ್ಟಾರೆಯಾಗಿ ಏಳೆಂಟು ಕ್ಷೇತ್ರಗಳನ್ನು ಮಜ್ಲಿಸ್‌ ದಕ್ಕಿಸಿಕೊಳ್ಳಲಿದೆ ಎಂಬ ಭಾವನೆ ಜನಸಾಮಾನ್ಯರಲ್ಲೂ ಇದೆ. ಮುಂದಿನ ಸರ್ಕಾರ ರಚನೆಗೆ ಮಜ್ಲಿಸ್‌ ಸದ­ಸ್ಯರ ಬೆಂಬಲ ಅವಶ್ಯ ಆಗಬಹುದೇನೊ?

ಸಿಕಂದರಾಬಾದ್‌ ಲೋಕಸಭಾ ಕ್ಷೇತ್ರ­ದಲ್ಲಿ ಬಿಜೆಪಿಯಿಂದ ಬಂಡಾರು ದತ್ತಾ­ತ್ರೇಯ, ಕಾಂಗ್ರೆಸ್ಸಿನಿಂದ ಅಂಜನ್‌­ಕುಮಾರ್‌, ಟಿಆರ್‌ಎಸ್‌ನಿಂದ ಟಿ.ಭೀಮ­ಸೇನ್‌, ಮಜ್ಲಿಸ್‌ನಿಂದ ಮೋಹನರಾವ್‌ ಕಣಕ್ಕೆ ಇಳಿದಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ಇದೆ. ನರೇಂದ್ರ ಮೋದಿ ಹವಾ, ನಟ ಪವನ್‌ ಕಲ್ಯಾಣ್‌ ಪ್ರಚಾರ, ಟಿಡಿಪಿ ಜತೆ­ಗಿನ ಮೈತ್ರಿ ಮೊದಲಾದ ಅಂಶಗಳು ಬಂಡಾರು ಅವರಿಗೆ ಅನುಕೂಲಕರ ವಾತಾ­­ವರಣ ಸೃಷ್ಟಿಸಿವೆ. ಅದು ಎಷ್ಟರ­ಮ­­ಟ್ಟಿಗೆ ಮತವಾಗಿ ಪರಿವರ್ತನೆ ಆಗ­ಲಿದೆ ಎಂಬು­ದರ ಮೇಲೆ ಕ್ಷೇತ್ರದ ಫಲಿತಾಂಶ ನಿಂತಿದೆ.

ಈ ಎರಡೂ ಕ್ಷೇತ್ರಗಳಿಗಿಂತ ಹೆಚ್ಚಿಗೆ ಗಮನ ಸೆಳೆದಿರುವುದು ಮಲ್ಕಾಜಿಗಿರಿ ಲೋಕಸಭಾ ಕ್ಷೇತ್ರ. ದೇಶದಲ್ಲೇ ಅತಿ­ದೊಡ್ಡ ಕ್ಷೇತ್ರ. ಸುಮಾರು 30 ಲಕ್ಷ ಮತ­ದಾ­­ರ­­ರನ್ನು ಹೊಂದಿದೆ. ಆಂಧ್ರದಲ್ಲಿ ಪರ್ಯಾಯ ರಾಜಕಾರಣವನ್ನು ಮುನ್ನೆ­ಲೆಗೆ ತಂದ, ಲೋಕಸತ್ತಾ ಪಕ್ಷದ ಅಧ್ಯಕ್ಷ ಜಯ­­ಪ್ರಕಾಶ್‌ ನಾರಾಯಣ ಇಲ್ಲಿಂದ ಕಣಕ್ಕೆ ಇಳಿದಿರುವ ಕಾರಣ ಎಲ್ಲರ ದೃಷ್ಟಿ ಇತ್ತ ನೆಟ್ಟಿದೆ. ವಿಧಾನಸಭೆಯಲ್ಲಿ ಅವರು ಪ್ರತಿ­­ನಿ­ಧಿಸಿದ್ದ ಕೂಕಟ್‌ಪಲ್ಲಿ ಕ್ಷೇತ್ರ ಇದರ ವ್ಯಾಪ್ತಿಗೇ ಬರುತ್ತದೆ. ಈ ಸಲ ದೆಹಲಿ ಕಡೆ ನೋಟ ಹರಿಸಿದ್ದಾರೆ. ಪ್ರಜ್ಞಾವಂತ ಮತ­ದಾ­ರರು ಜೆ.ಪಿ. ಕುರಿತು ಸದಭಿ­ಪ್ರಾಯ ಹೊಂದಿದ್ದಾರೆ.

ಕೇಂದ್ರ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಸರ್ವೇ ಸತ್ಯ­ನಾರಾ­­ಯಣ ಅವರನ್ನು ಕಾಂಗ್ರೆಸ್‌ ಕಣಕ್ಕೆ ಇಳಿ­ಸಿದೆ. ಹಲವು ಶಿಕ್ಷಣ ಸಂಸ್ಥೆಗಳ ರೂವಾರಿ ಮಲ್ಲಾರೆಡ್ಡಿ ಅವರು ಟಿಡಿಪಿ­ಯಿಂದ, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ­ದಿಂದ ನಿವೃತ್ತ ಡಿಜಿಪಿ ದಿನೇಶ್‌ ರೆಡ್ಡಿ ಸ್ಪರ್ಧಿ­­­ಸಿ­ದ್ದಾರೆ. ಟಿಡಿಪಿ ಟಿಕೆಟ್‌ ಸಿಗದ ಕಾರಣ ಟಿಆರ್‌ಎಸ್‌ಗೆ ಜಿಗಿದ ಮೈನಂ­ಪಲ್ಲಿ ಹನುಮಂತರಾವ್‌ ಅವರನ್ನೇ ಆ ಪಕ್ಷ ಸ್ಪರ್ಧೆಗೆ ಇಳಿಸಿದೆ. ಸೀಮಾಂಧ್ರ ನಿವಾ­ಸಿ­­ಗ­ಳು ಗಣನೀಯ ಸಂಖ್ಯೆ­ಯಲ್ಲಿ­ದ್ದಾರೆ. ಮೇಲ್ನೋ­­ಟಕ್ಕೆ ಪಂಚಮುಖಿ ಸ್ಪರ್ಧೆ ­ಕಾಣುತ್ತದೆ.

ತೆಲಂಗಾಣ ಹೋರಾಟದ ಕೇಂದ್ರ ಬಿಂದು ಹೈದರಾಬಾದ್‌ ಆದರೂ ಆ ಹೋರಾ­­ಟದ ಚಾಲಕಶಕ್ತಿಯಾಗಿದ್ದ ಟಿಆರ್‌­­ಎಸ್‌ಗೆ ನಗರದ ಓಣಿಗಳಲ್ಲಿ ಬೇರಿ­ಳಿ­ಸ­ಲು, ಕ್ಷೇತ್ರ ಮಟ್ಟದಲ್ಲಿ ಪಕ್ಷ­ವನ್ನು ಸಂಘಟಿ­ಸಲು ಆಗಿಲ್ಲ. ಇಲ್ಲಿ ಕಣಕ್ಕೆ ಇಳಿ­ದ­­ವರಲ್ಲಿ 11 ಮಂದಿ ಹೊಸಬರು. ಇವ­ರೆಲ್ಲ ಚುನಾವಣೆ ವೇಳಾಪಟ್ಟಿ ಪ್ರಕಟ­ವಾದ ಮೇಲೆ ಪಕ್ಷ ಸೇರಿದವರು. ತೆಲಂ­ಗಾಣ­ವಾದದ ಅಲೆಯೇ ಇವರನ್ನು ದಡಕ್ಕೆ ನೂಕಬೇಕು.

ನಗರವಾಸಿಗಳು ಟಿಡಿಪಿ ಆಡಳಿತ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ­­ಗಳನ್ನು ಈಗಲೂ ನೆನೆಯು­ತ್ತಾರೆ. ಜತೆಗೆ ಬಿಜೆಪಿಯೊಂದಿಗೆ ಮೈತ್ರಿ ಇದೆ. ಈ ಸಮೀಕರಣ ಹೇಗೆ ಒದಗಿ­ಬರ­ಲಿದೆ ಎಂಬುದರ ಕುರಿತು ಜನಸಾಮಾನ್ಯ­ರಲ್ಲೂ ಕುತೂಹಲ ಇದೆ. ಕಾಂಗ್ರೆಸ್‌ಗೂ ಗಟ್ಟಿ ನೆಲೆ ಇದೆ. ವೈಎಸ್‌ಆರ್‌ ಕಾಂಗ್ರೆಸ್‌ ಕೂಡ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಅಖಾಡ­ವನ್ನು ರಂಗೇರಿಸಿದೆ.

ಪ್ರತಿ ವಿಧಾನಸಭಾ ಕ್ಷೇತ್ರವೂ ಭಿನ್ನ­ವಾಗಿ ಕಾಣುತ್ತದೆ. ಸೋಲು, ಗೆಲುವನ್ನು ನಿರ್ದೇಶಿಸುವ ಅಂಶಗಳೂ ಬೇರೆಯಾ­ಗಿವೆ. ಹತ್ತು ಕ್ಷೇತ್ರಗಳಲ್ಲಿ ಸೀಮಾಂಧ್ರ­ದ­ವರ ಮತಗಳು ಗಣನೀಯ ಎಂಬ ಲೆಕ್ಕಾ­ಚಾರ ನಡೆದಿದೆ. ರಾಜ್ಯ ವಿಭಜನೆಯ ಪರಿ­ಣಾ­­ಮವಾಗಿ ಇವರನ್ನು ಪ್ರತ್ಯೇಕವಾಗಿ ಗುರು­­ತಿಸುವ ಪರಿಪಾಠ ಆರಂಭವಾಗಿದೆ. ಮಜ್ಲಿಸ್‌ ಪ್ರಾಬಲ್ಯ ಹೊಂದಿರುವ ಕ್ಷೇತ್ರ­ಗಳನ್ನು ಹೊರತುಪಡಿಸಿದರೆ ಉಳಿದ ಕಡೆ ತಕ್ಕಡಿ ಎತ್ತ ಬೇಕಾದರೂ ವಾಲಬಹುದು ಎಂಬ ಅಯೋಮಯ ಸ್ಥಿತಿ ನೆಲೆಸಿದೆ.

ಬಿಜೆಪಿ ತೆಲಂಗಾಣ ಘಟಕದ ಅಧ್ಯಕ್ಷ ಜಿ.ಕಿಷನ್‌ರೆಡ್ಡಿ, ಕಾಂಗ್ರೆಸ್ಸಿನ ಮರ್ರಿ ಶಶಿಧರ ರೆಡ್ಡಿ, ಜಯಸುಧಾ, ಟಿಡಿಪಿಯ ತಲಸಾನಿ ಶ್ರೀನಿವಾಸ ಯಾದವ್‌, ಆರ್‌.ಕೃಷ್ಣಯ್ಯ ಮೊದಲಾದ ಘಟಾನುಘಟಿಗಳು ಕಣದ­ಲ್ಲಿ­­ದ್ದಾರೆ. ಮುತ್ತಿನನಗರದ ಜನ ಯಾರಿಗೆ ‘ಬಿರಿಯಾನಿ’ ಉಣಬಡಿಸುವರೊ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT