ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಸಮೀಕ್ಷೆ ನಿಷೇಧಿಸಿ: ಜೆಡಿಎಸ್

Last Updated 8 ಏಪ್ರಿಲ್ 2013, 19:38 IST
ಅಕ್ಷರ ಗಾತ್ರ

ಬೆಂಗಳೂರು: ಮತದಾನಕ್ಕೂ ಮೊದಲೇ ನಡೆಯುತ್ತಿರುವ ಜನಾಭಿಪ್ರಾಯ ಸಮೀಕ್ಷೆಗಳನ್ನು ನಿಷೇಧಿಸಬೇಕು. ಮತದಾರರಿಗೆ ಹಣ, ಮದ್ಯ, ಕಾಣಿಕೆ ನೀಡುವುದು ಇತ್ಯಾದಿ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಜೆಡಿಎಸ್, ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಜೆಡಿಎಸ್ ಮುಖಂಡರಾದ ಎಂ.ಸಿ. ನಾಣಯ್ಯ, ಬಸವರಾಜ ಹೊರಟ್ಟಿ, ಪಿ.ಜಿ.ಆರ್.ಸಿಂಧ್ಯ, ಟಿ.ಪ್ರಭಾಕರ್, ರಮೇಶ್‌ಬಾಬು ಅವರು ಸೋಮವಾರ ಇಲ್ಲಿ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ನೇತೃತ್ವದ ತಂಡವನ್ನು ಭೇಟಿ ಮಾಡಿ 3 ಪುಟಗಳ ಮನವಿ ಸಲ್ಲಿಸಿದರು.

ಒಂದೊಂದು ಮಾಧ್ಯಮಗಳು, ಒಂದೊಂದು ಪಕ್ಷಕ್ಕೆ ಜನಬೆಂಬಲ ಇದೆ ಎಂಬ ರೀತಿಯಲ್ಲಿ ಸಮೀಕ್ಷೆಗಳನ್ನು ಪ್ರಕಟಿಸುತ್ತಿವೆ. ಒಂದು ಪಕ್ಷ ಮುಂಚೂಣೆಯಲ್ಲಿರುವುದನ್ನು ಗಮನಿಸಿ, ಆ ಪಕ್ಷವೇ ಅಧಿಕಾರಕ್ಕೆ ಬರಬಹುದು ಎಂಬ ಉದ್ದೇಶದಿಂದ ಮತ ಹಾಕುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ನಾಣಯ್ಯ ಆತಂಕ ವ್ಯಕ್ತಪಡಿಸಿದರು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದ್ದರೂ, ಕೇಂದ್ರ ಸರ್ಕಾರ ಜಾಹೀರಾತು ನೀಡುತ್ತಿದೆ. ಇದನ್ನು ತಡೆಯಬೇಕು. ನಿಗಮ - ಮಂಡಳಿಗಳ ಅಧ್ಯಕ್ಷರು, ಯೋಜನಾ ಮಂಡಳಿಯ ಉಪಾಧ್ಯಕ್ಷರು ಈಗಲೂ ಸರ್ಕಾರಿ ವಾಹನಗಳನ್ನು ಬಳಸುತ್ತಿದ್ದಾರೆ. ಕೂಡಲೇ ಕಾರುಗಳನ್ನು ವಾಪಸ್ ಪಡೆಯಬೇಕು ಎಂದರು.

ಕೆಲವೆಡೆ ಪೊಲೀಸ್ ವಾಹನಗಳಲ್ಲಿ ಅಕ್ರಮವಾಗಿ ಹಣ, ಮದ್ಯ, ಕಾಣಿಕೆಗಳನ್ನು ಸಾಗಿಸಲಾಗುತ್ತಿದೆ. ಆಡಳಿತ ಪಕ್ಷದ ಶಾಸಕರು ತಮಗೆ ಅನುಕೂಲ ಮಾಡಿಕೊಡುವ ಅಧಿಕಾರಿಗಳನ್ನು ಹಿಂದೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಅಂತಹ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ಕೂಡಲೇ ಅಂತಹ ಅಧಿಕಾರಿಗಳನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಕನಕಪುರ ಕ್ಷೇತ್ರದಲ್ಲಿ ಆರು ಸಾವಿರಕ್ಕೂ ಅಧಿಕ ಮತದಾರರು ತಮಿಳುನಾಡಿಗೆ ಸೇರಿದವರಿದ್ದಾರೆ. 36 ಸಾವಿರ ಮತದಾರರ ಹೆಸರು ತಮಿಳುನಾಡು ಮತ್ತು ಕನಕಪುರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿವೆ. 16 ವರ್ಷದವರನ್ನೂ ಪಟ್ಟಿಯಲ್ಲಿ ಸೇರಿಸಲಾಗಿದೆ. ಕೂಡಲೇ ಈ ಲೋಪಗಳನ್ನು ಸರಿಪಡಿಸಬೇಕು ಎಂದು ಸಿಂಧ್ಯ ಆಗ್ರಹಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಒಂದು ಲಕ್ಷ  ಸೀರೆಗಳು, 50 ಸಾವಿರ ವಾಚ್‌ಗಳನ್ನು ಹಂಚಿದ್ದಾರೆ. ಇದಕ್ಕೆ ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕು ಇದೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ವಿಶೇಷ ವೀಕ್ಷಕರನ್ನು ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸಮೀಕ್ಷೆಯಿಂದ ಹಾನಿ
`ಚುನಾವಣೆ ನಂತರ ನಡೆಸುತ್ತಿದ್ದ ಮತಗಟ್ಟೆ ಸಮೀಕ್ಷೆಯನ್ನು ನಿಷೇಧಿಸಲಾಗಿದೆ. ವಾಸ್ತವವಾಗಿ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಮತದಾನಕ್ಕೂ ಮೊದಲೇ ನಡೆಯುವ ಜನಾಭಿಪ್ರಾಯ ಸಮೀಕ್ಷೆ ಮತದಾರರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಚುನಾವಣಾ ಆಯೋಗ ಇದನ್ನು ನಿಷೇಧಿಸಬೇಕು'.
- ಎಂ.ಸಿ. ನಾಣಯ್ಯ

ಡಿ.ಸಿ, ಎಸ್ಪಿಗಳೊಂದಿಗೆ  ಶುಕ್ಲಾ ಚರ್ಚೆ
ಚುನಾವಣಾ ಸಿದ್ಧತೆ ಕುರಿತು ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಅಲೋಕ್ ಶುಕ್ಲಾ ಅವರು ಸೋಮವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಚುನಾವಣೆ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಕ್ರಮಗಳು, ಸ್ಪಷ್ಟನೆಗಳಿಗೆ ವಿವರಣೆ ನೀಡಿದರು. ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಅವರು ಮಂಗಳವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಮಹಾನಿರ್ದೇಶಕರು ಮತ್ತಿತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT