ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಸೂಕ್ಷ್ಮವಾಗದ ಪರಿಸರ ಸೂಕ್ಷ್ಮತೆ

Last Updated 25 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಕುಶಾಲನಗರ: ಲೋಕಸಭಾ ಚುನಾ­ವಣೆಗೆ ನಾಮಪತ್ರ ಸಲ್ಲಿಕೆ ಆರಂಭ­ವಾಗುವ ಹೊತ್ತಿಗೆ ಸರಿಯಾಗಿ ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಪಶ್ಚಿಮ ಘಟದಲ್ಲಿರುವ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿ­ಸಿರುವ ಕರಡು ಅಧಿಸೂಚನೆಯನ್ನು ಹೊರಡಿಸಿತು. ಇದರ ­ಕೊಡಗನ್ನು ತಲುಪಿಲ್ಲವಾದರೂ ಅರ್ಧ ಕೊಡಗು ಪರಿಸರ ಸೂಕ್ಷ್ಮ ಪ್ರದೇಶ ಎಂಬುದು ಹೆಚ್ಚೂ ಕಡಿಮೆ ಎಲ್ಲ ನಾಲಿಗೆಯ ಮೇಲಿರುವ ವಿಚಾರ.

ಪಶ್ಚಿಮಘಟ್ಟವನ್ನು ವಿಶ್ವಪರಂಪರೆಯ ತಾಣವನ್ನಾಗಿ ಘೋಷಿಸಲು ಹೊರಟಾಗ ಅತಿದೊಡ್ಡ ಪ್ರತಿಭಟನೆ ಬಂದದ್ದು ಕೊಡಗಿನಿಂದ. ‘ಪರಿಸರ ಸೂಕ್ಷ್ಮ’, ‘ವಿಶ್ವ­ಪರಂಪರೆ’ ಎಂಬ ಪದಪುಂಜಗಳು ಇಲ್ಲಿ ತಕ್ಷಣದ ಪ್ರತಿಕ್ರಿಯೆಗೆ ಕಾರಣವಾಗು­ತ್ತವೆ. ಕಾರಣ ಇದರ ಹಿಂದೆ ಇಲ್ಲಿನ ಪ್ಲಾಂಟೇಶನ್ ಲಾಬಿಯಿದೆ. ಹಾಗೆಯೇ ಇಲ್ಲಿ ಬಂಡವಾಳ ಹೂಡಲು ಮುಂದಾಗಿ­ರುವ ‘ಆತಿಥ್ಯೋದ್ಯಮ’ದ ಪ್ರಭಾವವಿದೆ. ಆದರೆ ಹಳ್ಳಿಗರೊಂದಿಗೆ ಮಾತಿಗಿಳಿದರೆ ಸಿಗುವುದು ಬರೀ ಅಂತೆ ಕಂತೆಗಳನ್ನು ಆಧಾರವಾಗಿಟ್ಟುಕೊಂಡ ಭಯಗಳು ಮಾತ್ರ.

ಪಶ್ಚಿಮ ಘಟ್ಟದ ಸುರಕ್ಷತೆಗೆ ಏನು ಮಾಡಬೇಕು ಎಂಬುದಕ್ಕೆ ಸಂಬಂಧಿಸಿ­ದಂತೆ ಮಾಧವ ಗಾಡ್ಗೀಳ್ ಅವರ ನೇತೃತ್ವ­ದಲ್ಲಿದ್ದ ಪಶ್ಚಿಮ ಘಟ್ಟ ಪರಿಸರ ತಜ್ಞರ ತಂಡದ (ಡಬ್ಲ್ಯುಜಿಇಇಪಿ) ವರದಿಯೊಂದನ್ನು ನೀಡಿತ್ತು. ಪಶ್ಚಿಮ­ಘಟ್ಟ ರಕ್ಷಿಸುವುದಕ್ಕೆ ಸಂಬಂಧಿಸಿದಂತೆ ಹಲವು ಕ್ರಮಗಳನ್ನು ಈ ವರದಿ ಹಲವು ಸಲಹೆಗಳನ್ನು ನೀಡಿತ್ತು. ಆದರೆ ಇದು ಕಠಿಣ ಕ್ರಮಗಳನ್ನು ಪ್ರತಿಪಾದಿಸುತ್ತಿದೆ­ಯೆಂಬ ಒತ್ತಡಕ್ಕೆ ಮಣಿದು ಸರ್ಕಾರ ಕಸ್ತೂರಿರಂಗನ್ ನೇತೃತ್ವದಲ್ಲಿ ಒಂದು ಉನ್ನತ ಮಟ್ಟ ಕಾರ್ಯ ತಂಡ (ಎಚ್ಎಲ್‌ಡಬ್ಲ್ಯುಜಿ) ರಚಿಸಿತ್ತು. ಈಗ ಕಸ್ತೂರಿರಂಗನ್ ವರದಿಯನ್ನು ಆಧಾರ­ವಾಗಿಟ್ಟುಕೊಂಡು ಕರಡು ಅಧಿಸೂಚನೆ­ಯೊಂದನ್ನು ಕೇಂದ್ರ ಪರಿಸರ ಸಚಿವಾಲಯ ಪ್ರಕಟಿಸಿದೆ.

ಕಸ್ತೂರಿರಂಗನ್ ವರದಿ ಹೇಳುತ್ತಿರು­ವಂತೆ ಕೊಡಗಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯೊಳಗೆ ಬರುವ ಹಳ್ಳಿ­ಗಳ ಸಂಖ್ಯೆ 55. ಇವುಗಳಲ್ಲಿ 23 ಮಡಿ­ಕೇರಿ ತಾಲೂಕಿನಲ್ಲಿ, 11 ಸೋಮ­ವಾರ­ಪೇಟೆ ತಾಲೂಕಿನಲ್ಲಿ ಮತ್ತು 21 ಹಳ್ಳಿ­ಗಳು ವಿರಾಜಪೇಟೆ ತಾಲೂಕಿ­ನಲ್ಲಿವೆ. ಹಳ್ಳಿಗಳ ಸಂಖ್ಯೆಯನ್ನು ನೋಡಿ­ದರೆ ಇದೊಂದು ಸಣ್ಣ ವಿಚಾರವೆಂಬಂತೆ ಕಾಣಿಸುತ್ತದೆ. ಆದರೆ ತಾಲೂಕಿನ ಒಟ್ಟು ಭೌಗೋಳಿಕ ವ್ಯಾಪ್ತಿಯೊಳಗೆ ಇರುವ ಪರಿಸರ ಸೂಕ್ಷ್ಮ ಪ್ರದೇಶದ ಪ್ರಮಾಣ ಜನಸಾಮಾನ್ಯರಿಗೆ ಹೆದರಿಕೆ ಹುಟ್ಟಿಸಿ­ಬಿಡುತ್ತದೆ.

ಮಡಿಕೇರಿ ತಾಲೂಕಿನ ವಿಸ್ತೀರ್ಣ 1441 ಚದರ ಕಿಲೋಮೀಟರ್. ಇದರಲ್ಲಿ 963 ಚದರ ಕಿಲೋಮೀಟರ್ ಪರಿಸರ ಸೂಕ್ಷ್ಮ ಪ್ರದೇಶ. 1661 ಚದರ ಕಿಲೋಮೀಟರ್ ವಿಸ್ತೀರ್ಣದ ವಿರಾಜ­ಪೇಟೆ ತಾಲೂಕಿನಲ್ಲಿ 926 ಚದರ ಕಿಲೋಮೀಟರ್ ಪರಿಸರ ಸೂಕ್ಷ್ಮ ಪ್ರದೇಶ­ವಾಗಿದೆ. ಅತ್ಯಂತ ಕಡಿಮೆ ಪರಿಸರ ಸೂಕ್ಷ್ಮ ಪ್ರದೇಶವಿರುವ ತಾಲೂಕು ಸೋಮ­ವಾರ­ಪೇಟೆ. 1013 ಚದರ ಕಿಲೋ­ಮೀಟರ್ ವಿಸ್ತೀರ್ಣದ ಈ ತಾಲೂಕಿನಲ್ಲಿ ಪರಿಸರ ಸೂಕ್ಷ್ಮವೆಂದು ಗುರುತಿಸಲಾಗಿ­ರುವ ಪ್ರದೇಶದ ವಿಸ್ತೀರ್ಣ 193 ಚದರ ಕಿಲೋಮೀಟರ್ ಮಾತ್ರ. ಈ ಪಟ್ಟಿಯಲ್ಲಿ­ರುವ ಸುಮಾರು 15 ಹಳ್ಳಿಗಳು ಕೇರಳ ಕರ್ನಾಟಕ ಗಡಿಯಲ್ಲಿದ್ದು ಅಲ್ಲಿ ಜನವಸತಿಯೇ ಇಲ್ಲ.

ಪರಿಸರ ಸೂಕ್ಷ್ಮ ಪ್ರದೇಶವೆಂದರೆ ಜನರು ಹೆದರುವುದಕ್ಕೆ ಅನೇಕ ಕಾರಣ­ಗಳಿವೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳು ಸಾಗುವಳಿ ಆಗದೇ ಇರುವ ಬಾಣೆ ಜಮೀನನ್ನು ಅರಣ್ಯವೋ ಸರ್ಕಾರಿ ಜಮೀನೋ ಮಾಡಿ­ಬಿಡುತ್ತದೆಯೆಂಬ ಭಯ ಹಳೆಯದ್ದು. ಇತ್ತೀಚೆಗೆ ಪಶ್ಚಿಮ ಘಟ್ಟ­ವನ್ನು ವಿಶ್ವ­ಪರಂಪರೆಯ ಪಟ್ಟಿಗೆ ಸೇರಿ­ಸುವ ಪ್ರಸ್ತಾಪಕ್ಕೆ ಎದುರಾದ ವಿರೋಧದ ಹಿಂದೆಯೂ ಇಂಥದ್ದೇ ಭಯವಿತ್ತು. ಈಗ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ­ದಂತೆ ಇದೇ ಭಯವಿದೆ.

ಗ್ರಾಮೀಣ ಪ್ರದೇಶದಲ್ಲಿ ವಿಶ್ವ­ಪರಂಪರೆಯ ತಾಣ, ಕಸ್ತೂರಿ ರಂಗನ್ ವರದಿಯ ಶಿಫಾರಸು­ಗಳ ಮಧ್ಯೆ ಯಾವುದೇ ವ್ಯತ್ಯಾಸವನ್ನು ಯಾರೂ ಗುರುತಿಸುವುದಿಲ್ಲ. ಹೇರೂರಿನ ಕೃಷಿಕ ಪ್ರಕಾಶ್ ಅವರ ಮಾತುಗಳೇ ಇದಕ್ಕೆ ಸಾಕ್ಷಿ ‘ನಾವು ಮನೆ ಕಟ್ಟಬಾರ­ದಂತೆ, ತೋಟದಲ್ಲಿ ಏನಾದರೂ ಮಾಡುವು­ದಕ್ಕೆ ಫಾರೆಸ್ಟ್ ಡಿಪಾರ್ಟ­ಮೆಂಟ್‌ನಿಂದ ಪರ್ಮಿಟ್ ಪಡೆಯ­ಬೇಕಂತೆ...’ ಹೀಗೆ ಅಂತೆ ಕಂತೆಗಳಲ್ಲಿಯೇ ಸಾಗುವ ಅವರು ತಮ್ಮ ಮಾತುಗಳಿಗೆ ಸಾಕ್ಷ್ಯ ಒದಗಿಸು­ವುದು ‘ಇದೆಲ್ಲಾ ಪೇಪರಲ್ಲಿ ಬಂದಿತ್ತಂತೆ’ ಎಂಬ ಮತ್ತೊಂದು ಮಾಹಿತಿಯ ಮೂಲಕ.

ಕಸ್ತೂರಿ ರಂಗನ್ ವರದಿಯ ಶಿಫಾ­ರಸುಗಳನ್ನು ಅಧ್ಯಯನ ಮಾಡಿರುವ ಮಡಿಕೇರಿಯ ನಿವೃತ್ತ ತಹಶೀಲ್ದಾರ್ ಟಿ.ಸಿ.ತಮ್ಮಯ್ಯ ‘ಇದರಿಂದ ಸಾಮಾನ್ಯ ಕೃಷಿಕರಿಗೇನೂ ತೊಂದರೆಯಾಗುವು­ದಿಲ್ಲ. 20,000 ಚದರ ಮೀಟರಿಗಿಂದ ದೊಡ್ಡ ಕಟ್ಟಡಗಳನ್ನು ಕಟ್ಟಬೇಕಿದ್ದರೆ ಅದಕ್ಕೆ ಪರಿಸರ ಪರಿಣಾಮ ವರದಿ ಬೇಕಾಗುತ್ತದೆ. ಅಂದರೆ ಇದರಿಂದ ದೊಡ್ಡ ತೊಂದರೆಯಾಗುವುದು ರೆಸಾರ್ಟ್‌ಗಳನ್ನು ಮಾಡುವವರಿಗೆ.’
ಸದ್ಯ ಕಸ್ತೂರಿರಂಗನ್ ವರದಿಯ ಕುರಿತಂತೆ ಇರುವ ಎಲ್ಲಾ ಊಹಾ­ಪೋಹ­ಗಳೂ ಕಟ್ಟಡ ನಿರ್ಮಾಣದ ಸುತ್ತಲೇ ತಿರುಗುತ್ತಿರುವುದರಿಂದ ಇದರ ಹಿಂದೆ ರೆಸಾರ್ಟ್ ಲಾಬಿ ಸಕ್ರಿಯ­ವಾಗಿರು­ವುದನ್ನು ಸೂಚಿಸುತ್ತಿದೆ.

ಜನರ ಮಧ್ಯೆ ಈ ಪ್ರಸ್ತಾಪಗಳೆಲ್ಲವೂ ಬಗೆಬಗೆ­ಯಲ್ಲಿ ಚರ್ಚೆ­ಯಾಗುತ್ತಿದ್ದರೂ ಇದಕ್ಕೆ ರಾಜಕೀಯ ಪ್ರತಿಕ್ರಿಯೆಯೆಂಬುದು ಬಹಳ ಕಡಿಮೆ. ಸುಮಾರು ಜಿಲ್ಲೆಯ ಅರ್ಧಭಾಗದ ಮೇಲೆ ಪರಿಣಾಮ ಬೀರುವ ಕಸ್ತೂರಿ­ರಂಗನ್ ವರದಿಯ ಶಿಫಾರಸುಗಳ ಕುರಿ­ತಂತೆ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟ­ಪಡಿಸಿಲ್ಲ. ಪಶ್ಚಿಮಘಟ್ಟ­ವನ್ನು ವಿಶ್ವ­ಪರಂಪರೆಯ ಪಟ್ಟಿಗೆ ಸೇರಿ­ಸುವುದನ್ನೇ ವಿರೋಧಿಸಿದ್ದ ಬಿಜೆಪಿ ಇದಕ್ಕೂ ತನ್ನ ವಿರೋಧವನನ್ನು ಸೂಚಿ­ಸು­ತ್ತಿದೆಯೆಂದು ಭಾವಿಸಬಹುದಷ್ಟೇ.

ಪರಿಸರ ಸಂರಕ್ಷಕರು, ಪ್ರವಾಸೋದ್ಯ­ಮದ ಲಾಬಿಗಳ ನಡುವೆಯಷ್ಟೇ ಗಂಭೀರ ಚರ್ಚೆಯಲ್ಲಿರುವ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳು ಜನ­ಸಾಮಾನ್ಯ­ರಿಗಿನ್ನೂ ಒಗಟು. ಇದ­ರಿಂದಾಗಿ ಮೈಸೂರು–ಕೊಡಗು ಲೋಕ­ಸಭಾ ಕ್ಷೇತ್ರ­ದಲ್ಲಿ ಕಣದಲ್ಲಿರುವ ಎಲ್ಲಾ ಪ್ರಮುಖ ಅಭ್ಯರ್ಥಿಗಳಿಗೂ ತಮ್ಮ ಪಕ್ಷಗಳ ರಾಷ್ಟ್ರೀಯ ಕಾರ್ಯಸೂಚಿ­ಗಳನ್ನೇ ಮುಂದಿಟ್ಟು ಮತಯಾಚಿಸಲು ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT