ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆ ಕಾಣದ ಕಂದವಾರ ಕೆರೆ

ನಗರ ಸಂಚಾರ
Last Updated 25 ಫೆಬ್ರುವರಿ 2013, 7:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: `ಸುಮಾರು ಹತ್ತಾರು ವರ್ಷಗಳ ಹಿಂದೆ ಕಂದವಾರ ಕೆರೆಯು ನೀರಿನಿಂದ ತುಂಬಿಕೊಂಡಿದೆ ಎಂಬ ವಿಷಯ ಗೊತ್ತಾದರೆ ಸಾಕು, ಜನರೆಲ್ಲರೂ ಇಲ್ಲಿ ಬರುತ್ತಿದ್ದರು. ನಗರದ ವಿವಿಧ ಬಡಾವಣೆಗಳ ನಿವಾಸಿಗಳು ಮಾತ್ರವಲ್ಲ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಣ್ತುಂಬಿಸಿಕೊಳ್ಳುತ್ತಿದ್ದರು. ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತಿತ್ತು. ದಿಢೀರ್ ಜಾತ್ರೆ ಕೂಡ ನಡೆದುಬಿಡುತ್ತಿತ್ತು. ಆದರೆ ಈಗ ಅಂತಹ ಪರಿಸ್ಥಿತಿಯಿಲ್ಲ'

-ಹೀಗೆ ಮರುಕ ಪಡುವವರು ಬೇರೆ ಯಾರೂ ಅಲ್ಲ, ನಗರದಲ್ಲೇ ಅತ್ಯಂತ ದೊಡ್ಡ ಕೆರೆಯನ್ನು ಹೊಂದಿರುವ ಕಂದವಾರ ಬಡಾವಣೆಯ ನಿವಾಸಿಗಳು. ಕೆರೆಯಲ್ಲೇ ಆಟವಾಡುತ್ತ, ನಲಿಯುತ್ತ ಬೆಳೆದ ಹಿರಿಯರು ಕೆರೆಯ ಈಗಿನ ಬರಡಾದ ಸ್ಥಿತಿಯನ್ನು ಕಂಡು ಬೇಸರ ವ್ಯಕ್ತಪಡಿಸುತ್ತಾರೆ. ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವ ಅವರು ತಮ್ಮ ಮೊಮ್ಮಕ್ಕಳಿಗೆ ಕೆರೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ತಮ್ಮ ಕಣ್ಣೆದುರೇ ತುಂಬಿದ ಕೆರೆಯು ಸಂಪೂರ್ಣವಾಗಿ ಸೊರಗಿರುವುದು ಕಂಡು ವ್ಯಥೆಪಡುತ್ತಾರೆ.

ನಿತ್ಯ ವಾಯುವಿಹಾರಕ್ಕೆಂದು ಕೆರೆಪ್ರದೇಶ, ಕೆರೆಕಟ್ಟೆ ಮತ್ತು ದಡದ ಬಳಿ ಬರುವ ಹಿರಿಯ ನಾಗರಿಕರು ಕೆರೆಯ ಬದಲಾದ ಸ್ಥಿತಿ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಚಿಕ್ಕಬಳ್ಳಾಪುರ ಇತಿಹಾಸದೊಂದಿಗೆ ಗಾಢವಾದ ನಂಟು ಹೊಂದಿರುವ ಕಂದವಾರ ಕೆರೆಯು ಚೇತರಿಕೆ ಕಾಣದೆ ಬತ್ತುತ್ತಿರುವುದು ಕಂಡು ಆತಂಕ ವ್ಯಕ್ತಪಡಿಸುವ ಅವರು, `ಕೆರೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಆಗದಿರುವುದು ನಮ್ಮ ತಪ್ಪೇ ಅಥವಾ ಪ್ರಕೃತಿ ಮಾತೆ ನಮ್ಮತ್ತ ಮುನಿಸಿಕೊಂಡಿದ್ದಾಳೆಯೇ' ಎಂದು ತಮ್ಮಷ್ಟಕ್ಕೆ ತಾವೇ ಪ್ರಶ್ನೆ ಹಾಕಿಕೊಳ್ಳುತ್ತಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ನಗರಸಭೆಯ ಯೋಜನೆ ಪ್ರಕಾರ ಸುಮಾರು ಒಂದೂವರೆ ವರ್ಷದ ಹಿಂದೆಯೇ ಈ ಕೆರೆಯಲ್ಲಿ ದೋಣಿ ವಿಹಾರ ಸೌಲಭ್ಯ ಆರಂಭಗೊಳ್ಳಬೇಕಿತ್ತು. ಕೆರೆ ಪ್ರದೇಶದ ಸುತ್ತಮುತ್ತಲ ಆವರಣದಲ್ಲಿ ಉದ್ಯಾನವು ನಿರ್ಮಾಣಗೊಳ್ಳಬೇಕಿತ್ತು. ಸುಂದರ ವಾತಾವರಣದಿಂದ ಪ್ರವಾಸಿಗರ ಮೆಚ್ಚುಗೆಯ ತಾಣವಾಗಬೇಕಿತ್ತು. ಕೆರೆಯ ಅಭಿವೃದ್ಧಿಯಿಂದ ನಗರ ಪ್ರದೇಶವು ಹೊಸದೊಂದು ಕಳೆ ಪಡೆದುಕೊಳ್ಳುತ್ತಿತ್ತು. ಆದರೆ ಅದ್ಯಾವುದೂ ಆಗದಿರುವ ಬಗ್ಗೆ ಇಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

`ಸುಮಾರು 300 ಎಕರೆಯಷ್ಟು ಭೂ ವಿಸ್ತೀರ್ಣ ಹೊಂದಿರುವ ಕಂದವಾರ ಕೆರೆಯು ಸಾಮಾನ್ಯವಾದದ್ದೇನಲ್ಲ. ಇದು ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಕೊಂಡಿಯಿದ್ದಂತೆ. ಮೊದಲೆಲ್ಲ ನೀರನ್ನು ಹುಡುಕಿಕೊಂಡು ಜಾನುವಾರುಗಳು, ಪ್ರಾಣಿಪಕ್ಷಿಗಳು ಬರುತ್ತಿದ್ದವು. ತಮ್ಮ ಬಾಯಾರಿಕೆಯನ್ನು ನಿವಾರಿಸಿಕೊಳ್ಳುತ್ತಿದ್ದವು. ಬಟ್ಟೆಗಳನ್ನು ಶುಚಿಗೊಳಿಸಲು ಬರುತ್ತಿದ್ದ ಮಹಿಳೆಯರು ಮನೆಗೆ ಇಲ್ಲಿಂದಲೇ ಕುಡಿಯಲು ನೀರು ಒಯ್ಯುತ್ತಿದ್ದರು. ಕೆರೆಯು ದೈನಂದಿನ ಜೀವನಶೈಲಿಯ ಭಾಗವಾಗಿತ್ತು. ಬಹುತೇಕ ಶುಭಾರಂಭಗಳನ್ನು ಕೆರೆ ದರ್ಶನದ ನಂತರವಷ್ಟೇ ಆರಂಭಿಸಲಾಗುತ್ತಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ' ಎಂದು ಕಂದವಾರದ ನಿವಾಸಿ ಕೃಷ್ಣಪ್ಪ ಹೇಳುತ್ತಾರೆ.

`ಇದು ನಗರದಲ್ಲೇ ದೊಡ್ಡದಾದ ಏಕೈಕ ಕೆರೆ. ಆದರೆ ಕೆರೆಪ್ರದೇಶದ ಸುತ್ತಮುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಕೊಳವೆಬಾವಿಗಳನ್ನು ಕೊರೆದಷ್ಟು ಅಂತರ್ಜಲದ ಪ್ರಮಾಣವು ಕಡಿಮೆಯಾಗುತ್ತದೆ. ಅದೇ ರೀತಿ ಕೆರೆಯಲ್ಲಿನ ನೀರು ಬತ್ತಿ ಹೋಗಿದೆ. ವರ್ಷದಲ್ಲಿ ಆಗಾಗ್ಗೆ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಆದರೆ ಸತತ ಮಳೆಯಿಂದ ಕೆರೆ ಮತ್ತೆ ತುಂಬಿಕೊಳ್ಳುತ್ತಿತ್ತು. ಆದರೆ ಕಳೆದ ಮೂರು-ನಾಲ್ಕು ವರ್ಷಗಳಿಂದ ಮಳೆಯಾಗದ ಕಾರಣ ಕೆರೆಯಲ್ಲಿ ನೀರು ಇಲ್ಲ' ಎಂದು ಅವರು ತಿಳಿಸಿದರು.

`ಕೆರೆಯು ತುಂಬಿಕೊಂಡಿದ್ದಾಗ ಮಕ್ಕಳು ಈಜಾಡುತ್ತಿದ್ದರು. ವಾಯುವಿಹಾರಿಗಳು ಕೆರೆಪ್ರದೇಶದಲ್ಲಿ ಸುತ್ತಾಡಲು ಮತ್ತು ಕಾಲ ಕಳೆಯಲು ಬಯಸುತ್ತಿದ್ದರು. ನೀರು ಇರುತ್ತಿದ್ದ ಕಾರಣ ತಂಪಾದ ಗಾಳಿ ಬೀಸುತ್ತಿತ್ತು. ಆದರೆ ಈಗ ಅವೆಲ್ಲವೂ ನೆನಪುಗಳಾಗಿ ಉಳಿದಿವೆ. ನಗರಸಭೆ ಅಥವಾ ಜಿಲ್ಲಾಡಳಿತವಾಗಲಿ, ಈ ಕೆರೆಯತ್ತ ಗಮನಹರಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೆ ಎಲ್ಲರಿಗೂ ಅನುಕೂಲವಾಗುತ್ತದೆ. ನಗರಪ್ರದೇಶಕ್ಕೆ ಸುಂದರ ಪ್ರವಾಸಿ ತಾಣವಾಗಿ ಮಾರ್ಪಡುತ್ತದೆ' ಎಂದು ಕಂದವಾರದ ನಿವಾಸಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT