ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಟಾಲ ಹೇಳಿಕೆಗೆ ಪ್ರತಿಕ್ರಿಯಿಸಲು ಬಿಂದ್ರಾ ನಕಾರ

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಒಲಿಂಪಿಯನ್‌ ಶೂಟರ್‌ ಅಭಿನವ್‌ ಬಿಂದ್ರಾ ತಮ್ಮ ವಿರುದ್ಧ ಅಭಯ್‌ ಸಿಂಗ್‌ ಚೌಟಾಲಾ ಮಾಡಿರುವ ವೈಯಕ್ತಿಕ ಟೀಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಅಮಾನತುಗೊಂಡಿರುವ ಭಾರತ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ  ಚೌಟಾಲ ಶುಕ್ರವಾರ ಅಭಿನವ್‌ ಬಿಂದ್ರಾ ತಂದೆ ಎ.ಎಸ್‌. ಬಿಂದ್ರಾ ವಿರುದ್ಧ ಟೀಕೆ ಮಾಡಿದ್ದರು.

2006 ರ ಬೀಜಿಂಗ್‌ ಒಲಿಂಪಿಕ್ಸ್‌ನ 10ಮೀಟರ್ ಏರ್‌ ರೈಫಲ್‌ ವಿಭಾಗದಲ್ಲಿ ಚಿನ್ನ ಗೆದ್ದಿರುವ ಅಭಿನವ್‌ ಬಿಂದ್ರಾ ಐಒಎನಲ್ಲಿರುವ ಭ್ರಷ್ಟ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದರು. ಭ್ರಷ್ಟಾಚಾರ ಸೇರಿದಂತೆ ಇತರ ಯಾವುದೇ ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಐಒಎ ಸೂಚಿಸಿತ್ತು. ಇದನ್ನು ಶೂಟರ್ ಬಿಂದ್ರಾ ಬೆಂಬಲಿಸಿದ್ದರು. ಆದ್ದರಿಂದ ಅವರು ಚೌಟಾಲ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

‘ಚೌಟಾಲಾ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ದುಂಬಾಲು ಬಿದ್ದಿದ್ದಾರೆ. ಆದರೆ, ಆ ವಿಷಯದ ಬಗ್ಗೆ ಮಾತನಾಡಲು ಇಷ್ಟವಿಲ್ಲ. ಭಾರತದ ಕ್ರೀಡಾ ಆಡಳಿತವನ್ನು ಸ್ವಚ್ಛಗೊಳಿಸುವುದು ಮಾತ್ರ ನನ್ನ ಹಾಗೂ ಅಥ್ಲೀಟ್‌ಗಳ ಏಕಮಾತ್ರ ಗುರಿಯಾಗಿದೆ’ ಎಂದು ಬಿಂದ್ರಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಬಿಂದ್ರಾ ವಿರುದ್ಧ ಚೌಟಾಲ ಮಾಡಿರುವ ಟೀಕೆಗೆ ಭಾರತ ರೈಫಲ್‌ ಸಂಸ್ಥೆ ಅಧ್ಯಕ್ಷ ರಣಬೀರ್‌ ಸಿಂಗ್‌ ಹಾಗೂ ‘ಕ್ಲೀನ್‌ ಸ್ಪೋರ್ಟ್ಸ್‌’ ಅಧ್ಯಕ್ಷೆ ಅಶ್ವಿನಿ ನಾಚಪ್ಪ ಟೀಕಿಸಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಶ್ರೇಷ್ಠ ಸಾಧನೆ ಮಾಡಿರುವ ಬಿಂದ್ರಾ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ಉನ್ನತ ಸ್ಥಾನದಲ್ಲಿ ಇರುವವರು ತಮಗೆ ತೋಚಿದಂತೆ ಮಾತನಾಡುವುದು ತರವಲ್ಲ. ಬಿಂದ್ರಾ ಕುಟುಂಬದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ’ ಎಂದು ರಣಬೀರ್‌ ಹೇಳಿದ್ದಾರೆ.

‘ನಿಮ್ಮ ದೇಶದ ಕ್ರೀಡಾಡಳಿತವನ್ನು ಶುದ್ಧ  ಮಾಡಿಕೊಳ್ಳಿ ಎಂದು ಐಒಸಿ ಹೇಳಿರುವುದಕ್ಕೆ ಚೌಟಾಲ ವೈಯಕ್ತಿಕ ಟೀಕೆಗೆ ಮುಂದಾಗಿದ್ದಾರೆ. ಐಒಎ ಪಾರದರ್ಶಕ ಆಡಳಿತ ನೀಡಬೇಕು ಎಂದು ಬಿಂದ್ರಾ ಹೇಳಿರುವುದರಲ್ಲಿ ತಪ್ಪೇನಿದೆ’ ಎಂದು ಅಶ್ವಿನಿ ಪ್ರಶ್ನಿಸಿದ್ದಾರೆ.

ಚೌಟಾಲ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ‘ಕ್ಲೀನ್‌ ಸ್ಪೋರ್ಟ್ಸ್‌’ನ ಜಂಟಿ ಸಮನ್ವಯಕರಾದ  ಮಾಜಿ ಅಥ್ಲೀಟ್‌ ರೀತ್‌ ಅಬ್ರಾಹಂ ‘ಚೌಟಾಲ ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವ ಮೊದಲು ಅವರ ತಂದೆ ಒ.ಪಿ. ಚೌಟಾಲರ ಭ್ರಷ್ಟಾ­ಚಾರದ ಬಗ್ಗೆ ಮಾತನಾಡಲಿ’ ಎಂದು ಸವಾಲು ಹಾಕಿದ್ದಾರೆ.

‘ಒ.ಪಿ. ಚೌಟಾಲ  ಜೈಲಿಗೆ ಹೋಗಿ ಬಂದವರೇ. ವೈಯಕ್ತಿಕ ವಿಷಯವನ್ನೇ ಮುಂದೆ ಮಾಡಿಕೊಂಡು ಮಾಧ್ಯಮಗಳ ಎದುರು ಟೀಕೆ ಮಾಡುವುದು ಸರಿಯಲ್ಲ. ಇನ್ನೊಬ್ಬರತ್ತ ಬೆರಳು ತೋರಿಸುವ ಸುಲಭ ಕೆಲಸವನ್ನು ಚೌಟಾಲಾ ಮಾಡುತ್ತಿದ್ದಾರೆ. ಆದರೆ, ತಮ್ಮ ತಂದೆಯ ಭ್ರಷ್ಟಾಚಾರದ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ರೀತ್‌ ಕಿಡಿಕಾರಿದ್ದಾರೆ.

ಅಜಯ್‌ ಚೌಟಾಲ ಅವರು ತಾವೇನು ಹಾಗೂ ತಮ್ಮ ಕುಟುಂಬದ ಹಿನ್ನೆಲೆ ಏನು ಎಂಬುದನ್ನು ಮೊದಲು ತಿಳಿದುಕೊಳ್ಳಲಿ                   –ರೀತ್‌ ಅಬ್ರಹಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT