ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಿದ್ರ ನೆಲೆಯಲ್ಲಿ ಹೊಸ ಬದುಕಿನ ಕನಸು...

Last Updated 3 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮಿಯಾಕೊ (ಜಪಾನ್): ಭೀಕರ ಭೂಕಂಪ ಮತ್ತು ಸುನಾಮಿಯಿಂದ ತತ್ತರಿಸಿದ ಇಲ್ಲಿನ ಮಿಯಾಕೊ ನಗರದ ಮೀನುಗಾರರಿಗೆ ಈಗ ಇದೇ ಸ್ಥಳದಲ್ಲಿ ಹೊಸ ಬದುಕು ಕಟ್ಟಿಕೊಳ್ಳುವ ಅದಮ್ಯ ಬಯಕೆ.

ಜಪಾನ್‌ನ ಈಶಾನ್ಯ ವಲಯದಲ್ಲಿರುವ ಈ ನಗರದಲ್ಲಿ ಸುನಾಮಿಯಿಂದಾಗಿ ಸಾವಿರಾರು ಮೀನುಗಾರರು ಮೃತಪಟ್ಟಿದ್ದಾರೆ. ಇವರ ಬದುಕಿಗೆ ಆಸರೆಯಾದ ದೋಣಿಗಳು ದೈತ್ಯ ಅಲೆಗಳಲ್ಲಿ ಕೊಚ್ಚಿಕೊಂಡು ಹೋಗಿವೆ. ಆದರೂ ಈಗಿವರು ಛಿದ್ರವಾಗಿ ಹೋಗಿರುವ ತಮ್ಮ ಬದುಕನ್ನು ಮತ್ತೊಮ್ಮೆ ಭದ್ರವಾಗಿ ಕಟ್ಟಿಕೊಳ್ಳಲು ಸಜ್ಜಾಗುತ್ತಿದ್ದಾರೆ.

ಅವರ ಈ ಕನಸು ಅಂದುಕೊಂಡಷ್ಟು ಸರಳವಾಗೇನೂ ಇಲ್ಲ. ಫುಕುಶಿಮಾದಲ್ಲಿ ಸ್ಫೋಟಗೊಂಡ ಅಣುಸ್ಥಾವರದ ವಿಕಿರಣಗಳು ಈಗ ಸಮುದ್ರ ಸೇರುತ್ತಿರುವುದರ ಆತಂಕವೂ ಇವರ ಪಕ್ಕೆಗಳಲ್ಲಿ ಕೂರಂಬುಗಳಾಗಿ ತಿವಿಯುತ್ತಿದೆ.

ತೀರ ಪ್ರದೇಶದ ಈ ಪುಟ್ಟ ನಗರಿಯಲ್ಲಿ ಈಗ ಹೇಳಿಕೊಳ್ಳುವಂತಹ ಯಾವೊಂದು ಭರವಸೆಯೂ ಉಳಿದಿಲ್ಲ. ಬಹುತೇಕ ನಗರಕ್ಕೆ ನಗರವೇ ನಿರ್ನಾಮವಾಗಿ ಹೋಗಿದೆ. ಎಲ್ಲವನ್ನೂ ಈಗ ಮತ್ತೆ ಶೂನ್ಯದಿಂದಲೇ ಆರಂಭಿಸಬೇಕಾದ್ದು ಇವರ ಪಾಲಿಗೆ ಅನಿವಾರ್ಯ ಎನಿಸಿದೆ.

ಮಿಯಾಕೊ ನಗರದಲ್ಲಿ ಈ ವರ್ಷದ ಆರಂಭದಲ್ಲಿ ಮೀನುಗಾರರ ಸುಮಾರು ಒಂದು ಸಾವಿರ ದೋಣಿಗಳು ನೋಂದಣಿಯಾಗಿದ್ದವು. ಆದರೇನು? ಇವುಗಳಲ್ಲಿ ಈಗ ಕೇವಲ 20 ದೋಣಿಗಳು ಮಾತ್ರವೇ ಕಣ್ಣಿಗೆ ಕಾಣುತ್ತಿವೆ.

‘ಸತ್ತವರೆಷ್ಟು, ಕಣ್ಮರೆಯಾದವರೆಷ್ಟು, ಕಳೆದದ್ದು ಯಾವುದು, ಅಳಿದದ್ದು ಯಾವುದು, ಏನುಂಟು ಏನಿಲ್ಲ? ಓಹ್.....!! ಯಾವುದನ್ನೂ ನಿಖರವಾಗಿ ಹೇಳಲಿಕ್ಕೇ ಸಾಧ್ಯವಿಲ್ಲ’ ಎಂದು ಸ್ಥಳೀಯ ಮೀನುಗಾರರ ಸಂಘಟನೆಯ ಮುಖ್ಯಸ್ಥ ಹೈಡಿಯಾಕಿ ಕಜೆಹರೆ ಕೈ ಚೆಲ್ಲುತ್ತಾರೆ.

ತೂರಿಹೋದ ಆಸರೆ: ‘ಈ ಮೀನುಗಾರರ ಬದುಕಿಗೆ ನೆರವಾಗುವ ಎಲ್ಲ ರೀತಿಯ ಆಸರೆಗಳು ಸುನಾಮಿಯ ಅಲೆಗಳಲ್ಲಿ ತೂರಿ ಹೋಗಿವೆ. ಅಳಿದುಳಿದದ್ದನ್ನೇ ಆಯ್ದುಕೊಂಡು ಹೊಸ ಬದುಕು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮದು’ ಎಂಬ ಅಸಹಾಯಕ ನುಡಿಗಳನ್ನು ಕಜಾಹರೆ ಹೇಳುವಾಗ ಇಲ್ಲಿನ ಭೀಕರತೆ ಕಣ್ಮುಂದೆ ಸುಳಿಯುತ್ತದೆ.

ಇವಾಟೆ ಪ್ರಾಂತ್ಯದ ಇತರ ಪ್ರದೇಶಗಳ ಕತೆಯೂ ಮಿಯಾಕೊ ನಗರದ ಕತೆಗಿಂತಲೂ ಭಿನ್ನವಾಗೇನಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT