ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗನ್‌ ಬಿಡುಗಡೆ: ಆಂಧ್ರದಲ್ಲಿ ಹೊಸ ಲೆಕ್ಕಾಚಾರ

Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹೈದರಾಬಾದ್‌ (ಐಎಎನ್‌ಎಸ್‌):))): ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ­ಕ್ಕೊಳಗಾಗಿ ಸುಮಾರು 16 ತಿಂಗಳ ಬಳಿಕ ಮಂಗಳ­ವಾರ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಹೊರಬಂದಿರು­ವುದು ಆಂಧ್ರ­ರಾಜಕೀಯದ ಚಿತ್ರಣ ಬದಲಿಸುವ ಸಾಧ್ಯತೆ ಇದೆ.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಸಂಬಂಧ ಯುಪಿಎ ಸರ್ಕಾರ ನಿರ್ಧಾರ ಕೈಗೊಂಡ ಬಳಿಕ ಆಂಧ್ರ ಪ್ರದೇಶದಲ್ಲಿ ರಾಜಕೀಯ­ವಾಗಿ ಪ್ರಕ್ಷುಬ್ಧ ವಾತಾ­ವರಣ ನಿರ್ಮಾಣವಾಗಿರುವ ಸಂದರ್ಭ­ದಲ್ಲೇ ಜಗನ್‌ ಬಿಡುಗಡೆ­ಯಾಗುತ್ತಿ­ದ್ದಾರೆ.ಆಂಧ್ರ ವಿಭಜನೆ ವಿರೋಧಿಸಿ ರಾಯಲ್‌ಸೀಮಾ ಮತ್ತು ಆಂಧ್ರದ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗೆ ಕೈಜೋಡಿಸಿ ಅವರ ಒಲವು ಗಳಿಸಲು ಕಡಪ ಸಂಸದರೂ ಆದ ಜಗನ್‌ ಪ್ರಯತ್ನಿಸ­ಬಹುದು.

  ಆಂಧ್ರದಲ್ಲಿ ಉಪಚುನಾವಣೆ ನಿಮಿತ್ತ  2012ರ ಮೇ 27ರಂದು ಪ್ರಚಾರ ಕಾರ್ಯ ಕೈಗೊಂಡಿದ್ದ ಜಗನ್‌ ಅವರನ್ನು ಸಿಬಿಐ ಬಂಧಿಸಿತ್ತು. ಈಗ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಸಂಬಂಧ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಜುಲೈ 30ರಂದು ತೀರ್ಮಾನ ಕೈಗೊಂಡ ಬಳಿಕ ರಾಜ್ಯದಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ನಿರ್ಧಾರ ವಿರೋಧಿಸಿ ಜಗನ್‌ ಸೇರಿದಂತೆ ಅವರ ಪಕ್ಷದ ಇಬ್ಬರು ಸಂಸದರು ಮತ್ತು 17 ಶಾಸಕರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ.

ಆಂಧ್ರ ವಿಭಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಧುಮುಕುವ ಮೂಲಕ ಸೀಮಾಂಧ್ರ­ದಲ್ಲಿ  ಪಕ್ಷದ ನೆಲೆ ಗಟ್ಟಿಗೊಳಿಸಲು ಜಗನ್‌ ಮುಂದಾಗುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

2010ರಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸ್ಥಾಪಿಸಿದ ನಂತರದಿಂದಲೂ ಜಗನ್‌ ಸತತವಾಗಿ ಕಾಂಗ್ರೆಸ್‌ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದು ಮತ್ತೆ ಪ್ರಾರಂಭವಾಗಬಹುದು.2009ರಲ್ಲಿ ವೈಎಸ್‌. ರಾಜಶೇಖರ್‌ ರೆಡ್ಡಿ ಅವರ ಸಾವಿನ ಸುದ್ದಿ ತಿಳಿದು ಅವರ ಅಭಿಮಾನಿಗಳು ಪ್ರಾಣ ತ್ಯಜಿಸಿದ್ದರು. ಅವರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಲು ಕೈಗೊಂಡ ‘ಒದರ್ಪು ಯಾತ್ರೆ’ಗೆ ಜನಸಾಗರವೇ ಹರಿದು ಬಂದಿತ್ತು. ಈ ಮೂಲಕ ಜಗನ್‌ ಅಲ್ಪ ಅವಧಿಯಲ್ಲೇ ಆಂಧ್ರ ರಾಜ್ಯ ರಾಜಕೀಯದಲ್ಲಿ ಮೂರನೇ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದರು. ಇವರ ಬಂಧನದ ಬಳಿಕ ನಡೆದ ಒಂದು ಲೋಕಸಭೆ ಮತ್ತು 18 ವಿಧಾನಸಭಾ ಕ್ಷೇತ್ರಗಳ ಪೈಕಿ 15ರಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಜಯಗಳಿಸಿತ್ತು.

ಜಗನ್‌ ಜೈಲಿನಲ್ಲಿದ್ದಾಗಲೂ ಕಾಂಗ್ರೆಸ್‌ ಮತ್ತು ಟಿಡಿಪಿಯ ಡಜನ್‌ಗೂ ಹೆಚ್ಚು ಶಾಸಕರು ಅವರ ಪರ ನಿಷ್ಠೆ ವ್ಯಕ್ತಪಡಿಸಿದರು. ಜಗನ್‌ ಅವರು ಚಂಚಲಗುಡ ಕೇಂದ್ರೀಯ ಕಾರಾಗೃಹವನ್ನು ತನ್ನ ಪಕ್ಷದ ಕಚೇರಿಯಾಗಿಸಿಕೊಂಡು ನಮ್ಮ ಪಕ್ಷದ ಶಾಸಕರಿಗೆ ಹಣದ ಆಮಿಷವೊಡ್ಡಿ ಸೆಳೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ಮತ್ತು ಟಿಡಿಪಿ ಆರೋಪಿಸಿದ್ದವು.

2011ರಲ್ಲಿ ಲೋಕಸಭೆ ಉಪಚುನಾವಣೆ­ಯಲ್ಲಿ ಜಗನ್‌ ಕಡಪದಿಂದ ಐದು ಲಕ್ಷ ಅತ್ಯಧಿಕ ಮತಗಳೊಂದಿಗೆ ಜಯಗಳಿಸಿದ್ದರು. ರಾಜ್ಯ ರಾಜಕಾರಣದಲ್ಲಿ ತನ್ನ ಅಸ್ತಿತ್ವ ಸಾಬೀತುಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT