ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು: ಬರಪೀಡಿತ ಪಟ್ಟಿ ಸೇರ್ಪಡೆಗೆ ಆಗ್ರಹ

Last Updated 8 ಅಕ್ಟೋಬರ್ 2011, 9:10 IST
ಅಕ್ಷರ ಗಾತ್ರ

ಜಗಳೂರು: ತಾಲ್ಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ಮಹಾತ್ಮಗಾಂಧಿ ವೃತ್ತ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವೃತ್ತಗಳ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಮುಂಗಾರು ಮಳೆ ಸಂಪೂರ್ಣ ವಿಫಲವಾಗಿದ್ದು, ತಾಲ್ಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸದೇ ಇರುವುದು ತಾರತಮ್ಯದಿಂದ ಕೂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ಬಿ. ಕಲ್ಲೇರುದ್ರೇಶ್ ಮಾತನಾಡಿ, ಮಳೆ ಇಲ್ಲದೆ ತಾಲ್ಲೂಕಿನ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಅಂತರ್ಜಲ ಕುಸಿದಿದ್ದರೂ, ಪ್ರವಾಹ ನಿಧಿ ಮಂಜೂರು ಮಾಡುವಂತೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಸರ್ಕಾರಕ್ಕೆ ಮನವಿ ಮಾಡಿರುವುದರಿಂದ ತಾಲ್ಲೂಕು ಬರ ಪಟ್ಟಿಗೆ ಸೇರಲು ತೊಂದರೆಯಾಗಿ ಪರಿಣಮಿಸಿದೆ. ಸರ್ಕಾರ ಕೂಡಲೇ ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ದೇವಿಕೆರೆ ಗುರುಸಿದ್ದಪ್ಪ, ತಾ.ಪಂ. ಸದಸ್ಯ ಓಬಪ್ಪ, ಉಸ್ಮಾನ್‌ಆಲಿ, ಎಂ.ಆರ್. ಪುಟ್ಟಣ್ಣ ಮತ್ತು ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT