ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಕಲಾವಿದರ ಮೋಡಿ

Last Updated 19 ಅಕ್ಟೋಬರ್ 2012, 7:55 IST
ಅಕ್ಷರ ಗಾತ್ರ

ಚಾಮರಾಜನಗರ: ಸೂರ್ಯ ನೆತ್ತಿಗೇರುತ್ತಿದ್ದಂತೆಯೇ ಜಿಲ್ಲಾ ಕೇಂದ್ರದ ಬೀದಿಗಳನ್ನು ಜನಪದದ ಸೊಗಡು ಆವರಿಸಿಕೊಂಡಿತು. ಕೈಯಲ್ಲಿ ಡಮರುಗ ಹಿಡಿದ ಗೊರವರ ಕುಣಿತದ ಕಲಾವಿದರು ಕೇಕೇ ಹಾಕಿದರು.

ಪಕ್ಕದಲ್ಲಿಯೇ ಇದ್ದ ಡೊಳ್ಳು ಕುಣಿತದ ಕಲಾವಿದರು ಲಯಬದ್ದವಾಗಿ ಹೆಜ್ಜೆ ಹಾಕುತ್ತಿದ್ದರು. ಕಂಸಾಳೆಯ ನಾದವೂ ಮನಸೂರೆಗೊಳಿಸಿತು.

ಮೈಕೈಗೆ ವಿಭೂತಿ ಬಳಿದುಕೊಂಡ ಸೋಲಿಗ ಯುವಕರು ಗೊರುಕನ ನೃತ್ಯ ಮಾಡಿದರು. ಗಾಡಿ ಗೊಂಬೆ ಕಂಡು ಚಿಣ್ಣರ ಮನವೂ ಅರಳಿತು. ವೀರ ಗಾಸೆ ಕಲಾವಿದರ ನೃತ್ಯವೂ ಅಲ್ಲಿತ್ತು.  ನಗರದ ರಥದ ಬೀದಿಯಲ್ಲಿ ಶ್ರೀವಿದ್ಯಾಗಣಪತಿ ಮಂಡಳಿಯಿಂದ ಪ್ರತಿಷ್ಠಾಪಿಸಿರುವ ಗಣಪತಿಗೆ ಅರ್ಚಕರು ಪೂಜೆ ಸಲ್ಲಿಸಿದರು. ಬಳಿಕ, ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್. ಮಲ್ಲಿ ಕಾರ್ಜುನಪ್ಪ ಕಾಯಿ ಒಡೆಯುವ ಮೂಲಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು.

ಈ ಬಾರಿಯ ಆಕರ್ಷಣೆಯಾಗಿರುವ ಶಿವಲಿಂಗದಲ್ಲಿ ಉದ್ಭವವಾಗಿರುವ ಗಣಪತಿಯ ವಿಸರ್ಜನಾ ಮೆರವ ಣಿಗೆಗೆ ಜನಪದ ಕಲಾ ತಂಡಗಳು ಮೆರುಗು ನೀಡಿದ್ದವು.

ಗುರುನಂಜನಶೆಟ್ಟಿ ಛತ್ರದಿಂದ ಆರಂಭಗೊಂಡ ಮೆರವಣಿಗೆ ಖಡಕಪುರ ಮೊಹಲ್ಲಾ, ಡಾ.ಬಿ.ಆರ್. ಅಂಬೇಡ್ಕರ್ ಬೀದಿ, ಡಿವಿ ಯೇಷನ್ ರಸ್ತೆ ಮೂಲಕ ದೇವಾಂಗ 3ನೇ ಬೀದಿಗೆ ಬಂದಿತು.

ಅಲ್ಲಿಂದ ನಾಗಪ್ಪಶೆಟ್ಟರ ಚೌಕ, ದೊಡ್ಡಅಂಗಡಿ ಬೀದಿ, ಗಾಡಿಪೇಟೆ ಚೌಕ, ಮೇಗಲ ನಾಯಕರ ಬೀದಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಸಂತೇಮರಹಳ್ಳಿ ವೃತ್ತ, ಭಗೀರಥ ಉಪ್ಪಾರ ಬಡಾವಣೆ, ಆದಿಶಕ್ತಿ ದೇವಸ್ಥಾನ, ಬಣಜಿಗರ ಬೀದಿ, ಭ್ರಮರಾಂಬ ಬಡಾವಣೆ, ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರ ಬೀದಿ, ನಗರಸಭೆ ಕಚೇರಿ ರಸ್ತೆಗೆ ಆಗಮಿಸಿತು.

ಚಮಾಲ್‌ಬೀದಿ, ಶ್ರೀವೀರಭದ್ರ ದೇವಸ್ಥಾನದ ಮುಂಭಾಗದಿಂದ ಜೈನರ ಬೀದಿ, ಕೊಳದ ಬೀದಿಯಲ್ಲಿ ಮೆರವಣಿಗೆ ನಡೆಯಲಿದೆ. ನಂತರ, ದೊಡ್ಡಅರಸನ ಕೊಳದಲ್ಲಿ ಮಧ್ಯರಾತ್ರಿ ವಿಸರ್ಜನೆ ನಡೆಯಲಿದೆ.
ಯಾವುದೇ, ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು.

ಮಂಗಳವಾದ್ಯ, ನಂದಿಕಂಬ, ಪೂಜಾ ಕುಣಿತ, ಬೀಸು ಕಂಸಾಳೆ, ಮಹಿಳಾ ಡೊಳ್ಳುಕುಣಿತ, ರಾಕ್ಷಸ ಕುಣಿತ, ತಮಟೆ, ಸೋಮನ ಕುಣಿತ, ವೀರಗಾಸೆ, ಡೊಳ್ಳುಕುಣಿತ, ಕೀಲುಕುದುರೆ, ಗಾರುಡಿಗೊಂಬೆ ನೃತ್ಯ, ಮಹಿಳಾ ವೀರಗಾಸೆ, ಹುಲಿ ವೇಷಧಾರಿಗಳು ನೋಡುಗರಿಗೆ ಮೋಡಿ ಮಾಡಿದರು. ಮೆರವಣಿಗೆ ಸಾಗುವ ರಸ್ತೆಯಲ್ಲಿ ತಳಿರುತೋರಣ ಕಟ್ಟಿ ಶೃಂಗರಿಸಲಾಗಿದೆ. ಜತೆಗೆ, ವಿವಿಧ ಸಂಘ- ಸಂಸ್ಥೆಗಳಿಂದ ಮೆರವಣಿಗೆಯಲ್ಲಿ ಬರುವ ಭಕ್ತರಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು. ಶ್ರೀವಿದ್ಯಾಗಣಪತಿ ಮಂಡಳಿ ಅಧ್ಯಕ್ಷ ಕುಮಾರ್, ಚೂಡಾ ಅಧ್ಯಕ್ಷ ಎಸ್. ಬಾಲಸುಬ್ರಹ್ಯಣ್ಯ, ಮಾಜಿ ಅಧ್ಯಕ್ಷ ಎಂ. ರಾಮಚಂದ್ರು, ಆರ್. ಸುಂದರ್, ನಗರಸಭೆ ಸದಸ್ಯರಾದ ಗಣೇಶ್ ದೀಕ್ಷಿತ್, ಮಹದೇವನಾಯಕ, ಸುಂದರ್‌ರಾಜ್, ಶಿವಣ್ಣ, ಚಾ.ಸಿ. ಗೋವಿಂದರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಸೇರಿದಂತೆ ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT