ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಂದ ದೂರವಿರುವ ಜನಪ್ರತಿನಿಧಿಗಳು

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಇತ್ತೀಚೆಗೆ ಕಾವೇರಿ ನೀರಿನ ವಿತರಣೆಯ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜೊತೆ  ಮಾತುಕತೆ ನಡೆಸಲು ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಬೆಂಗಳೂರಿಗೆ ಬಂದಾಗ ಅವರಿಗೆ ಅಪೂರ್ವವಾದ ಭದ್ರತೆಯನ್ನು ನೀಡಲಾಗಿತ್ತು. ಮಾತ್ರವಲ್ಲ ಭದ್ರತಾ ಸಿಬ್ಬಂದಿಗಳು ಅವರದೇ ರಾಜ್ಯದಿಂದ ಬಂದರೆಂದೂ ವರದಿಯಾಗಿತ್ತು.

ಹಿಂದೊಮ್ಮೆ ಅವರ ಮೇಲಿನ ಕ್ರಿಮಿನಲ್ ದಾವೆಯ ವಿಚಾರಣೆಯ ಕುರಿತಂತೆ ಅವರು ಬೆಂಗಳೂರಿಗೆ ಬಂದಾಗಲೂ ಭದ್ರತಾ ಸಿಬ್ಬಂದಿಗಳು ಅನೇಕ ಸಂಖ್ಯೆಯಲ್ಲಿ ಬಂದಿದ್ದರೆಂದು ಓದಿದ ನೆನಪು. ಉತ್ತರ ಪ್ರದೇಶದ ಮಾಯಾವತಿ ಹೋದಲ್ಲೆಲ್ಲಾ 'ಗನ್' ಹಿಡಿದ ಅನೇಕ ಸಿಬ್ಬಂದಿ ಅವರನ್ನು ಸುತ್ತುವರಿದಿರುವುದನ್ನು ಆಗಾಗ ನೋಡುತ್ತೇವೆ.

ಅವರ ಪ್ರತಿಸ್ಪರ್ಧಿ ಮುಲಾಯಂ ಸಿಂಗ್ ಯಾದವರೂ ಅಷ್ಟೇ: ಎಲ್ಲಿ ಹೋದರೂ ಗನ್ ಹಿಡಿದ ಭದ್ರತಾ ಸಿಬ್ಬಂದಿಗಳು ರಕ್ಷಣೆಗೆ ಸುತ್ತುವರಿದಿರುವುದನ್ನು ಕಾಣುತ್ತೇವೆ. ದೇಶದ ಪ್ರಧಾನಿಯಾಗಲು `ಅರ್ಹ' ರೆಂದು ಬಿಂಬಿಸಲಾಗುತ್ತಿರುವ ಗುಜರಾತಿನ ನರೇಂದ್ರ ಮೋದಿಯವರ ರಕ್ಷಣೆಗೆ ಎಷ್ಟು ಮಂದಿ ಕಾವಲು ಪಡೆಯವರು ಸುತ್ತುವರಿಯುತ್ತಾರೆಂದು ಲೆಕ್ಕ ಮಾಡುವುದು ಕಷ್ಟ.

ಇವರೆಲ್ಲಾ ಜನಪ್ರತಿನಿಧಿಗಳೇ; ಅಂದರೆ ಚುನಾವಣೆಗಳಲ್ಲಿ ಜನರಿಂದ ಆಯ್ಕೆಗೊಂಡ ಪ್ರತಿನಿಧಿಗಳು. ಅವರು ಮಂತ್ರಿಗಳಾದಾಗ ಅವರ ಜೀವಕ್ಕೆ ಯಾರಿಂದ ಅಪಾಯ ಬರಲು ಸಾಧ್ಯವಿದೆ? ಜನರಿಂದ ಆಯ್ಕೆಯಾದ ಮೇಲೆ ಅವರ ಜೀವಕ್ಕೆ ತಾತ್ವಿಕವಾಗಿ ಅಪಾಯ ಬರಲು ಸಾಧ್ಯವಿಲ್ಲ. ಬಹುಮತ ಗಳಿಸಿ ಜಯಶಾಲಿಯಾದ ನಾಯಕರಿಗೆ ಜನರ ಬೆಂಬಲ ಇದೆಯೆಂದು ಅರ್ಥ. ಹಾಗಿದ್ದರೆ ಅವರಿಗೆ ಅಷ್ಟೊಂದು ಭದ್ರತೆ ಅಗತ್ಯವೇ? ಅದೂ ಜನಸಾಮಾನ್ಯರು ತೆರುವ ತೆರಿಗೆಯ ಹಣದಿಂದ?

ಮಂತ್ರಿಗಳಾದವರ ಇನ್ನೊಂದು ವಿಕೃತ ಗುಣ ಅಂದರೆ ಅವರು ಸಂಚರಿಸುವಾಗ ಜನಜೀವನಕ್ಕೆ ಅಡಚಣೆ ಉಂಟುಮಾಡುವುದು. ಅವರ ಕೆಳ ಅಧಿಕಾರಿಗಳ ವಾಹನಗಳು, ಪೊಲೀಸ್ ವಾಹನಗಳು, ರಸ್ತೆಯಲ್ಲಿ ವಾಹನಸಂಚಾರಕ್ಕೆ ನಿರ್ಬಂಧ ಹೇರುವಿಕೆ ಇತ್ಯಾದಿಗಳಿಂದಾಗಿ ಜನಜೀವನಕ್ಕೆ ಆಗುವ ಅಡಚಣೆ ಅನುಭವಿಸಿದವರಿಗೇ ಗೊತ್ತು.

ಕೆಲವೊಮ್ಮೆ ಗಣ್ಯವ್ಯಕ್ತಿಯ ವಾಹನಗಳ ಓಡಾಟದ ಭರಾಟೆಯಲ್ಲಿ ರಸ್ತೆ ದಾಟುವ ಅನಾಮಿಕರಿಗೆ ಆಪತ್ತು ಉಂಟಾದದ್ದು ಇದೆ. ಹೋದ ವರ್ಷ ದಕ್ಷಿಣ ಕನ್ನಡದಲ್ಲಿ ಮಂತ್ರಿಯೊಬ್ಬರು ಹೋಗುತ್ತಿದ್ದಾಗ ಅವರ ಹಿಂದಿನ ಕಾವಲು ವಾಹನ ಹೊಡೆದು 'ಅನಾಮಧೇಯ' ನಾಗರಿಕನೊಬ್ಬ ಮೃತ್ಯುವನ್ನಪ್ಪಿದ್ದ. ದೆಹಲಿಯಲ್ಲಿ ಪ್ರಧಾನಿ ಯವರು ಹೋಗುವ ದಾರಿಯಲ್ಲಿ ಇತರ ವಾಹನಗಳನ್ನು ನಿಷೇಧಿಸಿದ್ದರಿಂದ ತುರ್ತು ಚಿಕಿತ್ಸೆಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ಸಕಾಲದಲ್ಲಿ ಒಯ್ಯಲಾಗದೆ ಮಗುವೊಂದು ಮೃತಪಟ್ಟಿದ್ದು ಮರೆಯುವಂತಿಲ್ಲ.

ಕೆಲವು ತಿಂಗಳ ಹಿಂದೆ ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ರಾತ್ರಿಯ ಮಂಗಳೂರು ರೈಲಿಗೆ ಹೋಗುವ ನಾವು ಕೆಲವರು ಮುಖ್ಯ ಪ್ರವೇಶದ್ವಾರದಲ್ಲಿರುವ ಕಟ್ಟೆಯಲ್ಲಿ ಕುಳಿತಿದ್ದಾಗ ಪೊಲೀಸರು ಬಂದು ನಮ್ಮನ್ನೆಲ್ಲಾ ಎಬ್ಬಿಸಿ ದೂರ ಹೋಗಲು `ಆಜ್ಞೆ' ನೀಡಿದರು.

ಕಾರಣ: ಅಲ್ಲಿಗೆ ಉಪಮುಖ್ಯ ಮಂತ್ರಿ ಬರಲಿದ್ದಾರೆಂದು -(ಅಸ್ಸಾಮಿಗೆ ವಲಸೆ ಹೊರಟಿದ್ದ ಜನರಿಗೆ ಆಶ್ವಾಸನೆ ನೀಡಲೆಂದು ಎಂದು ಮತ್ತೆ ತಿಳಿದು ಬಂತು) ಅತಿ ಗಣ್ಯವ್ಯಕ್ತಿಗಳ ಭೇಟಿ ಇದೆ ಎಂದಾದರೆ ರಸ್ತೆಗಳಲ್ಲಿರುವ ಉಬ್ಬುಗಳನ್ನು ಕೆಲವೇ ಗಂಟೆಗಳಲ್ಲಿ ತೆಗೆಯುವ ಪರಿಪಾಠವಿದೆ. ಅವರ ಪ್ರಯಾಣ ಸುಖಕರವಾಗಬೇಕೆಂಬ ಉದ್ದೇಶದಿಂದ ಈ ಪ್ರಕ್ರಿಯೆ ಮಾಡಿದರೂ ಜನಸಾಮಾನ್ಯರಿಗೆ ಅದರಿಂದಾಗುವ ತೊಂದರೆಯ ಬಗ್ಗೆ ಕಾಳಜಿ ಅಧಿಕಾರಿಗಳಿಗೆ ಇದ್ದಂತಿಲ್ಲ.

ಜನಪ್ರತಿನಿಧಿಗಳೆಂದಾದಾಗ ಅವರನ್ನು ಅವರ ಅಧಿಕೃತ ಬಂಗಲೆಗಳಲ್ಲಿ ಭೇಟಿ ಮಾಡಲು ಜನರಿಗೆ ಯಾವುದೇ ಅಡಚಣೆಯಾಗಕೂಡದು. ಆದರೆ ವಸ್ತು ಸ್ಥಿತಿ ಬೇರೆಯೇ ಇದೆ. ಕಾವಲು ಭಟರ ಕೋಟೆಯನ್ನು ದಾಟಿ ಒಳ ಪ್ರವೇಶಿಸುವುದು ದೊಡ್ಡ ಸಾಧನೆಯೇ ಸರಿ!

ಈ ಸಂದರ್ಭದಲ್ಲಿ ಮೂರು ಘಟನೆಗಳು ನನ್ನ ನೆನಪಿಗೆ ಬರುತ್ತವೆ. ವಿ.ಪಿ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಅಮೃತಸರದ ಸ್ವರ್ಣದೇಗುಲಕ್ಕೆ ಭೇಟಿ ನೀಡಿದಾಗ ಭದ್ರತಾ ಸಿಬ್ಬಂದಿ ಬೇಡವೆಂದಿದ್ದರು ಎಂದು ಓದಿದ ನೆನಪು.

ಎರಡನೆಯದು: ಮಧು ದಂಡವತೆ ಅವರು ದೇಶದ ಹಣಕಾಸು ಸಚಿವರಾಗಿದ್ದಾಗ ಅವರ ನಿವಾಸದಲ್ಲಿ ನನಗೆ ಭೇಟಿಮಾಡಲಿತ್ತು. ಯಾವುದೇ ಭದ್ರತಾ ಸಿಬ್ಬಂದಿಗಳ ತಪಾಸಣೆ ಮತ್ತು ನಿರ್ಬಂಧವಿಲ್ಲದೆ ಸಹೋದ್ಯೋಗಿ ಒಬ್ಬರೊಟ್ಟಿಗೆ ಅವರನ್ನು ಕಂಡಿದ್ದೆ.

ಮೂರನೆಯದು ಬ್ರಿಟನ್ನಿನ ಪ್ರಧಾನ ಮಂತ್ರಿ  ಡೇವಿಡ್ ಕ್ಯಾಮರೊನ್  ಅವರಿಗೆ ಸಂಬಂಧಿಸಿದ್ದು. ಸ್ವಲ್ಪ ಸಮಯದ ಹಿಂದೆ ಅವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಲಂಡನ್ನಿನ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಅಲ್ಲಿ ಸಹಪ್ರಯಾಣಿಕರಾಗಿದ್ದ ಭಾರತೀಯ ಸಂಜಾತ ಕುಟುಂಬವೊಂದರನ್ನು ಮಾತನಾಡಿಸಿದ್ದಲ್ಲದೆ ಅವರ ಮಗು ತುಂಬಾ ಮುದ್ದಾಗಿದೆ ಎಂದು ಹೇಳಿದ್ದರು.

ಕ್ಯಾಮರೊನ್ ಅವರ ಪರಿಚಯವನ್ನು ಆ ಕುಟುಂಬ ಕೇಳಿದಾಗ ಯಾವುದೇ ದರ್ಪವಿಲ್ಲದೆ ಹೇಳಿದರೆಂದು ಓದಿದ್ದೆ .(`ಪ್ರಜಾವಾಣಿ'ಯೇ ಅದನ್ನು ವರದಿ ಮಾಡಿತ್ತು) ದೇಶದ ಪ್ರಧಾನಿ ಉಳಿದ ಪ್ರಯಾಣಿಕರಂತೆ ವರ್ತಿಸಿದ್ದು,  ಆ ಕುಟುಂಬಕ್ಕೆ ಅನನ್ಯ ಅನುಭವವಾಗಿತ್ತು. ಇನ್ನೊಮ್ಮೆ ಕ್ಯಾಮರೊನ್ ಒಂದು ಹೊಟೇಲಲ್ಲಿ ಕಾಫಿ ಕುಡಿಯಲು ಹೋದಾಗ ಪರಿಚಯ ಇಲ್ಲದ ಅಲ್ಲಿಯ ಸಹಾಯಕಿ ಅವರನ್ನು ಕಾದು ನಿಲ್ಲಲು ಹೇಳಿದಾಗ ತಾಳ್ಮೆಕಳಕೊಳ್ಳದ ಪ್ರಧಾನಿ ತಮ್ಮ ಸರದಿ ಬರುವ ತನಕ ಕಾದು ನಿಂತರು.

ಘಟನೆ ನಡೆದ ಬಳಿಕ ಆ ಸಹಾಯಕಿ ಪ್ರಧಾನಿಯ ಕ್ಷಮೆ ಕೇಳಿದರೆ ಅವಳ ವರ್ತನೆಯಲ್ಲಿ ಯಾವುದೇ ಲೋಪವಿಲ್ಲ ಎಂಬ ಅವರ ಉದ್ಗಾರವನ್ನೂ ಮರೆಯಲು ಸಾಧ್ಯವಿಲ್ಲ. ನಮ್ಮ ದೇಶದ ಪ್ರಧಾನಿ ಬಿಡಿ, ರಾಜ್ಯದ ಯಾರಾದರೂ ಮಂತ್ರಿಗಳು ನಗರ ಸಾರಿಗೆಯಲ್ಲಿ ಪ್ರಯಾಣ ಮಾಡುವ ಸರಳತೆಯನ್ನು ತೋರಿಸಿಯಾರೆ?

ಇತ್ತೀಚಿನ ದಿನಗಳಲ್ಲಿ ನಮ್ಮ ಜನಪ್ರತಿನಿಧಿಗಳು ತಮ್ಮ ಸೌಲಭ್ಯಗಳ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುವ ವರದಿಗಳು ಬರುತ್ತಿವೆ. ಕೊಟ್ಟ ಬಂಗಲೆ ಚಿಕ್ಕದಾಯಿತು, ಅದರ ವಾಸ್ತು ಸರಿಯಿಲ್ಲ, ಅಲ್ಲಿ ಹೆಚ್ಚು ಪೀಠೋಪಕರಣಗಳು ಬೇಕು, ಐಷಾರಾಮಿ ಕಾರು ಬೇಕು, ಅಧಿಕಾರಾವಧಿಯಲ್ಲಿ ಎರಡು ಮೂರು ಬಾರಿಯಾದರೂ ವಿದೇಶಿ ಪ್ರವಾಸಕ್ಕೆ ಹೋಗಬೇಕು (ಅಲ್ಲಿಯ ನೀತಿಗಳನ್ನು ಅಭ್ಯಸಿಸಲು!)- ಹೀಗೆ ಹತ್ತು ಹಲವಾರು ಸಮಸ್ಯೆಗಳು ಅಥವಾ ಆಕಾಂಕ್ಷೆಗಳ ಪಟ್ಟಿಗೇ ಪ್ರಾಶಸ್ತ್ಯ ನೀಡುವ ತರಾತುರಿಯಲ್ಲಿ ಜನಪ್ರತಿನಿಧಿಯಾಗಿ ತನ್ನ ಆದ್ಯ ಜವಾಬ್ದಾರಿ ಏನೆಂಬುದು ನಗಣ್ಯವಾದಂತೆ ಭಾಸವಾಗುತ್ತದೆ.

ನಮ್ಮ ಶಾಸಕರು. ಸಂಸದರು ಮತ್ತು ಮಂತ್ರಿಗಳು- ಎಲ್ಲರೂ ಜನರ ಏಳಿಗಾಗಿ ನಿರಂತರ ದುಡಿಯುವ ಜವಾಬ್ದಾರಿ ಹೊತ್ತವರೆಂಬುದು ನಂಬಿಕೆ. ಆ ನಂಬಿಕೆಗೆ ಇಂಬು ಕೊಡಬೇಕಿದ್ದರೆ ಅವರು ಜನರಿಂದ ದೂರ ಸರಿಯುವುದು ಮತ್ತು ಭದ್ರ ಕೋಟೆಗಳಲ್ಲಿರುವುದರ ಬದಲು ಎಲ್ಲರಿಗೂ ಯಾವತ್ತೂ ಸಿಗುವಂತಿರಬೇಕು. ತಮ್ಮನ್ನು ಆರಿಸಿದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಬೇಕು.

ಪ್ರಜಾಪ್ರಭುತ್ವವೆಂದರೆ ಪ್ರಜೆಗಳೇ ಪ್ರಭುಗಳಾಗಿರುವ ವ್ಯವಸ್ಥೆ. ಅವರೆಲ್ಲರಿಗೂ ಅಧಿಕಾರ ನಡೆಸುವುದು ವಾಸ್ತವಿಕವಾಗಿ ಅಸಾಧ್ಯವಾದುದರಿಂದ ಅವರ ಪ್ರತಿನಿಧಿಗಳು ಆಡಳಿತದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ.

ಆದರೆ ಆ ಸಂದರ್ಭದಲ್ಲಿ  ಪ್ರತಿನಿಧಿಗಳು ತಾವು ಜನರ ಸೇವಕರು ಎಂಬುದನ್ನು ಮರೆಯಕೂಡದು. ಆ ಭಾವನೆಯನ್ನು ಇಟ್ಟು ಕರ್ತವ್ಯ ನಿರ್ವಹಿಸಿದರೆ ಹಾಗೂ ವರ್ತಿಸಿದರೆ ಭದ್ರತೆಯ ಅಗತ್ಯವೂ ಇರಲಾರದು.ರಾಜ್ಯದಲ್ಲಿ ಸದ್ಯದಲ್ಲೇ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ  ಪಕ್ಷಗಳ ಅಭ್ಯರ್ಥಿಗಳು ಈ ಅಂಶಗಳನ್ನು ಗಮನದಲ್ಲಿಟ್ಟು ಮುಂದುವರಿಯುವರೆಂದು ಅಪೇಕ್ಷಿಸುವುದು ತಪ್ಪಲ್ಲವೆಂದು ನನ್ನ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT