ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಲ್ಲಿ ಉದ್ಯಾನ ಸಾರ್ವಜನಿಕರಿಗೆ ಮುಕ್ತ

Last Updated 11 ನವೆಂಬರ್ 2011, 8:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಂದಾಜು 5.5 ಕೋಟಿ ವೆಚ್ಚದಲ್ಲಿ ಕಳೆದ ಮೂರು ವರ್ಷಗಳಿಂದ ಉಣಕಲ್ ಕೆರೆಯ ದಡದಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಬರುವ ಜನವರಿ ತಿಂಗಳಲ್ಲಿ ಉದ್ಯಾನವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ನುಡಿದರು.

ಉಣಕಲ್ ಕೆರೆಯ ಸುತ್ತಮುತ್ತ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಗುರುವಾರ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ 90ರಷ್ಟು ಕಾಮಗಾರಿಗಳು ಮುಕ್ತಾಯವಾಗಿದೆ. ಕೇವಲ ಶೇ 10ರಷ್ಟು ಮಾತ್ರ ಬಾಕಿ ಇದೆ.

ಈ ಹಿಂದೆ ಘೋಷಿಸಿದ್ದಂತೆ ಡಿಸೆಂಬರ್ ಒಳಗೇ ಎಲ್ಲ ಕೆಲಸಗಳು ಮುಕ್ತಾಯಗೊಳ್ಳಲಿವೆ. ಅವಳಿ ನಗರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ನೀಡಿದ್ದ 100 ಕೋಟಿ ಅನುದಾನದಲ್ಲಿ 5.5 ಕೋಟಿ ರೂಪಾಯಿ ಬಳಸಿಕೊಂಡು ಈ ಕೆರೆ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ. ಇಡೀ ರಾಜ್ಯದಲ್ಲೇ ಎಲ್ಲೂ ಇಲ್ಲದ ಎರಡು ಡಬಲ್ ಡೆಕರ್ (ಅಂತಸ್ತಿನ) ಗೋಪುರವನ್ನು ನಿರ್ಮಿಸಲಾಗಿದೆ.
 
ಸುಮಾರು 500 ಮಂದಿ ಕುಳಿತುಕೊಳ್ಳಬಹುದಾದ ಬಯಲು ರಂಗಮಂದಿರ ನಿರ್ಮಿಸಲಾಗಿದೆ. ಕೆರೆಯ ಸುತ್ತಲೂ ದೀಪಾಲಂಕಾರವನ್ನು ಮಾಡಲಾಗುತ್ತಿದೆ. ಮೂರು ಬದಿಯಲ್ಲೂ ಪ್ರವೇಶ ದ್ವಾರಗಳನ್ನು ಅಳವಡಿಸಲಾಗಿದೆ. ದ್ವಾರದೊಳಗೆ ಪ್ರವೇಶಿಸಿದ ಕೂಡಲೇ ವಾಹನ ಪಾರ್ಕಿಂಗ್‌ಗಾಗಿ ಜಾಗ ಮೀಸಲಿಡಲಾಗಿದ್ದು, ಮೂರೂ ಕಡೆ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಪ್ರವೇಶ ಶುಲ್ಕ: ಉಣಕಲ್ ಕೆರೆ ಪಾರ್ಕ್ ಸಾರ್ವಜನಿಕರಿಗೆ ಮುಕ್ತವಾದ ಬಳಿಕ ಪ್ರವೇಶ ಶುಲ್ಕ ವಿಧಿಸುವ ಬಗ್ಗೆಯೂ ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ಇದರ ಸುಳಿವನ್ನು ಜಿಲ್ಲಾಧಿಕಾರಿ ನೀಡಿದರು.

ಬೆಳಿಗ್ಗೆ ವಾಯು ವಿಹಾರಕ್ಕೆ ಬರುವರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ ಅದಾದ ಬಳಿಕ ಪಾರ್ಕ್‌ಗೆ ಬರುವವರಿಗೆ ಶುಲ್ಕ ವಿಧಿಸಲಾಗುತ್ತದೆ. ಶುಲ್ಕ ಎಷ್ಟು ಎಂಬುದನ್ನು ಉದ್ಘಾಟನೆಯ ಸಂದರ್ಭದಲ್ಲಿ ತಿಳಿಸಲಾಗುವುದು ಎಂದು ಅವರು ಹೇಳಿದರು.

ಸ್ವಚ್ಛತೆಗೆ ಆದ್ಯತೆ: ದೇವಸ್ಥಾನವಿರುವ ಕೆರೆಭಾಗದ ನೀರಿನಲ್ಲಿ ಈಗಾಗಲೇ ಬಟ್ಟೆ ತೊಳೆಯುವ ಹಾಗೂ ಜಾನುವಾರು ಸ್ವಚ್ಛಗೊಳಿಸುವವರಿಗೆ ಪ್ರತ್ಯೇಕ ಜಾಗ ನಿರ್ಮಿಸಿ ಕೆರೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೂ ಬಟ್ಟೆ ತೊಳೆಯುವುದು ನಿಂತಿಲ್ಲ.

ಈ ಬಗ್ಗೆ ಸಾರ್ವಜನಿಕರ ಮನವೊಲಿಸುವ ಕಾರ್ಯ ನಡೆದಿದೆ. ಅಲ್ಲದೇ ದೇವಸ್ಥಾನಕ್ಕೆ ಬರುವ ಭಕ್ತರು ಪೂಜಾ ಸಾಮಗ್ರಿಗಳನ್ನು ಕೆರೆಯಲ್ಲಿ ತೂರುವುದನ್ನು ತಡೆಯಲು 10 ಮಂದಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೂ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡದ ಹೊರತು ಕೆರೆಯ ಸ್ವಚ್ಛತೆ ಕಾಪಾಡುವುದು ಅಸಾಧ್ಯ ಎಂದರು.

ತ್ಯಾಜ್ಯ ನೀರಿನ ಮಾರ್ಗ ಬದಲು: ಇಲ್ಲಿಯವರೆಗೆ ಉಣಕಲ್ ದೇವಸ್ಥಾನದ ಬಳಿ ಹಾಗೂ ನವನಗರ ಭಾಗದಿಂದ ತ್ಯಾಜ್ಯ ನೀರು ಕೆರೆಯನ್ನು ಸೇರುತ್ತಿತ್ತು. ಕೆರೆ ಅಭಿವೃದ್ಧಿ ಮಾಡುತ್ತಿರುವುದರಿಂದ ಆ ನೀರು ಬರದಂತೆ ತಡೆ ಒಡ್ಡಲಾಗಿದೆ. ಅಲ್ಲದೇ ಉದ್ದೇಶಿತ ಪಿ.ಬಿ. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಉದ್ಯಾನಕ್ಕೆ ಧಕ್ಕೆ ಆಗದ ರೀತಿಯಲ್ಲಿಯೇ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉಣಕಲ್ ಉದ್ಯಾನ ಮೊದಲು ಉದ್ಘಾಟನೆ: ಉಣಕಲ್ ಕೆರೆಯ ಉದ್ಯಾನದೊಂದಿಗೇ ಧಾರವಾಡದ ಕೆಲಗೇರಿ ಕೆರೆ ಅಭಿವೃದ್ಧಿಯನ್ನೂ ಕೈಗೊಳ್ಳಲಾಗಿದೆ. ಆದರೆ ಅದರ ಕಾಮಗಾರಿ ಇನ್ನಷ್ಟು ಬಾಕಿ ಉಳಿದಿದ್ದು, ಕನಿಷ್ಠ 3-4 ತಿಂಗಳಲ್ಲಿ ಮುಗಿಯಬಹುದು. ಆದ್ದರಿಂದ ಉಣಕಲ್ ಉದ್ಯಾನವೇ ಮೊದಲು ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT