ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಕರ್ಷಣೆಯತ್ತ ಆಯುಷ್ ಆಸ್ಪತ್ರೆ ಹೆಜ್ಜೆ

Last Updated 2 ಡಿಸೆಂಬರ್ 2013, 6:28 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಜನತೆ ಆರೋಗ್ಯ ಸಂರಕ್ಷಣೆಗೆ ಜಿಲ್ಲಾ ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆ ಸುಸಜ್ಜಿತ ನೂತನ ಕಟ್ಟಡ ನವೆಂಬರ್ 12ರಂದು ಉದ್ಘಾಟನೆ­ಗೊಂಡಿದೆ. ರಾಜ್ಯ ಆಯುಷ್ ಇಲಾಖೆ ಈ ನೂತನ ಆಸ್ಪತ್ರೆ ಕಟ್ಟಡ ನಿರ್ಮಿಸಿ ಜನಾರೋಗ್ಯ ಸಂರಕ್ಷಣೆಗೆ ಆಯುಷ್ ಚಿಕಿತ್ಸೆ ಕಲ್ಪಿಸಲು ಮುಂದಾಗಿದೆ.

ಆಯುರ್ವೇದ, ಯೋಗ,ನಿಸರ್ಗ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೊಪಥಿ ಈ ಚಿಕಿತ್ಸಾ ಪದ್ಧತಿ ಒಟ್ಟು ವ್ಯವಸ್ಥೆಯೇ ‘ಆಯುಷ್‌’. ಜಿಲ್ಲಾ ಕೇಂದ್ರವಾದ ರಾಯಚೂರಿನಲ್ಲಿ ಏಕ್ ಮಿನಾರ್ ಹತ್ತಿರ ಜಿಲ್ಲಾ ಆಯುಷ್ ಇಲಾಖೆಯ ಆಸ್ಪತ್ರೆ ಈ ಮೊದಲೇ ಕಾರ್ಯ ಆರಂಭಿಸಿತ್ತು.

ನಗರದ ಜನತೆ. ಜಿಲ್ಲೆಯ ವಿವಿಧ ಭಾಗಗಳ ಜನತೆ ಚಿಕಿತ್ಸೆಗೆ ಬಂದು ಪಡೆದಿದ್ದಾರೆ. ಈಗ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಗೊಂಡಿದ್ದರಿಂದ ಹೆಚ್ಚಿನ ಜನತೆಗೆ, ಹೆಚ್ಚು ವೈದ್ಯರು, ಸಿಬ್ಬಂದಿಯಿಂದ ಚಿಕಿತ್ಸೆಗೆ ಅವಕಾಶವಿದೆ. ಪಂಚಕರ್ಮ ಚಿಕಿತ್ಸಾ ಕೊಠಡಿ, ಔಷಧ ವಿಭಾಗ, ಒಳರೋಗಿಗಳಾಗಿ ಚಿಕಿತ್ಸೆ ನೀಡಲು 25 ಹಾಸಿಗೆ ವಾರ್ಡ್ ಕೊಠಡಿ ಇದೆ.

ಆದರೆ, ಈಗಷ್ಟೇ ನೂತನ ಕಟ್ಟಡದಲ್ಲಿ ಆಸ್ಪತ್ರೆ ಆರಂಭಗೊಂಡಿದೆ. ಹೆಚ್ಚಿನ ವೈದ್ಯರು, ಆಡಳಿತ ಕಾರ್ಯಕ್ಕೆ ಸಿಬ್ಬಂದಿ ವ್ಯವಸ್ಥೆ, ಪಂಚಕರ್ಮದಂಥ ಚಿಕಿತ್ಸೆಗೆ ತರಬೇತಿಯುಳ್ಳ ಸಿಬ್ಬಂದಿ ಅಗತ್ಯತೆ ಇದೆ. ಹೀಗಾಗಿ ಒಳರೋಗಿಗಳ ವಿಭಾಗ ಹಾಗೂ ಪಂಚಕರ್ಮ ಚಿಕಿತ್ಸೆ ವಿಭಾಗ ಇನ್ನೂ ತೆರೆದಿಲ್ಲ.

ಹೊರ ರೋಗಿಗಳಿಗೆ ಚಿಕಿತ್ಸೆ: ಸದ್ಯ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಉಚಿತ ಔಷಧಿ ವಿತರಣೆ ಮಾಡಿ ಕಳುಹಿಸಲಾಗುತ್ತಿದೆ. ದೀರ್ಘ ಆರೋಗ್ಯ ಸಮಸ್ಯೆಯುಳ್ಳವರು ನಿರಂತರ ಚಿಕಿತ್ಸೆಗೆ ಇಲ್ಲಿ ಧಾವಿಸುತ್ತಿದ್ದಾರೆ. ನಗರ ಪ್ರದೇಶದ ಜನ ಹೆಚ್ಚು ಭೇಟಿ ನೀಡುತ್ತಿದ್ದು, ಗ್ರಾಮೀಣ ಪ್ರದೇಶದ ಜನತೆಯೂ ಇದರ ಸೌಲಭ್ಯ ಪಡೆಯಬೇಕಿದೆ.

‘ವೈದ್ಯರ ನೇಮಕಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ’
ಆಸ್ಪತ್ರೆ ₨ 75 ಲಕ್ಷ ಮೊತ್ತದಲ್ಲಿ ನಿರ್ಮಾಣವಾಗಿದೆ. ಶೇ 60ರಿಂದ 75ರಷ್ಟ ಇತರೆ ಹುದ್ದೆ ಖಾಲಿ ಇದೆ. ಆರೋಗ್ಯ ಸಚಿವರು ಗಮನಕ್ಕೆ ತಂದು ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ಉದ್ಘಾಟನೆಗೊಂಡ ನೂತನ ಆಸ್ಪತ್ರೆ ಮೇಲ್ಭಾಗದಲ್ಲಿ ₨ 1 ಕೋಟಿ ಮೊತ್ತದಲ್ಲಿ ಕಟ್ಟಡ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಮುಗಿದೆ. ಇದರಿಂದ ಈ ಆಸ್ಪತ್ರೆ 45ರಿಂದ 50 ಹಾಸಿಗೆ ಆಸ್ಪತ್ರೆ ಸ್ವರೂಪ ಪಡೆಯುತ್ತದೆ.  ಹೊಮಿಯೋಪಥಿ ಚಿಕಿತ್ಸಾ ವಿಭಾಗ ಕೂಡಾ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.                                        

ನೂತನ ಕಟ್ಟಡದ ಆಸ್ಪತ್ರೆಯಲ್ಲಿನ ಆರೋಗ್ಯ ಸೇವೆಯನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಇಲ್ಲದೇ ಇದ್ದರೆ ನೂತನ ಆಸ್ಪತ್ರೆ ಕಟ್ಟಡದಿಂದ ಉಪಯುಕ್ತ ಇಲ್ಲ ಎಂಬಂತಾಗುತ್ತದೆ. ನೂತನ ಆಸ್ಪತ್ರೆ ಎದುರಿಗೆ ಸಾರ್ವಜನಿಕ ಸುಲಭ ಶೌಚಾಲಯ ಇದೆ. ಮುಖ್ಯದ್ವಾರಕ್ಕೆ ಎದುರೇ ಇರುವುದು, ಆಸ್ಪತ್ರೆ ಮುಂದೆಯೇ ಶೌಚಾಲಯ ಇರುವುದು ಅನಾರೋಗ್ಯ ವಾತಾವರಣಕ್ಕೂ ಕಾರಣವಾಗುತ್ತದೆ. ಹೀಗಾಗಿ ಆ ಶೌಚಾಲಯ ಸ್ಥಳಾಂತರಕ್ಕೆ ನಗರಸಭೆಗೆ ಪತ್ರ ಬರೆದು ಮನವಿ ಮಾಡಲಾಗುತ್ತಿದೆ.
ಡಾ.ಅಮರಗುಂಡಪ್ಪ,
ಜಿಲ್ಲಾ ಆಯುಷ್ ಅಧಿಕಾರಿ, ರಾಯಚೂರು


‘ಉತ್ತಮ ಚಿಕಿತ್ಸೆ ಸಿಗುತ್ತಿದೆ’
ಇಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂಬುದು ತಿಳಿದು ಇಲ್ಲಿಗೆ ಧಾವಿಸಿ ಬಂದೇವು. ನಿರೀಕ್ಷೆಯಂತೆ ಚಿಕಿತ್ಸೆ ದೊರಕುತ್ತಿದೆ. ನಮ್ಮೇಜಮಾನ್ರಿಗೆ ಮಧುಮೇಹ ಸಮಸ್ಯೆ, ಒತ್ತಡ, ದುಶ್ಚಟ ಇದ್ದವು. ನಿವಾರಣೆಗೆ ಔಷಧಿ ಪಡೆಯುತ್ತಿದ್ದು, ಗುಣಮುಖರಾಗುತ್ತಿದ್ದಾರೆ.
               –ವೇದವತಿ,
ಬ್ಯಾಂಕ್ ನೌಕರರು, ಗುಲ್ಬರ್ಗ.


ಇಲ್ಲಿ ಎಲ್ಲವೂ ಉಚಿತ ಸೇವೆ
ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆ ಇದಾಗಿದೆ. ಒಬ್ಬ ಪುರುಷ ಹಾಗೂ ಇಬ್ಬರು ಮಹಿಳಾ ವೈದ್ಯರಿದ್ದಾರೆ. ಒಬ್ಬರು ಹಿರಿಯ ವೈದ್ಯಾಧಿ­ಕಾರಿ, ಇಬ್ಬರು ವೈದ್ಯಾಧಿಕಾರಿ, ಇಬ್ಬರು ಔಷಧ ತಜ್ಞರು, ಇಬ್ಬರು ಸಿಪಾಯಿ, ಒಬ್ಬರು ಎಎನ್ಎಂ ಸಿಬ್ಬಂದಿ ಇದ್ದಾರೆ.  25 ಹಾಸಿಗೆ ಆಸ್ಪತ್ರೆ ಇದಾಗಿದ್ದು, 15 ಹಾಸಿಗೆ ಆಯುರ್ವೇದ ವಿಭಾಗಕ್ಕೆ, 10 ಹಾಸಿಗೆ ಯುನಾನಿ ವಿಭಾಗಕ್ಕೆ  ಜಿಲ್ಲಾ ಆಯುಷ್ ಇಲಾಖೆ ನಿಗದಿಪಡಿಸಿದೆ ಎಂದು ಹಿರಿಯ ವೈದ್ಯಾಧಿಕಾರಿ ಡಾ. ರೂಪಾ­ಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
ಇದು ಸರ್ಕಾರಿ ಆಸ್ಪತ್ರೆ. ಇಲ್ಲಿ ಶೇ 101 ರಷ್ಟು ಸಂಪೂರ್ಣ ಉಚಿತ ಚಿಕಿತ್ಸೆ. ಉಚಿತ ಔಷಧ ವಿತರಣೆ ಮಾಡಲಾಗುತ್ತದೆ. ಬೆಳಿಗ್ಗೆ 9ರಿಂದ 1 ಗಂಟೆ, ಮಧ್ಯಾಹ್ನ 2ರಿಂದ ಸಂಜೆ­ಯವರೆಗೆ ಆಸ್ಪತ್ರೆ  ತೆರೆದಿರುತ್ತದೆ. ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ವರೆಗೆ ಚಿಕಿತ್ಸೆ ನೀಡಲಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT