ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀರ್ ಪರ ಜೆಡಿಎಸ್ ಪ್ರತಿಭಟನೆ

Last Updated 22 ಫೆಬ್ರುವರಿ 2011, 6:40 IST
ಅಕ್ಷರ ಗಾತ್ರ

ಕುಣಿಗಲ್: ಶಾಸಕ ಜಮೀರ್ ಅಹಮದ್‌ಖಾನ್ ವಿರುದ್ಧ ಡಕಾಯಿತಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಸುಳ್ಳು ಆರೋಪಪಟ್ಟಿ ಸಲ್ಲಿಸಿರುವುದನ್ನು ಖಂಡಿಸಿ ತಾಲ್ಲೂಕು ಜೆಡಿಎಸ್ ಮತ್ತು ಅಲ್ಪಸಂಖ್ಯಾತರ ಘಟಕದವರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು.ಸೋಮವಾರ ಬೆಳಿಗ್ಗೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ಸಂಘಟಿತರಾದ ಜೆಡಿಎಸ್ ಹಾಗೂ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕೃತಿ ದಹಿಸಿ ತಹಶೀಲ್ದಾರ್ ಕಚೇರಿ ಮುಂದೆ ಸಭೆ ನಡೆಸಿದರು.

ಸಭೆಯಲ್ಲಿ ಜಿ.ಪಂ. ಸದಸ್ಯ ವೈ.ಎಚ್.ಹುಚ್ಚಯ್ಯ ಮಾತನಾಡಿ, ಶಾಸಕ ಜಮೀರ್ ಅಹಮದ್ ವಿರುದ್ಧ ಯಾವ ದೂರು ಇಲ್ಲದಿದ್ದರೂ ಸೇಡಿನ ರಾಜಕಾರಣ ಮಾಡುತ್ತಿರುವ ಬಿಜೆಪಿ ಸರ್ಕಾರ ಅವರ ಮೇಲೆ ಡಕಾಯಿತಿ ಪ್ರಕರಣ ದಾಖಲಿಸಿ, ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಿದೆ ಎಂದು ದೂರಿದರು.ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕುತುಬ್‌ವುದ್ದೀನ್, ಪುರಸಭಾ ಅಧ್ಯಕ್ಷೆ ಆಯಿಷಾಬೀ, ಮುಖಂಡರಾದ ಅನಸೂಯಮ್ಮವೈ.ಕೆ.ಆರ್, ಜಯರಾಮಯ್ಯ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್, ತಾ.ಪಂ.ಸದಸ್ಯ ಬಿ.ಎನ್.ಜಗದೀಶ್, ಮಾಜಿ ಉಪಾಧ್ಯಕ್ಷ ಅಬ್ಕುಲ್ ಹಮೀದ್, ಶೂರಾ ಸಮಿತ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರೆಹಮಾನ್ ಷರೀಫ್, ಪುರಸಭಾ ಸದಸ್ಯ ಪಾಪಣ್ಣ ಇತರರು ಉಪಸ್ಥಿತರಿದ್ದರು.

ಮಹಿಳೆಯರ ಮುತ್ತಿಗೆ
ಅಡುಗೆ ಅನಿಲವನ್ನು ಅಸಮರ್ಪಕವಾಗಿ ವಿತರಿಸುತ್ತಿರುವುದನ್ನು ಖಂಡಿಸಿ ಮಹಿಳಾ ಗ್ರಾಹಕರು ಮತ್ತು ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಏಜೆನ್ಸಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.ಅಡುಗೆ ಅನಿಲ ಸಂಪರ್ಕ ಹೊಂದಿರುವವರಿಗೆ ಹೆಚ್ಚುವರಿ ಸಿಲಿಂಡರ್‌ಗಳಿಗಾಗಿ ಅರ್ಜಿ ಆಹ್ವಾನಿಸಿದ್ದರು. ಇದಕ್ಕಾಗಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಳೆದ ವಾರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಕಂಪೆನಿಯ ಮಾರಾಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸು ಹೆಚ್ಚುವರಿ ಸಿಲಿಂಡರ್‌ಗಳಿಗೆ ಠೇವಣಿ 1,250, ಸಿಲಿಂಡರ್ ಬಾಬ್ತು ರೂ. 362.62 ಪಡೆದುಕೊಂಡು ವಿತರಿಸುವಂತೆ ಸೂಚನೆ ನೀಡಿದ್ದರು.

ಆದರೆ, ಕೇವಲ ಒಂದೇ ದಿನ ಮಾರಾಟ ಅಧಿಕಾರಿಗಳ ನಿರ್ದೇಶನದಂತೆ ವಿತರಿಸಿ, ನಂತರ ಎಂದಿನಂತೆ ಒಂದು ಸಿಲಿಂಡರ್‌ಗೆ 2,225ರೂಪಾಯಿ ಪಾವತಿಸಿದರೆ ಮಾತ್ರವೇ ಹೆಚ್ಚುವರಿ ಸಿಲಿಂಡರ್ ನೀಡುವುದಾಗಿ ಒತ್ತಾಯಿಸಿದರು. ಇದರಿಂದ ಬೇಸತ್ತ ಮಹಿಳಾ ಗ್ರಾಹಕರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಿಎಸ್‌ಐ ಚನ್ನಯ್ಯ ಹಿರೇಮಠ್, ಆಹಾರ ಶಿರಸ್ತೇದಾರ್ ರಂಗಧಾಮಯ್ಯ ಸ್ಥಳಕ್ಕಾಗಮಿಸಿ ಏಜೆನ್ಸಿ ಮಾಲೀಕರೊಂದಿಗೆ ಚರ್ಚಿಸಿ ಮಾರ್ಚ್ 20ರ ನಂತರ ಅರ್ಜಿ ಪರಿಶೀಲಿಸಿ ಆದ್ಯತೆ ಮೇರೆಗೆ ಮಾಹಿತಿ ನೀಡಿ ವಿತರಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ನಿಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT