ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದೇವ ನಿರ್ದೇಶಕರಿಗೆ ಮತ್ತೆ ಅಧಿಕಾರ

ಆಡಳಿತಾಧಿಕಾರಿ `ಅವಾಂತರಕ್ಕೆ' ಸಿ ಎಂ ಕಾರ್ಯದರ್ಶಿ ತಡೆ
Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ ಅವರ ಅಧಿಕಾರವನ್ನು ಅದೇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಸಿ.ಎಂ.ಈಶ್ವರ್ ಅವರು ಮೊಟಕುಗೊಳಿಸಿ, ಗೊಂದಲ ಸೃಷ್ಟಿಸಿದ್ದ ಪ್ರಹಸನಕ್ಕೆ ಮಂಗಳವಾರ ತೆರೆ ಬಿತ್ತು.

ಈಶ್ವರ್ ಅವರು ನಿವೃತ್ತ ಕೆ.ಎ.ಎಸ್ ಅಧಿಕಾರಿಯಾಗಿದ್ದು, ಗುತ್ತಿಗೆ ಆಧಾರದ ಮೇಲೆ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

`ಮುಖ್ಯಮಂತ್ರಿಗಳು ಆ.30ರಂದು ನೀಡಿದ ಸೂಚನೆ ಪ್ರಕಾರ ಸಂಸ್ಥೆಯ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಎಂ. ಪ್ರಸಾದ್ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಸಂಸ್ಥೆಯ ಹಣಕಾಸು ವ್ಯವಹಾರಗಳು, ಸಿಬ್ಬಂದಿ ನೇಮಕ ಮತ್ತು ಆಡಳಿತಾತ್ಮಕ ಕೆಲಸ ಕಾರ್ಯಗಳ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿದೆ' ಎಂದು ಈಶ್ವರ್ ಅವರು ಸೋಮವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸ್ದ್ದಿದರು. ನಿರ್ದೇಶಕ ಮಂಜುನಾಥ್ ಅವರಿಗಿದ್ದ ಆಡಳಿತಾತ್ಮಕ ಅಧಿಕಾರ ಕಸಿದು ಡಾ. ಪ್ರಸಾದ್‌ಗೆ ನೀಡಿದ್ದು ವಿವಾದಕ್ಕೆ ಕಾರಣವಾಯಿತು.

ವಿಚಾರ ತಿಳಿದ ತಕ್ಷಣ ಎಚ್ಚೆತ್ತುಕೊಂಡ ಮುಖ್ಯಮಂತ್ರಿಯವರ ಕಾರ್ಯದರ್ಶಿ ಕೆ.ಆರ್.ಶ್ರೀನಿವಾಸ್ ಅವರು, ಈ ಆದೇಶವನ್ನು ಸದ್ಯಕ್ಕೆ ತಡೆಹಿಡಿಯುವಂತೆ ನಿರ್ದೇಶಕರಿಗೆ ಸೂಚಿಸಿದರು. ಅದಕ್ಕೆಅನುಗುಣವಾಗಿ ಈಶ್ವರ್ ಅವರ ಆದೇಶವನ್ನು ಮಂಜುನಾಥ ತಡೆಹಿಡಿದಿದ್ದಾರೆ.

ಈಶ್ವರ ಹುದ್ದೆಯಲ್ಲಿಲ್ಲ: ಈ ನಡುವೆ ಈಶ್ವರ್ ಅವರನ್ನು ಆಗಸ್ಟ್ 29ರಂದೇ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಮಂಜುನಾಥ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೆ, ಸೆ.2ರಂದು ಹೆಚ್ಚುವರಿ ನಿರ್ದೇಶಕರ ನೇಮಕ ಆದೇಶವನ್ನು ಈಶ್ವರ್ ಹೊರಡಿಸ್ದ್ದಿದೇ ಇಷ್ಟೆಲ್ಲ ಗೊಂದಲಕ್ಕೆ ಕಾರಣ.

ಜಯದೇವ ಆಸ್ಪತ್ರೆ ಸ್ವಾಯತ್ತ ಸಂಸ್ಥೆಯಾಗಿದ್ದು, ಮುಖ್ಯಮಂತ್ರಿ ಅದರ ಅಧ್ಯಕ್ಷರು. ಹೊಸ ಹುದ್ದೆ ಸೃಷ್ಟಿ ಅಥವಾ ಯಾವುದೇ ರೀತಿಯ ಮಹತ್ವದ ನಿರ್ಧಾರಗಳನ್ನು ಆಡಳಿತ ಮಂಡಳಿಯ ಸಭೆಯಲ್ಲೇ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಆಡಳಿತ ಮಂಡಳಿಯ ತೀರ್ಮಾನ ಬಾಕಿ ಇರಿಸಿ, ಹೆಚ್ಚುವರಿ ನಿರ್ದೇಶಕರ ಹುದ್ದೆ ಸೃಷ್ಟಿಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ ಎಂದು ಗುಲ್ಲೆಬ್ಬಿಸಿ, ಆದೇಶ ಹೊರಡಿಸಲಾಗಿತ್ತು.

ಪತ್ರ ವ್ಯವಹಾರ: `ಜಯದೇವ ಆಸ್ಪತ್ರೆ ಬೃಹದಾಕಾರವಾಗಿ ಬೆಳೆದಿದ್ದು, ನಿರ್ದೇಶಕರೊಬ್ಬರೇ ಎಲ್ಲವನ್ನೂ ನಿಭಾಯಿಸುವುದು ಕಷ್ಟ. ಹೀಗಾಗಿ ಅವರ ಮೇಲಿನ ಕಾರ್ಯಭಾರವನ್ನು ಕಡಿಮೆ ಮಾಡಲು ಹೆಚ್ಚುವರಿ ನಿರ್ದೇಶಕರ ಹುದ್ದೆ ಸೃಷ್ಟಿಸಬೇಕು. ಆ ಹುದ್ದೆಗೆ 30 ವರ್ಷಗಳ ಅನುಭವ ಇರುವ ನನ್ನನ್ನು ನೇಮಕ ಮಾಡಬೇಕು' ಎಂದು ಡಾ. ಪ್ರಸಾದ್ ಅವರು ಮುಖ್ಯಮಂತ್ರಿಯವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು.

ಈ ಪತ್ರಕ್ಕೆ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಕೂಡ ಶಿಫಾರಸು ಪತ್ರ ನೀಡಿದ್ದರು ಎನ್ನಲಾಗಿದೆ. ಮಹದೇವಪ್ಪ ಅವರ ಶಿಫಾರಸು ಪತ್ರದ ಮೇಲೆ ಮುಖ್ಯಮಂತ್ರಿಯವರು `ಸೂಕ್ತ ಕ್ರಮ ತೆಗೆದುಕೊಳ್ಳುವುದು' ಎಂದು ಬರೆದಿದ್ದಾರೆ ಎನ್ನಲಾಗಿದೆ. ಹೀಗೆ ಬರೆದಿದ್ದೇ ಎಡವಟ್ಟಾಗಿದೆ. ಸದರಿ ಪತ್ರದ ಮೇಲೆ ಯಾವುದೇ ನಿರ್ದಿಷ್ಟ ಸೂಚನೆ ನೀಡದಿದ್ದರೂ ಇದನ್ನೇ ಆಧಾರವಾಗಿ ಇಟ್ಟುಕೊಂಡು ಹೆಚ್ಚುವರಿ ನಿರ್ದೇಶಕರಾಗಿ ಪ್ರಸಾದ್ ಅವರನ್ನು ಈಶ್ವರ್ ನೇಮಕ ಮಾಡ್ದ್ದಿದರು.

ಈ ವಿಷಯ ತಿಳಿದ ತಕ್ಷಣ ಮಂಜುನಾಥ್ ಅವರು ಮುಖ್ಯಮಂತ್ರಿಯವರ ಕಾರ್ಯದರ್ಶಿ ಶ್ರೀನಿವಾಸ್ ಜತೆ ಮಾತುಕತೆ ನಡೆಸಿದರು. `ಈ ರೀತಿ ಹೆಚ್ಚುವರಿ ನಿರ್ದೇಶಕರ ಹುದ್ದೆ ಸೃಷ್ಟಿಸಲು ಬರುವುದಿಲ್ಲ. ಇದು ಕಾನೂನಿಗೆ ವಿರುದ್ಧ' ಎಂದು ಮನವರಿಕೆ ಮಾಡಿದರು ಎನ್ನಲಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಶ್ರೀನಿವಾಸ್ ಅವರು ಸದ್ಯಕ್ಕೆ ಆ ಆದೇಶ ತಡೆ ಹಿಡಿಯಲು ಸೂಚಿಸಿದರು. ಅವರ ನಿರ್ದೇಶನದ ಮೇಲೆ ಈಶ್ವರ್ ಹೊರಡಿಸಿದ್ದ ಆದೇಶವನ್ನು ಮಂಜುನಾಥ್ ತಡೆಹಿಡಿದು, ವಿಷಯವನ್ನು ಪ್ರಸಾದ್ ಅವರ ಗಮನಕ್ಕೂ ತಂದಿದ್ದಾರೆ.

ಸಿ.ಎಂ ದೂರವಾಣಿ ಕರೆ:  `ಹೆಚ್ಚುವರಿ ನಿರ್ದೇಶಕರ ಹುದ್ದೆ ಸೃಷ್ಟಿ ವಿವಾದ ಗೊತ್ತಾದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ದೂರವಾಣಿ ಕರೆ ಮಾಡಿ, ಈ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ನಾನು ಅಂತಹ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ' ಎಂದು ಡಾ. ಮಂಜುನಾಥ್ `ತಿಳಿಸಿದರು.

`ಇತ್ತೀಚೆಗೆ ಈಶ್ವರ್ ವರ್ತನೆ ಸರಿ ಕಾಣುತ್ತಿರಲಿಲ್ಲ. ಈ ತಿಂಗಳು ಗುತ್ತಿಗೆ ಅವಧಿ ಮುಗಿಯಲಿದೆ ಎಂದು 15 ದಿನಗಳ ಹಿಂದೆಯೇ ಹೇಳಿದ್ದೆ. ಇದೇ ಸಿಟ್ಟಿನಿಂದ ನನ್ನ ಗಮನಕ್ಕೂ ತರದೆ ಸರ್ಕಾರದ ಜತೆ ಪತ್ರ ವ್ಯವಹಾರ ಮಾಡಿದ್ದಾರೆ. ಈ ಕುರಿತು ಸರ್ಕಾರಕ್ಕೆ ಪೂರ್ಣ ಮಾಹಿತಿ ನೀಡಿದ್ದೇನೆ' ಎಂದು ಹೇಳಿದರು.

ಇಷ್ಟಕ್ಕೂ ಆ.29ರಂದೇ ಈಶ್ವರ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಹೀಗಿರುವಾಗ ಸೆ.2ರಂದು ಆದೇಶ ಹೊರಡಿಸಲು ಹೇಗೆ ಸಾಧ್ಯ ಎಂದೂ ಮಂಜುನಾಥ್ ಪ್ರಶ್ನಿಸಿದರು. ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಕೆ.ಎಚ್.ಗೋವಿಂದರಾಜು ಅವರು `ಜಯದೇವ ನಿರ್ದೇಶಕರ ಅಧಿಕಾರ ಮೊಟಕುಗೊಳಿಸುವ ಆದೇಶವನ್ನು ಸರ್ಕಾರ ಹೊರಡಿಸಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT