ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯಲ್ಲಿ ಬೂದಿಯಾಗಲಿರುವ ಭಾರತದ ತಿಪ್ಪೆ...

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ಮನೆಯ ಮುಂದೆ ಬಿದ್ದ ಕಸ ತೆಗೆಯಲು ನಮ್ಮ ಕಾರ್ಪೋರೇಷನ್ ಸಿಬ್ಬಂದಿಗೆ ಕನಿಷ್ಠ ವಾರಗಳಾದರೂ ಬೇಕೇ ಬೇಕು. ಪತ್ರಿಕೆಗಳ ಕುಂದುಕೊರತೆ ಕಾಲಂಗಳಲ್ಲಿ ಇದನ್ನು ಬರೆದ ಮೇಲೋ ಅಥವಾ ಫೋಟೊ ಛಾಪಿಸಿದಾಗಲೋ ಸಂಬಂಧಿಸಿದವರು ಧಾವಿಸಿ ಬಂದು ಅದನ್ನು ಶುಚಿ ಮಾಡುವುದು ಅವರ ಪರಿಪಾಠ! ಅಂಥಾದ್ದರಲ್ಲಿ ವಿಷಕಾರಕ ವಸ್ತುಗಳ ತಿಪ್ಪೆಗುಂಡಿಯನ್ನು ತಕ್ಷಣಕ್ಕೇ ಸ್ವಚ್ಛ ಮಾಡಿಬಿಡುವುದು ಎಂದರೆ ಅದು ಅಷ್ಟು ಸುಲಭದ ಮಾತಾದೀತೇ? ಊಹ್ಞೂಂ...

ಭೋಪಾಲ್‌ನ ವಿಷಕಾರಕ ವಸ್ತುಗಳ ಸಾಗಣೆ ಅಥವಾ ನಾಶ ಮಾಡಬೇಕಾಗಿದ್ದ ವಿಷಯದಲ್ಲಿ ಈಗ ಆಗಿರುವುದೂ ಇದೇ ವಿಳಂಬ ಧೋರಣೆ. ಯೂನಿಯನ್ ಕಾರ್ಬೈಡ್ ಸಂಸ್ಥೆಯ ವಿಷಕಾರಕ ಅನಿಲ ಕಂಪೆನಿಯ ತಿಪ್ಪೆಯನ್ನು ಸಾಗಿಸಲು ಈಗ ಅಣಿಯಾಗುತ್ತಿರುವ ಭಾರತಕ್ಕೆ ಇಷ್ಟು ದಿನ ಯಾಕೆ ತಡ ಮಾಡಿದಿರಿ ಎಂದರೆ ಅದಕ್ಕೆ ಸ್ಪಷ್ಟ ಉತ್ತರವಿಲ್ಲ.
 
ವ್ಯವಸ್ಥೆಯ ಎಲ್ಲ ಹಂತಗಳಲ್ಲೂ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರ, ಅಸಡ್ಡೆ ಮತ್ತು ಅಸಮರ್ಥತೆಯಿಂದಾಗಿ ಇಂತಹ ವಿಷಯದಲ್ಲಿ ಭಾರತ ಬೇರೆ ದೇಶಗಳ ಕೈಕಾಲು ಹಿಡಿದು ಇದನ್ನು ಎತ್ತಿಹಾಕುವ ಮಟ್ಟಕ್ಕೆ ತಲುಪಿರುವುದು ಆಳುವವರ ಪ್ರಜ್ಞಾಸ್ಥಿತಿಗೆ ಕೈಗನ್ನಡಿ ಎಂಬಂತಿದೆ.

 ನಳನಳಿಸುವ ಕೆರೆಗಳ ನಗರಿ, ಮನೋಲ್ಲಾಸ ಮೂಡಿಸುವ ಹಸಿರು ಮರಗಳ ಊರು ಎಂದೇ ಖ್ಯಾತಿವೆತ್ತ ಭೋಪಾಲ್ ಮಧ್ಯಪ್ರದೇಶದ ರಾಜಧಾನಿ. ಅತ್ಯಂತ ಹೆಚ್ಚು ಗ್ರಾಮಗಳನ್ನು ಹೊಂದಿದ ರಾಜ್ಯವೆಂತಲೂ ಮಧ್ಯಪ್ರದೇಶಕ್ಕೆ ಹೆಸರಿದೆ.

ಹಾಗೇ ಸುಮ್ಮನೆ ಕಲ್ಪಿಸಿಕೊಂಡರೆ ಇಡೀ ಮಧ್ಯಪ್ರದೇಶ ಇಟಲಿಗಿಂತ ಕೊಂಚ ದೊಡ್ಡದೆನಿಸಬಹುದಾದಂತಹ ವಿಸ್ತೀರ್ಣವುಳ್ಳ ನಾಡು. ಸಂಪದ್ಭರಿತ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಒಡಲಲ್ಲಿ ತುಂಬಿಕೊಂಡ ಭೋಪಾಲ್ ಮಹಾನಗರದಲ್ಲಿ ಕೈಗಾರಿಕಾ ಸಂಸ್ಥೆಗಳಿಗೂ ಕೊರತೆಯೇನಿಲ್ಲ.

ಇಂತಹ ನಗರಿಯಲ್ಲಿನ ಕೀಟನಾಶಕ ತಯಾರಿಸುವ ಕಾರ್ಖಾನೆಯೊಂದರಲ್ಲಿ 1984ರ ಡಿಸೆಂಬರ್ ತಿಂಗಳ 2ನೇ ತಾರೀಖು ಅತ್ಯಂತ ಕರಾಳ ಗಳಿಗೆಯೊಂದು ದಾಖಲಾಗಿ ಹೋಯಿತು.
 
ನಗರಪ್ರದೇಶದಿಂದ ಅನತಿ ದೂರದಲ್ಲಿನ ಯೂನಿಯನ್ ಕಾರ್ಬೈಡ್ ಎಂಬ ಹೆಸರಿನ ಕೀಟನಾಶಕ ತಯಾರಿಕಾ ಕಂಪೆನಿ ಈ ದುರಂತದ ಮೂಲ ಸ್ಥಾನವಾಯಿತು. ಸದ್ಯ ಡೌ ಎಂಬ ಕಂಪೆನಿಯ ಒಡೆತನಕ್ಕೆ ಒಳಪಟ್ಟಿರುವ ಯೂನಿಯನ್ ಕಾರ್ಬೈಡ್ ಅಮೆರಿಕ ಮೂಲದ್ದು.
 
1984ರ ಡಿಸೆಂಬರ್ ತಿಂಗಳ 2ರಂದು ರಾತ್ರಿ ಈ ಕಂಪೆನಿಯಲ್ಲಿ ಸೋರಿಕೆಯಾದ ಮೀಥೆಲ್ ಐಸೊಸಯನೇಟ್ ಎಂಬ ಭಯಾನಕ ವಿಷಾನಿಲ ಬಲಿ ತೆಗೆದುಕೊಂಡ ಮಾನವ ಜೀವಗಳ ಸಂಖ್ಯೆ ಬರೋಬ್ಬರಿ 30 ಸಾವಿರ.

ಸತ್ತವರೆಲ್ಲಾ ಕಂಪೆನಿಯ ಸುತ್ತಮುತ್ತ ಶೆಡ್ಡುಗಳಲ್ಲಿ ಜೀವನ ಸಾಗಿಸುತ್ತಿದ್ದ ಕಾರ್ಮಿಕರು ಮತ್ತು ಕೊಳೆಗೇರಿ ನಿವಾಸಿಗಳು. ಇಡೀ ಭೂಪಾಲ್ ನಗರವನ್ನೇ ತತ್ತರಿಸುವಂತೆ ಮಾಡಿದ ಈ ದುರಂತದಲ್ಲಿ ಬದುಕುಳಿದವರ ಪಾಡು ಇವತ್ತಿಗೂ ಹೇಳತೀರದು.

ದುರ್ಘಟನೆ ಸಂಭವಿಸಿ ಇಪ್ಪತೊಂಬತ್ತು ವರ್ಷಗಳಾಗುತ್ತಿರುವ ಈ ಹೊತ್ತಿನಲ್ಲೂ ಅವರ ಆಕ್ರಂದನಕ್ಕೆ, ನೋವಿಗೆ ಸಾಂತ್ವನ ಹೇಳುವ ಶಕ್ತಿ ಯಾರಲ್ಲೂ ಇಲ್ಲ. ದಿನದ ಕತ್ತಲೆ ಕಳೆದು ಮತ್ತೊಂದು ಬೆಳಕು ಹರಿಯುವುದೊರಳಗೆ ಜಗತ್ತಿನ ಅತ್ಯಂತ ಕಹಿ ಘಟನೆಯೊಂದರ ಭಾಗವಾಗಿ ಹೋದ ಈ ಅನಿಲ ದುರಂತದ ಘಟನೆ ಈಗ ಮತ್ತೆ ಸಣ್ಣಗೆ ಸದ್ದು ಮಾಡುತ್ತಿದೆ. ಯಾರೂ ಅಂದಾಜಿಸದ ದುರಂತದ ಭಾಗವೊಂದರ ಪಾತ್ರ ಮತ್ತೆಮತ್ತೆ ನಮ್ಮೆಲ್ಲರನ್ನೂ ಗಂಭೀರವಾಗಿ ಉಸಿರೆಳೆಯುವಂತೆ ಮಾಡುತ್ತಿದೆ.

ಘಟನೆ ನಡೆದು ಮೂರು ದಶಕಗಳೇ ಸಮೀಪಿಸುತ್ತಿರುವ ಈ ಹೊತ್ತಿನಲ್ಲೂ ದುರಂತ ಸಂಭವಿಸಿದ ಪ್ರದೇಶದಲ್ಲಿ ವಿಷಕಾರಕ ವಸ್ತುಗಳು ಹಾಗೇ ತಿಪ್ಪೆಗುಂಡಿಯಾಗಿ ಬಿದ್ದಿವೆ ಎಂಬುದೇ ಈ ಸೂಕ್ಷ್ಮ ಆಲೋಚನೆಯ ಎಳೆ.

ಈ ಪ್ರದೇಶದಲ್ಲಿ ದುರಂತದ ಭಾಗವಾಗಿ ಸುಟ್ಟು ಕರಕಲಾಗಿ ಉಳಿದು ಹೋದ ವಸ್ತುಗಳನ್ನು ಅಲ್ಲಿಂದ ಬೇರೆಡೆ ಸಾಗಿಸುವ ಪ್ರಕ್ರಿಯೆಯೇ ಈತನಕ ಒಂದು ದೊಡ್ಡ ಸವಾಲಾಗಿತ್ತು. ಇದನ್ನು ಬಗೆಹರಿಸಲು ಇಷ್ಟು ದಿನಗಳ ಕಾಲ ಹರಸಾಹಸಗೈದ ಭಾರತ ಕಡೆಗೂ ಈ ನಿಟ್ಟಿನಲ್ಲಿ ಅಖೈರು ಪರಿಹಾರವೊಂದನ್ನು ಕಂಡುಕೊಂಡಿದೆ.
 
ಜರ್ಮನ್ ಸರ್ಕಾರದ ಸಹಯೋಗದೊಂದಿಗೆ ಅಳಿದುಳಿದ ವಿಷಕಾರಕ ವಸ್ತುಗಳನ್ನು ಇಲ್ಲಿಂದ ಹ್ಯಾಂಬರ್ಗ್‌ಗೆ ಸಾಗಿಸಲು ಸಜ್ಜಾಗಿದೆ. ನೂರಾರು ಟನ್‌ಗಳ ವಿಷಕಾರಕ ವಸ್ತುಗಳನ್ನು ಹೊತ್ತೊಯ್ಯಲು ಜರ್ಮನಿ ಅಣಿಯಾಗಿದೆ.
 
ಜರ್ಮನಿಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವಾಲಯದ ಭಾಗವೂ ಆಗಿರುವ `ಗಿಝ್~ ಎಂಬ ಸಂಸ್ಥೆ ಇದರ ಸಂಪೂರ್ಣ ಉಸ್ತುವಾರಿ ವಹಿಸಿದೆ. ಅಂತರರಾಷ್ಟ್ರೀಯ ಸಹಕಾರಗಳಲ್ಲಿ ಭಾಗಿಯಾಗುವುದು ಗಿಝ್ನ ಮಹತ್ವದ ಕೆಲಸಗಳಲ್ಲೊಂದು.

ಈಗೊಂದು ವಾರದ ಹಿಂದೆ ನವದೆಹಲಿಯಲ್ಲಿ ಸಂಪುಟ ಸಚಿವರ ದಂಡೊಂದು ಈ ಕುರಿತಂತೆ ವಿಸ್ತೃತ ಚರ್ಚೆ ನಡೆಸಿತು. ಭೋಪಾಲ್‌ನ ದುರಂತ ಪ್ರದೇಶದಲ್ಲಿನ ವಿಷಕಾರಕ ವಸ್ತುಗಳನ್ನು ಅಲ್ಲಿಂದ ಹೊರಕ್ಕೆ ಹಾಕುವ ವಿಷಯವನ್ನು ತೀರ್ಮಾನಗೊಳಿಸುವ ಕುರಿತಂತೆ ಸಭೆಯಲ್ಲಿದ್ದ ಸಚಿವರೆಲ್ಲಾ ತಲೆಕಡಿಸಿಕೊಂಡರು.
 
ಇದಕ್ಕಾಗಿ ಹೆಗಲು ಕೊಡಲು ಸಿದ್ಧವಾದ ಜರ್ಮನಿಯ ಗಿಝ್ ಸಂಸ್ಥೆಯ ತಂತ್ರಜ್ಞರ ನೆರವು ಮತ್ತು ಸಾಧಕ ಬಾಧಕಗಳನ್ನು ವಿವರವಾಗಿ ಪರಿಶೀಲಿಸಿದರು. ಎಲ್ಲವನ್ನೂ ಅಳೆದೂ ಸುರಿದು, ತೂಗಿ ನೋಡಿದ ನಂತರ ದುರಂತ ಪ್ರದೇಶದಲ್ಲಿ ಬಿದ್ದಿರುವ ಸರಿಸುಮಾರು 350 ಟನ್ ವಿಷಕಾರಕ ವಸ್ತುವನ್ನು ಭೋಪಾಲ್‌ನಿಂದ ಜರ್ಮನಿಗೆ ಸಾಗಿಸಲು ಸೈ ಎಂದರು.
 
ಈ ವಿಷಕಾರಕ ವಸ್ತುಗಳನ್ನು ಜರ್ಮನಿಯ ಹ್ಯಾಂಬರ್ಗ್‌ಗೆ ಸಾಗಿಸುವ ಕಾರ್ಯಾಚರಣೆ ಸೂಕ್ತವಾಗಿದೆ ಎಂಬ ಷರಾಕ್ಕೆ ಠಸ್ಸೆ ಒತ್ತಿದರು. ಇದಕ್ಕಾಗಿ ಎಲ್ಲ ರೂಪುರೇಷೆಗಳೂ ಸಿದ್ಧವಾಗಿವೆಯಾದರೂ ಉಭಯ ದೇಶಗಳು ಈ ನಿಟ್ಟಿನ ದಾಖಲೆ ಪತ್ರಗಳಿಗೆ ಇನ್ನೂ ಸಹಿ ಹಾಕಿಲ್ಲ.

ಪರಿಹಾರ ಧನದ ವಿತರಣೆಗೆ ಸಂಬಂಧಿಸಿದ ಮೊಕದ್ದಮೆಗಳ ಜೊತೆಜೊತೆಯಲ್ಲೇ ದುರಂತ ಪ್ರದೇಶದಲ್ಲಿ ಅಳಿದುಳಿದ ವಿಷಕಾರಕ ವಸ್ತುಗಳನ್ನು ಅಲ್ಲಿಂದ ಸಾಗಣೆ ಮಾಡುವ ಅಥವಾ ನಾಶಪಡಿಸುವ ಕುರಿತಂತೆ ಇಲ್ಲೆತನಕ ಸುದೀರ್ಘವಾಗಿ ಚರ್ಚಿಸುತ್ತಲೇ ಬರಲಾಗಿದೆ.

ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಅನೇಕ ಸ್ವಯಂಸೇವಾ ಸಂಸ್ಥೆಗಳು ಈ ವಿಚಾರದಲ್ಲಿ ಸಾಕಷ್ಟು ತಲೆಕೆಡಿಸಿಕೊಂಡೂ ಇದ್ದವು. ಆದರೆ ಅಂತಿಮವಾಗಿ ಈಗ ಇದಕ್ಕೆ ಕಾಲ ಕೂಡಿಬಂದಂತಿದೆ.

ಈಗಲೂ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಸಂಸ್ಥೆಯ ಹಳೇ ಫ್ಯಾಕ್ಟರಿ ಬಳಿ ಹೋಗಿ ಯಾರಾದರೂ ಇಣುಕಿದ್ದೇ ಆದರೆ ಅಲ್ಲಿ ಬಿದ್ದಿರುವ ತುಕ್ಕುಹಿಡಿದ ಟ್ಯಾಂಕುಗಳು, ಲೋಹಗಳ ವಸ್ತುಗಳು ದುರಂತದ ಛಾಯೆಯನ್ನು ಸಾರಿ ಹೇಳುತ್ತವೆ. ನೋಡಿದಾಕ್ಷಣ ಒಮ್ಮೆಲೇ ಅವೇನೂ ಭಾರಿ ದುರಂತದ ಒಂದು ಭಾಗ ಎಂದು ಅನ್ನಿಸುವುದಿಲ್ಲ.
 
ಆದರೆ ಅವುಗಳಲ್ಲಿನ ವಿಷಕಾರಕ ರಾಸಾಯನಿಕ ವಸ್ತುಗಳ ಗಾಢತೆ ಇಡೀ ಪರಿಸರ ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ಮುಖಕ್ಕೆ ಹಿಡಿಯುತ್ತದೆ. ಅಲ್ಲೇ ಇರುವ ನಿಯಂತ್ರಣ ಕೊಠಡಿಯ ಮುಂದೆ ನೇತು ಹಾಕಲಾಗಿರುವ `ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ~ ಎಂಬ ಕಿರುಬರಹ ಒಂದರೆಕ್ಷಣ ನಮ್ಮನ್ನು ಕಿಚಾಯಿಸಿದಂತೆ ಭಾಸವಾಗುತ್ತದೆ.
 
ಛಿದ್ರವಾಗಿ ಪಾಳುಬಿದ್ದ ಪ್ರಯೋಗಾಲಯದ ಕೊಠಡಿಗಳ ಮುಂದೆ ಠಳಾಯಿಸುವ ಬೀದಿನಾಯಿಗಳು ಸ್ಮಶಾನವನ್ನು ಜ್ಞಾಪಕಕ್ಕೆ ತರುತ್ತವೆ. ಅಲ್ಲಲ್ಲಿ ಬಿದ್ದ ಲೋಹದ ತುಣುಕುಗಳನ್ನು ಕಚ್ಚಿ ಕಚ್ಚಿ ಎಳೆದಾಡುವುದನ್ನು ನೋಡಿದರೆ ಅವುಗಳ ಪಾಲಿಗೆ ಅವೆಲ್ಲಾ ಮಾಂಸದ ತುಂಡುಗಳೇನೋ ಎಂದು ಭಾಸವಾಗುತ್ತದೆ.
 
ಆದರೆ ಆ ಲೋಹದ ತುಣುಕುಗಳಲ್ಲಿರುವ ಬೆಂಝೀನ್, ಪೊಟ್ಯಾಷಿಯಮ್ ಹೈಡ್ರಾಕ್ಸೈಡ್, ಮಿಥಿಲೀನ್ ಕ್ಲೋರೈಡ್‌ನಂತಹ ರಾಸಾಯನಿಕ ಅಂಶಗಳು ಎಷ್ಟು ವಿಷಕಾರಿ ಎಂಬುದು ಅವಕ್ಕೆ ಗೊತ್ತೇ ಇಲ್ಲ. 

ದುರಂತ ಪ್ರದೇಶದ ಹತ್ತಿರ ಹೋಗುವುದೇ ಅಪಾಯಕಾರಿ ಎನಿಸಿದ ಈ ಪ್ರದೇಶದ ಮಣ್ಣನ್ನು ಅಷ್ಟು ಸುಲಭವಾಗಿ ಹ್ಯಾಂಬರ್ಗ್‌ಗೆ ಎತ್ತಿ ಹಾಕುವುದು ಹೇಗೆಂಬುದು ಎಲ್ಲರ ಪಾಲಿನ ದೊಡ್ಡ ಚಿಂತೆಯೇ ಆಗಿ ತಲೆ ತಿನ್ನುತ್ತಿದ್ದಾಗ ಗಿಝ್ ಇದನ್ನು ಬಗೆಹರಿಸಲು ಟೊಂಕಕಟ್ಟಿ ನಿಂತಿದೆ.
 
ಕಾರ್ಯಾಚರಣೆಯ ಸಂಪೂರ್ಣ ಹೊಣೆ ಹೊತ್ತಿದೆ. ಗಿಝ್ನ ತಜ್ಞರ ಅನುಸಾರ ಭಾರತದ ಅನೇಕ ರಾಜ್ಯಗಳು ಇಂತಹ ವಿಷಕಾರಕ ಮಣ್ಣಿನ ಬಗ್ಗೆ ಹೊಂದಿರುವ ವೈಜ್ಞಾನಿಕ ದೃಷ್ಟಿಕೋನಗಳೇ ಸಮರ್ಥವಾಗಿಲ್ಲವಂತೆ. ಯಾವುದಾದರೂ ಕೈಗಾರಿಕಾ ದುರಂತದ ವಿಷಕಾರಕ ತಾಜ್ಯವನ್ನು ಅದೇ ಸ್ಥಳದಲ್ಲಿ ಮರು ಸಂಸ್ಕರಿಸುವ ನಮ್ಮವರ ವಿಧಾನದ ಬಗ್ಗೆ ಅವರಿಗೆ ಭಾರಿ ಅನುಮಾನಗಳಿವೆ.
 
ಅಂದುಕೊಂಡಷ್ಟು ಸುಲಭವಾಗಿ ಇದನ್ನೆಲ್ಲಾ ಮಾಡುವ ಸ್ಥಿತಿಯಲ್ಲಿ ನಾವಿಲ್ಲ ಎಂಬುದು ಅವರ ವಾದ. ಇದಕ್ಕೆ ಸಂಬಂಧಿಸಿದಂತೆ ಗಿಝ್ ಜರ್ಮನ್ ಸರ್ಕಾರಕ್ಕೆ ನೀಡಿರುವ ವರದಿಯ ಅನುಸಾರ 1984ರ ಭೋಪಾಲ್ ದುರ್ಘಟನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದೆ.

`ಈ ಪ್ರದೇಶದಲ್ಲಿನ ಮಣ್ಣು ಮತ್ತು ಇತರೆ ತ್ಯಾಜ್ಯಗಳು ಇನ್ನೂ ಸಮಸ್ಯಾತ್ಮಕವಾಗಿಯೇ ಇವೆ. ಇಲ್ಲಿ ಹರಡಿರುವ ಕ್ಲೋರಿನ್, ಮರ್ಕ್ಯುರಿ ಮತ್ತು ಭಾರಿ ಗಾತ್ರದ ಇತರೆ ಲೋಹಗಳು ಮಣ್ಣೊಳಗೆ ಮಣ್ಣಾಗಿ ಹೋಗಿವೆ. ಮಾನವ ಜೀವ ಇದರ ಆಸುಪಾಸಿನಲ್ಲಿ ಬದುಕಲಿಕ್ಕೇ ಆಗದಂತಹ ಅಪಾಯಕರ ಸ್ಥಿತಿ ಸೃಷ್ಟಿಸಿವೆ~ ಎಂದು ಅವರು ಹೇಳುತ್ತಾರೆ.

 ಭೋಪಾಲ್ ಸಂತ್ರಸ್ತರ ಪುನರ್ವಸತಿ ಹಾಗೂ ಕಲ್ಯಾಣದ ಹೊಣೆ ಹೊತ್ತ ಮಧ್ಯಪ್ರದೇಶದ ನಗರಾಭಿವೃದ್ಧಿ ಮಂತ್ರಿ ಬಾಬುಲಾಲ್ ಗೌರ್ ಹೇಳುವ ಪ್ರಕಾರ ಈ ವಿಷಕಾರಕ ಮಣ್ಣನ್ನು ಭಾರತದಲ್ಲೇ ವಿಸರ್ಜಿಸದರೆ ಏನೂ ಆಗುವುದಿಲ್ಲವಂತೆ.

ಹಾಗೆಂದೇ ಅವರು ದುರಂತ ಪ್ರದೇಶದ ಬಳಿ ಹೋಗಿ ಅಲ್ಲಿನ ಮಣ್ಣನ್ನು ತಮ್ಮ ಕೈಯಿಂದಲೇ ಹಿಡಿದು ತೋರಿಸಿ, `ನೋಡಿ ಏನಾಗುತ್ತದೆ~ ಎಂದು ಪ್ರಶ್ನಿಸುತ್ತಾರೆ. ಆದರೆ ಅವರ ಈ ದಾರ್ಷ್ಟ್ಯತೆ ಬಾಯಲ್ಲಿ ಹೇಳಿದಷ್ಟು ಸುಲಭದ್ದಲ್ಲ ಎಂಬುದು ಎಲ್ಲರ ಮನಸ್ಸಿಗೂ ಅರಿವಿದೆ.

ವಿಷಕಾರಕ ವಸ್ತುಗಳನ್ನು ಸ್ಥಳದಿಂದ ಪೂರ್ತಿಯಾಗಿ ಸಾಗಿಸಲು ಕನಿಷ್ಠ ಒಂದು ವರ್ಷದ ಸಮಯಾವಕಾಶವನ್ನು ಜರ್ಮನಿ ನಿಗದಿಪಡಿಸಿಕೊಂಡಿದೆ. ಭೂಪಾಲ್‌ನಿಂದ ಸರಿಸುಮಾರು ನಾಲ್ಕು ಸಾವಿರ ಮೈಲುಗಳ ದೂರದಲ್ಲಿರುವ ಹ್ಯಾಂಬರ್ಗಿಗೆ ಈ ವಿಷದ ತಿಪ್ಪೆಗುಂಡಿಯನ್ನು ಸಾಗಿಸಲು ಕನಿಷ್ಠ 4.25 ದಶಲಕ್ಷ ಅಮೆರಿಕನ್ ಡಾಲರ್‌ಗಳಷ್ಟು ಖರ್ಚಾಗಬಹುದು ಎಂಬುದು ಒಂದು ಅಂದಾಜು.

ಏನೇ ಆಗಲಿ ಈ ತಿಪ್ಪೆಗುಂಡಿಯನ್ನು ಮುಕ್ತ ಮನಸ್ಸಿನಿಂದ ಸಾಗಣೆ ಮಾಡುತ್ತೇನೆ ಎಂದು ಜರ್ಮನಿ ಅಭಯವಿತ್ತಿದೆ. ಕಳೆದ ವಾರವಷ್ಟೇ ಈ ಕುರಿತ ಕರಡನ್ನು ಭಾರತಕ್ಕೆ ಕಳುಹಿಸಿಕೊಟ್ಟಿದೆ.
 
ಆದರೆ ಇಲ್ಲಿನ ವಿಷಕಾರಕ ವಸ್ತುಗಳು ಮತ್ತು ಮಣ್ಣನ್ನು ಸಾಗಿಸುವ ಸಂದರ್ಭದಲ್ಲಿ ಒಂದು ವೇಳೆ ಏನಾದರೂ ಅಪಘಾತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂಬುದಕ್ಕೆ ಇನ್ನೂ ಇಬ್ಬರ್ಲ್ಲಲಿಯೂ ಉತ್ತರವಿಲ್ಲ. ಗಿಝ್ನ ಅನುಸಾರ ಯಾರು ಈಗಲೂ ಯೂನಿಯನ್ ಕಾರ್ಬೈಡ್ ಕಂಪೆನಿಯ ಮಾಲೀಕರಾಗಿದ್ದಾರೋ ಅವರೇ ಇಂತಹ ಅಪಘಾತಗಳಿಗೆ ಹೊಣೆ ಹೊರಬೇಕಾಗುತ್ತದೆ.

ಗಿಝ್ನ ದಕ್ಷಿಣ ಏಷ್ಯಾದ ನಿರ್ದೇಶಕರೂ ಆದ ಹರ್ಮನ್ ದುಬೆ ಅವರ ಅನುಸಾರ ಯೂನಿಯನ್ ಕಾರ್ಬೈಡ್ ಕಂಪೆನಿಯ ಸುತ್ತಮುತ್ತಲ ಅಂತರ್ಜಲ ಈಗ ಸಂಪೂರ್ಣ ವಿಷಯುಕ್ತಗೊಂಡಿದೆ.

ಯೂನಿಯನ್ ಕಾರ್ಬೈಡ್ ಮಣ್ಣನ್ನು ಎತ್ತಿಹಾಕುವುದಕ್ಕೆ ಅತ್ಯಂತ ವೈಜ್ಞಾನಿಕ ಕಾರ್ಯಾಚರಣೆ ಅವಶ್ಯವಿದೆ. ಬರಲಿರುವ ಅಕ್ಟೋಬರ್ ತಿಂಗಳಿನಿಂದ ಮಾರ್ಚ್‌ವರೆಗೆ ಇದರ ಕಾರ್ಯಾಚರಣೆ ನಡೆಸಲು ಗಿಝ್ ಆಲೋಚಿಸುತ್ತಿದೆ. ಹ್ಯಾಂಬರ್ಗಿನಲ್ಲಿ ಈ ತಿಪ್ಪೆಯನ್ನು ಸುಟ್ಟು ಬೂದಿ ಮಾಡುವ ಇರಾದೆ ಅದಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT