ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಆರ್ಥಿಕ ಅಸ್ಥಿರತೆ: ಅನುಕೂಲ, ಪ್ರತಿಕೂಲಗಳು

Last Updated 15 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಪ್ರಸಕ್ತ ಹಣಕಾಸು ವರ್ಷದ ಮೊದಲೆರಡು  ತ್ರೈಮಾಸಿಕ ಅವಧಿಯ ಕಾರ್ಪೊರೇಟ್ ಫಲಿತಾಂಶಗಳನ್ನು ಗಮನಿಸಿದರೆ ವ್ಯವಹಾರದಲ್ಲಿ ಸುಧಾರಣೆ ಕಂಡು ಬಂದರೂ,  ಲಾಭ ಗಳಿಕೆಯ ಪ್ರಮಾಣ ಇಳಿಕೆಯಾಗಿದೆ ಎನ್ನಬಹುದು.
 
ಇದು ಆರ್ಥಿಕ ವಲಯಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ. ಇದರ ಜತೆಗೆ ಸದ್ಯಕ್ಕಂತೂ ಮಾರುಕಟ್ಟೆಯ ಮೇಲೆ ಜಾಗತಿಕ ಆರ್ಥಿಕ ಅಸ್ಥಿರತೆ ಕಾರ್ಮೋಡ ಕವಿದಿದೆ.

ಆದರೆ, ಇತ್ತೀಚೆಗೆ  ಭಾರತದಲ್ಲೇ  ನಡೆದ ಒಂದೆರಡು ಬೆಳವಣಿಗೆಗಳು ಜನಸಾಮಾನ್ಯರಲ್ಲಿ ಸ್ವಲ್ಪ ಮಟ್ಟಿಗಿನ ಆಶಾ ಭಾವನೆ ಮೂಡಿಸಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ರೇಟಿಂಗ್ ಕಡಿಮೆ ಆದಾಗ ಸ್ವಲ್ಪ ಮಟ್ಟಿಗಿನ ಭೀತಿ ಎದುರಾಗಿದ್ದರೂ ಒಟ್ಟಾರೆಯಾಗಿ ಭಾರತದ ಬ್ಯಾಂಕುಗಳು ಮೂಲ ಬಂಡವಾಳದ  ಶೇಖರಣೆ ಹಾಗೂ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಶಕ್ತವಾಗಿವೆ ಎನ್ನುವ ಭಾವನೆಗೆ ಚ್ಯುತಿ ಬಂದಿಲ್ಲ. 

ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಸಂಘರ್ಷ ಹೆಚ್ಚಾಗಿ ಕಾಣುತ್ತಿದೆಯಾದರೂ, ಹೂಡಿಕೆದಾರರ ಆಸಕ್ತಿ ಗಮನಾರ್ಹವಾಗಿ ಇಳಿಕೆಯಾಗಿಲ್ಲ. ಕಂಪೆನಿಗಳ ಮಾರುಕಟ್ಟೆ ಬೆಲೆಗಳು  ದಿಢೀರನೆ ಏರುವ ಅಥವಾ ಇಳಿಯುವ ಪ್ರಕ್ರಿಯೆ ನಡೆದರೆ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಬೇಗನೆ ವಿಶ್ವಾಸ ಕಳೆದುಕೊಳ್ಳುತ್ತಾರೆ. 

ಮೊದಲಿಗೆ ಜಾಗತಿಕ ಮಟ್ಟದಲ್ಲಿ ಅಮೆರಿಕದ ಸಾಲ ಯೋಗ್ಯತೆ ಮಟ್ಟ ಕುಸಿದಿರುವುದು ಮತ್ತು ಯೂರೋಪ್ ಒಕ್ಕೂಟದ ರಾಷ್ಟ್ರಗಳಾದ ಗ್ರೀಸ್, ಪೋರ್ಚುಗಲ್. ಜರ್ಮನಿ ಮುಂತಾದ ರಾಷ್ಟ್ರಗಳು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಆಯಾ ದೇಶಗಳ ಆರ್ಥಿಕ ಬೆಳವಣಿಗೆಯ ಪ್ರಮಾಣ  ಶೇ 1 ಕ್ಕಿಂತ ಕಡಿಮೆ ಆಗಿದೆ.
 
ಇದರಿಂದ ಅಮೆರಿಕ ಹಾಗೂ ಯೂರೋಪಿನ ಅನೇಕ ಪ್ರಬಲ ರಾಷ್ಟ್ರಗಳಲ್ಲೂ ನಿರುದ್ಯೋಗದ ಭೀತಿ ಸೃಷ್ಟಿಯಾಗಿದೆ. ಹೆಚ್ಚು ಉತ್ಪಾದನೆಯಾಗುವ ಸರಕುಗಳಿಗೆ ಗ್ರಾಹಕರ  ಬೇಡಿಕೆ ತಗ್ಗಿದೆ.  ಬಟ್ಟೆ ಬರೆ, ಅಲಂಕಾರಿಕ ವಸ್ತುಗಳ ಬೇಡಿಕೆಯ ಮಟ್ಟಕುಸಿದಿದೆ.

ವಿಶ್ವ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಉಬ್ಬರವಿಳಿತಗಳನ್ನು ಕಾಣಬಹುದಾಗಿದೆ.  ಈಗ ಬ್ರೆಂಟ್ ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್‌ಗೆ 120  ಡಾಲರ್ ಅಕ್ಕ ಪಕ್ಕ ಇದೆ. ಕೆಲವು ದಿನಗಳ ಹಿಂದೆ ಬ್ರೆಂಟ್ ತೈಲದ ಬೆಲೆ 100 ಡಾಲರ್‌ಗಳಷ್ಟಿತ್ತು.

ದೇಶದ ಒಟ್ಟಾರೆ ಆಮದಿನ ಪ್ರಮಾಣದಲ್ಲಿ ಶೇ 35ರಷ್ಟು ಹಣ ತೈಲ ಕೊಳ್ಳುವುದಕ್ಕೆ ಮೀಸಲಾಗಿದೆ. ಕಚ್ಚಾ ಬೆಲೆ ಏರಿರುವ ಈ ಸಂದರ್ಭದಲ್ಲಿ ಸರ್ಕಾರ ಇನ್ನಷ್ಟು ಹೆಚ್ಚು ಡಾಲರ್ ನೀಡಿ ತೈಲ ಖರೀದಿಸಬೇಕಾಗುತ್ತದೆ.  

ಈಗಿನ  ತೈಲ ಸಚಿವರು ತೈಲದ  ಬೆಲೆ ಇಳಿದಲ್ಲಿ (ಬ್ಯಾರಲ್‌ಗೆ 80 ಡಾಲರ್ ಆದಲ್ಲಿ) ಪೆಟ್ರೋಲ್, ಡೀಸಲ್ ಹಾಗೂ ಅಡುಗೆ ಅನಿಲದ ಬೆಲೆ  ಇಳಿಸುವುದಾಗಿ ಹೇಳಿದ್ದಾರೆ.

ಆದರೆ, ಸದ್ಯದ ಪರಿಸ್ಥಿತಿಯಲ್ಲಂತೂ  ತೈಲದ ಬೆಲೆ 80 ಡಾಲರ್‌ಗಿಂತ ಕೆಳಗೆ ಇಳಿಯುವ ಸೂಚನೆ ಕಂಡುಬರುತ್ತಿಲ್ಲ. ಇದರಿಂದಾಗಿಯೇ   ದೇಶದ   ಹಣದುಬ್ಬರ ದರ ಏರಿಕೆಯಾಗುತ್ತಿದೆ.

ಬೆಲೆ ಏರಿಕೆ ಮಟ್ಟವನ್ನು ಕಡಿಮೆ ಮಾಡಬೇಕೆಂದು ಭಾರತೀಯ ರಿಸರ್ವ್  ಬ್ಯಾಂಕ್ 2010ರಿಂದ ಈಚೆಗೆ, ಅಕ್ಟೋಬರ್‌ವರೆಗೆ ಸುಮಾರು 12 ಭಾರಿ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದೆ.

ಇದರಿಂದಾಗಿ ಗೃಹ ಸಾಲ, ಚಿನ್ನದ ಸಾಲ, ವೈಯುಕ್ತಿ  ಹಾಗೂ ವಾಹನ ಸಾಲ ತುಟ್ಟಿಯಾಗಿವೆ. ಬಡ್ಡಿ ದರ ಹೆಚ್ಚಿದಂತೆ ಠೇವಣಿ ಬಡ್ಡಿ ದರವೂ ಜಾಸ್ತಿಯಾಗಿದೆ. ಆದರೆ, ಈ ಅನುಕೂಲತೆಯನ್ನು ಹಣದುಬ್ಬರ ತಿಂದು ಹಾಕುತ್ತಿದೆ. 

ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಉಳಿತಾಯ ಖಾತೆ  ಮೇಲಿನ ನಿಯಂತ್ರಣವನ್ನು ತೆಗೆದುಹಾಕಿ ಆಯಾಯಾ ಬ್ಯಾಂಕುಗಳಿಗೆ ಉಳಿತಾಯ ಖಾತೆಗಳಿಗೆ ನೀಡುವ ಬಡ್ಡಿ ಪ್ರಮಾಣವನ್ನು ನಿಗದಿ ಮಾಡುವ ಸ್ವಾತಂತ್ರ್ಯ ನೀಡಿದೆ. ಇದರ ಜೊತೆ  ಗೃಹ, ವಾಹನ ಸಾಲಗಳಿಗೂ   ಬ್ಯಾಂಕುಗಳು ಬಡ್ಡಿ ಪ್ರಮಾಣ ಹೆಚ್ಚಿಸಬೇಕಾಗಿ ಬಂದಿರುವುದು ಗಮನಾರ್ಹ. 

ಸಿಟಿ ಗ್ರೂಪ್  ನಡೆಸಿರುವ ಒಂದು ಸಮೀಕ್ಷೆಯಲ್ಲಿ  ಅಮೆರಿಕ ಮತ್ತು ಯೂರೋಪಿನ ಅನೇಕ ಅಭಿವೃದ್ಧಿ ರಾಷ್ಟ್ರಗಳ ಒಟ್ಟು ದೇಶೀಯ ಉತ್ಪನ್ನ  (ಜಿಡಿಪಿ) ಈ ಆರ್ಥಿಕ ವರ್ಷ ಹಾಗೂ ಮುಂದಿನ ಆರ್ಥಿಕ ವರ್ಷಗಳಲ್ಲಿ ತೀವ್ರವಾಗಿ ಇಳಿಯುವ ನಿರೀಕ್ಷೆ ಇದೆ ಎಂದಿದೆ. ಆದರೆ,  ಭಾರತ ಹಾಗೂ ಚೀನಾದಲ್ಲಿ ಇಳಿಕೆಯ ಪ್ರಮಾಣ ಬಹಳ ಕಡಿಮೆ ಮಟ್ಟದಲ್ಲಿರುತ್ತದೆ ಎನ್ನುವ ಅಂಶವನ್ನು ಒತ್ತಿ ಹೇಳಲಾಗಿದೆ.   
 
ಗ್ರಾಹಕ ಸರಕುಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕಡಿಮೆ ಆದಾಗ ಇದರ ಪ್ರಯೋಜನ ಭಾರತಕ್ಕೂ ಆಗುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. 
ಚಿನ್ನದ ಬೆಲೆಯ  ದಿಢೀರ್ ಏರಿಕೆಯಿಂದಾಗಿ ಭಾರತದ ಮಧ್ಯಮ ವರ್ಗ ಹಾಗೂ ಮೇಲ್ವರ್ಗದ ಜನರು ಒಂದು ವಿಷಯಕ್ಕೆ ಸಮಾಧಾನ ಪಟ್ಟುಕೊಳ್ಳಬೇಕು. 

ವಾಸ್ತವವಾಗಿ, ಭಾರತದಲ್ಲಿ ಚಿನ್ನ ಕಷ್ಟಕಾಲದಲ್ಲಿ ನೆರವಾಗುವ ಲೋಹವಾಗಿದೆ.   ಆದ್ದರಿಂದ ತಲೆಮಾರುಗಳಿಂದ ಚಿನ್ನವನ್ನು ಕೊಳ್ಳುತ್ತಾ ಬಂದಿರುವ ಮಧ್ಯಮ ವರ್ಗದ ಜನರಿಗೆ ತಮ್ಮ ಸಂಪತ್ತಿನ ಬೆಲೆ ಜಾಸ್ತಿಯಾಗಿರುವ ಬಗ್ಗೆ  ಸಂತ್ರಪ್ತಿಯೂ ಇರುತ್ತದೆ. 

ಚಿನ್ನವನ್ನು ಸಣ್ಣ ಪ್ರಮಾಣದಲ್ಲಿ ಹಿಂದಿನಿಂದಲೂ ಕೊಳ್ಳದಿದ್ದರೇ ಇದಕ್ಕಾಗಿ ಭಾರಿ ಬೆಲೆಯನ್ನು ತೆರಬೇಕಾಗಿತ್ತಲ್ಲ ಎನ್ನುವ ಸಮಾಧಾನವೂ ಅವರಲ್ಲಿರುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT