ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿರಾಜಕಾರಣ: ಕೆಲವು ಅನಿಸಿಕೆಗಳು

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

ಭಾರತೀಯ ಸಮಾಜ ವಿಶ್ವದ ಬೇರೆ ಯಾವುದೇ ಸಮಾಜದ ಜೊತೆ ಹೋಲಿಸಲು ಸಾಧ್ಯವಿಲ್ಲದ, ತನ್ನದೇ ಆದ ಅನನ್ಯತೆಯನ್ನು ಹೊಂದಿರುವ ಸಮಾಜ. ಇಲ್ಲಿ ಹಲವು ರೀತಿಯ  ಆಚಾರ ನಂಬಿಕೆಗಳಿವೆ.  ಈ ನಂಬಿಕೆಗಳು ನಮ್ಮ ಸಮಾಜಕ್ಕೆ ಅನನ್ಯತೆಯನ್ನು ವಿಶಿಷ್ಟತೆಯನ್ನು ನೀಡಿವೆ. ಇಲ್ಲಿ  ಏಕರೂಪತೆಯಿಲ್ಲ.  ಸಮಾಜ ರೂಪುಗೊಂಡ ಬಗೆಯನ್ನು ಗಮನಿಸಿದಾಗ ತಕ್ಷಣ ಉದ್ಭವಿಸುವ ಹೆಸರು ಮನುವಿನದು. 

ಮನು ಹೇಳಿದ ವರ್ಣಾಶ್ರಮಧರ್ಮ ಎನ್ನುವುದು ಇವತ್ತಿಗೆ ಪ್ರಸ್ತುತವಲ್ಲ.  ಆದರೆ ವರ್ಣಾಶ್ರಮ ಧರ್ಮ ಕಾಲಕ್ರಮದಲ್ಲಿ ಜಾತಿಗಳಾಗಿ ಬದಲಾಯಿತು.  ಮೇಲು ಕೀಳು ಎಂಬ ವಿಭಜನೆಗೆ ಕಾರಣವಾಯಿತು.
 
ಹಾಗೆ ಜಾತಿ ರಾಜಕಾರಣವೂ ಹುಟ್ಟಿಕೊಂಡಿತು.  ಸಮಾಜದಲ್ಲಿ ಬಲಿಷ್ಠರಿಗೆ ಅವರ ಜಾತಿಯೇ ಶೋಷಣೆಯ ಅಸ್ತ್ರವಾದರೆ, ದುರ್ಬಲ ಜಾತಿಗಳಿಗೆ ಜಾತಿ ಎನ್ನುವುದು ಅವಮಾನ ಮತ್ತು ಶೋಷಣೆಗೆ ಕಾರಣವಾಯಿತು.  ಬಹುಶಃ ಆಗಲೇ ಹುಟ್ಟಿದ್ದು ಜಾತಿ ರಾಜಕಾರಣ.

ಜಾತಿ ಎನ್ನುವುದು ಯಾರೂ ಕೇಳಿಕೊಂಡು ಪಡೆದುಕೊಳ್ಳುವುದಲ್ಲ, ಯಾರೂ ಇಂತಹ ಜಾತಿಯಲ್ಲಿ ಹುಟ್ಟಿ ಬರಬೇಕು ಎಂದು ಕೇಳಿಕೊಂಡು ಹುಟ್ಟುವುದಿಲ್ಲ.  ಹುಟ್ಟು ಆಕಸ್ಮಿಕವಾದರೂ ಹುಟ್ಟೇ ಒಂದು ದೊಡ್ಡ ಸಮಸ್ಯೆಯಾಗಿದ್ದು ಬಹುತೇಕ ಕಳೆದ ಶತಮಾನದಲ್ಲಿ, ಅಲ್ಲಿಯವರೆಗೆ ಜಾತಿ ಆಚರಣೆಯ ಹಂತದಲ್ಲಿತ್ತು. ಮೇಲ್ಜಾತಿಯವರು ತಮ್ಮ ಮನೆಯ ಒಳಗೆ ಕೂಡುತ್ತಿರಲಿಲ್ಲ.

ತಾವು ನಡೆಸುವ ದೇವತಾ ಕಾರ್ಯಗಳಿಗೆ ಕೆಳಜಾತಿಯವರಿಗೆ ಆಹ್ವಾನ ನೀಡುತ್ತಿರಲಿಲ್ಲ.  ದಲಿತರು ಅಸ್ಪೃಶ್ಯರಾಗಿ ಉಳಿದರು.  ಕಳೆದ ಶತಮಾನದಿಂದ ಈಚೆಗೆ ಜಾತಿ, ಆಚರಣೆಯ ಹಂತದ ಜೊತೆಗೆ ಮಾನಸಿಕ ಹಂತಕ್ಕೆ ಬಂದು ತಲುಪಿತು.

ಮನಸ್ಸುಗಳಲ್ಲಿ ಜಾತಿಯ ವಿಷ ತುಂಬಿಕೊಂಡಿತು. ಇಂದು ಈ ವಿಷ ದೇಹವನ್ನೆಲ್ಲ ಆವರಿಸಿ ಸಮಾಜದ ರಚನೆ ವಿನ್ಯಾಸದಲ್ಲಿ  ಬೇರೂರಿದೆ. ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುವುದರೊಂದಿಗೆ ಜಾತಿ ರಾಜಕಾರಣ ಇನ್ನೊಂದು ಮಜಲಿಗೆ ತಲುಪಿಬಿಟ್ಟಿದೆ. 

ಅನುಕಂಪದ ಆಧಾರದ ಮೇಲೆ ಅಧಿಕಾರಕ್ಕೆ ಬಂದ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ದಿನದಿಂದಲೇ ತಾವು ಒಂದು ಜಾತಿಗೆ ಸೇರಿದ ಮುಖ್ಯಮಂತ್ರಿ ಎಂಬ ಅನವಶ್ಯಕ ಸಂದೇಶವನ್ನು ನೀಡಿಬಿಟ್ಟರು.

ಆ ಹಂತದಲ್ಲಿ ಅವರಿಗೆ ಬೇರೆ ಜಾತಿಗಳ ಜನರ ಬೆಂಬಲವೂ ಇತ್ತು, ಅವರು ಆರು ಕೋಟಿ ಕನ್ನಡಿಗರಿಗೆ ಸೇರಿದ ಮುಖ್ಯಮಂತ್ರಿ ಎಂಬಂತೆ ವರ್ತಿಸಲೇ ಇಲ್ಲ.  ಅಂಥ ಸಂದೇಶ ಅವರಿಗೆ ಮಾನಸಿಕ ಸ್ಥೈರ್ಯ ಮತ್ತು ರಾಜಕೀಯ ಆಧಾರ ಸ್ತಂಭಗಳಾಗಿ ಅನಿವಾರ್ಯವಾಗಿತ್ತೇನೊ?

ಎಲ್ಲರೂ ಒಂದಲ್ಲ ಒಂದು ಜಾತಿಗೆ ಸೇರಿರುವುದರಿಂದ, ತಮ್ಮ ಜಾತಿಗೆ ಸೇರಿದ ವ್ಯಕ್ತಿಗೆ ಅಧಿಕಾರ ಸಿಕ್ಕಾಗ ಆ ಜಾತಿ ಸಮುದಾಯದ ಜನ ಸಂತೋಷಪಡುವುದು ಸಹಜ.  ಆದರೆ ಇಂತಹ ಸಂದರ್ಭದಲ್ಲಿ  ಅಧಿಕಾರಕ್ಕೆ ಬಂದ ವ್ಯಕ್ತಿಯ ಮೇಲೆ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ.

ತಮ್ಮ ಜಾತಿಯ ಜನರ ಸಂತೋಷವನ್ನು ಸ್ವೀಕರಿಸುತ್ತಲೇ ಇತರ ಜಾತಿ ಸಮುದಾಯದ ಜನರಿಗೆ ಭರವಸೆ ನೀಡುವ, ಅವರಲ್ಲಿ ವಿಮುಖತೆ ಉಂಟಾಗದಂತೆ ಆತ್ಮ ವಿಶ್ವಾಸವನ್ನು ತುಂಬುವ ಕೆಲಸವನ್ನು ಆ ವ್ಯಕ್ತಿ ಮಾಡಬೇಕಾಗುತ್ತದೆ. ಆದರೆ ಯಡಿಯೂರಪ್ಪನವರು ತಮ್ಮ ಜಾತಿ ಸಮುದಾಯಕ್ಕೆ ಸೇರಿದ ಮಠಾಧಿಪತಿಗಳ ಪಕ್ಕದಲ್ಲಿದ್ದು, ವಿಜೃಂಭಿಸತೊಡಗಿದರು.
 
ಕರ್ನಾಟಕದ ಪ್ರಮುಖ ಜನಾಂಗವೊಂದು ತಮ್ಮವ ಎಂಬ ಒಂದೇ ಕಾರಣಕ್ಕೆ ಯಡಿಯೂರಪ್ಪ ಅವರ ರಕ್ಷಣೆಗಾಗಿ ನಿಂತುಬಿಟ್ಟಿತು.  ಹಲವಾರು ಮಠಾಧೀಶರು (ಕೆಲವರು ಅನಿವಾರ್ಯವಾಗಿ) ಜೈಲಿಗೆ ಭೇಟಿ ನೀಡುವಂತಾಯಿತು.
 
ಇದು ನಿವಾರಿಸಬಹುದಾಗಿದ್ದ ಜಾತಿ ರಾಜಕಾರಣದ ಪ್ರದರ್ಶನವಾಯಿತು. ಈ ಪ್ರಕ್ರಿಯೆಯಿಂದ ತಮ್ಮ ಅಧಿಕಾರ ಸ್ಥಾನವನ್ನು ಉಳಿಸಿಕೊಳ್ಳಲು ತಮ್ಮ ಜಾತಿಯ ಬೆಂಬಲ ಮಾತ್ರ ಸಾಕು ಎಂಬ ಮಿಥ್ಯಾನಂಬಿಕೆ ಯಡಿಯೂರಪ್ಪ ಅವರದಾಗಿತ್ತೇ? ಈ ನಂಬಿಕೆಯಿಂದಾಗಿ ಕರ್ನಾಟಕ ಜಾತಿ ರಾಜಕಾರಣ ಇನ್ನೊಂದು ಹಂತಕ್ಕೆ ಬಂದು ನಿಂತಿದೆಯೇ? 

ಹಾಗೆ ನೋಡಿದರೆ ಕರ್ನಾಟಕದ ಜಾತಿ ರಾಜಕಾರಣ ಗುಪ್ತ ಗಾಮಿನಿಯಾಗಿ ಹರಿಯುತ್ತಲೇ ಇತ್ತು. 60ರ ದಶಕದಲ್ಲೇ ರಾಜ್ಯದ ಎರಡು ಪ್ರಬಲ ಕೋಮುಗಳಾದ ಲಿಂಗಾಯಿತರು ಮತ್ತು ಒಕ್ಕಲಿಗರು ಅಧಿಕಾರದ ಪೈಪೋಟಿಯಲ್ಲಿ ತೊಡಗಿದ್ದರು. 

ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಲಿಂಗಾಯಿತರ ಸಂಭವನೀಯ ಪ್ರಾಬಲ್ಯದ ಪ್ರಶ್ನೆ ಮುಖ್ಯವಾಗಿ ಅದು ಏಕೀಕರಣವನ್ನು ವಿರೋಧಿಸುವುದಕ್ಕೂ ಕಾರಣವಾಗಿದ್ದು ಈಗ ಚರಿತ್ರೆ.  ಆದರೆ, ಕಳೆದ ನಾಲ್ಕು ದಶಕಗಳಲ್ಲಿ ಎರಡೂ ಭಾಗಗಳ ನಾಯಕರ ಮುತ್ಸದ್ದಿತನದಿಂದಾಗಿ ಹಳೆಯ ವೈಷಮ್ಯ ಅದೃಶ್ಯವಾಗಿದೆ.

ಕಳೆದ ಮೂರು ನಾಲ್ಕು ದಶಕಗಳಲ್ಲಿ ಆ ಭಾಗದಲ್ಲಿ  ಬೆಳೆದು ಬಂದಿರುವ ಹೊಸ ಪೀಳಿಗೆಯ ಯುವ ಜನಾಂಗ ಜಾತಿಗಿಂತ ಅಭಿವೃದ್ಧಿ ಮತ್ತು ಜೀವನಾವಕಾಶ್ಯಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿದ್ದಾರೆ. ನಂಜುಂಡಪ್ಪ ಸಮಿತಿಯ ವರದಿ ಅಭಿವೃದ್ಧಿ ಕುರಿತ ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.
 
ಐತಿಹಾಸಿಕ ಕಾರಣಗಳಿಂದ ರಾಜ್ಯವನ್ನು ಮುಂಬೈ ಕರ್ನಾಟಕ, ನಿಜಾಮರ ಹೈದರಾಬಾದ್ ಕರ್ನಾಟಕ, ಮೈಸೂರು ಮಹಾರಾಜರ ಆಡಳಿತಕ್ಕೆ ಸೇರಿದ್ದ ಹಳೇ ಮೈಸೂರು ಪ್ರದೇಶ ಮತ್ತು ಕರಾವಳಿ ಎಂದು ಗುರುತಿಸಲಾಗಿದೆ.
 
ಈ ನಾಲ್ಕು ಪ್ರಾಂತಗಳ ನಡುವೆ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಭಿನ್ನತೆಯ ಜೊತೆ ಜೊತೆಗೆ ನಾಲ್ಕು ಪ್ರಾಂತಗಳನ್ನು ಕನ್ನಡ ಎನ್ನುವ ಭಾಷೆ ಬಂದಿಸಿರುವುದು ನಿಜ.

ಆದರೆ ಭಾಷೆಗೆ ಇರುವ ಬಂಧಿಸುವ ಶಕ್ತಿಯನ್ನೇ ಪ್ರತ್ಯೇಕಿಸುವ ಅಂಶಗಳ ಪ್ರಭಾವವೂ ಹೆಚ್ಚಾಗಿದೆ.  ಇವುಗಳಲ್ಲಿ ಬಹುಮುಖ್ಯ ಎಂದರೆ ಬ್ರಿಟಿಷರ ಕಾಲದಲ್ಲಿ ಅಭಿವೃದ್ಧಿಯಲ್ಲಿನ ವ್ಯತ್ಯಾಸಗಳು, ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಪ್ರದೇಶಗಳಿಗಿಂತ ಮೈಸೂರು ಅರಸರು ಹೆಚ್ಚು ಅಭಿವೃದ್ಧಿಯನ್ನು ಮಾಡಿದ್ದು ಸರ್.ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್, ರಸ್ತೆಗಳು, ಅಣೆಕಟ್ಟುಗಳ ನಿರ್ಮಾಣಕ್ಕೆ ನೀಡಿದ ಪ್ರಾಮುಖ್ಯತೆ ಈ ಪ್ರದೇಶದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾದರು.

ಒಣ ಭೂಮಿಯಲ್ಲಿ ನೀರು ಹರಿಯಿತು.  ರೈತರಲ್ಲಿ ಆತ್ಮ ವಿಶ್ವಾಸ ಮೂಡುವಂತಾಯಿತು.  ಆದರೆ ಮುಂಬೈ ಮತ್ತು ಹೈದರಾಬಾದ್ ಕರ್ನಾಟಕದ ಜನರಿಗೆ ಈ ಭಾಗ್ಯ ಇರಲಿಲ್ಲ.

ಅಭಿವೃದ್ಧಿ ಪ್ರಶ್ನೆಯ ಜೊತೆಗೆ ಸಾಮಾಜಿಕ ಸಮೀಕರಣದ ಪ್ರಶ್ನೆ ಕೂಡ ಅಷ್ಟೇ ಮುಖ್ಯವಾಗಿದೆ.  ಜಾತಿ ಎನ್ನುವುದು ಮಾನಸಿಕ ಹಂತವನ್ನು ತಲುಪಿದ ಮೇಲೆ ಅದು ಬಾಹ್ಯ ಪ್ರದರ್ಶನಗೊಂಡ ರೀತಿ ತುಂಬಾ ವಿಭಿನ್ನ.

  80ರ  ದಶಕದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗಾಗಿ ನಡೆದ ಚಳುವಳಿ ಮತ್ತು ಇದನ್ನು ವಿರೋಧಿಸುವವರು ಹಮ್ಮಿಕೊಂಡಿದ್ದ ಪ್ರತಿಭಟನೆ ಮಂಡಲ್, ಆಯೋಗದ ವರದಿಯ ಪರ ಮತ್ತು ವಿರೋಧವಾಗಿ ನಡೆದ ಪ್ರತಿಭಟನೆ ಜಾತಿ ರಾಜಕಾರಣದ ಭಾಗವೆ ಅಥವಾ ಅಲ್ಲವೆ?
 
ಇದನ್ನು ರಾಜಕಾರಣ ಜಾತಿಯನ್ನು ಒಳಗೊಂಡ ಬಗೆ ಎಂದು ಕರೆಯಬಹುದು.  ಜಾತಿ-ಆಧಾರಿತ ಅಸಮಾನತೆ ರಾಜಕಾರಣವನ್ನು ನಿರ್ಧರಿಸುವುದು ಸರಿ.  ಆದರೆ ಇಲ್ಲಿ  ರಾಜಕಾರಣ ಜಾತಿಯನ್ನು ಬಳಸಿಕೊಳ್ಳುತ್ತಿದೆ, ಇದು ಅಪಾಯಕಾರಿ.
 
ಜಾತಿ ಬೆಂಬಲ ಎರಡು ಅಲುಗಿನ ಕತ್ತಿ ಅಂತಿರುವ ರಾಜಕಾರಣ; ತಾರತಮ್ಯ ಜ್ಞಾನವನ್ನು ನ್ಯಾಯಪರತೆಯನ್ನು ಮರೆಸಿ ಬಿಡುತ್ತದೆ. ಅದು ಹೇಗೆಂದರೆ ನಮ್ಮ ಜಾತಿಗೆ ಸೇರಿದವ ಎಂಬ ಅಂಶವೊಂದೇ ಅವರ ಪರವಾಗಿ ಎದ್ದು ನಿಲ್ಲುವಂತೆ ಮಾಡಿ ಬಿಡುತ್ತದೆ.

ನಮ್ಮವ ಎಂತಹ ತಪ್ಪು ಮಾಡಿದರೂ ಆತ ನಮ್ಮವ, ಆತನನ್ನು ನಾವು ರಕ್ಷಣೆ ಮಾಡಬೇಕು ಎಂಬ ಭಾವ ಜಾತಿ ಸಮುದಾಯಗಳಿಗೆ ಬರತೊಡಗುತ್ತದೆ. ಜಾತಿ ಜನರನ್ನು ಒಂದುಗೂಡಿಸುವ ಮತ್ತು ಬೇರ್ಪಡಿಸುವ ಕೆಲಸವನ್ನು ಏಕಕಾಲದಲ್ಲಿ  ಮಾಡುತ್ತಿರುತ್ತದೆ.  ಹೀಗಾಗಿ ಇದನ್ನು ಬಳಸುವವರು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. 

ಬ್ರಿಟಿಷರ ಕಾಲದ ಪೂರ್ವದಿಂದಲೂ ನಮ್ಮ ಸಮಾಜದಲ್ಲಿ  ಕೆಲವು ಜಾತಿ ಗುಂಪುಗಳು ಪಂಗಡಗಳನ್ನು ಅಧಿಕಾರದಿಂದ ಒಂದು ಉದ್ದೇಶಿತ ವ್ಯವಸ್ಥಿತ ರೀತಿಯಲ್ಲಿ ಹೊರಗಿಡಲಾಗಿತ್ತು. ಇಂಥ ವ್ಯವಸ್ಥೆಗೆ ವಿಶೇಷವಾಗಿ ಗುರಿಯಾಗಿದ್ದವರು ದಲಿತರು. ಸಮಾಜದ ಅಂಚಿನಲ್ಲೇ ಬದುಕಿದ ಅವರು ಬಹುತೇಕ ಸೌಲಭ್ಯಗಳಿಂದ ವಂಚಿತರಾಗಿ ಅಮಾನವೀಯವಾದ ಅಸ್ಪೃಶ್ಯತೆಗೂ ಒಳಗಾದವರು.

ಇತ್ತೀಚಿನ ವರ್ಷಗಳಲ್ಲಿ  ಇತರ ಹಿಂದುಳಿದ ವರ್ಗಗಳೂ ಕೂಡಾ ದಲಿತ ಶೋಷಣೆಯ ಹಾಗೂ ಅವರ ಅಸಮತೆಯ ಪರಿಭಾಷೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ.  ಕೆಲವು ಸಣ್ಣ ಹಾಗೂ ಅಲೆಮಾರಿ ಜಾತಿಗಳ ಒಳತಿಗಾಗಿ ಇದರ ಅವಶ್ಯಕತೆಯೂ ಇತ್ತು, ಈಗಲೂ ಇದೆ.

ಆದರೆ, ಅಸಮತೆಯ ವಿರುದ್ಧದ ಹೋರಾಟಕ್ಕೆ ಇಂದೂ ಜಾತಿಯೇ ಆಧಾರವಾಗಿದೆ. ಬದಲಾಗಿ ಜಾತಿಯನ್ನು ದಾಟುವ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟಗಳ ಹಾಗೂ ಅಸಮತೆ ಕುರಿತ ವ್ಯಾಖ್ಯಾನಗಳು ಸಾಧ್ಯವಿತ್ತೆ? 

 ಜಾತಿ ಆಧಾರಿತ ಸಂಘಟನೆ ಸೃಷ್ಟಿಸುವ ತೀವ್ರ ನಿಷ್ಠೆ ಭಾವನೆಗಳು ಅದರಲ್ಲೂ ಇಂದಿನ ಸ್ಪರ್ಧಾತ್ಮಕ ಜಾತಿ ಪ್ರದರ್ಶನಗಳ ಉದ್ರೇಕ, ಜಾತಿ ರಹಿತ ಸಂಘಟನೆಯಲ್ಲಿ ಕಷ್ಟ ಸಾಧ್ಯ. ಆದ್ದರಿಂದಲೇ ಅದು ರಾಜಕಾರಣಿಗಳಿಗೆ ಆಕರ್ಷಕ. ಸಮಾಜದ ಸ್ವಾಸ್ಥ್ಯ ಬಯಸುವ ಇತರರಿಗೆ ಅದೊಂದು ಆತಂಕಕಾರಿ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT