ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ಯತೀತ, ಪ್ರಾದೇಶಿಕ ಪಕ್ಷ ಒಗ್ಗೂಡಿಕೆ ಗುರಿ

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎನ್‌ಡಿಎ ಮತ್ತು ಯುಪಿಎ ಸರ್ಕಾರಗಳು ದೇಶದಲ್ಲಿ ಸೃಷ್ಟಿಸಿರುವ ಸಮಸ್ಯೆಗಳ ವಿರುದ್ಧ ಹೋರಾಡಲು ಜಾತ್ಯತೀತ, ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಮಹತ್ವದ ಗುರಿ ತಮ್ಮ ಮುಂದಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.ಇಲ್ಲಿನ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಜೆಡಿಎಸ್ ಅಧಿವೇಶನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಹಿಂದಿನ ಎನ್‌ಡಿಎ ಸರ್ಕಾರ ಮತ್ತು ಈಗಿನ ಯುಪಿಎ ಸರ್ಕಾರಗಳು ರಾಷ್ಟ್ರವನ್ನು ಸಮಸ್ಯೆ ಸುಳಿಗೆ ತಳ್ಳಿವೆ. ಈ ಅಪಾಯದ ವಿರುದ್ಧದ ಹೋರಾಟದಲ್ಲಿ ಎಲ್ಲ ಜಾತ್ಯತೀತ ಮತ್ತು ಪ್ರಾದೇಶಿಕ ಪಕ್ಷಗಳು ವೈಯಕ್ತಿಕ ಪ್ರತಿಷ್ಠೆ ಮರೆತು ಒಂದಾಗಬೇಕಾದ ಅಗತ್ಯವಿದೆ’ ಎಂದರು.

ಕೇಂದ್ರದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಹಿಂದೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವೂ ಇದಕ್ಕೆ ಹೊರತಾಗಿಲ್ಲ. ಜನರು ಯಾವ ಪಕ್ಷವನ್ನೂ ನಂಬಲಾರದ ಸ್ಥಿತಿ ನಿರ್ಮಾಣವಾಗಿದೆ. ಈಗ ಎರಡೂ ಮೈತ್ರಿಕೂಟಗಳ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

‘ಭ್ರಷ್ಟಾಚಾರ ಇಡೀ ದೇಶದ ಸಮಸ್ಯೆ ಎಂದು ಇಂದಿರಾ ಗಾಂಧಿ ಹೇಳಿದ್ದರು. ಈಗ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರು ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ಮರಳಿ ದೇಶಕ್ಕೆ ತರುವ ಮಾತನಾಡುತ್ತಿದ್ದಾರೆ. ಎನ್‌ಡಿಎ ಸರ್ಕಾರದಲ್ಲಿ ದೇಶದ ಗೃಹ ಸಚಿವರಾಗಿದ್ದ ಅವರಿಗೆ ಈ ವಿಷಯ ತಿಳಿದಿರಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರ ಜೊತೆಯೇ ಕದನಕ್ಕೆ ಇಳಿದಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಹಗರಣಗಳು ನಿರಂತರವಾಗಿ ಬಹಿರಂಗವಾಗಿವೆ. ಇದಕ್ಕೆ ಬಿಜೆಪಿಯ ನಾಯಕರು ಏನು ಹೇಳುತ್ತಾರೆ’ ಎಂದು ದೇವೇಗೌಡ ಸವಾಲು       ಹಾಕಿದರು.

ಪಕ್ಷ ಸಂಘಟನೆಗೆ ಆದ್ಯತೆ: 18 ರಾಜ್ಯಗಳ ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸಿದ್ದಾರೆ. ಎಲ್ಲ ರಾಜ್ಯಗಳಲ್ಲೂ ಪಕ್ಷದ ಸಂಘಟನೆಗೆ ಆದ್ಯತೆ ನೀಡಲಾಗುವುದು. ರಾಷ್ಟ್ರದಲ್ಲಿ ಜಾತ್ಯತೀತ ತತ್ವ ಆಧಾರಿತ ರಾಜಕೀಯ ಪಕ್ಷಗಳ ಬಲವರ್ಧನೆ ಜೆಡಿಎಸ್‌ನ ಆದ್ಯತೆ ಎಂದರು.

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ, ಪಕ್ಷದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಸೇರಿದಂತೆ ವಿವಿಧ ರಾಜ್ಯಗಳ ಜೆಡಿಎಸ್ ಮುಖಂಡರು ಮಹಾಧಿವೇಶನದಲ್ಲಿ ಪಾಲ್ಗೊಂಡಿದ್ದರು.

ಮೂರನೇ ಬಾರಿ ಆಯ್ಕೆ: ಜೆಡಿಎಸ್‌ನ ರಾಷ್ಟ್ರೀಯ ಚುನಾವಣಾಧಿಕಾರಿಯಾಗಿದ್ದ ಎನ್.ಡಬ್ಲ್ಯು.ಸಿದ್ದಿಕಿ ಅವರು ಗುರುವಾರ ಅಧಿವೇಶನದಲ್ಲಿ ದೇವೇಗೌಡ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆ ಹೊಂದಿದ್ದಾರೆ ಎಂದು ಪ್ರಕಟಿಸಿದರು.

ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ದೇವೇಗೌಡರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅವರ ಉಮೇದುವಾರಿಕೆಯನ್ನು 16 ರಾಜ್ಯ ಘಟಕಗಳು ಅನುಮೋದಿಸಿವೆ. ಈ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಪುನರಾಯ್ಕೆ ಹೊಂದಿದ್ದಾರೆ ಎಂದು ಅವರು ಪ್ರಕಟಿಸಿದರು.

ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ 71 ಸ್ಥಾನಗಳಿಗೂ ಚುನಾವಣೆ ನಡೆಸಲಾಯಿತು. 65 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಅವರೆಲ್ಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಲಾಯಿತು. ಉಳಿದ ಸ್ಥಾನಗಳ ಭರ್ತಿಯ ಅಧಿಕಾರವನ್ನು ದೇವೇಗೌಡರಿಗೆ ವಹಿಸಲಾಗಿದೆ.

ಮೂರು ನಿರ್ಣಯ ಅಂಗೀಕಾರ: ಪಕ್ಷದ ಅಧಿವೇಶನದಲ್ಲಿ ಮೂರು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಬೆಲೆ ಏರಿಕೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರ್ಥಿಕ ನೀತಿಯ ವಿರುದ್ಧ ಮೊದಲ ನಿರ್ಣಯ ಅಂಗೀಕರಿಸಲಾಯಿತು. ಕೇಂದ್ರದಲ್ಲಿ ಜಾತ್ಯತೀತ ತತ್ವ ಪಕ್ಷಗಳ ಒಗ್ಗೂಡಿಕೆ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧದ ಹೋರಾಟ ಮುಂದುವರಿಸುವ ನಿರ್ಣಯಗಳನ್ನೂ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT