ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರಿಗೆ ಕಠಿಣ ಕ್ರಮ ಅನಿವಾರ್ಯ

Last Updated 4 ಮೇ 2012, 19:30 IST
ಅಕ್ಷರ ಗಾತ್ರ

ಕಳೆದ ವರ್ಷದ ಏಪ್ರಿಲ್‌ನಲ್ಲಿ `ಶಿಕ್ಷಣ ಹಕ್ಕು ಕಾಯ್ದೆ 2009~ ಜಾರಿಯಾದಾಗ ದೇಶದಲ್ಲಿ ಶಿಕ್ಷಣ ಕ್ರಾಂತಿಯಾಯಿತು ಎಂದು ಬಿಂಬಿಸಲಾಗಿತ್ತು. 

ಹುಟ್ಟಿನಿಂದ ಹದಿನಾಲ್ಕು ವರ್ಷ ವಯಸ್ಸಿನ ಮಕ್ಕಳಿಗಿದ್ದ ಸಂವಿಧಾನಬದ್ಧ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸಿ ಕೇವಲ ಆರರಿಂದ ಹದಿನಾಲ್ಕು ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಕಾನೂನು ವಿಧಿಸುವ ರೀತಿಯಲ್ಲಿ ಒದಗಿಸಲು ಪ್ರತಿಪಾದಿಸಿದ ಮತ್ತು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಅನ್ವಯ ಹದಿನೈದರಿಂದ

ಹದಿನೆಂಟು ವರ್ಷ ವಯಸ್ಸಿನ ಮಕ್ಕಳಿಗೆ ಶಿಕ್ಷಣವನ್ನು ವಿಸ್ತರಿಸದ ಈ ಕಾಯ್ದೆಯು ಸಂವಿಧಾನದ ಹಾಗೂ ಅಂತರಾಷ್ಟ್ರೀಯ ಕಾನೂನುಗಳ ಮೂಲ ಆಶಯವಾದ ಸಮಾನತೆ, ಸಾಮಾಜಿಕನ್ಯಾ ಮತ್ತು ತಾರತಮ್ಯರಹಿತ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು ಹೇಗೆ ಸಹಾಯಕವಾಗುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆ ಅಸಮಾನತೆಯಿಂದ ಕೂಡಿದ್ದು ಎಲ್ಲ ಮಕ್ಕಳಿಗೆ ಸಮಾನ ಅವಕಾಶ ಮತ್ತು ಸಮಾನ ಭೌತಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಖಾಸಗಿ ಶಾಲೆಗಳಲ್ಲಿ ಎಲ್ಲವೂ ಇದೆ, ಸರ್ಕಾರಿ ಶಾಲೆಗಳಲ್ಲಿ ಏನೂ ಇಲ್ಲವೆಂಬ ಮನೋಧೋರಣೆ ಹೆಚ್ಚಾಗುತ್ತಿದ್ದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.

ಈ ಹಿನ್ನೆಲೆಯಲ್ಲಿ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಅವಲೋಕಿಸಬೇಕಾಗಿದೆ. ಖಾಸಗಿ ಶಾಲೆಗಳಲ್ಲಿ ಶೇಕಡ 25ರಷ್ಟು ಪ್ರವೇಶವನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಮೀಸಲಿಡುವ ಮೂಲಕ ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಬದಲಿಗೆ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ಕೇಂದ್ರ ಸರ್ಕಾರ ನಡೆಸುವ ಕೇಂದ್ರೀಯ ವಿದ್ಯಾಲಯಗಳ ಮಟ್ಟಕ್ಕೆ ಉನ್ನತೀಕರಿಸುವುದರ ಮೂಲಕ ಆ ಶಾಲೆಯ

ನೆರೆಹೊರೆಯಲ್ಲಿರುವ ಎಲ್ಲ ಮಕ್ಕಳು; ಶ್ರೀಮಂತರಾಗಲಿ-ಬಡವರಾಗಲಿ, ಗ್ರಾಮವಾಗಲಿ-ನಗರವಾಗಲಿ, ಹೆಣ್ಣಾಗಲಿ-ಗಂಡಾಗಲಿ ಮತ್ತು ಯಾವುದೇ ಜಾತಿ-ಧರ್ಮಕ್ಕೆ ಸೇರಿದವರಾಗಲಿ ಒಂದೇ ಶಾಲೆಯಲ್ಲಿ ಕಲಿಯುವ ವ್ಯವಸ್ಥೆಯನ್ನು ಕಟ್ಟಿಕೊಳ್ಳಬೇಕಾಗಿದೆ. ಇದು ನಮ್ಮ ಸಂವಿಧಾನದ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗಳ ಆಶಯವೂ ಹೌದು. 

  ಈ ಮಹತ್ವದ ಕೆಲಸದ ಭಾಗವಾಗಿ ಸರ್ಕಾರ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಅಂಶಗಳಿಗೆ ಆದ್ಯತೆಯ ಮೇಲೆ ಗಮನಹರಿಸಿ ಸೂಕ್ತ  ಕ್ರಮ ಕೈಗೊಳ್ಳಬೇಕಿದೆ.
ಮೊದಲನೆಯದಾಗಿ,  ಶಿಕ್ಷಣ ಇಲಾಖೆಯ ಆಗಸ್ಟ್ 2011ರ ಮಾಹಿತಿ ಅನ್ವಯ ರಾಜ್ಯದಲ್ಲಿನ ಒಟ್ಟು 45,677 ಪ್ರಾಥಮಿಕ ಶಾಲೆಗಳಲ್ಲಿ 1,98,415 ಕೊಠಡಿಗಳಿದ್ದು ಅವುಗಳ ಪೈಕಿ ಶೇಕಡ 68.04ರಷ್ಟು ಕೊಠಡಿಗಳು ಮಾತ್ರ ಉತ್ತಮ  ಸ್ಥಿತಿಯಲ್ಲಿದ್ದು ಉಳಿದ ಶೇಕಡ 31.98 ಕೊಠಡಿಗಳು ದುಸ್ಥಿತಿಯಲ್ಲಿವೆ.

ಜೊತೆಗೆ 653 ಶಾಲೆಗಳಿಗೆ ಸ್ವಂತ ಕಟ್ಟಡ ಇಲ್ಲ. 202 ಶಾಲೆಗಳಿಗೆ  ಕಟ್ಟಡವೇ ಇಲ್ಲ. ಮೂಲಭೂತ ಸೌಕರ್ಯಗಳ ಲಭ್ಯತೆಗೆ ಸಂಬಂಧಿಸಿದಂತೆ ಶೇಕಡ 8.03 ಶಾಲೆಗಳಲ್ಲಿ  ಸಾಮಾನ್ಯ ಶೌಚಾಲಯ, ಶೇಕಡ 25.74 ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶೌಚಾಲಯ, ಶೇಕಡ 45.58 ಶಾಲೆಗಳಲ್ಲಿ ಆಟದ ಮೈದಾನ ಮತ್ತು ಶೇಕಡ 6.4 ಶಾಲೆಗಳಲ್ಲಿ  ಕುಡಿಯುವ ನೀರಿನ ವ್ಯವಸ್ಥೆ ಇಲ್ಲವೆಂದು ವರದಿ ಹೇಳುತ್ತದೆ.
 
ಶೇಕಡ 27.05 ರಷ್ಟು ಶಾಲೆಗಳಲ್ಲಿ ರ‌್ಯಾಂಪ್ ಸೌಲಭ್ಯವಿಲ್ಲದೆ ಅಂಗವಿಕಲ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿದೆ. ಈ ಎಲ್ಲ ಅಂಶಗಳ ಜೊತೆಗೆ  ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಸರ್ಕಾರಿ ಶಾಲೆಗಳಲ್ಲಿ ಪ್ರತಿ ತರಗತಿಗೊಂದು ಕೊಠಡಿಯ ಬದಲು ಶಿಕ್ಷಕರಿಗೊಂದು ಕೊಠಡಿ ಎಂಬ ನೀತಿಯಿಂದಾಗಿ ರಾಜ್ಯದಲ್ಲಿ 8 ತರಗತಿಗಳಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸರಾಸರಿ 4 ಕೊಠಡಿಗಳು ಮಾತ್ರ ಲಭ್ಯವಿರುತ್ತವೆ.

ರಾಜ್ಯದ ಬಹುತೇಕ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 5 ತರಗತಿಗಳಿಗೆ ಲಭ್ಯವಿರುವ ಕೊಠಡಿಗಳು ಕೇವಲ 2 ಮಾತ್ರ. ಸರ್ಕಾರಿ ಶಾಲೆಗಳನ್ನು ಇಂಥಹ  ಶೋಚನೀಯ  ಪರಿಸ್ಥಿತಿಯಿಂದ  ಪಾರುಮಾಡಿ ಸುಸಜ್ಜಿತ ಕಟ್ಟಡ ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ.

ಎರಡನೆಯದಾಗಿ, ರಾಜ್ಯದ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲೆಗಳಲ್ಲಿ  ಸುಮಾರು 2,02,483 ಮಂಜೂರಾದ ಶಾಲಾ ಶಿಕ್ಷಕರ ಹುದ್ದೆಗಳಿದ್ದು ಇದರಲ್ಲಿ 1,89,451 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 13,032 ಶಿಕ್ಷಕರ ಹುದ್ದೆ ಖಾಲಿ ಇವೆ. ಶಿಕ್ಷಕರ ನೇಮಕಾತಿ ಸಂಬಂಧಿಸಿದಂತೆ  ಗಮನಿಸಬೇಕಾದ ಮತ್ತೊಂದು  ಅಂಶವೆಂದರೆ  ಸರ್ಕಾರಿ ಶಾಲೆಗಳಲ್ಲಿ  ವಿಷಯಕೊಬ್ಬ ಶಿಕ್ಷಕರನ್ನು ಒದಗಿಸುವ ನೀತಿಯ ಬದಲು ಕೊಠಡಿ ಸಂಖ್ಯೆಗೆ  ಅನುಗುಣವಾಗಿ  ಶಿಕ್ಷಕರನ್ನು ಒದಗಿಸಲಾಗುತ್ತಿದೆ.

ಹೀಗಾಗಿ, ಮಕ್ಕಳಿಗೆ ವಿಷಯವಾರು ಶಿಕ್ಷಕರಿಲ್ಲದ ಕಾರಣ ಗುಣಾತ್ಮಕ ಶಿಕ್ಷಣ ಕಗ್ಗಂಟಾಗಿಯೇ ಉಳಿದಿದೆ. ಸರ್ಕಾರ ಈ ಅವೈಜ್ಞಾನಿಕ ಆನೀತಿಯಿಂದ  ದೂರಸರಿದು ವಿಷಯವಾರು ಶಿಕ್ಷಕರನ್ನು ಒದಗಿಸುವ ಮತ್ತು ಆಡಳಿತಾತ್ಮಕ ಕೆಲಸಕ್ಕೆ ಕನಿಷ್ಠ ಒಬ್ಬ ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡುವುದು ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ತುರ್ತಾಗಿ ಆಗಬೇಕಾದ ಕೆಲಸವಾಗಿದೆ.

ಮೂರನೆಯ ಮತ್ತು ಅತ್ಯಂತ ಆತಂಕದ ವಿಷಯವೆಂದರೆ,  ವರ್ಷದಿಂದ ವರ್ಷಕ್ಕೆ  ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿದೆ. 2006-07ರಲ್ಲಿ ಒಂದನೇ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆ ಶೇಕಡ 7.69 ಆದರೆ 2010-11ರಲ್ಲಿ ದಾಖಲಾದ ಮಕ್ಕಳ ಸಂಖ್ಯೆ 6.21. ಅಂದರೆ ಶೇಕಡ 1.48 ರಷ್ಟು ಕುಸಿದಿದೆ. ತರಗತಿ 1 ರಿಂದ 5 ರವರೆಗೆ  ಈ ಸಂಖ್ಯೆ ಕ್ರಮವಾಗಿ 38.48 ರಿಂದ 31.71ಕ್ಕೆ ಇಳಿದಿದೆ. ಮುಂದುವರಿದು ತರಗತಿ 6 ರಿಂದ 8 ರವರೆಗೆ ಈ ಸಂಖ್ಯೆ  18.73 ರಿಂದ 16.43ಕ್ಕೆ ಮತ್ತು ತರಗತಿ 1 ರಿಂದ 10ರ ವರೆಗೆ 63.31ರಿಂದ 54.54 ಕ್ಕೆ ಇಳಿದಿದೆ. 

ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.  ಇದೇ ಸಂದರ್ಭದಲ್ಲಿ  ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ  ಮಕ್ಕಳ ದಾಖಲಾತಿ  ಹೆಚ್ಚಿದ್ದು  2006-07ರಲ್ಲಿ ಒಂದನೇ  ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆ  ಶೇಕಡ 3.15ರಿಂದ 2010-11 ರಲ್ಲಿ ಶೇಕಡ 3.99 ಕ್ಕೆ ಏರಿದೆ. 1 ರಿಂದ 5ನೇ ತರಗತಿವರೆಗೆ ಈ ಸಂಖ್ಯೆ ಕ್ರಮವಾಗಿ 13.35 ದಿಂದ 17.23ಕ್ಕೆ ಮತ್ತು 1 ರಿಂದ 10ನೇ ತರಗತಿವರೆಗೆ ಕ್ರಮವಾಗಿ 23.08 ರಿಂದ 25.77 ಕ್ಕೆ ಏರಿದೆ.

ಮೇಲಿನ ಸರ್ಕಾರಿ ಅಂಕಿ ಅಂಶಗಳ ಅನ್ವಯ ಸರ್ಕಾರಿ ಶಾಲೆಗಳಲ್ಲಿ  ವರ್ಷದಿಂದ ವರ್ಷಕ್ಕೆ ದಾಖಲಾತಿ  ಇಳಿಯುತ್ತಿದ್ದು ಖಾಸಗಿ ಶಾಲೆಗಳಲ್ಲಿ ದಾಖಲಾತಿ ಏರುತ್ತಿದೆ. ಇದು ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಸ್ಪಷ್ಟ ಸೂಚನೆಯಾಗಿದೆ.  ಇದೇ ವಾತವರಣ ಮುಂದುವರಿದರೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲದೆ ಸರ್ಕಾರಿ ಶಾಲೆಗಳನ್ನುಮ್ಯೂಸಿಯಂಗಳನ್ನಾಗಿ ಮಾರ್ಪಡಿಸುವ  ಕಾಲ ಬಹಳ ದೂರವಿಲ್ಲ.  ಇದಕ್ಕೆ ಮುಖ್ಯ ಕಾರಣ ಸರ್ಕಾರದ ಖಾಸಗೀಕರಣದ ನೀತಿ. 

ವರ್ಷದಿಂದ ವರ್ಷಕ್ಕೆ ಖಾಸಗಿ ಶಾಲೆಗಳ ಸಂಖ್ಯೆ  ನಾಯಿಕೊಡೆಗಳಂತೆ  ಹೆಚ್ಚುತ್ತಿದ್ದು ಮುಗ್ದ ಜನರಲ್ಲಿ  ಸುಳ್ಳು ಭ್ರಮೆಗಳನ್ನು ಹುಟ್ಟುಹಾಕುವ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿದೆ. ಈ ಬಗ್ಗೆ ಸರ್ಕಾರ ಅತ್ಯಂತ ಕಠಿಣ ನಿಲುವನ್ನು ತಾಳಬೇಕಾಗಿದೆ.
(ಲೇಖಕರು ಫೆಲೋ, ಮಗು ಮತ್ತು ಕಾನೂನು ಕೇಂದ್ರ, ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT