ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜ್, ರಾಜ್‌ನಾರಾಯಣ್‌ ನೆನಪಿಸಿದ ಗೆಲುವು

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭ್ರಷ್ಟಾಚಾರ ವಿರೋಧಿ ಅಲೆಯ ಮೇಲೆ ಸವಾರಿ ನಡೆಸಿದ ಅರವಿಂದ ಕೇಜ್ರಿ­ವಾಲ್‌ ಅವರು ನವದೆಹಲಿ ಕ್ಷೇತ್ರದಲ್ಲಿ ಗಳಿಸಿರುವ ಜಯ ಮುಂಬೈನಲ್ಲಿ 1967 ಚುನಾ­ವಣೆ­ಯಲ್ಲಿ ಜಾರ್ಜ್‌ ಫರ್ನಾಂಡಿಸ್ ಅವರು ಎಸ್‌.ಕೆ.-­ಪಾಟೀಲ್‌ ವಿರುದ್ಧ ಮಾಡಿದ ಚಮ­ತ್ಕಾರ ನೆನಪಿಸುವಂತೆ ಮಾಡಿದೆ.

ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಎಸ್‌.ಕೆ.ಪಾಟೀಲ್‌ ಅವರಿಗೆ ಫರ್ನಾಂಡಿಸ್‌ ಸೋಲಿನ ರುಚಿ ತೋರಿಸಿದ್ದರು.

1977ರಲ್ಲಿ ನಡೆದ ಲೋಕಸಭಾ ಚುನಾ­ವಣೆ­ಯಲ್ಲಿ ರಾಯಬರೇಲಿ­ ಲೋಕ­­ಸಭಾ ಕ್ಷೇತ್ರ­ದಲ್ಲಿ ಇಂದಿರಾ ಗಾಂಧಿ ಅವರು ರಾಜ್‌ ನಾರಾಯಣ್‌ ಅವರ ವಿರುದ್ಧ ಸೋತ ಘಟನೆಯನ್ನೂ ಇದು ನೆನಪಿಸಿದೆ.

ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರ ದಿಂದ ಪ್ರತಿನಿಧಿ, ‘ಮುಂಬೈನ ಅನಭಿಷಿಕ್ತ ದೊರೆ’ ಯಾಗಿದ್ದ ಪಾಟೀಲ್‌ ಅವರನ್ನು ಸೋಲಿಸಿದ ಫರ್ನಾಂಡಿಸ್‌ ಆಗ ‘ದೈತ್ಯ ಸಂಹಾರಕ’ ಎನಿಸಿಕೊಂ­ಡಿದ್ದರು.

ಮೂರು ಸಲ ಮುಂಬೈ ಮಹಾನಗರ ಪಾಲಿಕೆ ಮೇಯರ್‌ ಆಗಿದ್ದ ಪಾಟೀಲ್‌ ಅವರು ಜವಾಹರ್‌­ಲಾಲ್‌ ನೆಹರೂ, ಲಾಲ್‌ ಬಹಾದ್ದೂರ ಶಾಸ್ತ್ರಿ ಮತ್ತು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಕೇಂದ್ರ ಸಚಿವರಾಗಿದ್ದರು. ಮೂರು ಸಲ ಸಂಸದರಾಗಿದ್ದರೂ 1967ರ ಚುನಾವ­ಣೆ­ಯಲ್ಲಿ ಫರ್ನಾಂಡಿಸ್‌ ಎದುರು ಸೋಲು ಅನುಭವಿಸಿದರು.

ಮೂರು ಬಾರಿ ದೆಹಲಿ ಮುಖ್ಯ­ಮಂತ್ರಿ­ಯಾಗಿದ್ದ ಶೀಲಾ ದೀಕ್ಷಿತ್‌ ಅವ­ರನ್ನು ಕೇಜ್ರಿವಾಲ್‌ ಸೋಲಿಸುವ ಮೂಲಕ ‘ದೈತ್ಯ ಸಂಹಾರಕ’ ಎನಿಸಿ­ಕೊಂಡಿದ್ದಾರೆ. ದೀಕ್ಷಿತ್‌ ಅವರು ರಾಜ್ಯದ ಅಭಿವೃದ್ಧಿ ಮುಂದಿ­ಟ್ಟುಕೊಂಡು ಪ್ರಚಾರ ನಡೆಸಿ­ದರೆ, ಭಷ್ಟಾಚಾರ ಮತ್ತು ಪಾರದ­ರ್ಶಕತೆ ತಳ­ಹದಿಯ ಮೇಲೆ ಅರವಿಂದ ಕೇಜ್ರಿವಾಲ್‌ ಪ್ರಚಾರ ನಡೆಸಿದರು.

ಶೀಲಾ ದೀಕ್ಷಿತ್‌ (75) ಸ್ವತಂತ್ರ ಭಾರತ­ದಲ್ಲಿ ಅತಿಹೆಚ್ಚು ಅವಧಿ (ಮೂರು ಬಾರಿ)ಗೆ ಮುಖ್ಯ­ಮಂತ್ರಿ ಹುದ್ದೆ ಅಲಂಕ­ರಿಸಿದ ಮಹಿಳೆ ಎನ್ನುವ ಹೆಗ್ಗಳಿಕೆ ಹೊಂದಿ­ದ್ದಾರೆ.

ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ವಾಸ್ತವಿಕ­ವಾಗಿ ಅಸಾಧ್ಯ ಎನ್ನುವು­ದನ್ನು ಸಾಧ್ಯವಾಗಿಸಿತು. ಇದರಿಂದಾಗಿ ರಾಷ್ಟ್ರದ ರಾಜಧಾನಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟು ಕಾಂಗ್ರೆಸ್‌ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳಿತು.

2012ರಲ್ಲಿ ಆಡಳಿತದಲ್ಲಿ ಪಾರದ­ರ್ಶಕತೆ ವಿಷಯ­ಮುಂದಿಟ್ಟುಕೊಂಡು ಹೋರಾಟ ಆರಂ­ಭಿಸಿ ಪಕ್ಷ ರಚನೆ ಮಾಡಿದ ಒಂದು ವರ್ಷದೊಳಗೆ ಕೇಜ್ರಿ­ವಾಲ್‌ ಅದ್ಭುತ­ವನ್ನು ಸಾಧಿಸಿದ್ದಾರೆ.

ಲೋಕಪಾಲ್‌ ಮಸೂದೆಯ ಕುರಿತು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೋರಾಟ ಆರಂಭಿಸಿದ ನಂತರದಲ್ಲಿ ಮಾಜಿ ಆದಾಯ ತೆರಿಗೆ ಅಧಿಕಾರಿ ವಿಶೇಷವಾಗಿ ದೆಹಲಿಯಲ್ಲಿ ಪ್ರಖ್ಯಾತಿಗೆ ಬಂದರು.

ಹಜಾರೆ ಅವರ ನಿಕಟವರ್ತಿಯಾಗಿದ್ದ ಕೇಜ್ರಿವಾಲ್‌ ಅವರು ಹಜಾರೆ ಬಳಗ­ದಿಂದ ಬೇರ್ಪಟ್ಟು ತಮ್ಮ ‘ಭ್ರಷ್ಟಾಚಾರ ವಿರೋಧಿ ಸಂಸ್ಥೆ’ಗೆ ರಾಜಕೀಯ ಅಸ್ತಿತ್ವ ನೀಡಿದರು.

ಎಎಪಿ ಸಂಭ್ರಮಾಚರಣೆ
ನವದೆಹಲಿ (ಪಿಟಿಐ):  ಚುನಾವಣೆ­ಯಲ್ಲಿ ಗಮನಾರ್ಹ ಸಾಧನೆ ತೋರಿದ ನಂತರ ಇಲ್ಲಿರುವ ಪಕ್ಷದ ಕಚೇರಿಯ ಹೊರಗೆ ಜಮಾಯಿಸಿದ ಆಮ್‌ ಆದ್ಮಿ ಪಕ್ಷ (ಎಎಪಿ)ದ ಕಾರ್ಯ­ಕರ್ತರು ಪಕ್ಷದ ಚಿಹ್ನೆ ‘ಪೊರಕೆ’ ಮತ್ತು ‘ಇಸ್ಟೀಟ್‌’ ಎಲೆಗ­ಳನ್ನು ಪ್ರದರ್ಶಿ ಸಂತಸ ವ್ಯಕ್ತಪಡಿಸಿದರು.

ಹರ್ಷ ಭರಿತ ಪಕ್ಷದ ಕಾರ್ಯ­ಕರ್ತರು  ವಂದೇ ಮಾತರಂ ಗೀತೆ ಹಾಡಿದರು. ಡ್ರಮ್‌ಗಳನ್ನು ಬಡಿದು ಕುಣಿದರು. ಕಾರ್ಯ­ಕರ್ತರು ಗುಂಪುಗುಂಪಾಗಿ ಸೇರು­­­ತ್ತಿ­ರು­ವುದನ್ನು ನೋಡಿದ ಪೊಲೀಸರು ಕಚೇರಿ ಆವರಣಕ್ಕೆ ಭದ್ರತಾ ವ್ಯವಸ್ಥೆ ಕಲ್ಪಿಸಿದರು.
ಪಕ್ಷ 20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿ­ಸಿದ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯ­ಕರ್ತರು ಬಣ್ಣ ಎರಚಿ ಸಂಭ್ರಮಾ­ಚರಣೆಯಲ್ಲಿ ತೊಡಗಿದ್ದರು.

‘ಪಕ್ಷದ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿದ್ದ ಶೀಲಾ ದೀಕ್ಷಿತ್‌ ಮತ್ತು ಇತರರಿಗೆ ಈ ಫಲಿತಾಂಶ ತಕ್ಕ ಉತ್ತರ ನೀಡಿದೆ’ ಎಂದು ಪಕ್ಷದ ಹಿರಿಯ ನಾಯಕ ಕುಮಾರ ವಿಶ್ವಾಸ ಸುದ್ದಿಗಾ­ರರಿಗೆ ತಿಳಿಸಿದರು.

ಪಕ್ಷದ ಸಾಧನೆಯ ಬಗ್ಗೆ ವಿಶ್ವಾಸವಿತ್ತು
ನವದೆಹಲಿ (ಐಎಎನ್‌ಎಸ್‌):
ದೆಹಲಿ­ಯಲ್ಲಿ ಪ್ರಕಾಶಿಸುತ್ತಿರುವ ಆಮ್‌ ಆದ್ಮಿ ಪಕ್ಷದ ಅದ್ಭುತ ಯಶಸ್ಸನ್ನು ‘ಜನತೆಯ ಗೆಲುವು’ ಎಂದು ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌ ಬಣ್ಣಿಸಿದ್ದಾರೆ.

ಇಲ್ಲಿಯ ಕನ್ನಾಟ್‌ ಪ್ರದೇಶದ ಹನುಮಾನ್‌ ರಸ್ತೆಯಲ್ಲಿರುವ ಪಕ್ಷದ ಕಚೇರಿ ಎದುರು ಕಾರ್ಯಕರ್ತರು ಸಂಭ್ರಮಾಚರಣೆ­ಯಲ್ಲಿ ತೊಡಗಿದ ವೇಳೆ ಸ್ವಲ್ಪ ಹೊತ್ತು ಕಾಣಿಸಿಕೊಂಡ ಅವರು ‘ಯೇ ಲೊಗೊಕಿ ಜೀತ್‌ ಹೈ (ಇದು ಜನತೆಯ ಗೆಲುವು)’. ಎಂದರು.

‘ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ಮಾಡಲಿದೆ ಎನ್ನುವ ದೃಢ ವಿಶ್ವಾಸ ನನಗಿತ್ತು’ ಎಂದು ಕ್ರೇಜಿವಾಲ್‌ ಹೇಳಿದರು.
‘ಭಾರತ್‌ ಮಾತಾ ಕಿ ಜೈ’, ‘ಆಮ್‌ ಆದ್ಮಿ ಹೈ ಹಮ್‌ ಆಮ್‌ ಆದ್ಮಿ ಹೈ (ನಾವು ಶ್ರೀ ಸಾಮಾನ್ಯರು)’ ಎಂದು ಭ್ರಮಾಚರಣೆಯಲ್ಲಿ ತೊಡಗಿದ್ದ ಪಕ್ಷದ ನಾಯಕ ಕುಮಾರ ವಿಶ್ವಾಸ ಧ್ವನಿ ವರ್ಧಕ ಹಿಡಿದು ಕೂಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT