ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡೆಕಲ್ ಗುಡ್ಡಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ

Last Updated 4 ಜುಲೈ 2012, 9:25 IST
ಅಕ್ಷರ ಗಾತ್ರ

ಪುತ್ತೂರು: ಇಲ್ಲಿನ ನೆಲ್ಲಿಕಟ್ಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅನ್ನು ಈ ವರ್ಷ ಪುತ್ತೂರು ಹೊರ ವಲಯದಲ್ಲಿರುವ ಜಿಡೆಕಲ್ ಗುಡ್ಡಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಅಲ್ಲಿ ಮೂಲ ಸೌಕರ್ಯಗಳಿಲ್ಲದ ಕಾರಣ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿ ಅನುಭವಿಸುವಂತಾಗಿದೆ.

 ಜಿಡೆಕಲ್‌ಗೆ ಪೇಟೆಯಿಂದ 4 ಕಿ.ಮೀ. ದೂರ ಇದೆ. ಎತ್ತರವಾದ ಗುಡ್ಡದ ಮೇಲಿರುವ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಇಲ್ಲ. ಪುತ್ತೂರು ಬಸ್ ನಿಲ್ದಾಣದ ಬಳಿಯಿಂದ ಅಥವಾ ಪುತ್ತೂರು- ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿ ಎಪಿಎಂಸಿ ದ್ವಾರದ ಬಳಿಯಿಂದ ಸರ್ವಿಸ್ ರಿಕ್ಷಾಗಳ ಮೂಲಕ ನಾಲ್ಕೈದು ಮಂದಿ ವಿದ್ಯಾರ್ಥಿಗಳು ಒಟ್ಟಾಗಿ ರಿಕ್ಷಾ ಬಾಡಿಗೆಗೆ ಪಡೆದು ಜಿಡೆಕಲ್‌ಗೆ ಹೋಗಬೇಕು. ಬಳಿಕ ಅಲ್ಲಿಂದ ಒಂದು ಕಿಲೋ ಮೀಟರ್‌ನಷ್ಟು ಮಣ್ಣಿನ ರಸ್ತೆಯಲ್ಲಿ ನಡೆದು ಹೋಗಬೇಕಾಗಿದೆ.

 ಪುತ್ತೂರಿನಿಂದ ವಿದ್ಯಾರ್ಥಿಗಳು ಸರ್ವಿಸ್ ರಿಕ್ಷಾದಲ್ಲಿ ಜಿಡೆಕಲ್‌ಗೆ ಹೋಗಬೇಕಾದರೆ ರೂ.10 ನೀಡಬೇಕಾಗಿದ್ದು, ದಿನವೊಂದಕ್ಕೆ ರೂ. 20 ರಿಕ್ಷಾಕ್ಕಾಗಿಯೇ ಮೀಸಲಿಡಬೇಕಾಗಿದೆ. ರಿಕ್ಷಾದಿಂದ ಇಳಿದು ಕಾಲೇಜಿಗೆ  ಹೋಗಲು ಮತ್ತೆ ಕಾಲು ಗಂಟೆ ಪಾದಯಾತ್ರೆ ನಡೆಸಬೇಕು. ಸರ್ವಿಸ್ ರಿಕ್ಷಾಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ.  ಇದರಿಂದಾಗಿ ಸಮಯಕ್ಕೆ ಸರಿಯಾಗಿ ಕಾಲೇಜು ತಲುಪಲು ಕೂಡ ಸಾಧ್ಯವಾಗುತ್ತಿಲ್ಲ .ಬಾಡಿಗೆಗೆ ಗೊತ್ತುಪಡಿಸಿ ರಿಕ್ಷಾದಲ್ಲಿ ತೆರಳಿದರೆ ರೂ. 80 ವ್ಯಯಿಸಬೇಕು.

ಕೊಠಡಿ, ಉಪನ್ಯಾಸಕರ ಕೊರತೆ: ಕಾಲೇಜಿನಲ್ಲಿ ಒಟ್ಟು 618 ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇಲ್ಲಿ ಕೇವಲ 4 ಕೊಠಡಿಗಳಿದ್ದು, ಪ್ರತಿ ಕೊಠಡಿಗಳನ್ನು ಎರಡೆರಡಾಗಿ ವಿಂಗಡಿಸಲಾಗಿದೆ. ಪ್ರಾಂಶುಪಾಲರು, ಗೌರವ ಉಪನ್ಯಾಸಕರು ಸೇರಿ ಒಟ್ಟು 11 ಮಂದಿ ಉಪನ್ಯಾಸಕರು ಮಾತ್ರ ಇಲ್ಲಿದ್ದು, 9 ತರಗತಿಯ 618 ಮಂದಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾಗಿದೆ.

 ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ ವ್ಯವಸ್ಥೆ ಇದ್ದರೂ ವಿದ್ಯಾರ್ಥಿಗಳಿಗೆ ಆ ವ್ಯವಸ್ಥೆ ಇಲ್ಲ. ಆಟದ ಮೈದಾನದಲ್ಲಿ ಮಣ್ಣು ರಾಶಿ ಬಿದ್ದಿದೆ. ಒಟ್ಟಿನಲ್ಲಿ ನೂತನ ಕಾಲೇಜು ಸಮಸ್ಯೆಗಳ ಆಗರವಾಗಿದೆ.
ಕಾಲೇಜಿನ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ  ಸಂಬಂಧಪಟ್ಟವರು ತಕ್ಷಣ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪುರಸಭಾ ಮಾಜಿ ಅಧ್ಯಕ್ಷ ಲೋಕೇಶ್ ಹೆಗ್ಡೆ ಎಚ್ಚರಿಸಿದ್ದಾರೆ.

ಮನೆಯಲ್ಲೇ ಉಳಿದ ಅಂಗವಿಕಲ ವಿದ್ಯಾರ್ಥಿನಿ
ನೆಲ್ಲಿಕಟ್ಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಕಾಂ  ವಿದ್ಯಾಭ್ಯಾಸ ಪೂರೈಸಿ ಇದೀಗ ದ್ವಿತೀಯ ಬಿಕಾಂನಲ್ಲಿ ಓದುತ್ತಿರುವ ಪ್ರತಿಭಾನ್ವಿತ ಅಂಗವಿಕಲ ವಿದ್ಯಾರ್ಥಿನಿ ಪುತ್ತೂರಿನ ನೇಹಾ ರೈ  ಅವರು ಕಾಲೇಜು ಸ್ಥಳಾಂತರದಿಂದಾಗಿ ಅಲ್ಲಿಗೆ ಹೋಗಲು ಸಾಧ್ಯವಾಗದೆ ಮನೆಯಲ್ಲೇ ಉಳಿಯುವ ಪರಿಸ್ಥಿತಿ ಬಂದಿದೆ. ಇದರಿಂದ ಆಕೆಯ ಭವಿಷ್ಯ ಮಂಕಾಗುವಂತಾಗಿದೆ.

ನೇಹಾ ರೈ ಅವರನ್ನು  ಸ್ಥಳಾಂತರಗೊಂಡ ಜಿಡೆಕಲ್ ಕಾಲೇಜಿಗೆ ಸೇರಿಸಲಾಗಿತ್ತು. ಆಕೆಯ ತಾಯಿ ಪುತ್ತೂರಿನ ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆಯೂ ಆದ ನಯನಾ ರೈ ಅವರು ಪ್ರತೀದಿನ  ಆಕೆಯನ್ನು ಕಾಲೇಜಿಗೆ ಬಾಡಿಗೆ ವಾಹನದಲ್ಲಿ ಬೆಳಿಗ್ಗೆ ಕರೆದುಕೊಂಡು  ಹೋಗಿ ಸಂಜೆ ಕರೆ ತರುತ್ತಿದ್ದರು. ಅದಕ್ಕಾಗಿಯೇ ಪ್ರತೀದಿನ ರೂ.200 ವ್ಯಯಿಸುತ್ತಿದ್ದರು.

ಆದರೆ  ಮಳೆ ಆರಂಭವಾದ ಬಳಿಕವಂತೂ ಕಾಲೇಜು ಬಳಿಗೆ ಬಾಡಿಗೆ ವಾಹನಗಳು ತೆರಳುತ್ತಿಲ್ಲ. ಇದರಿಂದಾಗಿ ನೇಹಾ ಅವರನ್ನು ಕಾಲೇಜಿಗೆ ಕರೆದುಕೊಂಡು ಹೋಗುವಂತಿಲ್ಲ. ಇದೀಗ ನೇಹಾ ರೈ ಮನೆಯಲ್ಲಿಯೇ ಉಳಿಯುವಂಥ ಅನಿವಾರ್ಯತೆ ಉಂಟಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿನಿ ನೇಹಾರೈ ಶಿಕ್ಷಣಕ್ಕೆ ಅಡಚಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT