ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಅಧ್ಯಕ್ಷರ ಚುನಾವಣೆಗೆ ತಡೆಯಾಜ್ಞೆ

Last Updated 25 ಜನವರಿ 2011, 12:20 IST
ಅಕ್ಷರ ಗಾತ್ರ

ವಿಜಾಪುರ: ವಿಜಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆಗೆ ಹೈಕೋರ್ಟ್‌ನ ಗುಲ್ಬರ್ಗ ಸಂಚಾರಿ ಪೀಠ ಫೆ.1ರ ವರೆಗೆ ತಡೆಯಾಜ್ಞೆ ನೀಡಿದೆ. ಅಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಯಲ್ಲಿ ನಿಯಮ ಪಾಲನೆ ಮಾಡಿಲ್ಲ’ ಎಂದು ಕಾಂಗ್ರೆಸ್ ಸದಸ್ಯೆಯೊಬ್ಬರು ತಕರಾರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ, ವಿಜಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಹುದ್ದೆಯ ಚುನಾವಣೆಗೆ ಮಾತ್ರ ತಡೆಯಾಜ್ಞೆ ನೀಡಿದೆ.

ವಿಜಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಫೆ.2ರಂದು ದಿನಾಂಕ ನಿಗದಿಪಡಿಸಿ ಚುನಾವಣಾಧಿಕಾರಿಯಾಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಿದ್ದರು.38 ಸದಸ್ಯ ಬಲದ ವಿಜಾಪುರ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ 19, ಬಿಜೆಪಿ 16, ಜೆಡಿಎಸ್ 2 ಹಾಗೂ ಪಕ್ಷೇತರ ಒಬ್ಬ ಸದಸ್ಯರು ಆಯ್ಕೆಯಾಗಿದ್ದಾರೆ. ಯಾವುದೇ ಪಕ್ಷವು ಬಹುಮತಕ್ಕೆ ಬೇಕಿದ್ದ 20 ಸ್ಥಾನ ಪಡೆದಿಲ್ಲ. ಅತಂತ್ರ ಫಲಿತಾಂಶ ಬಂದಿದೆ. ಕಾಂಗ್ರೆಸ್- ಜೆಡಿಎಸ್ ಒಟ್ಟಾಗಿ ಆಡಳಿತ ನಡೆಸಲು ಮುಂದಾಗಿದ್ದವು.

ಸರ್ಕಾರ ವಿಜಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಅಭ್ಯರ್ಥಿಗೆ ಮೀಸಲಿರಿಸಿ ಆದೇಶ ಹೊರಡಿಸಿತ್ತು. ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿಯಲ್ಲಿ ನಾಲ್ವರು ಆಯ್ಕೆಯಾಗಿದ್ದು, ಅವರೆಲ್ಲರೂ ಬಿಜೆಪಿ ಪಕ್ಷದವರೇ ಆಗಿದ್ದಾರೆ. ಮೀಸಲಾತಿಯ ಮಹಿಮೆಯಿಂದಾಗಿ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಸ್ಥಾನದಿಂದ ವಂಚಿತವಾಗಿತ್ತು.ಇದನ್ನು ಪ್ರಶ್ನಿಸಿ ವಿಜಾಪುರ ತಾಲ್ಲೂಕು ಹೊನವಾಡ ಕ್ಷೇತ್ರದ ಸದಸ್ಯೆ ರತ್ನಾಬಾಯಿ ಬಸಪ್ಪ ಚಿನಗುಂಡಿ ಹೈಕೋರ್ಟ್ ಮೊರೆ ಹೋಗಿದ್ದರು.

‘ಜಿಲ್ಲೆಯ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡಬೇಕು. ವಿಜಾಪುರ ಜಿಲ್ಲೆಯ ಪರಿಶಿಷ್ಟ ಜಾತಿಯ ಜನಸಂಖ್ಯೆಯ ಪ್ರಮಾಣ ಕೇವಲ ಶೇ.18ರಷ್ಟಿದೆ. ಆದರೆ, ಚಾಮರಾಜಪೇಟೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣ ಶೇ.28ರಷ್ಟಿದೆ. ಇನ್ನುಳಿದ 11 ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆಯ ಪ್ರಮಾಣ ಶೇ.19ಕ್ಕಿಂತ ಹೆಚ್ಚಾಗಿದೆ. ನಿಯಮದಂತೆ ಆ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲಿಡಬೇಕಿತ್ತು. ಅದರ ಬದಲು ಪದೇ ಪದೇ ವಿಜಾಪುರ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಸ್ಥಾನವನ್ನು ಈ ವರ್ಗಕ್ಕೆ ಮೀಸಲಿಡುವ ಮೂಲಕ ಸರ್ಕಾರ ನಿಯಮ ಉಲ್ಲಂಘಿಸಿದೆ ಎಂಬುದು ತಮ್ಮ ಪ್ರಮುಖ ವಾದ’ ಎಂದು ಅರ್ಜಿದಾರರು ಹೇಳಿದ್ದಾರೆ.

‘ಮೀಸಲಾತಿಯಲ್ಲಿ ಎಲ್ಲ ಜಾತಿ- ಜನಾಂಗದವರಿಗೂ ಪ್ರಾತಿನಿಧ್ಯ ದೊರೆಯಬೇಕು. ಆದರೆ, ವಿಜಾಪುರ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಸ್ಥಾನವನ್ನು ಈಗಾಗಲೆ ಎರಡು ಬಾರಿ ಪರಿಶಿಷ್ಟ ಜಾತಿಗೆ ಮೀಸಲಿರಿಸಲಾಗಿತ್ತು. ಈಗ ಅದೇ ವರ್ಗದ ಮಹಿಳೆಗೆ ಮೀಸಲಿರಿಸಲಾಗಿದೆ. ಇದು ಸರಿಯಲ್ಲ. ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸುವ ಏಕೈಕ ಉದ್ದೇಶದಿಂದ ಆಡಳಿತಾರೂಢ ಬಿಜೆಪಿ ತನಗೆ ಅನುಕೂಲವಾಗುವಂತೆ ಮೀಸಲಾತಿ ನಿಗದಿ ಮಾಡಿದೆ ಎಂಬುದು ನಮ್ಮ ವಾದ’ ಎಂದು ಅರ್ಜಿದಾರರ ಪರ ವಕೀಲ ಲಗಳಿ ಹೇಳಿದರು.

‘ಈ ವಾದ ಆಲಿಸಿದ ನ್ಯಾಯಾಲಯ ಫೆ.1ರ ವರೆಗೆ ವಿಜಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆಗೆ ತಡೆಯಾಜ್ಞೆ ನೀಡಿದೆ. ರಾಜ್ಯ ಸರ್ಕಾರಕ್ಕೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದ್ದು, ಫೆ.1ರಂದು ಮತ್ತೆ ವಿಚಾರಣೆ ನಡೆಯಲಿದೆ’ ಎಂದರು.ಆದರೆ, ಈ ತಡೆಯಾಜ್ಞೆ ವಿಜಾಪುರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಚುನಾವಣೆಗೆ ಅನ್ವಯವಾಗುವುದಿಲ್ಲ ಎಂದೂ ತಿಳಿಸಿದರು.

‘ಜಿಲ್ಲಾ ಪಂಚಾಯಿತಿಯ ಹಾಲಿ ಅಧ್ಯಕ್ಷರ ಅವಧಿ ಜ.29ರ ವರೆಗೆ ಇದೆ. ನಿಗದಿತ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯದಿದ್ದರೆ, ಜಿಲ್ಲಾ ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕ ಅನಿವಾರ್ಯವಾಗಲಿದೆ’ ಎಂದು ಜಿ.ಪಂ. ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT