ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಸಾಮಾನ್ಯ ಸಭೆ: ಅವ್ಯವಹಾರ ತನಿಖೆಗೆ ಸಮಿತಿ

Last Updated 22 ಅಕ್ಟೋಬರ್ 2011, 11:15 IST
ಅಕ್ಷರ ಗಾತ್ರ

ಕಾರವಾರ: ಪಡಿತರ ಚೀಟಿ, ಸೀಮೆಎಣ್ಣೆ, ಶೌಚಾಲಯ, ವಸತಿ ನಿಲಯ ದುರಸ್ತಿ, ಬೀದಿದೀಪದ ವಿಷಯಗಳೇ ಶುಕ್ರವಾರ ಇಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯ ಬಹುಪಾಲು ಸಮಯವನ್ನು ನುಂಗಿಹಾಕಿದವು.
ಜಿಲ್ಲೆಯನ್ನು ಕಾಡುತ್ತಿರುವ ಅರಣ್ಯ ಅತಿಕ್ರಮಣ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿಗಳ ದುಃಸ್ಥಿತಿ ಸೇರಿದಂತೆ ಇತರೆ ಗಂಭೀರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆಗಳೇ ನಡೆಯಲಿಲ್ಲ.

ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಎನ್ನುವಂತೆ ಮಹಿಳಾ ಸದಸ್ಯೆಯರು ಪ್ರಶ್ನೆ ಕೇಳುವ ಧೈರ್ಯ ತೋರಿದರು. ಕೆಲವರು ನೇರವಾಗಿ ಪ್ರಶ್ನೆ ಕೇಳಿದರೆ ಮತ್ತೆ ಕೆಲವರು ಚೀಟಿಯಲ್ಲಿ ಬರೆದುಕೊಂಡು ಬಂದ ಪ್ರಶ್ನೆಯನ್ನು ಸಭೆಯಲ್ಲಿ ಓದಿದರು. 

ಕೇಳಿದ ಪ್ರಶ್ನೆಗಳೆಲ್ಲವೂ ಪಡಿತರ ಚೀಟಿ, ಸೀಮೆಎಣ್ಣೆ, ಶೌಚಾಲಯ, ವಸತಿ ನಿಲಯ ದುರಸ್ತಿ, ಬೀದಿದೀಪಕ್ಕೆ ಸಂಬಂಧಿಸಿದ್ದಾಗಿತ್ತೇ ಹೊರತು ಯಾವುದೇ ಗಂಭೀರ ವಿಷಯಗಳಿರಲಿಲ್ಲ. ಗ್ರಾಮ, ತಾಲ್ಲೂಕು ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಮಟ್ಟದಲ್ಲಿ ಬಗೆಹರಿಯುವ ಸಮಸ್ಯೆಗಳನ್ನೂ ಸದಸ್ಯರು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು ವಿಶೇಷ.

ತನಿಖೆಗೆ ಸಮಿತಿ: ಯಲ್ಲಾಪುರ ಭಾಗದ ಸದಸ್ಯ ರಾಘವೇಂದ್ರ ಭಟ್ಟ ಮಾತನಾಡಿ, ಯಲ್ಲಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸಾಮಾನು ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿದರು.

ಈ ಹಣದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯವರು ಸಾಮಗ್ರಿ ಖರೀದಿ ಮಾಡಿದ್ದು, ರೂ. 1200 ಬೆಲೆಯ ಕುಕ್ಕರ್‌ಗೆ ರೂ. 2,600 ದರ ಹಾಕಲಾಗಿದೆ. ಟೆಬಲ್‌ವೊಂದಕ್ಕೆ ರೂ. 4000 ದರ ಹಾಕಲಾಗಿದೆ. ರೂ. 1200 ಬೆಲೆಯ ವಾಟರ್ ಫಿಲ್ಟರ್‌ಗೆ ರೂ. 2000 ದರ ಹಾಕಲಾಗಿದೆ ಎಂದು ಭಟ್ಟ ಸಭೆಯ ಗಮನಕ್ಕೆ ತಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಸಿ.ಎಸ್. ಹೊಳಿಹೊಸೂರ ಮಾತನಾಡಿ, `ಸಾಮಗ್ರಿ ಖರೀದಿಸುವ ಅಧಿಕಾರ ತಾಲ್ಲೂಕು ಪಂಚಾಯಿತಿಗೆ ಇದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಪರಿಶೀಲನೆ ನಡೆಸುತ್ತೇನೆ~ ಎಂದರು.

ಪ್ರಕರಣದ ಗಂಭೀರತೆಯನ್ನು ಅರಿತ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಉದಯ ನಾಯ್ಕ, ಅವ್ಯವಹಾರದ ಕುರಿತು ತನಿಖೆ ನಡೆಸಲು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದರು.

ಸಿಆರ್‌ ಬಗ್ಗೆ ಮಾಹಿತಿ ನೀಡಿ: ಕಡಲತೀರದಲ್ಲಿ ಮನೆ ನಿರ್ಮಾಣ ಮಾಡಲು ಸಿಆರ್‌ ಕಾನೂನು ಅಡ್ಡಿಯಾಗಿದೆ. ಈ ಕುರಿತು ಕಡಲತೀರದ ನಿವಾಸಿಗಳಿಗೆ ಮತ್ತು ಜನಪ್ರತಿನಿಧಿಗಳು ಸಿಆರ್‌ ಕಾನೂನು ಕುರಿತು ಮಾಹಿತಿ ನೀಡಬೇಕು ಎಂದು ಸದಸ್ಯೆ ಪುಷ್ಪಾ ನಾಯ್ಕ ಹೇಳಿದರು.
 
ಇದಕ್ಕೆ ದನಿಗೂಡಿಸಿದ ಸದಸ್ಯ ಪ್ರದೀಪ ನಾಯಕ, ಬೇರೆ ರಾಜ್ಯಗಳಲ್ಲಿ ಕಡಲತೀರದ ನಿವಾಸಿಗಳಿಗೆ ಈ ಕಾನೂನಿನಲ್ಲಿ ರಿಯಾಯಿತಿ ನೀಡಲಾಗಿದೆ. ನಮ್ಮ ರಾಜ್ಯಕ್ಕೂ ರಿಯಾಯಿತಿ ಕೊಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ನಿರ್ಣಯ ಕೈಗೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಉದಯ ನಾಯ್ಕ ಮಾತನಾಡಿ, ಸಿಆರ್‌ ಕಾನೂನಿಯಲ್ಲಿ ರಿಯಾಯಿತಿ ಕೋರಿ ಜಿ.ಪಂ. ಅಂಗೀಕರಿಸಿದ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಮಾ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಶಿ, ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣ ಗೌಡ,  ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಜಯಶ್ರೀ ಮೊಗೇರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT