ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಸಾಂಸ್ಕೃತಿಕ ಹಬ್ಬಕ್ಕೆ ಇಂದು ಚಾಲನೆ

Last Updated 11 ಫೆಬ್ರುವರಿ 2012, 10:15 IST
ಅಕ್ಷರ ಗಾತ್ರ

ದಾವಣಗೆರೆ: ಮೂರು ದಿನಗಳವರೆಗೆ ನಗರದ ಜನರ ಮೈಮನ ತಣಿಸುವ ಜಿಲ್ಲಾ ಸಾಂಸ್ಕೃತಿಕ ಉತ್ಸವಕ್ಕೆ ಫೆ. 11ರಂದು ಚಾಲನೆ ಸಿಗಲಿದ್ದು, ಅದಕ್ಕಾಗಿ ನಗರದ ಸರ್ಕಾರಿ ಪ್ರೌಢಶಾಲಾ ಮೈದಾನ ನವವಧುವಿನಂತೆ ಸಿಂಗರಿಸಿಕೊಂಡಿದೆ.

ಜಿಲ್ಲಾ ಸಾಂಸ್ಕೃತಿಕ ಉತ್ಸವದ ಅಂಗವಾಗಿ 200 ಮೀಟರ್ ಉದ್ದಗಲದ ಮೈದಾನದಲ್ಲಿ ಈಗಾಗಲೇ ತರಹೇವಾರಿ ಮಳಿಗೆಗಳು ತಲೆಎತ್ತಿವೆ. 26 ಆಸನಗಳನ್ನು ಒಳಗೊಂಡಿರುವ ಸಭಾಂಗಣದ ಮುಖ್ಯವೇದಿಕೆ `ತುಂಗಭದ್ರಾ ಮಹಾ ವೇದಿಕೆ~ ಎಂದು ನಾಮಕರಣಗೊಂಡಿದೆ. ಅದರ ಜತೆಯಲ್ಲಿ, ನಾಡೋಜ ಮುದೇನೂರು ಸಂಗಣ್ಣ ವೇದಿಕೆ ಸಜ್ಜುಗೊಂಡಿದೆ.  ಶಬ್ದ ಮತ್ತು ಬೆಳಕಿನ ವ್ಯವಸ್ಥೆಯನ್ನು ಬೆಂಗಳೂರಿನ ಶಾಂತಲಾ ಸೌಂಡ್ ಸಿಸ್ಟಂಗೆ ವಹಿಸಲಾಗಿದ್ದು, ಸಭಾಂಗಣ ಝೇಂಕರಿಸಲಿದೆ. ಇಡೀ ಸಭಾಂಗಣದಲ್ಲಿ  300ಗಿ125 ಅಡಿ ಸುತ್ತಳತೆಯ ಪೆಂಡಾಲ್ ಮೈದಾನದ ತುಂಬಾ ಹೊದಿಸಲಾಗಿದೆ. ಬರೋಬ್ಬರಿ 1ಲಕ್ಷ ಜನರು ಸೇರುವ ನಿರೀಕ್ಷೆ ಇದೆ.

ವಿಜೃಂಭಣೆಯ ಸಾಂಸ್ಕೃತಿಕ ಉತ್ಸವ ಆಚರಣೆಗೆ ವೇದಿಕೆಯ ವೈಜ್ಞಾನಿಕ ಜೋಡಣೆ ಪೂರ್ಣಗೊಳಿಸಲಾಗಿದೆ.
ಸಾವಿರ ಕಲಾವಿದರು: ಜಿಲ್ಲಾ ಉತ್ಸವದಲ್ಲಿ ಜನಪದ, ಸಂಗೀತ, ನಾಟಕ ಸೇರಿದಂತೆ ಒಟ್ಟು 1,000ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಮೊದಲ ದಿನದಂದು ಮಂಗಳವಾದ್ಯ, ನಂದಿಕೋಲು ಕುಣಿತ, ಧೋಲ್ ಚೋಲಂ, ಬಿಹು ನೃತ್ಯ, ಭಾಂಗ್ಡಾ ನೃತ್ಯ ಸೇರಿದಂತೆ ರಾತ್ರಿ ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ವೃಂದದವರಿಂದ ಚಲನಚಿತ್ರ ಸಂಗೀತ ಕಾರ್ಯಕ್ರಮದ ರಸದೌತಣ ಏರ್ಪಡಿಸಲಾಗಿದೆ. ಫೆ. 12ರಂದು ಜಿಲ್ಲೆಯ 200 ಕಲಾವಿದರಿಂದ ಸಮೂಹ ಗಾಯನ, ಗೊಂಬೆ ವೈಭವ, ಪಂಜಾಬಿ ನೃತ್ಯ, ಮಣಿಪುರ ನೃತ್ಯ, ಮತ್ತು ಬೆಂಗಳೂರಿನ ವೈಜಯಂತಿ ಕಾಶಿ ತಂಡದಿಂದ ನೃತ್ಯ ರೂಪಕ ನಡೆಯಲಿದೆ.

ಪ್ರಮುಖ ಆಕರ್ಷಣೆಗಳು: ಆಹ್ವಾನಿತ ಕಲಾವಿದರಿಂದ  ನಗರದ ಲಲಿತಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಕಲಾ ಪ್ರದರ್ಶನ,  ಗುರುಭವನ ಮತ್ತು ಕೋಗುಂಡಿ ಹಾಲಪ್ಪ ಪ್ರಾಥಮಿಕ ಶಾಲೆಯಲ್ಲಿ ರಂಗೋಲಿ ಹಬ್ಬ, ಜಿಲ್ಲಾ ಕ್ರೀಡಾಂಗಣದಲ್ಲಿ ರಸ್ತೆಓಟ, ಫೆ 12ರಂದು ಲಯನ್ಸ್ ಕ್ಲಬ್‌ನಲ್ಲಿ ಯೋಗಾಸನ ಸ್ಪರ್ಧೆಗಳು, ಮೋತಿ ವೀರಪ್ಪ ಕಾಲೇಜಿನಲ್ಲಿ ಶ್ವಾನಗಳ ಪ್ರದರ್ಶನ, ಬೀರಲಿಂಗೇಶ್ವರ ಮೈದಾನದಲ್ಲಿ ಮಲ್ಲಕಂಬ ಪ್ರದರ್ಶನ, ಜಿಲ್ಲಾ ಕ್ರೀಡಾಂಗಣದಲ್ಲಿ ಮಕ್ಕಳ ಹಬ್ಬ ನಡೆಯಲಿವೆ. ವಿಚಾರಗೋಷ್ಠಿಯಲ್ಲಿ ಜಿಲ್ಲೆಯ ಉಡುಗೆ ತೊಡುಗೆ-ಆಹಾರ, ರಂಗಭೂಮಿ, ಲಲಿತಕಲೆ, ಐತಿಹಾಸಿಕ, ಧಾರ್ಮಿಕ , ಪರಿಸರ, ವೈದ್ಯಕೀಯ ಪ್ರವಾಸೋದ್ಯಮಗಳ ಬಗ್ಗೆ ಸ್ಥಳೀಯ ಹಿರಿಯ ಲೇಖಕ, ಚಿಂತಕರಾದ ಡಾ.ಜಿ.ಎಂ. ಈಶ್ವರಪ್ಪ, ಕೆ.ಜಿ. ಯಲ್ಲಪ್ಪ, ಎಚ್.ಬಿ. ಮಜುನಾಥ್, ಮಲ್ಲಿಕಾರ್ಜುನ ಕಡಕೋಳ, ಅರುಣ್‌ಕುಮಾರ್ ಬಿರಾದಾರ್, ಎ.ಜಿ. ಸುಮತಿ, ಡಾ.ದಾದಾಪೀರ್ ನವಿಲೇಹಾಳ್, ಪ್ರೊ.ಬಿ. ಬಕ್ಕಪ್ಪ, ಸುಮತೀಂದ್ರನಾಡಿಗ್, ಡಾ.ಬಾಲು. ಮಾಗಾನಹಳ್ಳಿ ಮಂಜುನಾಥ್, ಜಗನ್ನಾಥ್ ನಾಡೀಗೇರ್ ಅವರುಗಳಿಂದ ಬಿಸಿಬಿಸಿ ಚರ್ಚೆ ನಡೆಯಲಿದೆ.

ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿನ  ಮುದೇನೂರು ಸಂಗಣ್ಣ ವೇದಿಕೆಯಲ್ಲಿ ನಾಟಕಗಳ ಪ್ರದರ್ಶನ ನಡೆಯಲಿವೆ. 13ರಂದು ಖ್ಯಾತ ಸಂಗೀತ ದಿಗ್ಗಜರಾದ ವೈ.ಕೆ. ಮುದ್ದುಕೃಷ್ಣ, ಮುದ್ದು ಮೋಹನ್, ಶ್ರೀನಿವಾಸ ಉಡುಪ, ರಮೇಶ್ ಚಂದ್ರ, ಮೃತ್ಯುಂಜಯ ದೊಡ್ಡವಾಡ ಇತರರು ಗೀತ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಸುಧೆ ಹರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT