ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿಗೆ ರೈತರ ಮುತ್ತಿಗೆ

Last Updated 24 ಸೆಪ್ಟೆಂಬರ್ 2013, 8:12 IST
ಅಕ್ಷರ ಗಾತ್ರ

ಹರಪನಹಳ್ಳಿ:  ತಾಲ್ಲೂಕಿನಲ್ಲಿ ಹಾದು ಹೋಗಿರುವ ಹರಿಹರ– ಕೊಟ್ಟೂರು ರೈಲ್ವೆ ಮಾರ್ಗಕ್ಕೆ ಸ್ವಾಧೀನ ಪಡಿಸಿಕೊಂಡಿರುವ ರೈತರ ಜಮೀನುಗಳಿಗೆ ಪರಿಹಾರ ಪಾವತಿಸುವಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಸ್ವಸಹಾಯ ಸ್ತ್ರೀಶಕ್ತಿ ಸೇನೆ ಸಂಘಟನೆ ನೇತೃತ್ವದಲ್ಲಿ ನೂರಾರು ರೈತರು ಟಿ. ತುಂಬಿಗೇರಿ– ಇಂಗಳಗೊಂದಿ ಗ್ರಾಮದ ಮಧ್ಯೆದಲ್ಲಿ ಸೋಮವಾರ ಜಿಲ್ಲಾಧಿಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಎಸ್‌.ಟಿ. ಅಂಜನ್‌ ಕುಮಾರ್‌ ಹಾಗೂ ಹರಿಹರ ಶಾಸಕ ಎಚ್‌.ಎಸ್‌. ಶಿವಶಂಕರ್‌ ನೇತೃತ್ವದ ತಂಡ ಸೋಮವಾರ ರೈಲು ಮಾರ್ಗದ ವೀಕ್ಷಣೆ ಭೇಟಿಯ ಸುಳಿವು ಅರಿತ ತೆಲಿಗಿ, ದುಗ್ಗಾವತಿ, ತುಂಬಿಗೇರಿ, ಶಂಕರನಹಳ್ಳಿ, ಶಿರಗಾನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ರೈತರು ಟಿ. ತುಂಬಿಗೇರಿ– ಇಂಗಳಗೊಂದಿ ಮಧ್ಯದ ರೈಲು ಮಾರ್ಗದ ಮೇಲೆ ಅಡುಗೆ ತಯಾರಿಸಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದರು.

ರೈತರ ಆಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ, ಭೂಪರಿಹಾರಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಮೇಲಧಿಕಾರಿಗೆ ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಲಾಗುವುದು. ಯಾವುದೇ ಕಾರಣಕ್ಕೂ ರೈತರ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ, ರೈತರು ಪ್ರತಿಭಟನೆ ಹಿಂಪಡೆದರು.

ಶಫಿವುಲ್ಲಾ, ಇಮಾಮ್‌ ಸಾಹೇಬ್‌, ರಾಗಿಮಸಲವಾಡ ಭೀಮಪ್ಪ, ತುಂಬಿಗೇರಿ ರಮೇಶ್‌, ಪಾವನಪುರ ಬಸವರಾಜ, ದುಗ್ಗಾವತಿ ಅಂಜಿನಪ್ಪ, ಪ್ರವೀಣ್‌, ನಿಂಗಪ್ಪ, ಪರಶುರಾಮ, ತಿಪ್ಪಣ್ಣ, ಶಂಕರ್‌, ಬಿ. ರಾಜಪ್ಪ, ಎಚ್‌. ನಾಗರಾಜಪ್ಪ, ಇಂಗಳಗೊಂದಿ ಕೆಂಚಪ್ಪ ಇತರರು ಪ್ರತಿಭಟನೆ ನೇತೃತ್ವವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT