ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಇ-ಕಲಿಕೆ ಅನುಷ್ಠಾನ

Last Updated 9 ಸೆಪ್ಟೆಂಬರ್ 2011, 9:40 IST
ಅಕ್ಷರ ಗಾತ್ರ

ಚಾಮರಾಜನಗರ: ಸರ್ವಶಿಕ್ಷಣ ಅಭಿಯಾನದ ಕಂಪ್ಯೂಟರ್ ಶಿಕ್ಷಣ ಸಹಾಯಕ ಯೋಜನೆಯಡಿ ಲ್ಯಾಪ್‌ಟಾಪ್ ಮೂಲಕ ಜಿಲ್ಲೆಯ 32 ಸರ್ಕಾರಿ ಶಾಲೆಗಳಲ್ಲಿ `ಇ-ಕಲಿಕೆ~ ಅನುಷ್ಠಾನಕ್ಕೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.

ನಗರ ಹಾಗೂ ಪಟ್ಟಣ ಪ್ರದೇಶದ ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸರಿಸಮಾನವಾಗಿ ಸರ್ಕಾರಿ ಶಾಲಾ ಮಕ್ಕಳನ್ನು ಸಜ್ಜುಗೊಳಿಸುವುದು ಈ ಯೋಜನೆಯ ಮುಖ್ಯಉದ್ದೇಶ. ಈ ಹಿಂದೆ ಪ್ರತಿ ಶಾಲೆಗಳಿಗೆ ಐದು ಕಂಪ್ಯೂಟರ್(ಡೆಸ್ಕ್‌ಟಾಪ್) ನೀಡಲಾಗುತಿತ್ತು. ಪ್ರಸ್ತುತ ಅದರ ಬದಲಾಗಿ ಪ್ರತಿಶಾಲೆಗೆ ತಲಾ 25 ಲ್ಯಾಪ್‌ಟಾಪ್ ನೀಡಿ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಉನ್ನತ ಶಿಕ್ಷಣಕ್ಕೆ ಸಜ್ಜುಗೊಳಿ ಸಲು ನಿರ್ಧರಿಸಲಾಗಿದೆ.

5, 6 ಮತ್ತು 7ನೇ ತರಗತಿ ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ. ಲ್ಯಾಪ್‌ಟಾಪ್ ಮೂಲಕ ಬೋಧನೆ ಮಾಡುವ ಈ ವಿಧಾನಕ್ಕೆ `ನೆಟ್‌ಬುಕ್~ ಎಂದು ಹೆಸರಿಡಲಾಗಿದೆ. ಲ್ಯಾಪ್‌ಟಾಪ್‌ನಲ್ಲಿ ನಿರ್ದಿಷ್ಟ ವಿಷಯದ ತಂತ್ರಾಂಶ  ಅಳವಡಿಸಲಾಗುತ್ತದೆ. ವಿಶೇಷವಾಗಿ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಪಟ್ಟ ತಂತ್ರಾಂಶ ಅಳವಡಿಕೆಗೆ ಒತ್ತು ನೀಡಲಾಗಿದೆ. ಶಿಕ್ಷಕರು ಕಲಿಸುವ ವಿಷಯ ಲ್ಯಾಪ್‌ಟಾಪ್‌ನಲ್ಲಿ ಮೂಡುತ್ತದೆ. ಪರಿಣತ ಶಿಕ್ಷಕರ ಮೂಲಕ ಮಕ್ಕಳಿಗೆ ಬೋಧನೆ ನಡೆಯಲಿದೆ.

ಪ್ರಸ್ತುತ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಕಂಪ್ಯೂಟರ್ ಇದ್ದರೂ ವಿದ್ಯುತ್ ವ್ಯತ್ಯಯ, ಬೋಧಕರ ಕೊರತೆಯಿಂದ ಮಕ್ಕಳಿಗೆ ಸಮರ್ಪಕವಾಗಿ ಕಂಪ್ಯೂಟರ್ ಜ್ಞಾನ ಸಿಗುತ್ತಿಲ್ಲ. ಆದರೆ, ಲ್ಯಾಪ್‌ಟಾಪ್ ಮೂಲಕ `ಇ-ಕಲಿಕೆ~ ನಡೆಯುವ ಪರಿಣಾಮ ವಿದ್ಯುತ್ ಪೂರೈಕೆ ಇಲ್ಲದಿದ್ದರೂ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ.

32 ಶಾಲೆಗೆ ಸೌಲಭ್ಯ: ಸರ್ವಶಿಕ್ಷಣ ಅಭಿಯಾನದಡಿ 2010-11ನೇ ಸಾಲಿನಲ್ಲಿ ಜಿಲ್ಲೆಯ 16 ಶಾಲೆಗಳಿಗೆ ತಲಾ 5 ಕಂಪ್ಯೂಟರ್(ಡೆಸ್ಕ್‌ಟಾಪ್) ನೀಡಲು ನಿರ್ಧರಿಸಲಾಗಿತ್ತು. ಆದರೆ, 3 ಶಾಲೆಗೆ ಮಾತ್ರವೇ ಕಂಪ್ಯೂಟರ್ ನೀಡಲಾಗಿದೆ. ಉಳಿದ ಶಾಲೆಗಳಿಗೆ ಕಂಪ್ಯೂಟರ್ ದಕ್ಕಿಲ್ಲ. ಪ್ರಸ್ತುತ ಉಳಿದ 13 ಶಾಲೆಗಳಲ್ಲೂ ಲ್ಯಾಪ್‌ಟಾಪ್ ಮೂಲಕ ಇ-ಕಲಿಕೆಗೆ ಒತ್ತು ನೀಡಲು ನಿರ್ಧರಿಸಲಾಗಿದೆ.

2011-12ನೇ ಸಾಲಿನಡಿ ಒಟ್ಟು 19 ಶಾಲೆಗಳಲ್ಲಿ `ಇ-ಕಲಿಕೆ~ ಜಾರಿಗೊಳ್ಳುತ್ತಿದೆ. ಚಾಮರಾಜನಗರ- 8, ಗುಂಡ್ಲುಪೇಟೆ- 3, ಕೊಳ್ಳೇಗಾಲ- 2, ಯಳಂದೂರು- 2 ಹಾಗೂ ಹನೂರು ಶೈಕ್ಷಣಿಕ ವಲಯದ 4 ಸರ್ಕಾರಿ ಶಾಲೆಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತದೆ. ಒಟ್ಟಾರೆ ಜಿಲ್ಲೆಯ 32 ಶಾಲೆಯ ಮಕ್ಕಳಿಗೆ ಈ ಸೌಲಭ್ಯ ಲಭಿಸಲಿದೆ.

ಆಧುನಿಕ ಯಗದಲ್ಲಿ ಕಂಪ್ಯೂಟರ್ ಕಲಿಕೆ ಅನಿವಾರ್ಯವಾಗಿದೆ. ಅದರಲ್ಲೂ ಲ್ಯಾಪ್‌ಟಾಪ್‌ನತ್ತ ಯುವಜನರು ಮಾರುಹೋಗುತ್ತಿದ್ದಾರೆ. ಆದರೆ, ಗ್ರಾಮೀಣ ಮಕ್ಕಳಿಗೆ ಲ್ಯಾಪ್‌ಟಾಪ್‌ನಂಥ ಸೌಲಭ್ಯ ಸಿಗುವುದು ಅಪರೂಪ.
ಜತೆಗೆ, ಗ್ರಾಮೀಣ ಚಿಣ್ಣರು ಉನ್ನತ ಶಿಕ್ಷಣದ ಮೆಟ್ಟಿಲು ತುಳಿಯುವ ವೇಳೆ ಇ-ಕಲಿಕೆ ಗೊತ್ತಿದ್ದರೆ ವ್ಯವಹರಿಸಲು ಸುಲಭವಾಗಲಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮಾಧ್ಯಮಿಕ ಹಂತದಲ್ಲಿಯೇ ಲ್ಯಾಪ್‌ಟಾಪ್ ಮೂಲಕ ಶಿಕ್ಷಣ ಕಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರಸಕ್ತ ಸಾಲಿನಡಿ ರಾಜ್ಯದ 332 ಸರ್ಕಾರಿ ಶಾಲೆಗಳಲ್ಲಿ ಇ-ಕಲಿಕೆ ಆರಂಭಗೊಳ್ಳುತ್ತಿದ್ದು, ಜಿಲ್ಲೆಯ 32 ಶಾಲೆಗಳು ಇದರಲ್ಲಿ ಸೇರಿರುವುದು ವಿಶೇಷ.

`ಸರ್ವಶಿಕ್ಷಣ ಅಭಿಯಾನದ ಮಾರ್ಗಸೂಚಿ ಅನ್ವಯ ಇ-ಕಲಿಕೆಗೆ ಜಿಲ್ಲೆಯಲ್ಲೂ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಇ-ಕಲಿಕೆಯಿಂದ ಮಕ್ಕಳಲ್ಲಿ ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವು ಹೆಚ್ಚಲಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ~ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬೆಳ್ಳಶೆಟ್ಟಿ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT