ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬದ ಸಡಗರ

Last Updated 3 ಸೆಪ್ಟೆಂಬರ್ 2011, 5:10 IST
ಅಕ್ಷರ ಗಾತ್ರ

ವಿಜಾಪುರ: ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗುರುವಾರ ಬೆಳಿಗ್ಗೆ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಿರುವ ಭಕ್ತರು ಗಣಪನಿಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿದರು.

ಜಿಲ್ಲೆಯಲ್ಲಿ 1,105 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ನಗರದಲ್ಲಿ 246 ಸಾರ್ವಜನಿಕ ಸ್ಥಳದಲ್ಲಿ ವಿಘ್ನೇಶ್ವರನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲೆಡೆ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ಹಲವು ಬಡಾವಣೆಗಳಲ್ಲಿ ಕಳೆದ ಗುರುವಾರ ಭವ್ಯ ಮೆರವಣಿಯೊಂದಿಗೆ ಗಣೇಶ ವಿಗ್ರಹಗಳನ್ನು ತಂದು ಆಯಾ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಯಿತು. ಕೆಲವು ಬಡಾವಣೆಗಳಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರುಗುತ್ತಿವೆ. ಇನ್ನೂ ಕೆಲವು ಬಡಾವಣೆಗಳಲ್ಲಿ ಹಿಂದು ಮುಸ್ಲಿಮರು ಒಗ್ಗೂಡಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಭಾವೈಕ್ಯ ಸಂದೇಶ ಸಾರಿದ್ದಾರೆ.

ಒಟ್ಟಾರೆಯಾಗಿ ಜಿಲ್ಲೆಯಾದ್ಯಂತರ ಗೌರಿ-ಗಣೇಶ ಚತುರ್ಥಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.

ಮುದ್ದೇಬಿಹಾಳ ವರದಿ
 ತಾಲ್ಲೂಕಿನಾದ್ಯಂತ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಹಬ್ಬದ ಅಂಗವಾಗಿ ಮನೆ ಸ್ವಚ್ಛತೆ, ಗೌರಿ ಗಣೇಶನ ಮೂರ್ತಿ ಇಡುವ ಸ್ಥಳದ ಸ್ವಚ್ಛತೆ, ಅಲಂಕಾರ, ಗಣಪನ ಮುಂದೆ ಇಡಬೇಕಾದ ಹಣ್ಣು, ಕೃತಕ ಹೂಗಳ ಅಲಂಕಾರ, ವಿದ್ಯುತ್ ದೀಪಗಳ ಸರ ಖರೀದಿಸಿ ಅದನ್ನು ಮಂಟಪದ ಸುತ್ತಲೂ ಹಾಕುವ ಭರಾಟೆ ಎಲ್ಲ ಮನೆಗಳಲ್ಲಿ ಕಾಣುತ್ತಿತ್ತು.

ಗುರುವಾರ ಬೆಳಿಗ್ಗೆ ಗೌರಿ ಗಣೇಶನನ್ನು ಖರೀದಿಸಿ ಮನೆಗೊಯ್ಯುವ ಸಡಗರ ಸಂಭ್ರಮ ಎಲ್ಲೆಡೆ ಕಾಣುತ್ತಿತ್ತು. ಗಣಪನನ್ನು ಚೌಕಾಶಿ ಮಾಡಿ ಖರೀದಿಸಿ, ಗಣಪನ ಮೇಲೆ ಬಣ್ಣ ಬಣ್ಣದ ಕುಲಾವಿ ತೊಡಿಸಿ, ಎಡಗೈಯಲ್ಲಿ ಹೊತ್ತುಕೊಂಡು ಗಣಪತಿ ಗಣಪತಿ ಮೋರಯಾ ಮಂಗಲ ಮೂರ್ತಿ ಮೋರಯಾ, ಗಣಪತಿ ಬಪ್ಪಾ, ಮೋರಯಾ ಎಂದು ಘೋಷಣೆ ಕೂಗುತ್ತ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಗಣಪತಿ ಮುಂದೆ ಇಡಲು ಬೇಕಾದ ಬಾಳೆ ಕಂಬ, ಕರಕಿ, ಮೆಕ್ಕೆ ಜೋಳದ ತೆನೆ, ಹೂವಿನ ಗೊಂಚಲು, ಹೂ ಹಾರ, ಮೊದಲಾದ ಸಾಮಾನುಗಳ ಖರೀದಿ ಜೋರಾಗಿತ್ತು.

ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಟಂಟಂಗಳಲ್ಲಿ ಭವ್ಯ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಮೆರವಣಿಗೆಯಲ್ಲಿ ಒಯ್ಯುವ, ಮುಂದೆ ಡ್ರಮ್ ಬಾರಿಸುತ್ತ, ತುತ್ತೂರಿ ಊದುತ್ತ, ಲೇಜಿಮ್ ಹಾಕುತ್ತ ಒಯ್ಯತ್ತಿದ್ದ ವಿದ್ಯಾರ್ಥಿಗಳ ಸಾಲೂ ಆಕರ್ಷಣೆಯಾಗಿತ್ತು. ಹಳ್ಳಿ ಹಳ್ಳಿಗಳಲ್ಲಿ ಇರುವ ಯುವಕ ಮಂಡಳಗಳು ತಮ್ಮೂರಲ್ಲಿ ಮಂಟಪ ನಿರ್ಮಿಸಿ, ಮೊದಲೇ ಕೊಟ್ಟ ಆರ್ಡರ್ ಪ್ರಕಾರ ತಮ್ಮೂರಿಗೆ ಗಣಪತಿಯನ್ನು ಒಯ್ಯುವ ಭರಾಟೆ ಜೋರಾಗಿತ್ತು.

ಸಿಂದಗಿ ವರದಿ
ಪಟ್ಟಣದಲ್ಲಿ ಗಣೇಶೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ.
ಗಜಾನನ ಮಹಾ ಮಂಡಳದಡಿ ಶಾಂತೇಶ್ವರ ಚೌಕ, ವಿವೇಕಾನಂದ ವೃತ್ತ, ನೀಲಗಂಗಾ ಚೌಕ, ಮಲಿಂಗೇಶ್ವರ ಚೌಕ, ವಿದ್ಯಾನಗರ, ಕಲ್ಯಾಣನಗರ, ಗಾಂಧಿ ನಗರ, ಅಂಬೇಡ್ಕರ್‌ನಗರ, ಜಗಜೀವನರಾಮ್ ವೃತ್ತ, ಮದೀನಾ ನಗರ, ಬಮ್ಮಲಿಂಗೇಶ್ವರ ಚೌಕ, ಓಂ ಶಾಂತಿ ನಗರ, ಕಾಳಿಕಾನಗರ, ಶ್ರೀಗಿರಿ ಬಡಾವಣೆ, ವಿದ್ಯುತ್ ನಗರವನ್ನೊಳಗೊಂಡು 21 ವಿವಿಧ ಬಡಾವಣೆಗಳಲ್ಲಿ ಗುರುವಾರ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದೆ.

ಶಾಂತೇಶ್ವರ ಚೌಕದಲ್ಲಿ ಕಲಾವಿದ ಗುರು ಬಿರಾದಾರ ಅವರಿಂದ ನಿರ್ಮಾಣಗೊಂಡ ರಥವೇರಿದ ಅರ್ಜುನ ವೇಷಧಾರಿ ಗಣಪ ಕುರುಕ್ಷೇತ್ರದ ಯುದ್ಧದ ಪ್ರಸಂಗ ಹಾಗೂ ಭ್ರಷ್ಟಚಾರ ನಿರ್ಮೂಲನೆಗಾಗಿ ಪಣತೊಟ್ಟ ಅಣ್ಣಾ ಹಜಾರೆ ರೂಪಕ ಪಟ್ಟಣದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಸಕ ರಮೇಶ ಭೂಸನೂರ ಅಧ್ಯಕ್ಷತೆಯಲ್ಲಿ ರಚನೆಗೊಂಡಿರುವ ಗಜಾನನ ಮಹಾಮಂಡಳದಲ್ಲಿ ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ, ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ಮುನ್ನಾ ಭೈರಾಮಡಗಿ, ಎಂ.ಎ.ಖತೀಬ, ಶಫೀ ಬಿಜಾಪೂರ ಮತ್ತಿತರರು ಇದ್ದಾರೆ.

ಗಣೇಶನ ವಿಸರ್ಜನೆ ಇದೇ 7ರಂದು ಸಾಮೂಹಿಕವಾಗಿ ನಡೆಯಲಿದೆ. ವಿವೇಕಾನಂದ ವೃತ್ತದಲ್ಲಿ ಇದೇ 3ರಂದು ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಅತ್ಯುತ್ತಮ ಗಣಪತಿಗೆ ಪ್ರೋತ್ಸಾಹದಾಯಕ ಬಹುಮಾನ ನೀಡಲಾಗುವುದು ಎಂದು ಮಹಾಮಂಡಳ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT