ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯೊಂದಿಗೆ ಎಂಪಿಪಿ ನಂಟು...

Last Updated 10 ಫೆಬ್ರುವರಿ 2011, 6:55 IST
ಅಕ್ಷರ ಗಾತ್ರ

ಶಿವಮೊಗ್ಗ: ರಂಗಕರ್ಮಿಗಳ ಕಾಶಿ ಶಿವಮೊಗ್ಗ ಜಿಲ್ಲೆ ಜತೆ ಬಹುಮುಖಿ ಎಂ.ಪಿ. ಪ್ರಕಾಶ್ ಅವರ ವಿಶೇಷ ನಂಟಿತ್ತು. ಸಮಾಜವಾದಿಯೂ ಆಗಿದ್ದ ಪ್ರಕಾಶ್ ಅವರಿಗೆ ಸಮಾಜವಾದಿಗಳ ಮೂಲನೆಲೆಯಾದ ಮಲೆನಾಡು ಮತ್ತು ಇಲ್ಲಿನ ಜನರ ಬಗ್ಗೆ ವಿಶೇಷ ಆಸಕ್ತಿ-ಅಕ್ಕರೆ ಇತ್ತು.ಜಿಲ್ಲೆಯ ರಾಜಕಾರಣಿಗಳಾದ ಎಸ್. ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸಲಿಗೆ-ಸ್ನೇಹವಿದ್ದರೂ ಅವರ ಒಡನಾಟ ಮಲೆನಾಡಿನೊಂದಿಗೆ ಗಾಢವಾಗಿ ಬೆಸೆದಿದ್ದು ರಂಗಭೂಮಿ, ಸಿನಿಮಾದಿಂದಾಗಿ. ಹೆಗ್ಗೋಡಿನ ನೀನಾಸಂ, ಪ್ರಸನ್ನ ಅವರ ‘ಚರಕ’ಕ್ಕೆ ಆಗಾಗ್ಗೆ ಬಂದು ಹೋಗುವ ಪರಿಪಾಠವಿಟ್ಟುಕೊಂಡಿದ್ದರು.

ವಿಶೇಷ ಎಂದರೆ ಪ್ರಕಾಶ್ ತಾವು ಗ್ರಾಮೀಣಾಭಿವೃದ್ಧಿ ಸಚಿವರಾದ ಸಂದರ್ಭದಲ್ಲಿ ರಂಗಭೂಮಿಯಲ್ಲಿ ಬಣ್ಣ ಹಚ್ಚಿದ್ದು ಶಿವಮೊಗ್ಗದಲ್ಲೇ. ಅದು 1999ರ ಶಿವರಾತ್ರಿ ಸಂದರ್ಭ. ಅವರ ಸ್ನೇಹಿತರು ‘ರಾಜಸೂಯ ಯಾಗ’ ಪೌರಾಣಿಕ ನಾಟಕದ ಪ್ರದರ್ಶನಕ್ಕೆ ಮುಖ್ಯ ಅತಿಥಿಯಾಗಿ ಸಚಿವ ಪ್ರಕಾಶ್ ಅವರನ್ನು ಕರೆದು, ಒಂದು ಸಣ್ಣ ಪಾತ್ರವೂ ಇದೆ, ಮಾಡ್ತೀರಾ ಸಾರ್ ಎಂದು ಒತ್ತಾಯಿಸಿದ್ದರಂತೆ. ಅದಕ್ಕೆ ಅವರು ‘ಆಯ್ತು’ ಎಂದಿದ್ದರು.

ಅದು ಪಾಂಡುರಾಜನ ಪಾತ್ರ. ಅದರಂತೆ ಸ್ನೇಹಿತರು, ಸಂಭಾಷಣೆಗಳನ್ನೆಲ್ಲ ಬರೆದು ಅವರಿಗೆ ಕಳುಹಿಸಿದರು. ನಾಟಕ ಪ್ರದರ್ಶನ ಇನ್ನೇನು ಹತ್ತಿರ ಇದ್ದಂತೆ ಮತ್ತೆ ಫೋನ್ ಮಾಡಿದಾಗ, ‘ಶಿವರಾತ್ರಿ ಹಬ್ಬ, ಹೆಂಡ್ತಿ ಮನೆಯಲ್ಲೇ ಇರಲು ಹೇಳಿದ್ದಾಳೆ. ಅಲ್ಲಿಗೆ ಬರಲು ಆಗುವುದಿಲ್ಲ’ ಎಂದು ಬಿಟ್ಟರಂತೆ ಪ್ರಕಾಶ್. ಕೊನೆಗೆ ಸ್ನೇಹಿತರು, ‘ನೀವು ಪಾರ್ಟು ಮಾಡ್ತೀರಾ ಎಂದು ಪ್ರಚಾರ ಮಾಡಿದ್ದೇವೆ. ಬರಲೇಬೇಕು’ ಎಂದು ಒತ್ತಡ ಹಾಕಿದಾಗ, ‘ಆಯ್ತು ಬರುತ್ತೇನೆ’ ಎಂದು ಬಂದು, ಪಾಂಡುರಾಜನಾಗಿ ಉತ್ತಮವಾಗಿ ಅಭಿನಯಿಸಿದರು.

ನಾಟಕ ನಡೆದಿದ್ದು ಶಿವಮೊಗ್ಗ ನಗರದ ಗೋಪಾಳದ ಆದಿರಂಗನಾಥ ದೇವಸ್ಥಾನದ ಆವರಣದಲ್ಲಿ ಎಂದು ನೆನೆಪಿಸಿಕೊಳ್ಳುತ್ತಾರೆ ಪ್ರಕಾಶ್ ಅವರ ಸ್ನೇಹಿತ ಬಿ. ಚಂದ್ರೇಗೌಡರು.‘ಸಚಿವರಾದವರು ನಾಟಕದಲ್ಲಿ ಅಭಿನಯಿಸುವುದುಂಟಾ? ನೀವೆಲ್ಲೋ ಬೋಗಸ್ ಜನ’ ಎಂದು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಅಂದು ಅಪಹಾಸ್ಯ ಮಾಡಿದ್ದರು. ಆದರೆ, ಅಂದು ಅವರು ಇಲ್ಲಿಗೆ ಬಂದು ನಟಿಸಿದ ಮೇಲೆ ಎಲ್ಲರೂ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳಬೇಕಾಯಿತು ಎಂದು ಸ್ಮರಿಸಿಕೊಳ್ಳುತ್ತಾರೆ ಅವರು ಪ್ರಕಾಶ್ ಅವರು ಇಲ್ಲಿ ನಾಟಕ ಆಡಿ ಹೋದ ಪರಿಣಾಮ, ಇಂದು ಗ್ರಾಮೀಣ ಪ್ರದೇಶದ ಪೌರಾಣಿಕ ನಾಟಕಗಳಿಗೆ ್ಙ ಐದು ಸಾವಿರ ಧನಸಹಾಯ ಸಿಗುತ್ತಿದೆ. ಪ್ರಕಾಶ್ ಅವರೇ ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ, ಸರ್ಕಾರ ಧನಸಹಾಯ ನೀಡುವಂತೆ ಘೋಷಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.

ಸಿನಿಮಾ ನಟನೆಯಲ್ಲೂ ಆಸಕ್ತಿ ಇದ್ದ ಪ್ರಕಾಶ್, ಸಾಹಿತಿ ನಾ. ಡಿಸೋಜ ಅವರ ಕಾದಂಬರಿ ಆಧಾರಿತ ‘ಕಾಡಿನಬೆಂಕಿ’ ಸಿನಿಮಾದಲ್ಲಿ ನಟಿಸಿದ್ದರು. ಅದು 1987ರ ಜೂನ್‌ನಲ್ಲಿ. ಈ ಚಿತ್ರದ ಚಿತ್ರೀಕರಣ ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಅವರ ಕಾರ್ಗಲ್‌ನ ಮನೆಯಲ್ಲಿ ನಡೆದಿತ್ತು. ಡಾ.ಯು.ಆರ್. ಅನಂತಮೂರ್ತಿ, ಸುರೇಶ್ ಹೆಬ್ಳೀಕರ್ ಮತ್ತಿತರರು ಈ ಚಿತ್ರದಲ್ಲಿ ನಟಿಸಿದ್ದರು. 

ಕಥಾನಾಯಕಿಯ ತಂದೆ ಪಾತ್ರ ಪ್ರಕಾಶರದ್ದು. ಮಗಳ ನೋವನ್ನು ಕಂಡು ತಾನೂ ನೊಂದು ಕಣ್ಣೀರು ಸುರಿಸುವ ತಂದೆಯಾಗಿ ಪ್ರಕಾಶ್ ಅವರು ಉತ್ತಮವಾಗಿ ಅಭಿನಯಿಸಿದ್ದರು ಎಂದು ಸ್ಮರಿಸಿಕೊಳ್ಳುತ್ತಾರೆ ನಾ. ಡಿಸೋಜ.ಪ್ರಕಾಶ್ ಉಪ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಎಲ್ಲಿಗೋ ಹೋಗಬೇಕಾದವರು ಛಾಯಾಗ್ರಾಹಕ ಅಶೋಕ್ ಕಶ್ಯಪ್ ಅವರ ತೀರ್ಥಹಳ್ಳಿಯ ಕೋಟೆಗದ್ದೆಯ ಮನೆಗೆ ಬಂದು ಅನಾರೋಗ್ಯ ಪೀಡಿತರಾಗಿದ್ದ ಕಶ್ಯಪ್ ಅವರಿಗೆ ಮಧ್ಯರಾತ್ರಿಯವರೆಗೂ ಸಮಾಧಾನ ಹೇಳಿದ್ದರು. ಆದರೆ, ಈಗ ಅದೇ ಕಾಯಿಲೆಯಿಂದ ಅವರೇ ಇಲ್ಲವಾಗಿದ್ದು ಮಾತ್ರ ವಿಪರ್ಯಾಸ.

ಶಿವಮೊಗ್ಗದಲ್ಲಿ ಪ್ರಕಾಶ್ ಅವರ ಸ್ನೇಹಿತರು-ಅಭಿಮಾನಿಗಳು ನಾಲ್ಕು ವರ್ಷದ ಹಿಂದೆ ‘ಎಂ.ಪಿ. ಪ್ರಕಾಶ್ ಆರ್ಟ್ ಫೌಂಡೇಷನ್’  ಸ್ಥಾಪಿಸಿದ್ದಾರೆ.  ಫೌಂಡೇಷನ್ ಪ್ರತಿವರ್ಷ ನಾಟಕ ಮತ್ತಿತರರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT