ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ ಮೊದಲ ವಾರದಲ್ಲಿ ಸರ್ವಪಕ್ಷ ಸಭೆ ಸಾಧ್ಯತೆ

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಪಾಲ ವ್ಯಾಪ್ತಿಗೆ ಪ್ರಧಾನ ಮಂತ್ರಿಗಳನ್ನು ತರುವ ವಿಷಯದಲ್ಲಿ ರಾಜಕೀಯ ಪಕ್ಷಗಳ ಒಲವು ನಿಲುವುಗಳನ್ನು ಸಂಗ್ರಹಿಸುವ ಸಲುವಾಗಿ ಕೇಂದ್ರ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆಯಲು ಉದ್ದೇಶಿಸಿದ್ದು, ಜುಲೈ ತಿಂಗಳ ಮೊದಲ ವಾರದಲ್ಲಿ ಈ ಸಭೆ ನಡೆಯುವ ನಿರೀಕ್ಷೆ ಇದೆ.

ಜೂನ್ 30ರ ವೇಳೆಗೆ ಲೋಕಪಾಲ ಮಸೂದೆ ಕರಡು ಜಂಟಿ ಸಮಿತಿ ಕರಡನ್ನು ಪೂರ್ಣಗೊಳಿಸುವ ಸಾಧ್ಯತೆ ಇದ್ದು, ಆ ನಂತರ ಉದ್ದೇಶಿತ ಮಸೂದೆ ಕುರಿತು ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಜಂಟಿ ಸಮಿತಿ ಸೋಮವಾರ ಹಾಗೂ ಮಂಗಳವಾರ ಪುನಃ ಸಭೆ ಸೇರಲಿದೆ. ಈ ವೇಳೆಗೆ ಹಣಕಾಸು ಸಚಿವ ಹಾಗೂ ಸಮಿತಿಯ ಮುಖ್ಯಸ್ಥ ಪ್ರಣವ್ ಮುಖರ್ಜಿ ಅವರು ಪಕ್ಷದ ಹಿರಿಯ ಮುಖಂಡರು ಹಾಗೂ ಸಚಿವರೊಂದಿಗೆ ಚರ್ಚೆ ನಡೆಸುವ ಸಂಭವ ಇದೆ ಎಂದೂ ಮೂಲಗಳು ತಿಳಿಸಿವೆ.

 ವಾರಾಂತ್ಯದಲ್ಲಿ ನಡೆದ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ವಿಷಯ ಕುರಿತಂತೆ ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಒಲವು ತೋರಿದೆ. ಜಂಟಿ ಸಮಿತಿಯಲ್ಲಿರುವ ಸರ್ಕಾರ ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳ ನಡುವಿನ ಭಿನ್ನಾಭಿಪ್ರಾಯವನ್ನು ತಗ್ಗಿಸುವ ಸಲುವಾಗಿ ಇಂತಹ ಸಭೆಯ ಅಗತ್ಯ ಇದೆ ಎನ್ನಲಾಗಿದೆ.

ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಾಜದ ಪ್ರತಿನಿಧಿಗಳು ಉದ್ದೇಶಿತ ಲೋಕಪಾಲ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿಗಳು ಹಾಗೂ ಉನ್ನತ ನ್ಯಾಯಮೂರ್ತಿಗಳನ್ನೂ ಸೇರಿಸಬೇಕು ಎಂದು ಪಟ್ಟು ಹಿಡಿದಿದೆ.

ಹಿರಿಯ ಸಚಿವರಾದ ಚಿದಂಬರಂ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡರು ಪ್ರಧಾನ ಮಂತ್ರಿಗಳನ್ನು ಲೋಕಪಾಲ ವ್ಯಾಪ್ತಿಯಲ್ಲಿ ತರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಯುಪಿಎ ಸರ್ಕಾರದ ನೇತೃತ್ವ ವಹಿಸಿರುವುದರಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕಾಗಿದೆ.

ಲೋಕಪಾಲ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿಗಳನ್ನು ತರಲು ಕೆಲವು ವಿನಾಯ್ತಿ ನೀಡಬೇಕು. ಅಥವಾ ಪ್ರಧಾನಿ ವಿರುದ್ಧದ ಆರೋಪಗಳನ್ನು ಅವರು ಹುದ್ದೆ ತ್ಯಜಿಸಿದ ನಂತರ ವಿಚಾರಣೆಗೆ ಒಳಪಡಿಸಬೇಕು ಎನ್ನುವ ಸಲಹೆಗಳೂ ಕೇಳಿ ಬಂದಿವೆ.

ಪ್ರಧಾನ ಮಂತ್ರಿಗಳನ್ನು ಲೋಕಪಾಲ ವ್ಯಾಪ್ತಿಯಲ್ಲಿ ತರುವುದರಿಂದ ಮುಂದೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ಮುಖಂಡರು ಖಾಸಗಿಯಾಗಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT