ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎಸ್‌ಎಸ್‌ನಲ್ಲಿ ಹೇಳತೀನಿ ಕೇಳ!

Last Updated 11 ನವೆಂಬರ್ 2011, 10:20 IST
ಅಕ್ಷರ ಗಾತ್ರ

ಮೈಸೂರು: ಕಂಬಾರರೇ ಹಾಗೆ. ಅವರು ನಿಂತಲ್ಲಿ ಕಾವ್ಯ ಹುಟ್ಟುತ್ತದೆ. ಮಾತಿಗೆ ನಿಂತರೂ ಅದೂ ಕವಿತೆಯಾಗುತ್ತದೆ. ಅವು ನಮ್ಮ ಮನದ ಕಿಟಕಿಯಲ್ಲಿ ನಿಂತು ಗುನುಗುತ್ತದೆ. ಅವರ ಮಾತಿನಲ್ಲಿ ದೇಸಿತನ ಅನಾವರಣಗೊಳ್ಳುತ್ತದೆ. ಗುರುವಾರ ಸಂಜೆ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಕೂಡ ಹಾಗೇ ಆಯಿತು.

ಕನ್ನಡಕ್ಕೆ 8ನೇ ಬಾರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಅಪ್ಪಟ ದೇಸಿ ಪ್ರತಿಭೆ ಡಾ.ಚಂದ್ರಶೇಖರ ಕಂಬಾರ ಅವರನ್ನು ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ಅಭಿನಂದಿಸಲಾಯಿತು. ಅಭಿನಂದನೆಗೆ ಡಾ.ಕಂಬಾರರು ಉತ್ತರಿಸಿದ್ದು ಮತ್ತೊಂದು `ಹೇಳತೇನ ಕೇಳ~ದಂತಿತ್ತು.

 ಮೈಸೂರು ಎಂಬ ಕಾರಣಕ್ಕೋ ಏನೂ ಅವರು ಕುವೆಂಪು ಅವರನ್ನು ಸ್ಮರಿಸಿಯೇ ಮಾತು ಆರಂಭಿಸಿದರು. ನವ್ಯ ಪರಂಪರೆ ಬೇರು ಬಿಡುತ್ತಿರುವ ಸಂದರ್ಭದಲ್ಲಿ ತಾವು ಹಳ್ಳಿ ಗಮಾರ ಬೆಂಗಳೂರಿಗೆ ಬಂದದ್ದನ್ನು ನೆನಪಿಸಿಕೊಂಡರು. `ನನ್ನ ಹಳ್ಳಿ ಏನು ಕೊಟ್ಟಿತ್ತೋ ಅದನ್ನು ಬರೆದೆ~ ಎಂದುಕೊಳ್ಳುತ್ತಲೇ ಮೌಖಿಕ ಪರಂಪರೆಯನ್ನು ಬಿಚ್ಚಿಟ್ಟರು.

ಕನ್ನಡ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರವನ್ನು ದೊಡ್ಡ ದನಿಯಲ್ಲಿ ಖಂಡಿಸಿದರು. `ಸರ್ಕಾರ ಮಾಡದಿದ್ದರೆ ಬೇಡ. ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿವರೆಗೆ ಕನ್ನಡದಲ್ಲಿ ಪಾಠ ಮಾಡುವ ಒಂದು ಶಾಲೆಯನ್ನು ನೀವಾದರೂ ಮಾಡಿ ಸ್ವಾಮೀ~ ಎಂದು ಸುತ್ತೂರು ಸ್ವಾಮೀಜಿ ಅವರಲ್ಲಿ ಬಿನ್ನೈಸಿಕೊಂಡರು.

ತಮ್ಮ ಬಾಲ್ಯದಲ್ಲಿ ಬ್ರಿಟಿಷರು ಸೃಷ್ಟಿಸಿದ ಕೀಳರಿಮೆಯನ್ನು ಬಿಚ್ಚಿಟ್ಟರು. ಅದನ್ನು ತಾವು ಮೆಟ್ಟಿ ನಿಂತ ಬಗೆಯನ್ನು ಬಣ್ಣಿಸಿದರು. `ಆಫ್ರಿಕನ್ನರನ್ನು ಯಾವುದೇ ರೀತಿಯಲ್ಲಿ ಸೋಲಿಸಲು ವಿಫಲರಾದ ಬ್ರಿಟಿಷರು ಅಲ್ಲಿ ಶಾಲೆಯನ್ನು ತೆರೆದು ಇಡೀ ಆಫ್ರಿಕಾವನ್ನು ನುಂಗಿ ನೀರು ಕುಡಿದ ಕತೆಯನ್ನು ಹೇಳಿ ಅದೇ ಗತಿಯನ್ನು ಭಾರತಕ್ಕೂ ಉಣ್ಣಿಸಿದರು~ ಎಂದು ಮರುಗಿದರು.

`ನಮ್ಮ ಸಾಹಿತಿಗಳಿಗೆ, ಕವಿಗಳಿಗೆ ಪಾಶ್ಚಿಮಾತ್ಯ ದೇಶದಲ್ಲಿ ಏನಾ ಗುತ್ತದೋ ಅದು ಮುಖ್ಯವಾಯಿತು. ಬಂಗಾಳದ ಕವಿ ಎರಡನೇ ಮಹಾ ಯುದ್ಧವನ್ನು ನೆನಪಿಸಿಕೊಂಡು ಏವಂ ಇಂದ್ರಜಿತ್ ಬರೆದ. ಆದರೆ ಭಾರತ ಪಾಕಿಸ್ತಾನ ವಿಭಜನೆ ಯಾದಾಗ 10 ಲಕ್ಷ ಮಂದಿ ಹತರಾದರು. ಅದರ ಬಗ್ಗೆ ಒಂದು ಕವಿತೆಯನ್ನೂ ಬರೆ ಯಲಿಲ್ಲ~ ಎಂದು ವಿಷಾದಗೊಂಡರು.

`ಯಾರ ಆಡಳಿತದಿಂದ ನಮಗೆ ಎಂದೂ ಮರೆಯಲಾಗದ ಗಾಯಗಳಾಗಿದ್ದವೋ ಅದನ್ನು ನಾವು ಮರೆತುಬಿಟ್ಟೆವು. ಅವರು ಇಂಗ್ಲಿಷ್ ಅಂದರೆ ವಿದ್ಯೆ ಕಣ್ರಿ ಎಂದರೆ ನಾವು ಹೌದು ಹೌದು ಎಂದೆವು. ಅಲ್ಲಿ ಏನೆಲ್ಲಾ ಆಯಿತೋ ಅದೆಲ್ಲವು ಇಲ್ಲಿಯೂ ಆಯಿತು. ಈಗ ಪಶ್ಚಿಮದಲ್ಲಿ ಏನೂ ಹುಟ್ಟುತ್ತಿಲ್ಲ. ಅದಕ್ಕೆ ಇಲ್ಲಿಯೂ ಏನೂ ಹುಟ್ಟುತ್ತಿಲ್ಲ~ ಎಂದು ಅವರು ಕಸಿವಿಸಿಗೊಂಡರು.

`ಲಿಪಿ ಸಂಸ್ಕೃತಿ ಬಂದ ಮೇಲೆ ನಮ್ಮ ಸೃಜನಶೀಲತೆ ಶೇ 95ರಷ್ಟು ಕಡಿಮೆ ಆಯಿತು. ಮೌಖಿಕ ಪರಂಪರೆ ಇರುವ ತನಕ ಸೃಜನಶೀಲತೆ ಇತ್ತು. ಮಕ್ಕಳಿಗೆ ಕತೆ ಹೇಳಿದರೆ ಅವರು ಅದನ್ನು ಪುನರ್ ಉಚ್ಚರಿಸುವಾಗ ತಮ್ಮದೇ ಆದ ಕನಿಷ್ಠ 4 ಸಾಲುಗಳನ್ನಾದರೂ ಸೇರಿಸುತ್ತಾರೆ. ಭಾರತವೇ ಕತೆಗಳ ಜನನಿ. ಪಂಚತಂತ್ರ ಸುಮಾರು 300 ಭಾಷೆಗಳಿಗೆ ಅನುವಾದವಾಗಿದೆ. ನಾವು ಈಗ ಅಕ್ಷರಸ್ಥರಾಗಿದ್ದೇವೆ. ಆದರೆ ವಿದ್ಯಾವಂತರಾಗಿಲ್ಲ. ಅನಕ್ಷರಸ್ಥರಲ್ಲಿ ಬಹಳಷ್ಟು ಮಂದಿ ವಿದ್ಯಾವಂತರಾಗಿದ್ದರು~ ಎಂದು ಹಳೆಯ ನೆನಪುಗಳನ್ನು ಬಿಚ್ಚಿದರು.

ಕನ್ನಡದ ಬಗ್ಗೆ ಅನಾದರ ಉಂಟಾಗಿರುವ ಬಗ್ಗೆ ಬೇಸರಿಸಿಕೊಂಡರು. `ದೇವರೊಡನೆ ಕೂಡ ಕನ್ನಡದಲ್ಲಿ ಮಾತನಾಡಿದ ಪರಂಪರೆ ನಮ್ಮದು. 12ನೇ ಶತಮಾನದಲ್ಲಿ ಇದು ಸಾಧ್ಯವಾಯಿತು. ದೇವರೊಂದಿಗೆ ಕೂಡ ನಾವು 9 ಸಂಬಂಧವನ್ನು ಹೊಂದಿದ್ದೇವೆ, ಆದರೆ ಈಗ ನಮ್ಮ ಮಕ್ಕಳಿಗೆ ಆಂಟಿ ಅಂಕಲ್ ಬಿಟ್ಟರೆ ಬೇರೆ ಸಂಬಂಧಗಳೇ ಗೊತ್ತಿಲ್ಲ. ನಮ್ಮ ಅಮ್ಮಂದಿರಿಗೆ ಮಕ್ಕಳಿಂದ ಅಮ್ಮ ಎನ್ನಿಸಿಕೊಳ್ಳಲೂ ನಾಚಿಕೆ. ಕನ್ನಡದ ಮಗುವನ್ನು ಈ ನೆಲಕ್ಕೆ ತಟ್ಟದ ಹಾಗೆ ಬೆಳೆಸುತ್ತಿದ್ದೇವೆ. ನಮ್ಮ ಮಕ್ಕಳನ್ನು ನಮ್ಮ ನೆಲದಲ್ಲಿಯೇ ಪರಕೀಯರನ್ನಾಗಿಸಿದ್ದೇವೆ. ಆದರೆ ನೆನಪಿಡಿ. 250 ವರ್ಷವಾದರೂ ನಮಗೆ ಇನ್ನೂ ಇಂಗ್ಲಿಷ್‌ನಲ್ಲಿ ಆಲೋಚನೆ ಮಾಡಲು ಸಾಧ್ಯವಾಗುತ್ತಿಲ್ಲ~ ಎಂದು ಎಚ್ಚರಿಸಿದರು.

`ಒಂದರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಇರಬೇಕು. ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಕಲಿಸಬೇಕು. ಕಂಪ್ಯೂಟರ್‌ಗಳಲ್ಲಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡವನ್ನು ಬಳಸದೇ ಇದ್ದರೆ ಕನ್ನಡ ಬೆಳೆಯಲು ಮತ್ತು ಉಳಿಯಲು ಸಾಧ್ಯವಿಲ್ಲ. ವಿಶ್ವ ತಮಿಳು ಸಮ್ಮೇಳನ ಆದಾಗ ಅಲ್ಲಿ ತಮಿಳನ್ನು ಉಳಿಸುವ ಬಗ್ಗೆ 136 ಪ್ರಬಂಧಗಳು ಮಂಡನೆಯಾದವು. ತಮಿಳಿಗಿಂತ ನಾವು ಕನಿಷ್ಠ 15 ವರ್ಷ ಹಿಂದೆ ಇದ್ದೇವೆ~ ಎಂದು ಅವರು ವಿಷಾದಿಸಿದರು.

ಒಟ್ಟಾರೆಯಾಗಿ ತಮ್ಮ ಭಾಷಣದುದ್ದಕ್ಕೂ ಅವರು ತಮ್ಮ ದೇಸಿತನವನ್ನು ಬಿಡಲಿಲ್ಲ. ಹೇಳತೇನ ಕೇಳ ಎಂಬ ಧಾಟಿಯಲ್ಲಿಯೇ ಅವರು ತಮ್ಮ ಭಾಷಣವನ್ನು ಮುಗಿಸಿದರು. ಜೊತೆಗೆ ಒಂದು ಹಾಡನ್ನೂ ಸೇರಿಸಿದರು.  

ಗೋಡೆ ಏರಿದ ಕಂಬಾರ!
ಮೈಸೂರು: `ಕಂಬಾರರ ಊರು ಘೊಡಗೇರಿ. ಆದರೆ ಅವರು ಗೋಡೆಯನ್ನು ಏರಿದ್ದರಿಂದಲೇ ಇಷ್ಟು ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು~ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.

ಡಾ.ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಿದ ಅವರು `ಕಂಬಾರರ ಮೂಲಕ ಕನ್ನಡಕ್ಕೆ 8ನೇ ಬಾರಿಗೆ ಜ್ಞಾನಪೀಠ ಪ್ರಶಸ್ತಿ ಬರುವುದರ ಮುಖಾಂತರ ಕನ್ನಡ ಅಷ್ಟದಿಕ್ಕುಗಳಿಗೂ ವ್ಯಾಪಿಸಿದೆ~ ಎಂದು ಹೇಳಿದರು.

`ಕನ್ನಡ ಅಷ್ಟದಿಕ್ಕುಗಳಿಗೂ ವ್ಯಾಪಿಸಿದೆ ಎನ್ನುವುದು ಜ್ಞಾನಪೀಠ ಪ್ರಶಸ್ತಿ ನೀಡುವ ಮಂದಿಗೆ ಗೊತ್ತು. ಆದರೆ ನಮ್ಮ ಸರ್ಕಾರಕ್ಕೆ ಈ ವಿಷಯ ತಿಳಿದಿಲ್ಲದಿರುವದು ವಿಷಾದಕರ. ಅದಕ್ಕೇ ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿದೆ. ಗುಣಮಟ್ಟವನ್ನು ಸುಧಾರಿಸದೆ ಕನ್ನಡ ಶಾಲೆಗೆ ಮಕ್ಕಳನ್ನು ಸೆಳೆಯಲು ಸಾಧ್ಯವಿಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.

`ಕನ್ನಡ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿ. ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚಿದಿರಿ~ ಎಂದು ಸಲಹೆ ಮಾಡಿದರು.

ಡಾ.ಕಂಬಾರ ಅವರನ್ನು ಕುರಿತು ಸಾಹಿತಿ ಜರಗನಹಳ್ಳಿ ಶಿವಶಂಕರ್ ಅಭಿನಂದನಾ ನುಡಿಗಳನ್ನು ಆಡಿದರು. ರಂಗಕರ್ಮಿ ಎಚ್.ಜನಾರ್ದನ್ ಸ್ವಾಗತ ಗೀತೆ ಹಾಡಿದರು. ಪ್ರೊ.ಮಲೆಯೂರು ಗುರುಸ್ವಾಮಿ ಸ್ವಾಗತಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್.ಬೆಟ್‌ಕೆರೂರ್ ಅಧ್ಯಕ್ಷತೆ ವಹಿಸಿದ್ದರು.

ಮ.ಗು.ಸದಾನಂದಯ್ಯ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT