ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಜಿಲ್ಲಾ ಅಧ್ಯಕ್ಷರಾಗಿ ಪೂಜಾರಿ ನೇಮಕ

Last Updated 5 ಅಕ್ಟೋಬರ್ 2012, 9:10 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಒಡೆದ ಮನೆಯಾಗಿದ್ದ ಜಾತ್ಯತೀತ ಜನತಾದಳದ ಜಿಲ್ಲಾ ಘಟಕಕ್ಕೆ ಪರಿಹಾರ ಸಿಕ್ಕಂತಾಗಿದೆ. ಮೊದಲಿದ್ದ ಜಿಲ್ಲಾ ಅಧ್ಯಕ್ಷ ಬಸವರಾಜ ಮಟಗಾರ ಅವರನ್ನು ಬದಲಾವಣೆ ಮಾಡುವ ಮೂಲಕ ನಾಯಕರು ಭಿನ್ನಾಭಿಪ್ರಾಯ ಹೋಗಲಾಡಿಸಲು ಪ್ರಯತ್ನಿಸಿದ್ದಾರೆ. ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದ ಮಾಜಿ ಸಚಿವ ಎ.ಬಿ. ಪಾಟೀಲ ಗುಂಪು ಮೇಲುಗೈ ಸಾಧಿಸಿದೆ.

ಅಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ, ತಮಗೆ ಬೇಕಾದವರನ್ನು ಪದಾಧಿಕಾರಿಗಳನ್ನಾಗಿ ಮಾಡುತ್ತಿದ್ದಾರೆ. ಪಕ್ಷ ಸಂಘಟನೆಗೆ ಒತ್ತು ಕೊಡುತ್ತಿಲ್ಲ ಎಂದು ಆರೋಪಿಸಿ ಎ.ಬಿ. ಪಾಟೀಲ ಗುಂಪು ಜಿಲ್ಲಾ ಘಟಕದ ಅಧ್ಯಕ್ಷರನ್ನು ಬದಲಾಯಿಸಬೇಕು ಎಂದು ಒತ್ತಡ ಹೇರಿತ್ತು.

ಮಾಜಿ ಸಚಿವ ಪಾಟೀಲರ ಗುಂಪಿನ ಒತ್ತಡಕ್ಕೆ ಮಣಿದಿರುವ ಜೆಡಿಎಸ್ ನಾಯಕರು, ಅಶೋಕ ಪೂಜಾರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪೂಜಾರಿ ಅವರು ಎರಡನೆ ಬಾರಿಗೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಇಲ್ಲಿನ ಗಾಂಧಿ ಭವನದಲ್ಲಿ ಗುರುವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪೂಜಾರಿ ಅವರು ಮಟಗಾರ ಅವರಿಂದ ಅಧಿಕಾರ ಸ್ವೀಕರಿಸಿದರು.

`ಕಾರ್ಯಕರ್ತರು ಗೊಂದಲಗಳಿಗೆ ಆಸ್ಪದ ಕೊಡದೆ ಚುನಾವಣೆಗೆ ಸಿದ್ಧರಾಗಬೇಕು. ಹುದ್ದೆ ದೊಡ್ಡದಲ್ಲ. ಪಕ್ಷಕ್ಕೆ ಕಾರ್ಯಕರ್ತರೇ ಮುಖ್ಯ. ಜಿಲ್ಲಾ ಘಟಕದಲ್ಲಿ ಗೊಂದಲ ಉಂಟಾಗಿತ್ತು. ಚುನಾವಣೆಯ ಸಂದರ್ಭದಲ್ಲಿ ಗೊಂದಲಕ್ಕೆ ಆಸ್ಪದ ನೀಡಬಾರದು ಎಂಬ ಉದ್ದೇಶದಿಂದ ನಾನು ತಾತ್ಪೂರ್ತಿಕವಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಪಕ್ಷದ ಧುರೀಣ ಎ.ಬಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮುನ್ನಡೆಸುತ್ತೇನೆ. ಜಿಲ್ಲಾ ಕೋರ್ ಕಮಿಟಿ ರಚಿಸಿ ಪಕ್ಷವನ್ನು ಬಲಪಡಿಸಲಾಗುವುದು~ ಎಂದು ಪೂಜಾರಿ ಹೇಳಿದರು.

ಪಕ್ಷ ಸಂಘಟನೆಗೆ ರಾಜ್ಯ ಘಟಕ ಅಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಇದೇ 12 ರಿಂದ 14ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ಇತರ ಪಕ್ಷದ ಮುಖಂಡರು ಪಕ್ಷವನ್ನು ಸೇರಲಿದ್ದಾರೆ ಎಂದು ತಿಳಿಸಿದರು.

ಮಾಜಿ ಸಚಿವ ಎ.ಬಿ. ಪಾಟೀಲ ಮಾತನಾಡಿ, ಪ್ರತಿಯೊಂದು ಪಕ್ಷದಲ್ಲಿ ಭಿನ್ನಾಪ್ರಾಯ ಸಹಜವಾಗಿದೆ. ಜೆಡಿಎಸ್ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಬೇಕು ಎಂದರು.

ಇದೇ 11 ರಂದು ರಾಷ್ಟ್ರಪತಿಗಳಿಂದ ಉದ್ಘಾಟನೆಗೊಳ್ಳಲಿರುವ ಸುವರ್ಣಸೌಧಕ್ಕೆ ಸುವರ್ಣ ವಿಧಾನಸೌಧ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ನಿರ್ಗಮಿತ ಜಿಲ್ಲಾ ಘಟಕ ಅಧ್ಯಕ್ಷ ಬಸವರಾಜ ಮಟಗಾರ ಮಾತನಾಡಿ, ಅಶೋಕ ಪೂಜೇರಿ ಅಧಿಕಾರ ಪಡೆದದ್ದು ತಮಗೆ ನೋವು ತಂದಿಲ್ಲ. ಕಳೆದ ಮೂರು ವರ್ಷ ಕಾಲ ಅಧಿಕಾರ ನಡೆಸಿದ ತೃಪ್ತಿ ತಮಗಿದೆ. ಜಿಲ್ಲೆಯ 18 ವಿಧಾನಸಭಾ ಕ್ಷೆತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಯತ್ನಿಸಬೇಕು ಎಂದರು.

ಮಾಜಿ ಶಾಸಕ ಮೋಹನ ಶಹಾ ಮಾತನಾಡಿದರು. ಮಾಜಿ ಶಾಸಕರಾದ ಬಾಳಾಸಾಹೇಬ ವಡ್ಡರ, ಬಿ.ಸಿ. ಸರಿಕರ, ಎನ್.ವಿ. ಪಾಟೀಲ, ಬಿ.ಬಿ. ಹಿರೇರೆಡ್ಡಿ, ಶಿವಪ್ಪ ಹಂಪಿಹೊಳಿ, ವೈ. ಎಚ್. ಪಾಟೀಲ, ವಿ.ಎಫ್. ಪಾಟೀಲ, ಪೈಜುಲ್ಲಾ ಮಾಡಿವಾಲೆ, ಗಂಗಾಧರಸ್ವಾಮಿ, ಪ್ರಮೋದ ಪಾಟೀಲ ಸಭೆಯಲ್ಲಿದ್ದರು.

ವಿಚಾರಸಂಕಿರಣ 7 ರಂದು: ದಲಿತ ಸಾಹಿತ್ಯ ಪತಿಷತ್‌ನ ಜಿಲ್ಲಾ ಘಟಕ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಇದೇ 7 ರಂದು ಮಧ್ಯಾಹ್ನ 3ಕ್ಕೆ ಡಾ. ಬುದ್ದಣ್ಣ ಹಿಂಗಮಿರೆಯವರ ಬದುಕು- ಬರಹ ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡಿದೆ.

ಸಾಹಿತಿ ಜ್ಯೋತಿ ಹೊಸೂರ ಅಧ್ಯಕ್ಷತೆ ವಹಿಸುವರು. ಕ.ವಿ.ವಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಅಶೋಕ ಶೆಟ್ಟರ ಹಿಂಗಮಿರೆಯವರ ಇರುವಿಕೆ ಹಾಗೂ ಡಾ. ಅರ್ಜುನ ಗೊಳಸಂಗಿ ಹಿಂಗಮಿರೆಯವರ ಸಾಹಿತ್ಯದ ಕುರಿತು ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT