ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆನೆರಿಕ್ ಔಷಧಿಗಳೆಂಬ ವಂಚನೆಯ ಮಹಾಜಾಲ

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಜೆನೆರಿಕ್ ಔಷಧಿಗಳ ಬಗೆಗಿನ ಚರ್ಚೆ ಈಗ ಸರ್ಕಾರದ ಮಟ್ಟಕ್ಕೂ ಮುಟ್ಟಿದೆ. ರಾಜ್ಯ ಸರ್ಕಾರ ಈಗ ಜೆನೆರಿಕ್ ಔಷಧಿಗಳನ್ನು ಜನತಾ ಬಜಾರ್‌ಗಳಲ್ಲಿ  ಶೇ 80ರ ರಿಯಾಯಿತಿ ದರದಲ್ಲಿ  ಮಾರಾಟ ಮಾಡುವುದಾಗಿ ಪ್ರಕಟಿಸಿ ತಾನು ಜನತೆಗೆ ಭಾರೀ ಉಪಕಾರ ಮಾಡಿದ ನಾಟಕವಾಡುತ್ತಿದೆ. ಇದೇ ವಿಷಯದಲ್ಲಿ ರಾಜ್ಯ ಸರ್ಕಾರಗಳೂ ಮತ್ತು ಕೇಂದ್ರ ಸರ್ಕಾರ ಕೂಡ ಜನರ ಕಣ್ಣಿಗೆ ಮಣ್ಣೆರೆಚುವ ವಿವಿಧ ಕ್ರಮಗಳನ್ನು ಪ್ರಕಟಿಸಿ ಜನತೆಯ ಉದ್ಧಾರಕರ ಪೋಸು ಕೊಡಬಹುದು.

ಈ ಜೆನೆರಿಕ್ ಔಷಧಿಗಳ ವಿಚಾರದಲ್ಲಷ್ಟೇ ಅಲ್ಲ, ಎಲ್ಲಾ ರೀತಿಯ ಔಷಧಿಗಳ ಬೆಲೆ ಮತ್ತು ಗುಣ ಮಟ್ಟಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ  ಸಾಕಷ್ಟು ವೈದ್ಯರು ಮತ್ತು ಸಂಘಟನೆಗಳು ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರ ಸಂಖ್ಯೆ ಮತ್ತು ಜನಪ್ರಿಯತೆ ಕಡಿಮೆ ಇದ್ದುದರಿಂದ ಬಹುರಾಷ್ಟ್ರೀಯ ಔಷಧ ಕಂಪೆನಿಗಳಿಗೆ ಮಣಿದು ಸರ್ಕಾರ ಅವರನ್ನು ಕಡೆಗಣಿಸಿತ್ತು. ಗಮನಾರ್ಹ ವಿಚಾರವೆಂದರೆ ಔಷಧಗಳ ವಿಚಾರದಲ್ಲಿ  ನಡೆಯುತ್ತಿರುವ ವಂಚನೆಯ ಮಹಾಜಾಲ ಬರೀ ಜೆನೆರಿಕ್ ಡ್ರಗ್ಸ್‌ಗಳಿಗೆ ಮಾತ್ರ ಸಂಬಂಧಿಸಿರದೆ, ಬಹುಮುಖವಾದದ್ದು ಎನ್ನುವುದು.

ಸರಳವಾಗಿ ಯೋಚಿಸಿ. ಯಾವುದೇ ವಸ್ತುವನ್ನು ಶೇ 80ರ ರಿಯಾಯಿತಿಯಲ್ಲಿ  ಮಾರಾಟ ಮಾಡಿದ ಮೇಲೂ ಕಂಪೆನಿಗಳಿಗೆ ಸಾಕಷ್ಟು ಲಾಭವೇ ಆಗುತ್ತಿದೆ ಮತ್ತು ಸರ್ಕಾರ ತನ್ನ ನಿರ್ವಹಣಾ ವೆಚ್ಚವನ್ನು ಸಂಗ್ರಹಿಸುತ್ತಿದೆ ಎಂದರೆ ಆ ವಸ್ತುವಿನ ನಿಜವಾದ ತಯಾರಿಕಾ ವೆಚ್ಚವೆಷ್ಟಿರಬಹುದು? ಮಾರಾಟ ಬೆಲೆಯ ಶೇ 5ರಿಂದ 10ರ ವರೆಗೆ ಇರುತ್ತದೆ ಎಂದುಕೊಳ್ಳಬಹುದು. ವಾಸ್ತವದಲ್ಲಿ  ತಯಾರಿಕಾ ವೆಚ್ಚ ಅದಕ್ಕಿಂತ ಕಡಿಮೆ ಇರುತ್ತದೆ.

ಉದಾಹರಣೆಗೆ ಹತ್ತರಿಂದ ಇಪ್ಪತ್ತು ರೂಪಾಯಿಗೆ ಮಾರಾಟವಾಗುವ ಆಲ್ಬೆಂಡೋಜೋಲ್400 (ಜಂತುಹುಳುವಿನ ಔಷಧ) ಎನ್ನುವ ರಾಸಾಯನಿಕದ ತಯಾರಿಕಾ ವೆಚ್ಚ ಐವತ್ತು ಪೈಸೆಗಿಂತ ಕಡಿಮೆ, ಅಂದರೆ ಮಾರಾಟ ಬೆಲೆಯ ಶೇ 5ಕ್ಕಿಂತ ಕಡಿಮೆ ಎಂದು ಅಂತರ್ಜಾಲದ ಮಾಹಿತಿ ಹೇಳುತ್ತದೆ.  ಅಂದಮೇಲೆ ಇಷ್ಟು ವರ್ಷ ನಮ್ಮ ಜನ ಈ ಜೆನೆರಿಕ್ ಔಷಧಿಗಳಿಗೆ ಶೇ 80ರಷ್ಟು ಹೆಚ್ಚು ಬೆಲೆಯನ್ನು ತೆರುತ್ತಿದ್ದರು ಎಂದಾಯಿತಲ್ಲವೇ? ಈ ಹಣ ಎಲ್ಲಿ  ಹೋಗುತ್ತಿತ್ತು? ವೈದ್ಯರಿಗೆ?, ವಿವಿಧ ಹಂತದ ಮಾರಾಟಗಾರರಿಗೆ?, ಸರ್ಕಾರೀ ಅಧಿಕಾರಿಗಳಿಗೆ? ಅಥವಾ ರಾಜಕಾರಣಿಗಳಿಗೆ? ಜೆನೆರಿಕ್ ಔಷಧಿಗಳನ್ನು ಬರೆದು ಕೊಡಲು ಒಪ್ಪದ ಸಾಕಷ್ಟು ವೈದ್ಯರು ಹೇಳುವಂತೆ ಇವುಗಳ ಗುಣಮಟ್ಟ ಕಳಪೆಯಾಗಿದ್ದರೆ, ಸರ್ಕಾರ ಇವುಗಳನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಬಿಟ್ಟದ್ದು ಹೇಗೆ? ಸರ್ಕಾರ ಇದರ ಸಂಪೂರ್ಣ ವಿವರಗಳನ್ನು ಜನತೆಯ ಮುಂದಿಡಬೇಕಿದೆ.

ಸರ್ಕಾರವೇನೊ ಜೆನೆರಿಕ್ ಔಷಧಗಳನ್ನು ಶೇ 80ರ ರಿಯಾಯಿತಿ ದರದಲ್ಲಿ  ಮಾರಾಟ ಮಾಡುವುದಾಗಿ ಪ್ರಕಟಿಸಿದೆ. ಜನತಾ ಬಜಾರ್‌ಗಳಿಗೆ ಬರಲಾಗದವರು ಅಥವಾ ಅಲ್ಲಿ  ಸಿಗದೇ ಇರುವ ಜೆನೆರಿಕ್ ಡ್ರಗ್ಸ್‌ಗಳಿಗೆ ಗ್ರಾಹಕರು ಇನ್ನೂ ಮುಂದೆಯೂ ಶೇ. 80ರಷ್ಟು ಹೆಚ್ಚು ಬೆಲೆಯನ್ನು ಕೊಡಬೇಕಾಗುತ್ತದೆ. ಇದಕ್ಕೆ ಸರ್ಕಾರದಲ್ಲಿ  ಪರಿಹಾರ ಏನಿದೆ?

ಔಷಧಗಳ ಹೆಸರುಗಳದ್ದೇ ಒಂದು ಮಾಯಾಜಾಲ. ಅವುಗಳ ರಾಸಾಯನಿಕದ ಹೆಸರು ಒಂದಾದರೆ, ಪ್ರತೀ ಕಂಪೆನಿಯೂ ಎಲ್ಲಾ ರಾಸಾಯನಿಕಕ್ಕೂ ತನ್ನದೇ ಆದ ಬ್ರಾಂಡ್ ನೇಮ್ ಇಟ್ಟಿರುತ್ತದೆ. ದೊಡ್ಡ ಕಂಪೆನಿಗಳು ತಮ್ಮ ಜೆನೆರಿಕ್ಸ್‌ಗಳಿಗೂ ಬ್ರಾಂಡ್ ನೇಮ್‌ಗಳನ್ನು ಮುದ್ರಿಸಿರುತ್ತಾರೆ. ಜನತಾ ಬಜಾರ್‌ಗಳಲ್ಲಿ  ಸರ್ಕಾರ ಸಾವಿರಾರು ಕಂಪೆನಿಗಳ ಜೆನೆರಿಕ್ಸ್‌ಗಳನ್ನು ಇಡುವುದು ಅಸಾಧ್ಯ.  ವೈದ್ಯರು ಬರೆದಿರುವ ಔಷಧಿಗಳ ಹೆಸರುಗಳು ಅಕ್ಷರಶಃ ಹೊಂದಾಣಿಕೆಯಾಗದಿದ್ದರೆ ರಾಸಾಯನಿಕಗಳ ಹೆಸರನ್ನು ಆಧರಿಸಿ ಕೊಳ್ಳುವಷ್ಟು ತಾಂತ್ರಿಕ ಜ್ಞಾನ ಜನಸಾಮಾನ್ಯರಿಗಿರುವುದಿಲ್ಲ. ಅದೂ ಅಲ್ಲದೆ ಹೆಚ್ಚಿನ ವೈದ್ಯರು ತಾವು ಬರೆದುಕೊಟ್ಟ ಕಂಪೆನಿಯ ಔಷಧವನ್ನೇ ಕೊಳ್ಳಬೇಕೆಂದು ಆಗ್ರಹಿಸುತ್ತಾರೆ. ಇದಕ್ಕೆಲ್ಲಿದೆ ಪರಿಹಾರ?

ಇದೆಲ್ಲದರ ಒಟ್ಟು ಪರಿಣಾಮ ಸರ್ಕಾರದ ಜನತಾ ಬಜಾರ್ ಪ್ರಯೋಗ ತೋಪಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಈ ರೀತಿಯ ಕಣ್ಕಟ್ಟಿನ ಕೆಲಸ ಮಾಡುವುದಕ್ಕಿಂತ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಸೇರಿ ಜೆನೆರಿಕ್ ಔಷಧಗಳ ಬೆಲೆಯನ್ನು ಶೇ 80ರಷ್ಟು ಇಳಿಸುವ ನಿಟ್ಟಿನಲ್ಲಿ  ಕಾನೂನನ್ನು ಏಕೆ ರೂಪಿಸಬಾರದು? ಇದರಿಂದ ಎಲ್ಲಾ ರೋಗಿಗಳಿಗೂ ದೊಡ್ಡ ಸಹಾಯವಾಗುತ್ತದೆ.

ಹಾಗೆ ನೋಡಿದರೆ ಬ್ರಾಂಡೆಡ್ ಔಷಧಿಗಳ ಬೆಲೆಯೂ ತೀರಾ ಹೆಚ್ಚಾಗಿಯೇ ಇದೆ. ದೊಡ್ಡ ಕಂಪೆನಿಗಳ ಬ್ರಾಂಡೆಡ್ ಔಷಧಗಳ ತಯಾರಿಕಾ ವೆಚ್ಚವೂ ಜೆನೆರಿಕ್‌ಗಳಷ್ಟೇ ಇರುತ್ತದೆ ಏಕೆಂದರೆ ಹೆಚ್ಚಿನ ಕಂಪೆನಿಗಳು ತಾವೇ ಔಷಧಿಗಳನ್ನು ತಯಾರಿಸದೆ, ಸಗಟು ತಯಾರಕರಿಂದ (ಬಲ್ಕ್ ಡ್ರಗ್ ಮ್ಯೋನಿಫ್ಯಾಕ್ಚರರ್ಸ್‌)ಕೊಳ್ಳುತ್ತವೆ. ತಯಾರಿಕಾ ವೆಚ್ಚ ಮತ್ತು ಮಾರಾಟ ಬೆಲೆಯಲ್ಲಿನ  ವ್ಯತ್ಯಾಸ ಕಂಪೆನಿಗಳ ಮಾರಾಟ ಜಾಲಕ್ಕೆ ಮತ್ತು ವೈದ್ಯರುಗಳ ಮೇಜವಾನಿಗಾಗಿ ಖರ್ಚಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಮೇಜವಾನಿ ಬೆಲೆಬಾಳುವ ವಸ್ತುಗಳು, ವಿದೇಶ ಪ್ರವಾಸ ಮತ್ತು ಇತ್ತೀಚೆಗೆ ನಗದು ರೂಪದಲ್ಲೂ ಇರುತ್ತದೆಯೆಂಬುದನ್ನು ಕಂಪೆನಿಯ ಮೂಲಗಳು ಗುಟ್ಟಾಗಿ ಒಪ್ಪಿಕೊಳ್ಳುತ್ತವೆ.

ಒಂದೇ ರಾಸಾಯನಿಕದ ಬೇರೆ ಬೇರೆ ಕಂಪೆನಿಯ ಔಷಧಿಗಳ ಬೆಲೆಯಲ್ಲಿ ಭೂಮಿ ಆಕಾಶಗಳ ಅಂತರವಿರುವುದು ಸರ್ಕಾರಕ್ಕೂ ತಿಳಿಯದ ವಿಚಾರವೇನಲ್ಲ. ಇದಕ್ಕೆಲ್ಲಾ ಕಡಿವಾಣ ಹಾಕಿದರೆ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಬ್ರಾಂಡೆಡ್ ಔಷಧಿಗಳನ್ನೂ ಕೂಡ ಈಗಿರುವ ಬೆಲೆಗಳ ಶೇ 50ಕ್ಕಿಂತ ಕಡಿಮೆ ಬೆಲೆಗೆ ಮಾರಾಟಮಾಡಬಹುದು.

ಔಷಧಿಗಳ ರಾಸಾಯನಿಕ ಹೆಸರುಗಳು, ಬ್ರಾಂಡ್ ನೇಮ್‌ಗಳು, ಅವು ಜೆನೆರಿಕ್‌ಗಳೇ, ಬ್ರಾಂಡೆಡ್ ಔಷಧಿಗಳೇ- ಮುಂತಾದ ತಾಂತ್ರಿಕ ಅಂಶಗಳು ವೈದ್ಯರು ಮತ್ತು ಈ ಕ್ಷೇತ್ರದಲ್ಲಿ  ಕೆಲಸ ಮಾಡುವವರಿಗೇ ಸರಿಯಾಗಿ ತಿಳಿಯದೇ ಇರುವಷ್ಟು ಗೊಂದಲಗಳಿರುವಾಗ, ಜನಸಾಮಾನ್ಯರಿಗೆ ತಿಳಿಯುವುದು ಹೇಗೆ? ಅವರು  ವೈದ್ಯರು ಬರೆದುಕೊಟ್ಟ ಔಷಧಿಗಳನ್ನು ಕೊಳ್ಳುತ್ತಾರೆ. ಆ ಔಷಧಿಗಳು ಕೈಗೆಟುಕುವ ಬೆಲೆಯಲ್ಲಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸಮಗ್ರ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

ನಮ್ಮ ಮಂತ್ರಿಗಳು ಮತ್ತು ಅಧಿಕಾರಿಗಳು ಬಹುರಾಷ್ಟ್ರೀಯ  ಔಷಧ ಕಂಪೆನಿಗಳ ವಿವಿಧ ರೀತಿಯ ಒತ್ತಡಗಳನ್ನು ತಡೆಯಲು ಸಾಧ್ಯವಾದರೆ ಈ ರೀತಿಯ ಬದಲಾವಣೆ ತರುವುದು ಕಷ್ಟವೇನಲ್ಲ. ನಿಜವಾದ ಪ್ರಶ್ನೆ ಇರುವುದು ಈ ಒತ್ತಡ, ಆಮಿಷಗಳನ್ನು ಇವರು ನಿರ್ವಹಿಸಬಲ್ಲರೇ ಎನ್ನುವುದು ಮಾತ್ರ. ಅದಾಗದು ಎಂದಾದರೆ ಉಳಿದೆಲ್ಲಾ ಸುಧಾರಣೆಗಳು ಬರಿಯ ಜನಸಾಮಾನ್ಯರ ಕಣ್ಣೊರೆಸುವ ಮೋಸದ ನಾಟಕಗಳು ಎನ್ನಬೇಕಾಗುತ್ತದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT