ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆನೆರಿಕ್ ಮಳಿಗೆ: ಬ್ರ್ಯಾಂಡೆಡ್ ಔಷಧಿಗೂ ರಿಯಾಯಿತಿ

Last Updated 15 ಆಗಸ್ಟ್ 2012, 9:15 IST
ಅಕ್ಷರ ಗಾತ್ರ

ಮೈಸೂರು: ಕೆ.ಆರ್. ಆಸ್ಪತ್ರೆಯಲ್ಲಿ ಆರಂಭವಾಗಿರುವ ಅಟಲ್‌ಜೀ ಜನತಾ ಬಜಾರ್ ಜೆನೆರಿಕ್ ಔಷಧ ಮಳಿಗೆಯಲ್ಲಿ ಜೆನೆರಿಕ್ ಔಷಧಿಗಳ ಜೊತೆಗೆ, ಜೀವರಕ್ಷಕಗಳು ಮತ್ತು ಬ್ರಾಂಡೆಡ್ ಇನ್‌ಪ್ಲಾಂಟ್ಸ್ (ಶಸ್ತ್ರಚಿಕಿತ್ಸೆಯ ಸಾಧನಗಳು) ಶೇ 50ರ ದರದಲ್ಲಿ ಸಿಗಲಿವೆ.

ಮಂಗಳವಾರ ಜೆನೆರಿಕ್ ಔಷಧ ಮಾರಾಟ ಮಳಿಗೆಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಈ ವಿಷಯ ತಿಳಿಸಿದರು.

`ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸನಲ್ಲಿ ಈಗಾ ಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಜೆನೆರಿಕ್ ಔಷಧ ಮಳಿಗೆಗಳಲ್ಲಿ ಕೇವಲ ಜೆನೆರಿಕ್ ಔಷಧಿಗಳು ಸಿಗುತ್ತಿದ್ದವು. 

ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಬೇಕಾಗುವ ಇನ್‌ಪ್ಲಾಂಟ್‌ಗಳು ಮತ್ತು ಜೀವರಕ್ಷಕ ಔಷಧಿಗಳು ಯಾವುದೇ ಬ್ರ್ಯಾಂಡ್ ಆಗಿದ್ದರೂ ಶೇ 50ರಷ್ಟು ದರದಲ್ಲಿ ನೀಡಲಾಗುವುದು~ ಎಂದು ತಿಳಿಸಿದರು.

`ಔಷಧಿ ಕಂಪೆನಿಗಳಿಂದ ನೇರವಾಗಿ ಗ್ರಾಹಕರಿಗೆ ಒದಗಿಸಲು ಮಾಡಿಕೊಂಡಿರುವ ಒಪ್ಪಂದದಿಂದಾಗಿ ಇಷ್ಟೊಂದು ಕಡಿಮೆ ದರದಲ್ಲಿ ಔಷಧಿಗಳು ಸಿಗುವುದು ಸಾಧ್ಯ ವಿದೆ. ಕಂಪೆನಿಯಿಂದ ಗ್ರಾಹಕನವರೆಗೆ ಇದ್ದ ವ್ಯಾಪಾರ ಸರಪಳಿಯಲ್ಲಿ ಕಮಿಷನ್ ಹೋಗುತ್ತಿತ್ತು. ಅದು ಇಲ್ಲಿ ಇಲ್ಲ. ಔಷಧ ಕಂಪೆನಿಗಳಿಗೆ ನಾವು ಕೈಮುಗಿದು ಮನವಿ ಮಾಡಿಕೊಂಡಾಗ ಅವರು ಮುಂದೆ ಬಂದಿದ್ದಾರೆ. ಸರ್ಕಾರದಿಂದ ಒಂದೇ ಒಂದು ಪೈಸೆಯನ್ನೂ ಇದಕ್ಕೆ ಖರ್ಚು ಮಾಡಿಲ್ಲ. ಆದರೆ ಕಂಪೆನಿಗಳು ಮತ್ತು ಗ್ರಾಹಕರ ನಡುವೆ ಸರ್ಕಾರ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ~ ಎಂದರು.

`ಜೆನೆರಿಕ್ ಮಳಿಗೆಗಳಲ್ಲಿ ಮಾರಾಟವಾಗುವ ಔಷಧಿಗಳ ಗುಣಮಟ್ಟದಲ್ಲಿ ಯಾವುದೇ ಕೊರತೆಯಿಲ್ಲ. ಆಹಾರ, ಔಷಧ ಕಾಯಿದೆಯ ಪ್ರಕಾರ ನೋಂದಣಿ ಯಾದ 14 ಕಂಪೆನಿಗಳ ಔಷಧಗಳನ್ನು ನಾವು ಈ ಮಳಿಗೆಗಳ ಮೂಲಕ ನೀಡು ತ್ತಿದ್ದೇವೆ. ಪ್ರತಿದಿನವೂ ಮಾರಾಟವಾಗುವ ಔಷಧಿಗಳು, ಅವುಗಳ ದರ, ಪಾವತಿಸಿದ ಹಣದ ಎಲ್ಲ ಮಾಹಿತಿಗಳು ಆನ್‌ಲೈನ್ ಮೂಲಕ ನನ್ನ ಕಚೇರಿಗೆ ಬರುತ್ತದೆ. ಬೆಂಗ ಳೂರಿನಲ್ಲಿ ಜೂನ್ 21ರಿಂದ ಆರಂಭವಾದ ಜೆನೆರಿಕ್ ಮಳಿಗೆಯಲ್ಲಿ 16,500 ಜನ ಔಷಧಿ ಖರೀದಿಸಿದ್ದಾರೆ. ಇದರಲ್ಲಿ 47 ಲಕ್ಷ ರೂಪಾಯಿ ರಿಯಾಯಿತಿ ನೀಡಲಾಗಿದೆ~ ಎಂದು ಸ್ಪಷ್ಟಪಡಿಸಿದರು. `ಆಸ್ಪತ್ರೆಗಳಲ್ಲಿ ಈಗಾಗಲೇ ಜೆನೆರಿಕ್ ಔಷಧ ಮಾರಾಟ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ. ಶೇಕಡಾ 50ರಿಂದ 70 ರಿಯಾಯಿತಿ ದರ ದಲ್ಲಿ ಔಷಧಿಗಳು ಇಲ್ಲಿ ಲಭ್ಯ ಇವೆ. ಬ್ರಾಂಡೆಡ್ ಮತ್ತು ಜೆನೆರಿಕ್ ಔಷಧಿಗಳು ಸಿಗು ತ್ತವೆ. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿರುವ ಈ ಔಷಧ ಮಾರಾಟ ಮಳಿಗೆಯಲ್ಲಿ ಮೈಸೂರು ಅಥವಾ ಸುತ್ತಮುತ್ತಲ ಊರು, ಜಿಲ್ಲೆಗಳ ಸರ್ಕಾರಿ, ಖಾಸಗಿ ವೈದ್ಯರು ಸೂಚಿಸಿದ ಔಷಧಿಗಳನ್ನೂ ಖರೀದಿಸಬಹುದು~ಎಂದರು. 

`ಜೆನೆರಿಕ್ ಔಷಧಿಗಳ ಉತ್ಪಾದನೆಯಲ್ಲಿ ಭಾರತ ದೇಶವು ಜಗತ್ತಿನಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಆದರೆ ಬಳಕೆ ಮತ್ತು ಮಾರಾಟದಲ್ಲಿ ಅಮೆರಿಕ ಪ್ರಥಮ ಸ್ಥಾನದಲ್ಲಿದೆ. ಕೇಂದ್ರ ಆರೋಗ್ಯ ಸಚಿವ ಗುಲಾಮ್ ನಬೀ ಆಜಾದ್ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಇಡೀ ರಾಷ್ಟ್ರದಲ್ಲಿ ಜೆನೆರಿಕ್ ಔಷಧ ಮಳಿಗೆಗಳನ್ನು ಮಾಡುವ ಇಚ್ಛೆ ಅವರಿಗೂ ಇದೆ~ ಎಂದು ಹೇಳಿದರು.   ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು.

ರೋಗ ಬರದಂತೆ ನೋಡಿಕೊಳ್ಳಿ: ಶ್ರೀನಾಥ್
`ಔಷಧಿಗಳನ್ನು ರಿಯಾಯಿತಿ ದರದಲ್ಲಿ ನೀಡುವುದು ಒಳ್ಳೆಯ ಉದ್ದೇಶ. ಆದರೆ ರೋಗಗಳು ಬರದಂತೆ ತಡೆಯುವತ್ತ ನಾವು ಹೆಚ್ಚು ಗಮನ ನೀಡಬೇಕು. ಇದರಲ್ಲಿ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಯ ಪಾತ್ರ ದೊಡ್ಡದು~ ಎಂದು ಮಾಜಿ ಕ್ರಿಕೆಟ್ ಆಟಗಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹೇಳಿದರು. ಅಟಲ್‌ಜೀ ಜನತಾ ಬಜಾರ್ ಜೆನೆರಿಕ್ ಔಷಧ ಮಳಿಗೆಯನ್ನು ಉದ್ಘಾಟಿಸಿ, ಡಿಸ್ಪೆನ್ಸರಿ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು ಮಾತನಾ ಡಿದರು. `ಜನರಲ್ಲಿ ನೈರ್ಮಲ್ಯ ಮತ್ತು ಆರೋಗ್ಯ ನಿರ್ವಹಣೆಯ ಕುರಿತು ತಿಳಿವಳಿಕೆ ಮೂಡಿಸಬೇಕು. ಸಾಮಾನ್ಯ ಜನರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ. ಜೆನೆರಿಕ್ ಔಷಧಿ ಮಳಿಗೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ~ ಎಂದರು.

1 ರೂಪಾಯಿಗೆ 10 ಲೀಟರ್ ನೀರು!
`ಕೆ.ಆರ್. ಆಸ್ಪತ್ರೆಯ ಆವರಣದಲ್ಲಿ ಶೀಘ್ರದಲ್ಲಿಯೇ ರೋಗಿಗಳು ಮತ್ತು ಅವರ ಸಂಬಂಧಿಕರಿಗಾಗಿ ಖನಿಜಯುಕ್ತ ನೀರಿನ ಘಟಕವನ್ನು ಆರಂಭಿಸಲಾಗುವುದು. ಅಲ್ಲಿ ಒಂದು ರೂಪಾಯಿಗೆ ಹತ್ತು ಲೀಟರ್ ನೀಡಲು ವ್ಯವಸ್ಥೆ ಮಾಡಲಾಗುವುದು~ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಹೇಳಿದರು.

`ಮೈಸೂರಿನಲ್ಲಿರುವ 19 ವೃದ್ಧಾಶ್ರಮಗಳು, ಬುದ್ಧಿಮಾಂದ್ಯ ಮಕ್ಕಳ ಶಾಲೆಗಳಿಗೆ ನೇರವಾಗಿ ಜೆನೆರಿಕ್ ಔಷಧಿ ಮಳಿಗೆಗಳಿಂದ ಔಷಧಿಗಳನ್ನು ಸರಬರಾಜು ಮಾಡುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ~ ಎಂದು ತಿಳಿಸಿದರು.

`ಜೆನೆರಿಕ್‌ಗೆ ಹುಬ್ಬಳ್ಳಿ ಘಟನೆ ಪ್ರೇರಣೆ~
`ವರ್ಷದ ಹಿಂದೆ ಒಮ್ಮೆ ಹುಬ್ಬಳ್ಳಿಯ ಕಿಮ್ಸಗೆ ಹಠಾತ್ ಭೇಟಿ ನೀಡಿದ್ದೆ. ಅಧಿಕೃತ ವಾಹನದಲ್ಲಿ ಹೋಗದೇ ಖಾಸಗಿ ವಾಹನದಲ್ಲಿ ಹೋಗುವಾಗ, ಕಿಮ್ಸ ಆವರಣದಲ್ಲಿ ಅಜ್ಜಿಯೊಬ್ಬಳು ತನ್ನ ಮೊಮ್ಮಗನಿಗಾಗಿ ಔಷಧಿ ಕೊಳ್ಳಲು ಹಣವಿಲ್ಲದೇ ಅಳುತ್ತ ಕುಳಿತಿದ್ದನ್ನು ನೋಡಿದೆ. ಅವಳನ್ನು ವಿಚಾರಿಸಿದಾಗ ವಿಷಯ ತಿಳಿಯಿತು.

ಇಂತಹ ಎಷ್ಟು ಜನ ಈ ರಾಜ್ಯದಲ್ಲಿ ಇರಬಹುದು ಎಂಬ ವಿಚಾರ ಮನ ಕಲಕಿತು. ಆದ್ದರಿಂದ ಜೆನೆರಿಕ್ ಔಷಧ ಮಾರಾಟ ಮಳಿಗೆ ಆರಂಭಿಸುವತ್ತ ಯೋಜನೆ ರೂಪಿಸಲಾಯಿತು~ ಎಂದು ಸಚಿವರು ಹೇಳಿದರು. 

ಮಾಫಿಯಾಕ್ಕೆ ಹೆದರಲ್ಲ: `ನಾವು ಜೆನೆರಿಕ್ ಔಷಧಿ ಮಾರಾಟ ಆರಂಭಿಸಿದಾಗ ಹಲವು ಟೀಕೆ, ವಿರೋಧಗಳು ಬಂದಿವೆ. ಮೂರು ಸಾವಿರ ರೂಪಾಯಿಗೂ ಹೆಚ್ಚು ವ್ಯವಹಾರ ನಡೆಯುವ ಕ್ಷೇತ್ರವಿದು. ಜೆನೆರಿಕ್ ಔಷಧಿಗಳಿಂದಾಗಿ, ಹಲವರಿಗೆ ನಷ್ಟ ಅನುಭವಿಸುತ್ತದೆ. ಆದರೆ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಅದು ನಮ್ಮ ಮುಖ್ಯ ಉದ್ದೇಶ~ ಎಂದರು.

`ನಾವು ಮರಳು ಸರಬರಾಜು ವ್ಯವಸ್ಥೆಗೆ ಹೊಸ ಕಾನೂನು ತಂದಾಗಲೂ ಇಂತಹ ಟೀಕೆಗಳನ್ನು ಎದುರಿಸಿದ್ದೆ. ನನ್ನ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಪ್ರತಿಭಟನೆ ಮಾಡಿದ್ದರು.

ಆದರೆ ಇವತ್ತು ಕಟ್ಟಡ ಕಟ್ಟುವವರಿಗೆ ಕೇವಲ ಏಳು ಸಾವಿರ ರೂಪಾಯಿಯಲ್ಲಿ ಮನೆ ಬಾಗಿಲಿಗೆ ಮರಳು ಬರುತ್ತಿದೆ. ಇದರಿಂದ ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರಿಗೂ ಲಾಭವಾಗಿದೆ~ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT