ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿರ್ಮಯ್ ಡೇ ಕೊಲೆ ಪ್ರಕರಣ ತನಿಖೆ ಸ್ಥಿತಿಗತಿ ವರದಿ...

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಹಿರಿಯ ಪತ್ರಕರ್ತ ಜ್ಯೋತಿರ್ಮಯ್ ಡೇ ಅವರ ಹತ್ಯೆಗೆ ಸಂಬಂಧಿಸಿದ ತನಿಖೆಯ ಸ್ಥಿತಿಗತಿ ವರದಿಯನ್ನು ಈ ತಿಂಗಳ 21ರಂದು ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಗುರುವಾರ ಮಹಾರಾಷ್ಟ್ರ ಸರ್ಕಾರ ಮತ್ತು ಪೊಲೀಸರಿಗೆ ನಿರ್ದೇಶನ ನೀಡಿದೆ.

ಪ್ರಕರಣದ ಮಹತ್ವದ ಹಿನ್ನೆಲೆಯಲ್ಲಿ  ಅಡ್ವೊಕೇಟ್ ಜನರಲ್ ರವಿ ಕದಂ ಅವರೇ ವಾದ ಮಂಡಿಸುವರು ಎಂಬುದನ್ನೂ ಖಚಿತಪಡಿಸುವಂತೆ ನ್ಯಾಯಮೂರ್ತಿಗಳಾದ ರಂಜನಾ ದೇಸಾಯಿ ಮತ್ತು  ಆರ್. ವಿ. ಮೋರೆ ಅವರು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ. ಡೇ ಅವರ ಹತ್ಯೆ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿ ವಕೀಲ ವಿ.ಪಿ. ಪಾಟೀಲ್ ಮತ್ತು ಹಿರಿಯ ಪತ್ರಕರ್ತ ಕೇತನ್ ತಿರೋಡ್ಕರ್ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ವೇಳೆ ಪೀಠ ಈ ಆದೇಶ ನೀಡಿದೆ.

ಜೂನ್ 11ರಂದು ನಾಲ್ವರು ಅಪರಿಚಿತರ ಗುಂಡಿಗೆ ಬಲಿಯಾದ ಡೇ ಅವರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮುಂಬೈನ ಪ್ರೆಸ್ ಕ್ಲಬ್ ಮತ್ತು ಮರಾಠಿ ಪತ್ರಕಾರ್ ಪರಿಷದ್ ಕೂಡ ಕೋರಿದೆ. ಅಲ್ಲದೆ ಕೋರ್ಟ್ ಮಧ್ಯಪ್ರವೇಶಿಸಬೇಕೆಂದು ಅರ್ಜಿ ಸಲ್ಲಿಸಿದೆ.ಈ ಅರ್ಜಿಗಳನ್ನು ಕೂಡ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ತನಿಖೆ ನಡೆಯುತ್ತಿದೆ.

ನಗರ ಪೊಲೀಸರು ಮತ್ತು ಅಪರಾಧ ವಿಭಾಗದವರು ಸರಿಯಾದ ದಿಕ್ಕಿನಲ್ಲಿ ಸಾಗಿದ್ದಾರೆ. ಸರ್ಕಾರ ಜಾಗೃತವಾಗಿದ್ದು ಈ ಹಂತದಲ್ಲಿ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯ ಇಲ್ಲ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪಾಂಡುರಂಗ್ ಪೋಳ್  ತಿಳಿಸಿದರು.

ಆದಾಗ್ಯೂ, ಈ ತನಿಖೆಯ ಪ್ರಗತಿಯನ್ನು ತಿಳಿಯಬಯಸಿದ್ದಾಗಿ ಹೇಳಿದ ನ್ಯಾಯಮೂರ್ತಿಗಳು ತನಿಖೆಯ ಸ್ಥಿತಿಗತಿ ವರದಿಯನ್ನು ಈ ತಿಂಗಳ 21ರಂದು ಮಂಡಿಸುವಂತೆ ಹೇಳಿದರು. ಅರ್ಜಿದಾರ ಪಾಟೀಲ್ ಅವರು `ಈ ಹಿಂದೆ ನಕಲಿ ಕಾರ್ಯಾಚರಣೆಗಳು ನಡೆದಂತೆ ಈ ಪ್ರಕರಣದಲ್ಲಿ ನಕಲಿ ತನಿಖೆ ನಡೆಯುವ ಸಾಧ್ಯತೆಯೂ ಇದೆ. ಆದ್ದರಿಂದ ಸಿಬಿಐ ತನಿಖೆಗೆ ಇದನ್ನು ಒಪ್ಪಿಸಬೇಕು~ ಎಂದು ಹೇಳಿದರು.

ಮತ್ತೊಬ್ಬ ಅರ್ಜಿದಾರ ಕೇತನ್ ತಿರೋಡ್ಕರ್ ಅವರು, ಪೊಲೀಸರು ಮತ್ತು ಭೂಗತ ಲೋಕದ ಪಾತಕಿಗಳ ಮಧ್ಯೆ ನಂಟಿದೆ. ಈ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದೇ ಸರಿ ಎಂದು ವಾದಿಸಿದರು.

ಭೂಗತ ಲೋಕದ ಪಾತಕಿಗಳು ಮತ್ತು ಮುಂಬೈ ಪೊಲೀಸರ ನಡುವಣ ಸಂಪರ್ಕ ಮತ್ತು ತೈಲ ಮಾಫಿಯಾದ ಕುರಿತು ಡೇ ಅವರು ವರದಿ ಮಾಡುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಪ್ರೆಸ್ ಕ್ಲಬ್ ಮತ್ತು ಮರಾಠಿ ಪತ್ರಕಾರ್ ಪರಿಷದ್ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT