ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷ ಶಾಸ್ತ್ರ: ಆಳ ಅಧ್ಯಯನ ಅಗತ್ಯ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ದಕ್ಷಿಣ ಕನ್ನಡ ಜೈನ ಮೈತ್ರಿಕೂಟವು ನಗರದ ಬಸವನಗುಡಿಯಲ್ಲಿನ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ 27ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಜ್ಯೋತಿಷಿ ಹಾಗೂ ವಾಸ್ತುಶಾಸ್ತ್ರಜ್ಞ ಪಾದೂರು ಧರ್ಮರಾಜ ಇಂದ್ರ ಅವರಿಗೆ `ಮಹಾಕವಿ ರತ್ನಾಕರವರ್ಣಿ~ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕ ಆಡಳಿತ ನ್ಯಾಯಮಂಡಳಿ ಅಧ್ಯಕ್ಷರಾದ ನ್ಯಾಯಮೂರ್ತಿ ಅಜಿತ್ ಸಿ. ಕಬ್ಬಿನ, `ಜ್ಯೋತಿಷದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಪಾದೂರು ಧರ್ಮರಾಜ ಇಂದ್ರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸೂಕ್ತವಾಗಿದೆ. ಸಮಾಜದಲ್ಲಿ ಖ್ಯಾತಿ ಪಡೆದವರ ಬದಲಿಗೆ ಎಲೆ ಮರೆ ಕಾಯಿಯಂತೆ ಸಾಧನೆ ಮಾಡುತ್ತಿರುವವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣವಾಗಿದೆ~ ಎಂದರು.

`ಯಾವುದೇ ಅಭ್ಯಾಸ ನಡೆಸದೆ ಹಸ್ತರೇಖೆ, ಜಾತಕ ನೋಡಿ ಭವಿಷ್ಯ ಹೇಳುವುದರಲ್ಲಿ ಅರ್ಥವಿಲ್ಲ. ಆದರೆ ಆಳ ಅಧ್ಯಯನ ಮಾಡಿ ಜ್ಯೋತಿಷ ಅಭ್ಯಾಸ ಮಾಡಿದರೆ, ಭವಿಷ್ಯವನ್ನು ನಿಖರವಾಗಿ ಹೇಳಲು ಸಾಧ್ಯವಿದೆ. ಇದಕ್ಕೆ ಪುರಾವೆಗಳೂ ಇವೆ. ಧರ್ಮರಾಜ ಇಂದ್ರ ಅವರು ಈ ರೀತಿ ಅಭ್ಯಾಸ ನಡೆಸಿದವರ ಸಾಲಿನಲ್ಲಿ ನಿಲ್ಲುತ್ತಾರೆ~ ಎಂದು ಹೇಳಿದರು.

`ಮೈತ್ರಿಕೂಟವು ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಉತ್ತಮವಾಗಿದೆ. ತಿಂಗಳಿಗೊಮ್ಮೆ ಎಲ್ಲರೂ ಸೇರುವುದರಿಂದ ಸೌಹಾರ್ದ ಬೆಳೆಯುತ್ತದೆ. ಇದರಿಂದ ಸಾಂಸ್ಕೃತಿಕ ಬೇರುಗಳು ಬಲಗೊಂಡು ಯುವಜನತೆ ಸಂಸ್ಕೃತಿಯನ್ನು ಪಾಲಿಸಲು ನೆರವಾಗುತ್ತದೆ. ಹಾಗಾಗಿ ಈ ರೀತಿಯ ಇನ್ನಷ್ಟು ಸಂಘಗಳು ರಚನೆಯಾಗಬೇಕು~ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಾದೂರು ಧರ್ಮರಾಜ ಇಂದ್ರ, `ಇದು ನನ್ನ ಜೀವನದ ಅತ್ಯಂತ ಸ್ಮರಣೀಯ ಸಂದರ್ಭ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದವರು ನೀಡಿದ ಪ್ರೋತ್ಸಾಹದಿಂದಾಗಿ ಒಂದಷ್ಟು ಸೇವೆ ಸಲ್ಲಿಸಿದ್ದೇನೆ~ ಎಂದು ಭಾವುಕರಾಗಿ ನುಡಿದರು.

`ಹಿಂದೂಗಳು ಮಾತ್ರವಲ್ಲ ಮುಸ್ಲಿಮರು, ಕ್ರೈಸ್ತರು ಸಹ ಜ್ಯೋತಿಷಶಾಸ್ತ್ರವನ್ನು ಗೌರವಿಸುತ್ತಾರೆ. ಸರಿಯಾಗಿ ಅಧ್ಯಯನ ಮಾಡಿದರೆ ಕರ್ಮಫಲಗಳನ್ನು ತಿಳಿಯಲು ಸಾಧ್ಯವಿದೆ~ ಎಂದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಚಿರಾಗ್ ಜೈನ್ ಅವರನ್ನು ಸನ್ಮಾನಿಸಲಾಯಿತು. ಪಾದೂರು ಧರ್ಮರಾಜ ಇಂದ್ರ ಅವರ ಪತ್ನಿ ಚಾರಿತ್ರಮತಿ ಅವರನ್ನು ಅಭಿನಂದಿಸಲಾಯಿತು.

ಮೈತ್ರಿಕೂಟದ ಅಧ್ಯಕ್ಷ ಡಿ.ಸುರೇಂದ್ರ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್, ಕಾರ್ಯಾಧ್ಯಕ್ಷ ಕೆ.ಬಿ. ಯುವರಾಜ ಬಲ್ಲಾಳ್, ಕಾರ್ಯದರ್ಶಿ ಕೆ. ಜಯರಾಜ ಆರಿಗ, ಸಹಾಯಕ ಕಾರ್ಯದರ್ಶಿ ಗುಣಪಾಲ ಜೈನ್ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT