ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಟಿಸಿಎಸ್' ಲಾಭ ರೂ 3597 ಕೋಟಿ

4ನೇ ತ್ರೈಮಾಸಿಕದಲ್ಲಿ ಶೇ 22 ಪ್ರಗತಿ
Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ದೇಶದ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಕಂಪೆನಿ `ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್'(ಟಿಸಿಎಸ್) 2012-13ನೇ ಸಾಲಿನ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿರೂ3596.90 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ 4ನೇ ತ್ರೈಮಾಸಿಕದಲ್ಲಿನರೂ2945.40 ಕೋಟಿಗೆ ಹೋಲಿಸಿದರೆ ಲಾಭ ಗಳಿಕೆಯಲ್ಲಿ ಈ ಬಾರಿ ಶೇ 22.1ರಷ್ಟು ಪ್ರಗತಿ ದಾಖಲಿಸಿದೆ.
ಇದೇ ವೇಳೆ ಜನವರಿ-ಮಾರ್ಚ್ ಅವಧಿಯಲ್ಲಿನ ಆದಾಯರೂ16,430 ಕೋಟಿಗೇರಿದ್ದು, ಶೇ 23.9ರಷ್ಟು ವೃದ್ಧಿ ಕಂಡುಬಂದಿದೆ. 2011-12ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿನ ಆದಾಯರೂ13,259 ಕೋಟಿ ಇದ್ದಿತು.

`ಕಂಪೆನಿಯ ಎಲ್ಲ ವಿಭಾಗಗಳಿಂದಲೂ ಎರಡಂಕಿಗೂ ಹೆಚ್ಚಿನದಾದ ಉತ್ತಮ ಕೊಡುಗೆ ಬಂದಿದ್ದರಿಂದ 4ನೇ ತ್ರೈಮಾಸಿಕದಲ್ಲಿನ ಆದಾಯ ಮತ್ತು ಲಾಭ ಗಳಿಕೆಯಲ್ಲಿ ಭಾರಿ ಪ್ರಗತಿ ಸಾಧ್ಯವಾಗಿದೆ' ಎಂದು `ಟಿಸಿಎಸ್' ವ್ಯವಸ್ಥಾಪಕ ನಿರ್ದೇಶಕ ಎನ್.ಚಂದ್ರಶೇಖರನ್ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 2013-14ನೇ ಹಣಕಾಸು ವರ್ಷದಲ್ಲಿಯೂ ಇದೇ ಪ್ರಗತಿ ಗತಿ ಮುಂದುವರಿಯಲಿದೆ. ಬಹಳಷ್ಟು ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಬಳಕೆ ಪ್ರಮಾಣ ಹೆಚ್ಚುತ್ತಿದೆ. ಇದರಿಂದಾಗಿ ಕಂಪೆನಿಗೆ ಭವಿಷ್ಯದಲ್ಲಿ ಸಾಕಷ್ಟು ಉತ್ತಮ ಅವಕಾಶಗಳು ಗೋಚರಿಸುತ್ತಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟಾರೆ ಆದಾಯ ಹೆಚ್ಚಳ: 2012-13ನೇ ಹಣಕಾಸು ವರ್ಷದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ `ಟಿಸಿಎಸ್'ನ ಒಟ್ಟಾರೆ ಆದಾಯ ಶೇ 28.8ರ ಹೆಚ್ಚಳದೊಂದಿಗೆರೂ62,989.50 ಕೋಟಿಗೇರಿದೆ. ನಿವ್ವಳ ಲಾಭವೂ ಶೇ 30.90ರ ಪ್ರಗತಿಯೊಡನೆರೂ13,941.40 ಕೋಟಿಗೇರಿದೆ. ಹಿಂದಿನ ವರ್ಷದ ಆದಾಯರೂ48,893.80 ಕೋಟಿ ಮತ್ತು ನಿವ್ವಳ ಲಾಭರೂ10,651.70 ಕೋಟಿಯಷ್ಟಿದ್ದಿತು.

ಶೇ 1.73 ಕುಸಿದ ಷೇರು

ಕಳೆದ ಎರಡು ದಿನಗಳಿಂದ ಏರುಮುಖವಾಗಿದ್ದ ಮುಂಬೈ ಷೇರು ವಿನಿಮಯ ಕೇಂದ್ರದ(ಬಿಎಸ್‌ಇ) ಸಂವೇದಿ ಸೂಚ್ಯಂಕ ಬುಧವಾರ ಅಲ್ಪ ಪ್ರಮಾಣದ (13.77 ಅಂಶಗಳ) ಕುಸಿತ ದಾಖಲಿಸಿತು. ಹಗಲಿನಲ್ಲಿ ಷೇರುಪೇಟೆಯಲ್ಲಿನ ಈ ಕುಸಿತಕ್ಕೆ ಸಂಜೆ ಪ್ರಕಟವಾಗಲಿದ್ದ `ಟಿಸಿಎಸ್' ಫಲಿತಾಂಶದೆಡೆಗಿದ್ದ ನಿರೀಕ್ಷೆಯ ನೋಟವೂ ಕಾರಣವಾಗಿದ್ದಿತು.
ಸೂಚ್ಯಂಕ ಇಳಿಜಾರಿನತ್ತ ಸಾಗುತ್ತಿದ್ದರೆ ಅದರ ಜತೆಗೇ `ಟಿಸಿಎಸ್' ಷೇರುಗಳೂ ಸಾಗಿದವು. ಟಿಸಿಎಸ್ ಷೇರುಗಳು ಶೇ 1.73ರಷ್ಟು ಮೌಲ್ಯ ಕಳೆದುಕೊಂಡವು. ದಿನದ ಅಂತ್ಯದ ವೇಳೆಗೆರೂ1459.20ರಲ್ಲಿ ವಹಿವಾಟು ನಡೆಸಿತು. `ಎನ್‌ಎಸ್‌ಇ'ಯಲ್ಲಿ ಶೇ 1.57ರಷ್ಟು ಇಳಿಮುಖವಾಗಿರೂ1,459.85ರಲ್ಲಿ ಮಾರಾಟ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT