ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಕಾಕಾರರ ವಿರುದ್ಧ ಅಣ್ಣಾ ಗುಡುಗು

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಣ್ಣಾ ತಂಡ ನಡೆಸುತ್ತಿರುವ  ಆಂದೋಲನವು ಸಾಗುತ್ತಿರುವ ದಾರಿಯನ್ನು ಆಕ್ಷೇಪಿಸಿ ಇಬ್ಬರು ತಂಡದಿಂದ ಬೇರ್ಪಟ್ಟಿರುವುದರ ನಡುವೆಯೇ, ಅಣ್ಣಾ ಹಜಾರೆ ಅವರು ಬುಧವಾರ ಟೀಕಾಕಾರರ ವಿರುದ್ಧ ಹರಿಹಾಯ್ದಿದ್ದು, ತಮ್ಮ ಚಳವಳಿಯ ಕುರಿತಾಗಿ ನಡೆಯುತ್ತಿರುವ ಅಸಂಬದ್ಧ ಮತ್ತು ತರ್ಕರಹಿತ ಚರ್ಚೆಗಳ ಬಗ್ಗೆ ತಾವು ಗಮನ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

`ರಾಜಕೀಯ ವಲಯದಲ್ಲಿ ನನ್ನ ಚಳವಳಿಯ ಬಗ್ಗೆ ತರ್ಕ ರಹಿತವಾದ ಅನಗತ್ಯ ಚರ್ಚೆಗಳು ನಡೆಯುತ್ತಿವೆ. ಆ ಬಗ್ಗೆ ನಾನು ಗಮನ ನೀಡುವುದಿಲ್ಲ~ ಎಂದು ಮೌನ ವ್ರತದಲ್ಲಿರುವ ಅಣ್ಣಾ ಹಜಾರೆ ಅವರು ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ.

`ರಾಜಕೀಯ ದ್ವೇಷದಿಂದಾಗಿ ಆಂದೋಲನದ ಬಗ್ಗೆ ಅಸಂಬದ್ಧ ಚರ್ಚೆಗಳು ನಡೆಯುತ್ತಿರುವುದನ್ನು ನಾನು ಕೇಳಿದ್ದೇನೆ. ಕಳೆದ 30 ವರ್ಷಗಳಿಂದ ಇದು ನನ್ನ ಜೀವನದ ಭಾಗವಾಗಿ ಹೋಗಿದೆ. ಈ ರೀತಿಯ ಚರ್ಚೆಗಳಿಂದ ನನ್ನ ಅಂತಃಸ್ಫೂರ್ತಿಗೆ ಧಕ್ಕೆಯಾಗುವುದಿಲ್ಲ.  ನಾನು ಆಯ್ಕೆ ಮಾಡಿರುವ ದಾರಿಯಲ್ಲಿ ನಡೆಯಲು ಇಂತಹ ಬೆಳವಣಿಗೆಗಳು ಇನ್ನಷ್ಟು ಶಕ್ತಿ ಕೊಡುತ್ತವೆ~ ಎಂದು ಅಣ್ಣಾ ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತನಾದವನು ತನ್ನ ಅಹಂ ಅನ್ನು ಬದಿಗಿರಿಸಿ ಕೆಲಸ ಮಾಡಬೇಕು. ಆಗ ಮಾತ್ರ ಅವಮಾನ, ಮೂದಲಿಕೆಯನ್ನು ಅರಗಿಸಿಕೊಳ್ಳಬಹುದು ಎಂದು ಅವರು ಒತ್ತು ಕೊಟ್ಟು ಹೇಳಿದ್ದಾರೆ.

`...ಹಾಗಿದ್ದಾಗ ಮಾತ್ರ ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ರಾಷ್ಟ್ರಕ್ಕಾಗಿ ಕೆಲವು ರಚನಾತ್ಮಕ ಕೆಲಸಗಳನ್ನು ಮಾಡಲು ಸಾಧ್ಯ ಎಂದು ಅವರು ತಿಳಿಸಿದರು.

ಜನರು ಯಾವಾಗಲೂ ಹಣ್ಣುಗಳಿರುವ ಮರಕ್ಕೆ ಕಲ್ಲು ಎಸೆಯುತ್ತಾರೆಯೇ ವಿನಃ  ಹಣ್ಣುಗಳಿರದ ಮರಗಳಿಗೆ ಕಲ್ಲೆಸೆಯುವುದಿಲ್ಲ~ ಎಂದು 74 ವರ್ಷದ  ಗಾಂಧಿವಾದಿ ತಮ್ಮ ಟೀಕಾಕಾರರ ಹೆಸರುಗಳನ್ನು ಉಲ್ಲೇಖಿಸದೇ ವ್ಯಂಗ್ಯವಾಡಿದ್ದಾರೆ.

ಅವರು ತಂಡದಿಂದ  ಹೊರಬಿದ್ದ ನಂತರ ಅಣ್ಣಾ ಈ ಹೇಳಿಕೆ ನೀಡಿದ್ದಾರೆ. ಅಣ್ಣಾ ತಂಡದ ಚಳವಳಿಯು `ರಾಜಕೀಯ ತಿರುವು~ ಪಡೆಯುತ್ತಿದೆ ಎಂದು ಆಕ್ಷೇಪಿಸಿ ಪಿ.ವಿ.ರಾಜಗೋಪಾಲ್ ಮತ್ತು ರಾಜೀಂದರ್ ಸಿಂಗ್ ಮಂಗಳವಾರ ತಂಡದಿಂದ ಹೊರಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT