ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್ಕಿಯಿಂದ ಬ್ಯಾಂಕ್ ದರೋಡೆ ಯತ್ನ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಖಾತೆ ತೆರೆಯುವ ಸೋಗಿನಲ್ಲಿ ಇಂದಿರಾನಗರದಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆ ಪ್ರವೇಶಿಸಿದ ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ, ಬ್ಯಾಗ್‌ನಲ್ಲಿ ಬಾಂಬ್ ಇರುವುದಾಗಿ ಸಿಬ್ಬಂದಿಯನ್ನು ಬೆದರಿಸಿ ದರೋಡೆ ಮಾಡಲೆತ್ನಿಸಿದ ಘಟನೆ ಶುಕ್ರವಾರ ನಡೆದಿದೆ. ಬ್ಯಾಂಕ್‌ನ ಭದ್ರತಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಪ್ರಂಜಾಲ್ ಭಟ್ಟಚಾರ್ಜಿ (34) ಬಂಧಿತ ಆರೋಪಿ. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬ್ಯಾಂಕ್ ಪ್ರವೇಶಿಸಿದ ಪ್ರಂಜಾಲ್, ನಂತರ ಬಟ್ಟೆಯಲ್ಲಿ ಸುತ್ತಿದ್ದ ವಸ್ತುವೊಂದನ್ನು ಬ್ಯಾಗ್‌ನಿಂದ ತೆಗೆದು ಬಾಂಬ್ ಎಂದು ಸಿಬ್ಬಂದಿಯನ್ನು ಬೆದರಿಸಿದ. ಯಾರಾದರೂ ಮಿಸುಕಾಡಿದರೆ ಬಾಂಬ್ ಸ್ಫೋಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ. ಇದರಿಂದ ಆತಂಕಗೊಂಡ ಸಿಬ್ಬಂದಿ ಸ್ತಬ್ಧರಾಗಿ ನಿಂತರು.

ಬಳಿಕ ನಗದು ಕೌಂಟರ್ ಬಳಿ ತೆರಳಿದ ಆರೋಪಿ, ಸುಮಾರು ಹದಿಮೂರು ಲಕ್ಷ ರೂಪಾಯಿ ಹಣವನ್ನು ಬ್ಯಾಗ್‌ಗೆ ತುಂಬಿಕೊಂಡು ಹೊರ ನಡೆಯಲು ಯತ್ನಿಸಿದ. ಈ ವೇಳೆ ಬ್ಯಾಂಕ್‌ನ ಭದ್ರತಾ ಸಿಬ್ಬಂದಿ ಬಾಗಿಲು ಮುಚ್ಚಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು.

ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾದಾಗ, ಹತ್ತಿರ ಬಂದರೆ ಬಾಂಬ್ ಸ್ಫೋಟಿಸುತ್ತೇನೆ ಎಂದು ಆತ ಕೆಲ ಕಾಲ ಪೊಲೀಸರಿಗೂ ಸತಾಯಿಸಿದ. ನಂತರ ಇಂದಿರಾನಗರ ಸಬ್ ಇನ್‌ಸ್ಪೆಕ್ಟರ್‌ಗಳಾದ ಕೆಂಪೇಗೌಡ ಮತ್ತು ಗಿರಿರಾಜ್ ಆರೋಪಿಯ ಮೇಲೆರಗಿ ಬಾಂಬ್ ಮಾದರಿ ವಸ್ತುವನ್ನು ಕಿತ್ತುಕೊಂಡರು.

`ಘಟನೆ ಸಂಬಂಧ ಬ್ಯಾಂಕ್ ವ್ಯವಸ್ಥಾಪಕ ಗೌತಮ್ ಎಂಬುವರು ದೂರು ನೀಡಿದ್ದಾರೆ. ಆರೋಪಿ ವಿರುದ್ಧ ದರೋಡೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ~ ಎಂದು ಪೂರ್ವ ವಿಭಾಗದ ಡಿಸಿಪಿ ಟಿ.ಜಿ.ಕೃಷ್ಣಭಟ್  ತಿಳಿಸಿದರು.

ಹುಸಿ ಬಾಂಬ್: `ದರೋಡೆಗೆ ವ್ಯವಸ್ಥಿತ ಸಂಚು ರೂಪಿಸಿದ್ದ ಆತ, ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ. ಶೆಲ್‌ಗಳು ಮತ್ತು ಕೆಲ ಎಲೆಕ್ಟ್ರಾನಿಕ್ ವಸ್ತುಗಳಿಗೆ ವೈಯರ್ ಜೋಡಿಸಿ ಅದಕ್ಕೆ ಕಪ್ಪು ಬಣ್ಣದ ಟೇಪ್ ಸುತ್ತಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದ. ಅದು ನೋಡಲು ಬಾಂಬ್ ಮಾದರಿಯಲ್ಲೇ ಇದ್ದುದರಿಂದ ಬ್ಯಾಂಕ್ ಸಿಬ್ಬಂದಿ ಗಾಬರಿಗೊಂಡಿದ್ದರು. ಆರೋಪಿ ತನ್ನ ಯೋಜನೆಯಲ್ಲಿ ಶೇ 90ರಷ್ಟು ಸಫಲನಾಗಿದ್ದ~ ಎಂದು ಪೊಲೀಸರು ಹೇಳಿದರು.

ಆರೋಪಿ ಹಿನ್ನೆಲೆ: ಅಸ್ಸಾಂನ ಪ್ರಂಜಾಲ್, ಚೆನ್ನೈನಲ್ಲಿ ಬಿಇ ಪದವಿ ಮಾಡಿದ್ದಾನೆ. 2006ರಲ್ಲಿ ನಗರಕ್ಕೆ ಬಂದ ಈತ, ಪತ್ನಿ ಮಕ್ಕಳೊಂದಿಗೆ ಮಲ್ಲೇಶ್‌ಪಾಳ್ಯದಲ್ಲಿ ನೆಲೆಸಿದ್ದಾನೆ. ನಗರದ ಬಾಗಮನೆ ಟೆಕ್‌ಪಾರ್ಕ್‌ನಲ್ಲಿರುವ ಎಚ್‌ಪಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು 25 ಸಾವಿರ ರೂಪಾಯಿ ವೇತನ ಪಡೆಯುತ್ತಾನೆ.

`ಸ್ನೇಹಿತರು ಹಾಗೂ ಬ್ಯಾಂಕ್‌ಗಳಿಂದ ಸುಮಾರು ಮೂರು ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಸಾಲ ತೀರಿಸುವ ಸಲುವಾಗಿ ದರೋಡೆ ಮಾಡಲು ಮುಂದಾದೆ. ಕೆಲ ಸಿನಿಮಾಗಳ ಪ್ರೇರಣೆಯಿಂದ ಈ ರೀತಿ ಸಂಚು ರೂಪಿಸಿದೆ~ ಎಂದು ಆರೋಪಿ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT