ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ

Last Updated 16 ಜನವರಿ 2013, 8:52 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನ ಕರೂರು ಮತ್ತು ಚಳಗೇರಿ ಗ್ರಾಮದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಬಸ್‌ದರ ಏರಿಕೆ ಮತ್ತು ಹೆದ್ದಾರಿ ಟೋಲ್ ಸಂಗ್ರಹ ಮಾಡುವುದನ್ನು ಖಂಡಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ್ ಇಲ್ಯಾಶ್ ಅಹ್ಮದ್ ಇಸಾಮದಿ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯ ಚಳಗೇರಿ ಸಮೀಪದಲ್ಲಿ ಟೊಲ್ ಸಂಗ್ರಹದರವನ್ನು ಹೆಚ್ಚಿಸಿದ್ದು, ದ್ವಿಗುಣಗೊಳಿಸಿದ್ದಾರೆ. ಇದರಿಂದ ಸಾರಿಗೆ ಬಸ್ ದರವೂ ಹೆಚ್ಚಿದ್ದು, ಸ್ಥಳೀಯ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಟೋಲ್ ದರ ಇಳಿಸುವಂತೆ ಆಗ್ರಹಿಸಿ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಅಧಿಕಾರಿಗಳು ಹಾಗೂ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಟೋಲ್ ವಸೂಲಿ ಮಾಡುವ ಖಾಸಗಿ ಕಂಪೆನಿ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ವಿ.ಕೆಂಚಳ್ಳೇರ ಮಾತನಾಡಿ, ಚಳಗೇರಿ ಬಸ್ ನಿಲ್ದಾಣದ ಎರಡೂ ಬದಿಯಲ್ಲಿ ಬಸ್ ತಂಗುದಾಣ ನಿರ್ಮಿಸಬೇಕು. ಚಳಗೇರಿ ಸೇತುವೆ ಕೆಳಗೆ ಕಾಲುವೆಗಳಿಗೆ ಹಾಕಿರುವ ಕ್ಲಾಂಪ್‌ಗಳನ್ನು ದನಕರುಗಳಿಗೆ ಓಡಾಡಲು ತೊಂದರೆಯಾಗದಂತೆ ಸರಿಯಾಗಿ ಜೋಡಿಸಬೇಕು. ಸುತ್ತಮುತ್ತಲಿನ ಗ್ರಾಮಗಳ ರೈತರು ಹೊಲಗಳಿಂದ ಫಸಲು ಹೇರಿಕೊಂಡು ಹೋಗುವ ವಾಹನಗಳಿಗೆ ಟೋಲ್‌ನಲ್ಲಿ ರಿಯಾಯಿತಿ ನೀಡಿ ಟೋಲ್ ವಸೂಲಿ ಮಾಡಬಾರದು ಎಂದು ಆಗ್ರಹಿಸಿದರು.

ಹೆದ್ದಾರಿಯಲ್ಲಿ ಟೋಲ್ ವಸೂಲಿ ಮಾಡುವ ಮುನ್ನ ಸಮರ್ಪಕ ಸೌಲಭ್ಯ ಒದಗಿಸಬೇಕು. ರಸ್ತೆಯ ಎರಡೂ ಬದಿಗೆ ಸರ್ವೀಸ್ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಹೆದ್ದಾರಿ ಸಂಪೂರ್ಣ ಕೆಟ್ಟು ಹೋಗಿದ್ದರೂ ಟೋಲ್ ವಸೂಲಿ ಮಾತ್ರ ನಿಂತಿಲ್ಲ. ಸಮರ್ಪಕ ರಸ್ತೆ ನಿರ್ಮಿಸಿ ಟೋಲ್ ವಸೂಲಿ ಮಾಡುವಂತೆ ಕೆಂಚಳ್ಳೇರ ಆಗ್ರಹಿಸಿದರು. ಅಧಿಕಾರಿಗಳು ಈ ಬಗ್ಗೆ ಒಂದು ವಾರದೊಳಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯಿಂದ ಹಿಂದೆ ಸರಿದರು.  

ಚಂದ್ರಗೌಡ ಕರೇಗೌಡ್ರ ಮತ್ತು ಶಿವನಗೌಡ ಗೌಡರ, ದಿಳ್ಳೆಪ್ಪ ಕಂಬಳಿ, ಸಿದ್ದಣ್ಣ ನಿಟ್ಟೂರು, ಸುರೇಶ ಧುಳೆಹೊಳಿ, ಶಂಕರಗೌಡ ಮೆಣಸಿನಹಾಳ, ಎಸ್.ಟಿ. ಕೆಂಚರಡ್ಡಿ, ಮಲ್ಲಿಕಾರ್ಜುನ ಅಣ್ಣಪ್ಪಳವರ, ದೇವೇಂದ್ರಪ್ಪ ಓಲೇಕಾರ, ಬಸವನಗೌಡ ಮರಿಉಜ್ಜಪ್ಪಳವರ, ಮಂಜಣ್ಣಸಾಲಿ, ಕೇಶಪ್ಪ ಮೇಗಳಮನಿ, ಚನ್ನಬಸಪ್ಪ ತೆಗ್ಗಿನ, ಯು.ಎಂ. ಮರಿನಾಮ್ಮನವರ, ಬಸನಗೌಡ ಗಂಗಪ್ಪನವರ, ಚನ್ನವೀರಪ್ಪ ಹೊನ್ನಚಿಕ್ಕಣ್ಣನವರ, ಎಸ್.ವಿ. ಚಪ್ಪರದಹಳ್ಳಿ, ಬಿ.ಎಸ್. ಕಡೂರು ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT