ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ರಾಜ್ ಕಪ್ ಕ್ರಿಕೆಟ್ ಟೂರ್ನಿ 29ರಿಂದ

Last Updated 24 ಅಕ್ಟೋಬರ್ 2011, 11:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಚಿತ್ರರಂಗದಲ್ಲಿ ದುಡಿದು ಪ್ರಸ್ತುತ ಸಂಕಷ್ಟದಲ್ಲಿರುವ ನಿರ್ದೇಶಕರ ಸಹಾಯಾರ್ಥ `ಡಾ.ರಾಜ್ ಕಪ್~ 20/ಟ್ವೆಂಟಿ ಕ್ರಿಕೆಟ್ ಟೂರ್ನಿಯನ್ನು ಇದೇ 29ರಿಂದ ನವೆಂಬರ್ 1ರ ವರೆಗೆ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದೆ~ ಎಂದು ನಟ ಶಿವರಾಜಕುಮಾರ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಅಪ್ಪಾಜಿ ನೆನಪಿಗೆ ನಡೆಯಲಿರುವ ಈ ಟೂರ್ನಿಯಲ್ಲಿ ಚಿತ್ರನಟರ ತಂಡ, ನಿರ್ದೇಶಕರ ತಂಡ, ತಂತ್ರಜ್ಞರ ತಂಡ, ಶಾಸಕರ ತಂಡ ಹಾಗೂ ಮಾಧ್ಯಮ ಪ್ರತಿನಿಧಿಗಳ ತಂಡ ಸೇರಿದಂತೆ ಒಟ್ಟು 8 ವಿವಿಧ ತಂಡಗಳು ಸೆಣೆಸಲಿದ್ದು, ಕೊನೆಯ ದಿನವಾದ ನವೆಂಬರ್ 1ರಂದು ಸ್ಟಾರ್‌ನೈಟ್ ಎಂಬ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ~ ಎಂದು ಹೇಳಿದರು.

`ಟೂರ್ನಿಯಲ್ಲಿ ಭಾಗವಹಿಸಲು ಸುದೀಪ್, ದರ್ಶನ್, ಉಪೇಂದ್ರ, ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜಕುಮಾರ್, ದಿಗಂತ್, ರವಿಚಂದ್ರನ್ ಸೇರಿದಂತೆ ಚಿತ್ರನಟರ ದಂಡು ಹುಬ್ಬಳ್ಳಿಗೆ ಆಗಮಿಸಲಿದ್ದು, ಮೂರು ದಿನ ಚಿತ್ರೋದ್ಯಮಕ್ಕೆ ರಜೆ ನೀಡಲಾಗಿದೆ. ಚಿತ್ರೋದ್ಯಮವು ಈ ಟೂರ್ನಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಪ್ರಾಕ್ಟೀಸ್ ಆರಂಭಿಸಲಾಗಿದೆ~ ಎಂದರು.

`ಪ್ರತಿ ವರ್ಷ ಡಾ. ರಾಜ್ ಕಪ್ ಮೂಲಕ ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲಿ ದುಡಿದವರ ನೆರವಿಗೆ ನಿಲ್ಲುವ ಉದ್ದೇಶ ಹೊಂದಲಾಗಿದೆ. ಈ ವರ್ಷ ನಿರ್ದೇಶಕರ ನೆರವಿಗೆ ಟೂರ್ನಿ ಆಯೋಜಿಸಿದ್ದು, ಪ್ರೇಕ್ಷಕರಿಗೆ ರೂ.125 ಹಾಗೂ ರೂ. 225 ಮೊತ್ತದ ಟಿಕೆಟ್ ನಿಗದಿಗೊಳಿಸಲಾಗಿದೆ. ಆರ್ಥಿಕ ನೆರವು ನೀಡಲು ಉದ್ದೇಶಿಸಿರುವ ನಿರ್ದೇಶಕರನ್ನು ಈಗಾಗಲೇ ಗುರುತಿಸಲಾಗಿದೆ. ಶೀಘ್ರ ಆ ಬಗ್ಗೆ ಪ್ರಕಟಣೆ ನೀಡಲಾಗುವುದು~ ಎಂದರು.

`29ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಬೆಂಗಳೂರಿನಿಂದ ಸುಮಾರು 20 ಬಸ್‌ಗಳಲ್ಲಿ ಕಲಾವಿದರು ಆಗಮಿಸಲಿದ್ದು, ಅಂದು ಸಂಜೆ ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕರು ಕಾರ್ಯಕ್ರಮ ನೀಡಲಿದ್ದಾರೆ~ ಎಂದರು.

`ಟೂರ್ನಿ ಯಶಸ್ಸಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ವಿಧಾನ ಪರಿಷತ್ ಸದಸ್ಯ ವಿಜಯ ಸಂಕೇಶ್ವರ ಹಾಗೂ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣನವರ ಮತ್ತಿತರರು ನೆರವಿಗೆ ನಿಂತಿದ್ದಾರೆ~ ಎಂದರು.

ನೆರೆ ಸಂತ್ರಸ್ತರಿಗೆ ನೆರವು
2009ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಂಭವಿಸಿದ ನೆರೆಯಿಂದಾಗಿ ಸಂತ್ರಸ್ತರಾದವರಿಗೆ ನೆರವು ನೀಡಲು ಚಿತ್ರೋದ್ಯಮದ ಪರವಾಗಿ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ~ ಎಂದು ಶಿವರಾಜಕುಮಾರ ಹೇಳಿದರು.
`ಕ್ರಿಕೆಟ್ ಟೂರ್ನಿ ವೇಳೆ ಅಧಿಕೃತವಾಗಿ ಪ್ರಕಟಿಸಲಾಗುವುದು~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT