ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪ್ಲೊಮಾ: ಶೇ 85 ಸೀಟು ಭರ್ತಿ

Last Updated 13 ಜುಲೈ 2013, 11:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೊದಲ ಹಂತದ ಡಿಪ್ಲೊಮಾ ಕೌನ್ಸೆಲಿಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಲಭ್ಯವಿದ್ದ ಸೀಟುಗಳ ಪೈಕಿ ಶೇ 85ರಷ್ಟು ಸೀಟುಗಳು ಭರ್ತಿಯಾಗಿವೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ್ ತಿಳಿಸಿದರು.

ಕೌನ್ಸೆಲಿಂಗ್‌ನ ನೋಡಲ್ ಕೇಂದ್ರವಾದ ವಿದ್ಯಾನಗರದ ಮಹಿಳಾ ಪಾಲಿಟೆಕ್ನಿಕ್‌ಗೆ ಶುಕ್ರವಾರ ಭೇಟಿ ನೀಡಿ ಅವರು ಮಾತನಾಡಿದರು. ಮೊದಲ ಹಂತದಲ್ಲಿ ಒಟ್ಟು 42,000 ಸೀಟುಗಳು ಲಭ್ಯವಿದ್ದು, ಅದರಲ್ಲಿ 35,485 ಸೀಟುಗಳು ಭರ್ತಿಯಾಗಿವೆ. ಹುಬ್ಬಳ್ಳಿ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೀಟು ಹಂಚಿಕೆಯಾಗಿದೆ. ಎರಡನೇ ಹಂತದ ಕೌನ್ಸೆಲಿಂಗ್ ಆರಂಭವಾಗಿದ್ದು, ಒಟ್ಟು 14,345 ಸೀಟು ಲಭ್ಯವಿದೆ ಎಂದು ಅವರು ಹೇಳಿದರು.

ಕಳೆದ ವರ್ಷದಿಂದ ಡಿಪ್ಲೊಮಾಗೆ ಆನ್‌ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಮೊದಲ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಇಲಾಖೆಯ ನಡುವಿನ ಸಂಯೋಜನೆಯ ಕೊರತೆಯಿಂದಾಗಿ ಕೌನ್ಸೆಲಿಂಗ್ ವಿಳಂಬವಾಗಿತ್ತು.

ಈ ವರ್ಷ ಪೂರ್ಣ ಪ್ರವೇಶ ಪ್ರಕ್ರಿಯೆಯನ್ನು ಇಲಾಖೆಯೇ ವಹಿಸಿಕೊಂಡಿದ್ದು, ನಿಗದಿತ ವೇಳಾಪಟ್ಟಿಗೆ ತಕ್ಕಂತೆ ಮುಗಿಯಲಿದೆ. ಹೀಗಾಗಿ ಉಳಿದ ಅವಧಿಯನ್ನು ಶೈಕ್ಷಣಿಕ ಪ್ರಕ್ರಿಯೆಗೆ ಬಳಸಿಕೊಳ್ಳಲಾಗುವುದು ಎಂದರು.

ಹೊಸ ಕಾಲೇಜು ಸದ್ಯಕ್ಕಿಲ್ಲ:
ಕಳೆದ ನಾಲ್ಕು ವರ್ಷದಲ್ಲಿ ರಾಜ್ಯದಲ್ಲಿ 10 ಎಂಜಿನಿಯರಿಂಗ್ ಹಾಗೂ 43 ಡಿಪ್ಲೊಮಾ ಕಾಲೇಜುಗಳನ್ನು ಸರ್ಕಾರ ಸ್ಥಾಪಿಸಿದೆ. ಮೊದಲು ಈ ಎಲ್ಲ ಕಾಲೇಜುಗಳಿಗೆ ಅಗತ್ಯವಾದ ಸೌಲಭ್ಯ, ಸಿಬ್ಬಂದಿಯನ್ನು ಒದಗಿಸಬೇಕಿದೆ. ನಂತರವಷ್ಟೇ ಹೊಸ ಕಾಲೇಜು ಸ್ಥಾಪನೆ ಸಾಧ್ಯ. ಈ ಹಿನ್ನೆಲೆಯಲ್ಲಿ ಸದ್ಯ ರಾಜ್ಯದಲ್ಲಿ ಯಾವುದೇ ಹೊಸ ಕಾಲೇಜು ಸ್ಥಾಪನೆಯ ಪ್ರಸ್ತಾವ ಇಲಾಖೆಯ ಮುಂದೆ ಇಲ್ಲ.

ಧಾರವಾಡ ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಬೇಡಿಕೆ ಇದೆಯಾದರೂ ಅದನ್ನು ಸದ್ಯ ಪರಿಗಣಿಸಲಾಗುತ್ತಿಲ್ಲ. ಹಾವೇರಿಯಲ್ಲಿ ಈಗಾಗಲೇ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT