ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಮ್ಹಾನ್ಸ್ ಮಾಜಿ ಆಡಳಿತಾಧಿಕಾರಿ ಬಂಧನ

₨ 88 ಲಕ್ಷ ವೈಯಕ್ತಿಕ ಖಾತೆಗೆ ವರ್ಗಾವಣೆ
Last Updated 12 ಡಿಸೆಂಬರ್ 2013, 6:23 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿಯ ಧಾರವಾಡ ಮಾನಸಿಕ ಆರೋಗ್ಯ ಸಂಸ್ಥೆಯ (ಡಿಮ್ಹಾನ್ಸ್‌) ₨ 88 ಲಕ್ಷ ಹಣವನ್ನು ತಮ್ಮ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಹಿಂದಿನ ಆಡಳಿತಾಧಿಕಾರಿ ಎಸ್‌.ಎಸ್‌.ಮೇಟಿ ಅವರನ್ನು ಉಪನಗರ ಠಾಣೆಯ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

₨ 88 ಲಕ್ಷ ಅವ್ಯವಹಾರವಾಗಿದ್ದು, ಸಂಸ್ಥೆಯ ಹಣವನ್ನು ಮೇಟಿ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು ಎಂದು ಪ್ರಸ್ತುತ ಸಂಸ್ಥೆಯ ಆಡಳಿತಾಧಿಕಾರಿಯಾಗಿರುವ ಶಿವಶಂಕರ ಪೋಳ ಅವರು ಧಾರವಾಡ ಉಪನಗರ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಇನ್‌ಸ್ಪೆಕ್ಟರ್‌ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಗದಗ ನಗರದ ನಿವಾಸದಲ್ಲಿ ಮೇಟಿ ಅವರನ್ನು ಬಂಧಿಸಿದ್ದಾರೆ.

ಧಾರವಾಡ ಮಾನಸಿಕ ಆರೋಗ್ಯ ಆಸ್ಪತ್ರೆಯ ನಿರ್ವಹಣೆಗೆ ಬಿಡುಗಡೆಯಾದ ಹಣವನ್ನು ನಿರ್ದೇಶಕರು ಮತ್ತು ಆಡಳಿತಾಧಿಕಾರಿಗಳ ಜಂಟಿ ಖಾತೆಯಲ್ಲಿ ಇಡಬೇಕಾಗಿತ್ತು. ಆದರೆ, 2010ರಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿದ್ದ ಮೇಟಿ ಅವರು ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರೆಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ಆರೋಪಿಸಲಾಗಿತ್ತು.

ನಗರದ ವಿಜಯ ಪಂಚಪ್ಪ ಅಂಡ್ ಕಂಪೆನಿಯಿಂದ ಹಿಂದಿನ ಲೆಕ್ಕಪರಿಶೋಧನೆ ನಡೆಸಿದ ಪ್ರಸ್ತುತ ಆಡಳಿತಾಧಿಕಾರಿ ಪೋಳ ಅವರು ಅವ್ಯವಹಾರ ನಡೆದ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದರು. ನಂತರ ಈ ಸಂಬಂಧ ದೂರು ನೀಡಿದ್ದರು. ಪ್ರಸ್ತುತ ಮೇಟಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಯುವತಿ ಆತ್ಮಹತ್ಯೆ
ಧಾರವಾಡ:
ತಾಲ್ಲೂಕಿನ ತಡಕೋಡ ಗ್ರಾಮದ ಸುರೇಖಾ ಶಂಭುನವರ (24) ಎಂಬುವವರು ಬುಧ­ವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುರೇಖಾ ಮೂಲತಃ ತಾಲ್ಲೂಕಿನ ದುರ್ಗದಕೇರಿಯವರಾಗಿದ್ದು, ಕಳೆದ ಹಲವಾರು ವರ್ಷಗಳ ಹಿಂದೆ ತಡಕೋಡ ಗ್ರಾಮದ ಜ್ಯೋತಿಬಾ ಶಂಭುನವರ ಎಂಬುವವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಸುರೇಖಾ ತನ್ನ ಗಂಡನ ಮನೆಯಾದ ತಡಕೋಡ ಗ್ರಾಮದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT