ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇರಿಯಿಂದ ಕಲುಷಿತ ನೀರು: ತೊಂದರೆ

Last Updated 6 ಫೆಬ್ರುವರಿ 2012, 4:35 IST
ಅಕ್ಷರ ಗಾತ್ರ

ಯಲಹಂಕ:  ಇಲ್ಲಿನ ಮದರ್ ಡೇರಿಯು ತನ್ನ ಘಟಕದಿಂದ ಹೊರಬರುವ ಕಲುಷಿತ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡದ ಪರಿಣಾಮ ಸುತ್ತಮುತ್ತಲಿನ ಬಡಾವಣೆಗಳ ಕೊಳವೆ ಬಾವಿಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

`ಮಲಿನ ನೀರನ್ನು ಘಟಕದ ಆವರಣದಲ್ಲಿನ ವಿಫಲವಾದ ಕೊಳವೆ ಬಾವಿಗೆ ಬಿಟ್ಟಿರುವ ಪರಿಣಾಮ ಕಲುಷಿತ ನೀರು ಅಂತರ್ಜಲದಲ್ಲಿ ಮಿಶ್ರಣವಾಗಿ ಸುತ್ತಮುತ್ತಲಿನ ಸೋಮೇಶ್ವರ ನಗರ, ಶಾರದಾ ನಗರ, ಚಿಕ್ಕಬೊಮ್ಮಸಂದ್ರ ಬಡಾವಣೆಗಳ ಕೊಳವೆ ಬಾವಿಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದೇ ನೀರನ್ನು ಜನರು ಕುಡಿಯಲು ಹಾಗೂ ಬಳಸಲು ಉಪಯೋಗಿಸುತ್ತಿದ್ದಾರೆ~ ಎಂದು ಚಿಕ್ಕಬೊಮ್ಮಸಂದ್ರ ನಿವಾಸಿ ವಿ.ದೇವರಾಜ್ ಆರೋಪಿಸಿದ್ದಾರೆ.

`ಸುಮಾರು 15 ದಿನಗಳಿಂದೀಚೆಗೆ ಈ ಸಮಸ್ಯೆ ಉಲ್ಬಣಿಸಿದೆ. ಅಲ್ಲದೆ ಘಟಕದಿಂದ ಹೊರಸೂಸುವ ದುರ್ವಾಸನೆ ಸುತ್ತಮುತ್ತಲ ಪ್ರದೇಶಗಳಲ್ಲಿ ಹರಡುತ್ತಿರುವುದರಿಂದ ನೊಣ ಮತ್ತು ಸೊಳ್ಳೆಗಳ ಕಾಟವೂ ಹೆಚ್ಚಾಗಿ ಮಕ್ಕಳೂ ಸೇರಿದಂತೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಚಿಕುನ್‌ಗುನ್ಯ, ಡೆಂಗೆ ಮತ್ತಿತರ ಕಾಯಿಲೆಗಳು ಹರಡಲು ಅವಕಾಶ ಮಾಡಿಕೊಡುತ್ತಿದೆ~ ಎಂದು ದೂರಿದ್ದಾರೆ.

`ಮಲಿನ ನೀರು ಮತ್ತು ದುರ್ವಾಸನೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಈ ಹಿಂದೆ ಘಟಕದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಕ್ರಮ ಕೈಗೊಳ್ಳದೆ ಬೇಜವಾಬ್ದಾರಿ ತೋರಿದ್ದಾರೆ ಎಂದು ಸೋಮೇಶ್ವರ ನಗರ ನಿವಾಸಿ ವೀರರಾಜ್ ಹೇಳಿದ್ದಾರೆ.

`ಸಂಸ್ಕರಣಾ ಘಟಕದಿಂದ ಹೊರಬರುವ ಮಲಿನ ನೀರನ್ನು ಸುಮಾರು 15 ವರ್ಷಗಳ ಹಿಂದೆ ಕೊಳವೆ ಮಾರ್ಗವನ್ನು ಅಳವಡಿಸಿ ಜಿಕೆವಿಕೆ ಕಡೆಗೆ ಬಿಡಲಾಗಿತ್ತು. ನಂತರ ಆ ಮಾರ್ಗವನ್ನು ಬಂದ್ ಮಾಡಿ ಬೆಂಗಳೂರು ಜಲಮಂಡಳಿ ಕೊಳವೆ ಮಾರ್ಗದಲ್ಲಿ ಬಿಡಲಾಗುತ್ತಿದೆ. ಬಂದ್ ಮಾಡಲಾಗಿದ್ದ ಮಾರ್ಗ ಮತ್ತೆ ಎಲ್ಲೋ ತೆರೆದುಕೊಂಡಿರುವುದರಿಂದ ಮಲಿನ ನೀರು ಅಂತರ್ಜಲದಲ್ಲಿ ಮಿಶ್ರಣವಾಗಿ ಕೊಳವೆ ಬಾವಿಗಳಲ್ಲಿ ಆ ನೀರು ಪೂರೈಕೆಯಾಗುತ್ತಿರುವ ಸಾಧ್ಯತೆ ಇದೆ~ ಎಂದು ಸೋಮೇಶ್ವರ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬೋರೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಘಟಕ ವ್ಯವಸ್ಥಾಪಕ (ಆಡಳಿತ) ಮಂ. ರಾ.ಅನಂತ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ, `ಹದಿನೈದು ದಿನಗಳ ಹಿಂದೆ ಈ ಸಮಸ್ಯೆ ಇರುವುದು ತಿಳಿದು ಬಂದಿತ್ತು. ಆದರೆ ಈಗ ಇಲ್ಲ. ನಮ್ಮ ಸಂಸ್ಕರಣಾ ಘಟಕದಿಂದ ಹೊರ ಹೋಗುವ ಮಲಿನ ನೀರು ಜಲಮಂಡಳಿ ಕೊಳವೆ ಮಾರ್ಗದಲ್ಲಿ ಹೋಗುತ್ತಿದ್ದು, ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT