ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರ್ಯಾಗ್ ಫ್ಲಿಕ್ ಎಂಬ ಬ್ರಹ್ಮಾಸ್ತ್ರ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪಂಜಾಬಿ ಹುಡುಗ ಜುಗರಾಜ್ ಸಿಂಗ್ ನೆನಪು ಇರಬೇಕಲ್ಲವೇ. ಭಾರತ ಹಾಕಿ ತಂಡದ ಅತ್ಯಂತ ವಿಶ್ವಾಸಾರ್ಹ ಡ್ರ್ಯಾಗ್ ಫ್ಲಿಕ್ ತಜ್ಞ ಈತ. ಎಂಟು ವರ್ಷದ ಹಿಂದೆ ನಡೆದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವು ಜಯಿಸಿ ಬಂದ ಛಲದಂಕಮಲ್ಲ ಈತ.

ನವದೆಹಲಿಯಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಹಾಕಿ ಅರ್ಹತಾ ಟೂರ್ನಿಯಲ್ಲಿ ಆಡುತ್ತಿರುವ ಭರತ್ ಚೆಟ್ರಿ ಬಳಗಕ್ಕೆ ಡ್ರ್ಯಾಗ್ ಫ್ಲಿಕ್ ಕುರಿತು ಮಾರ್ಗದರ್ಶನ ನೀಡುತ್ತಿದ್ದಾರೆ.

ಆಧುನಿಕ ಹಾಕಿಯಲ್ಲಿ ಗೋಲು ಗಳಿಕೆಗೆ ಅತ್ಯಗತ್ಯವಾಗಿ ಬೇಕಾಗಿರುವ ತಂತ್ರಗಾರಿಕೆಯಲ್ಲಿ ಡ್ರ್ಯಾಗ್ ಫ್ಲಿಕ್ ಮುಖ್ಯವಾದದ್ದು. ಜುಗರಾಜ್ ಗರಡಿಯಲ್ಲಿ ಈಗ ಕನ್ನಡದ ಹುಡುಗ ರಘುನಾಥ್ ರಾಮಚಂದ್ರ ಒಕ್ಕಲಿಗ, ಪಂಜಾಬಿನ ಸಂದೀಪ್   ಸಿಂಗ್, ರೂಪಿಂದರ್ ಪಾಲ್ ಸಿಂಗ್ ಪಳಗುತ್ತಿದ್ದಾರೆ.

ಡ್ರ್ಯಾಗ್ ಫ್ಲಿಕ್ ತಜ್ಞರು ಸಿಗುವುದೇ ಕಷ್ಟವಾಗಿರುವ ಭಾರತ ತಂಡದಲ್ಲಿ ಈ ಮೂವರು ಇರುವುದು ಗೆಲುವಿನ ಆಗಸಕ್ಕೆ ಲಗ್ಗೆ ಹಾಕುವ ಭರವಸೆ ಮೂಡಿದೆ.

ಏನಿದು ಡ್ರ್ಯಾಗ್ ಫ್ಲಿಕ್:
ಎಳೆಯುವುದು (ಡ್ರ್ಯಾಗ್) ಮತ್ತು ಚುರುಕಿನ ಏಟು (ಫ್ಲಿಕ್) ನೀಡುವುದು ಎಂಬ ಅರ್ಥ ಇದಕ್ಕೆ ಇದೆ. ಪೆನಾಲ್ಟಿ ಕಾರ್ನರ್ ಸಂದರ್ಭದಲ್ಲಿ ಈ ಹೊಡೆತವನ್ನು ಪ್ರಯೋಗಿಸಲಾಗುತ್ತದೆ.
 
ಇದಕ್ಕೆ ವಿಶೇಷ ಪರಿಣತಿ ಅತ್ಯವಶ್ಯಕ.  1990ರಲ್ಲಿ ಫೀಲ್ಡ್ ಹಾಕಿಯಲ್ಲಿ ಇದನ್ನು ಪರಿಚಯಿಸಲಾಯಿತು. ಇದಕ್ಕೂ ಮೊದಲು ಒಳಾಂಗಣ ಹಾಕಿಯಲ್ಲಿ ಈ ತಂತ್ರವನ್ನು ಬಳಸಲಾಗುತ್ತಿತ್ತು.
 
ಡಚ್ ಇಂಟರ್‌ನ್ಯಾಷನಲ್ ಟ್ಯಾಕೋ ವ್ಯಾನ್ ಡೆನ್ನ ಹೊನರ್ಟ್ ಇದನ್ನು ಮೊದಲ ಬಾರಿಗೆ ಅಂತರರಾಷ್ಟ್ರೀಯ ಫೀಲ್ಡ್ ಹಾಕಿಗೆ ಪರಿಚಯಿಸಿದರು.

1992ರಲ್ಲಿ 45 ಸೆಂಟಿಮೀಟರ್ ಎತ್ತರದವರೆಗೆ ಚೆಂಡನ್ನು ಚಿಮ್ಮಿಸಿ ಗೋಲುಪೆಟ್ಟಿಗೆಗೆ ಸೇರಿಸಲು ಪೆನಾಲ್ಟಿ ಕಾರ್ನರ್ ನಿಯಮದಲ್ಲಿ ಅವಕಾಶ ನೀಡಲಾಯಿತು. 

ಈ ಶಾಟ್ ಅನ್ನು ಪ್ರಯೋಗಿಸುವ ಶೈಲಿಯೂ ವಿಶಿಷ್ಟ. ಪೆನಾಲ್ಟಿ ಕಾರ್ನರ್ ಸಂದರ್ಭದಲ್ಲಿ ಗೋಲು ಪೆಟ್ಟಿಗೆಯ ಎದುರಿನ ಲೈನ್ ಹಿಂದೆ ಚೆಂಡನ್ನು ಇಡಲಾಗುತ್ತದೆ.

ಹಾಕಿ ದಾಂಡಿನ ಬಾಗಿದ ತುದಿಯಿಂದ ಇದನ್ನು ಚಿಮ್ಮಲಾಗುತ್ತದೆ. ಈ ಸಂದರ್ಭದಲ್ಲಿ ಆಟಗಾರ ಮಣಿಕಟ್ಟಿನ ಚಲನೆ, ಚಿಮ್ಮುವ ವೇಗ ಮತ್ತು ಎತ್ತರ, ದಿಕ್ಕುನಿರ್ದೇಶನಗಳು ಕರಾರುವಾಕ್ಕಾಗಿ ಇದ್ದರೆ ಗೋಲು ಕೀಪರ್‌ನನ್ನು ವಂಚಿಸುವುದು ಖಚಿತ.

ಈ ಹೊಡೆತವನ್ನು  ಸ್ಟ್ರೇಟ್ ಶಾಟ್ ಅಥವಾ ಹಿಟ್ ಇದ್ದಾಗಲೂ ಬಳಸುವ ಸಂದರ್ಭದಲ್ಲಿ ವಿವಾದಕ್ಕೂ ಕಾರಣವಾಗಿತ್ತು. ಪುಷ್ ಅಥವಾ ಹಿಟ್‌ನ ಸಂದರ್ಭದಲ್ಲಿ ಚೆಂಡು ನೆಲದಿಂದ ಮೇಲೆದ್ದು ಸಾಗುವ ವೇಗ ಎದುರಾಳಿ ತಂಡದ ರಕ್ಷಣಾತ್ಮಕ ಆಟಗಾರರಿಗೆ ಅಪಾಯ ಒಡ್ಡಬಹುದು ಎಂದು ವಾದಿಸಲಾಗಿತ್ತು.

  ಆದರೆ ಚೆಂಡು ಚಲನೆಯಲ್ಲಿದ್ದಾಗ ಡ್ರ್ಯಾಗ್ ಫ್ಲಿಕ್ ಪ್ರಯೋಗ ಸುಲಭಸಾಧ್ಯವಲ್ಲ. ಆದ್ದರಿಂದ ಕೆಲವೇ

ಸಂದರ್ಭದಲ್ಲಿ ಪಾಸಿಂಗ್‌ಗಾಗಿ ಈ ಹೊಡೆತದ ಪ್ರಯೋಗ ನಡೆಯುತ್ತಿದೆ.
ಕಲ್ಲನ್ನು ಕವಣೆಯಿಂದ ಚಿಮ್ಮುವಂತೆ, ನೆಲದ ಮೇಲಿನ ಚೆಂಡನ್ನು ಚಿಮ್ಮಿಸಲು ಹಾಕಿ ಸ್ಟಿಕ್‌ನ ಡೊಂಕು ತುದಿಯಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಯನ್ನೂ ಮಾಡಲಾಯಿತು.
 

2005ರಲ್ಲಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ನೀಡಿದ ಅನುಮತಿಯ ಪ್ರಕಾರ ಹಾಕಿ ದಂಡದ ಡೊಂಕು ತುದಿಯಲ್ಲಿ 25 ಮಿಲಿಮೀಟರ್‌ವರೆಗೆ ವಕ್ರತೆ ನೀಡಲಾಯಿತು. ಇದರೊಂದಿಗೆ ಈ ಹಾಕಿ ಸ್ಟಿಕ್ ಬಳಕೆ ಮತ್ತು ಡ್ರ್ಯಾಗ್ ಫ್ಲಿಕ್ ಪರಿಣಿತರನ್ನು ಸಿದ್ಧಗೊಳಿಸುವ ದೊಡ್ಡ ಪರಿವರ್ತನೆ ಹಾಕಿ ಆಂಗಳದಲ್ಲಿ ಆಗಿದ್ದು ಈಗ ಇತಿಹಾಸ.  

ಕೆಲಂ ಗಿಲ್ಸ್, ಪಾಕಿಸ್ತಾನದ ಸೊಹೇರ್ ಅಬ್ಬಾಸ್, ನೆದರ್‌ಲ್ಯಾಂಡ್‌ನ ಟೈಕೆ ಟೆಕೇಮಾ, ಆಸ್ಟ್ರೇಲಿಯಾದ ಟ್ರಾಯ್ ಎಲ್ಡರ್, ನ್ಯೂಜಿಲೆಂಡ್‌ನ ಹೇಡನ್ ಶಾ, ಭಾರತದ ಜುಗರಾಜ್ ಸಿಂಗ್ ವಿಶ್ವದ ಅತ್ಯುತ್ತಮ ಡ್ರ್ಯಾಗ್ ಫ್ಲಿಕರ್ ಶ್ರೇಯ ಪಡೆದವರು.

ಈಗ ಅವರ ಸಾಲಿನಲ್ಲಿ ಭಾರತದ ತ್ರಿಮೂರ್ತಿಗಳು ಇದ್ದಾರೆ. ಅದರಲ್ಲೂ ಕನ್ನಡಿಗ ರಘುನಾಥ್ ಇದ್ದಾರೆ. ಒಂದು ಕಾಲದಲ್ಲಿ ಡ್ರಿಬ್ಲಿಂಗ್ ಮೇಲೆ ಅವಲಂಬಿತವಾಗಿದ್ದ ಭಾರತ ತಂಡ ಈಗ ಆಧುನಿಕತೆಯತ್ತ ಹೆಜ್ಜೆ ಹಾಕಿರುವುದಕ್ಕೆ ಇದು ಸಾಕ್ಷಿ.   
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT